ನವದೆಹಲಿ: ಅಫ್ಘಾನಿಸ್ತಾನ ವಿರುದ್ಧದ ಏಕೈಕ ಟೆಸ್ಟ್ ಪಂದ್ಯಕ್ಕೆ(IND vs AFG) ಬಿಸಿಸಿಐ ಆಯ್ಕೆ ಮಾಡಿದ ಭಾರತ ತಂಡದಲ್ಲಿ ಹಿರಿಯ ವೇಗಿ ಮೊಹಮ್ಮದ್ ಶಮಿಗೆ (Mohammed Shami) ಸ್ಥಾನವನ್ನು ನೀಡಲಾಗಿಲ್ಲ. ಈ ಬಗ್ಗೆ ಹಲವು ಮಾಜಿ ಆಟಗಾರರು ಬಿಸಿಸಿಐ ಆಯ್ಕೆ ಸಮಿತಿಯ ಮುಖ್ಯಸ್ಥರಾದ ಅಜಿತ್ ಅಗರ್ಕರ್ (Ajit Agarkar) ಅವರನ್ನು ಪ್ರಶ್ನಿಸುತ್ತಿದ್ದಾರೆ. ಇದೀಗ ಈ ಸಾಲಿಗೆ ಭಾರತ ತಂಡದ ಮಾಜಿ ಟೆಸ್ಟ್ ಆರಂಭಿಕ ವಾಸೀಮ್ ಜಾಫರ್ ಸೇರ್ಪಡೆಯಾಗಿದ್ದಾರೆ. ಭಾರತ ಟೆಸ್ಟ್ ತಂಡಕ್ಕೆ ಶಮಿ ಅವರನ್ನು ಆಯ್ಕೆ ಮಾಡದೆ ಅಗೌರವ ತೋರಲಾಗಿದೆ ಎಂದು ಅವರು ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ.
ಮೇ 19 (ಮಂಗಳವಾರ) ರಂದು ಅಜಿತ್ ಅಗರ್ಕರ್ ನೇತೃತ್ವದ ಆಯ್ಕೆ ಸಮಿತಿ, ಇಂಡಿಯನ್ ಪ್ರೀಮಿಯರ್ ಲೀಗ್ ನಂತರ ಆರಂಭವಾಗುವ ಅಫ್ಘಾನಿಸ್ತಾನ ವಿರುದ್ಧದ ಒಂದು ಟೆಸ್ಟ್ ಹಾಗೂ ಮೂರು ಪಂದ್ಯಗಳ ಏಕದಿನ ಸರಣಿಗಾಗಿ ಭಾರತದ ತಂಡಗಳನ್ನು ಪ್ರಕಟಿಸಿತು. ಆದರೆ, ಅನುಭವಿ ವೇಗಿ, ದೇಶಿ ಕ್ರಿಕೆಟ್‌ನಲ್ಲಿ ಬಂಗಾಳ ಪರ ಹಾಗೂ ಐಪಿಎಲ್‌ನಲ್ಲಿ ಲಖನೌ ಸೂಪರ್ ಜಯಂಟ್ಸ್ ತಂಡದ ಪರ ಉತ್ತಮ ಪ್ರದರ್ಶನ ನೀಡಿದ್ದರೂ ಮೊಹಮ್ಮದ್ ಶಮಿ ಅವರನ್ನು ಕೈ ಬಿಡಲಾಗಿದೆ.
IND vs AFG: ಅಫ್ಘಾನಿಸ್ತಾನ ವಿರುದ್ಧದ ಏಕೈಕ ಟೆಸ್ಟ್‌ಗೆ ಭಾರತ ತಂಡವನ್ನು ಪ್ರಕಟಿಸಿದ ಬಿಸಿಸಿಐ!
ಅಜಿತ್ ಅಗರ್ಕರ್ ಅವರು ಮೊಹಮ್ಮದ್ ಶಮಿ ಅವರನ್ನು ತಂಡದಿಂದ ಹೊರಗಿಡುವ ನಿರ್ಧಾರದ ಕುರಿತು ಮಾತನಾಡುತ್ತಾ, 35 ವರ್ಷದ ವೇಗಿ ದೀರ್ಘ ಸ್ವರೂಪದ ಕ್ರಿಕೆಟ್ ಆಡಲು ಅಗತ್ಯವಾದಷ್ಟು ದೈಹಿಕವಾಗಿ ಸಂಪೂರ್ಣವಾಗಿ ಫಿಟ್ ಆಗಿಲ್ಲ ಎಂದು ಹೇಳಿದ್ದಾರೆ. ಆಯ್ಕೆ ಸಮಿತಿ ಸಭೆಯಲ್ಲಿ ಶಮಿ ಕುರಿತು ಯಾವುದೇ ಚರ್ಚೆಯೇ ನಡೆದಿಲ್ಲ ಎಂದು ಕೂಡ ಸ್ಪಷ್ಟಪಡಿಸಿದ್ದರು.
ಮೊಹಮ್ಮದ್ ಶಮಿ ಅವರ ಬಗ್ಗೆ ಆಯ್ಕೆ ಸಮಿತಿಯ ವಿವರಣೆಯನ್ನು ವಾಸೀಮ್ ಜಾಫರ್ ತೀವ್ರವಾಗಿ ಟೀಕಿಸಿದ್ದಾರೆ. ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಮಾತನಾಡಿದ ಜಾಫರ್, ಆಯ್ಕೆದಾರರು ನೀಡಿರುವ ಕಾರಣವನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.
ಭಾರತ ತಂಡದಲ್ಲಿ ಮೊಹಮ್ಮದ್ ಶಮಿಗೆ ಸ್ಥಾನ ಸಿಗದೇ ಇರಲು ಕಾರಣ ತಿಳಿಸಿದ ಅಜಿತ್ ಅಗರ್ಕರ್!
“ಅದು (ಅಜಿತ್ ಅಗರ್ಕರ್ ಅವರ ವಿವರಣೆ) ಅಸಂಬದ್ಧವಾಗಿದೆ. ನಾವು ಇಲ್ಲಿ ಮೊಹಮ್ಮದ್ ಶಮಿಯ ಬಗ್ಗೆ ಮಾತನಾಡುತ್ತಿದ್ದೇವೆ, ಯಾರೋ ಸಾಮಾನ್ಯ ಆಟಗಾರರ ಬಗ್ಗೆ ಅಲ್ಲ. ಇದು ಅವರಿಗೆ ಗೌರವವಲ್ಲ. ಶಮಿ ಅವರ ಪ್ರಸ್ತುತ ಫಾರ್ಮ್‌ನ್ನು ಉಲ್ಲೇಖಿಸಿ, ಅವರನ್ನು ಕೇವಲ ಟಿ20ಗೆ ಮಾತ್ರ ಫಿಟ್ ಎಂದು ಹೇಳುವುದು ಒಂದು ಕಾರಣ ಮಾತ್ರ. ನಾವು ಅವರನ್ನು ಪರಿಗಣಿಸಲಿಲ್ಲ ಎಂದು ನೀವು ಸ್ಪಷ್ಟವಾಗಿ ಹೇಳಬಹುದು. ಇದು ಹೆಚ್ಚು ನ್ಯಾಯಸಮ್ಮತವಾದ ಹೇಳಿಕೆ ಆಗುತ್ತದೆ,” ಎಂದು ಅವರು ಹೇಳಿದರು.
"ಶಮಿ ಇತ್ತೀಚೆಗೆ ಪಶ್ಚಿಮ ಬಂಗಾಳ ತಂಡದ ಪರ ರಣಜಿ ಟ್ರೋಫಿ ಟೂರ್ನಿಯಲ್ಲಿ ಆಡಿದ್ದರು ಹಾಗೂ ಅವರು ತಮ್ಮ ತಂಡವನ್ನು ಸೆಮಿಫೈನಲ್‌ಗೂ ತೆಗೆದುಕೊಂಡು ಹೋಗಿದ್ದರು. ಆ ಸೀಸನ್‌ನಲ್ಲಿ ಅವರು ಬೌಲಿಂಗ್ ವಿಭಾಗವನ್ನು ಅತ್ಯುತ್ತಮ ಹಾದಿಯಲ್ಲಿ ಮುನ್ನಡೆಸಿದ್ದರು," ಎಂದು ಜಾಫರ್ ಹೊಗಳಿದ್ದಾರೆ.
IND vs AFG: ರಿಷಭ್ ಪಂತ್‌ರನ್ನು ಟೆಸ್ಟ್ ಉಪ ನಾಯಕತ್ವದಿಂದ ಕೆಳಗಿಳಿಸಲು ಕಾರಣವೇನು?
“ನಾಳೆ ಜಸ್‌ಪ್ರೀತ್ ಬುಮ್ರಾ ಗಾಯಗೊಂಡು ಮತ್ತೆ ಮರಳಿದರೆ, ನೀವು ಅವರನ್ನೂ ಇದೇ ರೀತಿ ನಡೆಸಿಕೊಳ್ಳುತ್ತೀರಾ? ಮೊಹಮ್ಮದ್ ಶಮಿ ಕೂಡ ಅದೇ ಮಟ್ಟದ ಆಟಗಾರ. ಯಾವುದೇ ಅಂತಾರಾಷ್ಟ್ರೀಯ ಬ್ಯಾಟರ್‌ನ್ನು ಕೇಳಿದರೂ, ಅವರು ಶಮಿಯನ್ನು ಅಗ್ರ ಮಟ್ಟದ ಬೌಲರ್‌ಗಳಲ್ಲಿ ಒಬ್ಬನೆಂದು ಹೇಳುತ್ತಾರೆ. ಭಾರತ ತಂಡಕ್ಕಾಗಿ ಅವರು ನೀಡಿರುವ ಸೇವೆಯನ್ನು ಗಮನಿಸಿದರೆ, ಈ ರೀತಿಯ ವರ್ತನೆ ಅವರಿಗೆ ಅವಮಾನಕರವಾಗಿದೆ," ಎಂದು ವಾಸೀಮ್ ಜಾಫರ್ ತಿಳಿಸಿದ್ದಾರೆ.