ನವದೆಹಲಿ: ಆಧುನಿಕ ಕ್ರಿಕೆಟ್ ದಿಗ್ಗಜ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡದ ಮಾಜಿ ನಾಯಕ ವಿರಾಟ್ ಕೊಹ್ಲಿ (Virat Kohli) ಬಳಿ ಸೆಲ್ಫಿ ಹಾಗೂ ಆಟೋಗ್ರಾಫ್ ತೆಗೆದುಕೊಳ್ಳುವ ಕ್ರಿಕೆಟ್ ಅಭಿಮಾನಿಗಳ ಕನಸು. ಇದನ್ನು ಕೆಲವರು ನನಸು ಮಾಡಿಕೊಂಡರೆ, ಕೆಲವರು ನನಸು ಮಾಡಿಕೊಳ್ಳಲು ಸಾಧ್ಯವಾಗುವುದಿಲ್ಲ. ಇದೀಗ ಈ ಸಾಲಿಗೆ ವಿರಾಟ್ ಕೊಹ್ಲಿ ಹಾಗೂ ಆರ್‌ಸಿಬಿಯ ಪುಟಾಣಿ ಅಭಿಮಾನಿ ಸೇರ್ಪಡೆಯಾಗಿದ್ದಾರೆ. ಆರ್‌ಸಿಬಿ ತಂಡದ ಆಟಗಾರರು ತಂಗಿದ್ದ ಹೋಟೆಲ್‌ನಲ್ಲಿ ವಿರಾಟ್ ಕೊಹ್ಲಿ ಆಟೋಗ್ರಾಫ್ ನೀಡಲು ನಿರಾಕರಿಸಿದ್ದರಿಂದ ಪುಟಾಣಿ ಅಭಿಮಾನಿ ಕಣ್ಣೀರಿಟ್ಟ ಘಟನೆ ನಡೆದಿದೆ.
ಆರ್‌ಸಿಬಿ ಉಳಿದುಕೊಂಡಿದ್ದ ಹೋಟೆಲ್‌ನಲ್ಲಿ ಪುಟಾಣಿ ಅಭಿಮಾನಿ, ವಿರಾಟ್ ಕೊಹ್ಲಿಯ ಆಗಮನಕ್ಕಾಗಿ ಕಾಯುತ್ತಿದ್ದ ಹಾಗೂ ತಮ್ಮ ನೆಚ್ಚಿನ ಆಟಗಾರನಿಂದ ಆಟೋಗ್ರಾಫ್ ಪಡೆಯುವ ಕನಸು ಕಂಡಿದ್ದ. ಆದರೆ, ಟೀಮ್ ಹೋಟೆಲ್‌ಗೆ ಆಗಮಿಸಿದ ವಿರಾಟ್ ಕೊಹ್ಲಿ ಪುಟ್ಟ ಬಾಲಕನನ್ನು ನೋಡದೆ ತನ್ನ ಪಾಡಿಗೆ ತಾನು ತಮ್ಮ ಕೊಠಡಿಗೆ ತೆರಳಿದರು. ಈ ವೇಳೆ ಅಭಿಮಾನಿ ಪರಿಪರಿಯಾಗಿ ಕೇಳಿಕೊಂಡು, ಸ್ವಲ್ಪ ದೂರ ಕೊಹ್ಲಿಯನ್ನು ಹಿಂಬಾಲಿಸಿದರೂ ಪ್ರಯೋಜನವಾಗಲಿಲ್ಲ. ಇದರಿಂದ ಗಳಗಳನೆ ಅತ್ತುಕೊಂಡ ಅಭಿಮಾನಿ ತಮ್ಮ ಪೋಷಕರ ಬಳಿ ಬರುವ ಹಾದಿಯಲ್ಲಿ ತಮ್ಮ ಕೈಯಲ್ಲಿದ್ದ ಬ್ಯಾಟ್ ಅನ್ನು ಬಿಸಾಕಿದ. ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
Virat Kohli 9000 Runs: ಐಪಿಎಲ್ ಟೂರ್ನಿಯಲ್ಲಿ ದೊಡ್ಡ ದಾಖಲೆ ಬರೆದ ವಿರಾಟ್ ಕೊಹ್ಲಿ!
ಆಟೋಗ್ರಾಫ್ ನೀಡದ ಕೊಹ್ಲಿ ಬಗ್ಗೆ ಮಿಶ್ರ ಪ್ರತಿಕ್ರಿಯೆ
ಸೋಶಿಯಲ್ ಮೀಡಿಯಾದಲ್ಲಿ ಈ ವಿಡಿಯೊ ವೈರಲ್ ಆಗುತ್ತಿದ್ದಂತೆ ಕೆಲವರು ವಿರಾಟ್ ಕೊಹ್ಲಿ ತಮ್ಮ ಅಭಿಮಾನಿಗೆ ಆಟೋಗ್ರಾಫ್ ನೀಡಬೇಕಾಗಿತ್ತು ಎಂದು ಹೇಳಿದ್ದಾರೆ. ಅವರು ಪುಟ್ಟ ಬಾಲಕನ ಎದುರು ಅವರು ತೋರಿದ ವರ್ತನೆ ಸರಿಯಾಗಿ ಇಲ್ಲ ಎಂದು ಕೆಲವರು ದೂರಿದ್ದಾರೆ. ಇನ್ನೂ ಕೆಲವರು, ವಿರಾಟ್ ಕೊಹ್ಲಿಯ ನಡೆಯನ್ನು ಸಮರ್ಥಿಸಿಕೊಂಡಿದ್ದಾರೆ. ನೂರಾರು ಮಂದಿ ಅಭಿಮಾನಿಗಳು ಕಾಯುತ್ತಾರೆ ಹಾಗೂ ಭದ್ರತಾ ಸಿಬ್ಬಂದಿ ಅವರಿಗೆ ಅವಕಾಶ ಮಾಡಿಕೊಟ್ಟರೆ, ಬೇರೆ ಅವರು ಕೂಡು ಬರುವ ಮೂಲಕ ಜನದಟ್ಟಣೆ ಹೆಚ್ಚಾಗಬಹುದು. ಇನ್ನೂ ಕೆಲವರು ಸೆಲೆಬ್ರಿಟಿಗಳ ಬಗ್ಗೆ ಗೀಳು ಹಿಡಿಯದಂತೆ ಪೋಷಕರು ಮಕ್ಕಳಿಗೆ ಕಲಿಸಬೇಕು ಎಂದು ಸಾಮಾಜಿಕ ಮಾಧ್ಯಮದಲ್ಲಿ ಸಲಹೆ ನೀಡಿದ್ದಾರೆ.
9000 ರನ್ ಗಳಿಸಿ ಇತಿಹಾಸ ಬರೆದ ವಿರಾಟ್ ಕೊಹ್ಲಿ
ಇದರ ನಡುವೆ, ವಿರಾಟ್ ಕೊಹ್ಲಿ ಅವರಿಗೆ ಇದು(ಸೋಮವಾರ) ವಿಶೇಷ ರಾತ್ರಿ ಆಗಿತ್ತು, ಏಕೆಂದರೆ ಅವರು ಐಪಿಎಲ್ ಟೂರ್ನಿಯಲ್ಲಿ ದೊಡ್ಡ ದಾಖಲೆಯನ್ನು ಬರೆದಿದ್ದಾರೆ. ಡೆಲ್ಲಿ ಕ್ಯಾಪಿಟಲ್ಸ್ ಪಂದ್ಯದ ಚೇಸಿಂಗ್ ಅಜೇಯ 23 ರನ್ ಗಳಿಸಿದ ಕೊಹ್ಲಿ, ಐಪಿಎಲ್ ಇತಿಹಾಸದಲ್ಲಿ 9000 ರನ್‌ಗಳನ್ನು ಗಳಿಸಿದ ವಿಶ್ವದ ಮೊದಲ ಆಟಗಾರ ಎನಿಸಿಕೊಂಡಿದ್ದಾರೆ.
ಕೊಹ್ಲಿ ಆರ್‌ಸಿಬಿಯ ಕೀ ಬ್ಯಾಟ್ಸ್‌ಮನ್ ಆಗಿದ್ದು, ಈ ತಂಡವನ್ನು ಪ್ರಸ್ತುತ ಅಗ್ರ ಸ್ಥಾನಕ್ಕೆ ತಲುಪಿಸಲು ಮಹತ್ವದ ಪಾತ್ರವನ್ನು ವಹಿಸಿದ್ದಾರೆ. 2008ರಲ್ಲಿ ಆರ್‌ಸಿಬಿ ಅವರ ಮೇಲೆ ನಂಬಿಕೆ ಇಟ್ಟ ನಂತರ, ಅವರು ತಂಡಕ್ಕೆ ನಿರಂತರವಾಗಿ ಉತ್ತಮ ಪ್ರದರ್ಶನ ನೀಡುತ್ತ ಬಂದಿದ್ದಾರೆ. 9000 ರನ್‌ಗಳ ಸಾಧನೆ ಅವರ ದೀರ್ಘಾವಧಿ ಪರಿಶ್ರಮ, ನಿಷ್ಠೆ ಮತ್ತು ಲೀಗ್‌ನಲ್ಲಿ ಅವರ ಪ್ರಾಬಲ್ಯಕ್ಕೆ ಸಾಕ್ಷಿಯಾಗಿದೆ.
RCB vs DC: ಭುವನೇಶ್ವರ್, ಹೇಝಲ್‌ವುಡ್ ಮಾರಕ ದಾಳಿ, ಆರ್‌ಸಿಬಿಗೆ ಸುಲಭ ತುತ್ತಾದ ಡೆಲ್ಲಿ ಕ್ಯಾಪಿಟಲ್ಸ್!
ಚೇಸಿಂಗ್ ಸಂದರ್ಭಗಳಲ್ಲಿ ಕೊಹ್ಲಿ ಆರ್‌ಸಿಬಿಗೆ ಅತ್ಯಂತ ವಿಶ್ವಾಸಾರ್ಹ ಬ್ಯಾಟರ್ ಆಗಿದ್ದಾರೆ. 2023ರಿಂದ 21 ಪಂದ್ಯಗಳಲ್ಲಿ ಅವರು ಕೇವಲ ಒಂದು ಬಾರಿ ಮಾತ್ರ ಒಂದಕ್ಕೆ ಸ್ಕೋರ್‌ಗೆ ವಿಕೆಟ್ ಒಪ್ಪಿಸಿದ್ದಾರೆ. ಅಂದಿನಿಂದ ಅವರು 72ರ ಸರಾಸರಿಯಲ್ಲಿ 1087 ರನ್‌ಗಳನ್ನು ಗಳಿಸಿದ್ದಾರೆ. ಇದರಲ್ಲಿ ಒಂದು ಶತಕ ಮತ್ತು 11 ಅರ್ಧಶತಕಗಳು ಮೂಡಿ ಬಂದಿವೆ.
ಭರ್ಜರಿ ಫಾರ್ಮ್‌ನಲ್ಲಿ ವಿರಾಟ್ ಕೊಹ್ಲಿ
2026ರ ಐಪಿಎಲ್ ಟೂರ್ನಿಯಲ್ಲಿ ವಿರಾಟ್ ಕೊಹ್ಲಿ ಅದ್ಭುತ ಫಾರ್ಮ್‌ನಲ್ಲಿದ್ದಾರೆ. ಅವರು ಇಲ್ಲಿಯವರೆಗೂ ಆಡಿದ 8 ಪಂದ್ಯಗಳಲ್ಲಿ 351 ರನ್‌ಗಳನ್ನು ಗಳಿಸಿದ್ದಾರೆ. ಆ ಮೂಲಕ ಅತಿ ಹೆಚ್ಚು ರನ್ ಗಳಿಸಿದ ಬ್ಯಾಟ್ಸ್‌ಮನ್‌ಗಳ ಸಾಲಿನಲ್ಲಿ ನಾಲ್ಕನೇ ಸ್ಥಾನದಲ್ಲಿದ್ದಾರೆ. ವಿರಾಟ್ ಕೊಹ್ಲಿ ಫಾರ್ಮ್‌ನಲ್ಲಿದ್ದು, ಈ ಬಾರಿಯೂ ಆರ್‌ಸಿಬಿ ತಂಡ ಸತತ ಎರಡನೇ ಬಾರಿ ಐಪಿಎಲ್ ಟ್ರೋಫಿ ಮುಡಿಗೇರಿಸಿಕೊಳ್ಳಬಲ್ಲ ನೆಚ್ಚಿನ ತಂಡವಾಗಿದೆ.