ನವದೆಹಲಿ: ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿದ ನ್ಯೂಜಿಲೆಂಡ್ ದಿಗ್ಗಜ ಕೇನ್ ವಿಲಿಯಮ್ಸನ್‌ಗೆ (Kane Williamson) ಭಾರತೀಯ ಕ್ರಿಕೆಟ್‌ನ ದಂತಕತೆ ವಿರಾಟ್ ಕೊಹ್ಲಿ(Virat Kohli) ಭಾವನಾತ್ಮಕ ಗೌರವವನ್ನು ಸಲ್ಲಿಸಿದ್ದಾರೆ. ಭಾರತ ಹಾಗೂ ನ್ಯೂಜಿಲೆಂಡ್ ತಂಡಗಳ ನಡುವಣ ಪರಸ್ಪರ ಮುಖಾಮುಖಿಯೊಂದಿಗೆ ತಮ್ಮ ಸ್ನೇಹ ಹೇಗೆ ವೃದ್ದಿಯಾಯಿತು ಎಂಬುದನ್ನು ಭಾರತ ತಂಡದ ಮಾಜಿ ನಾಯಕ ಸ್ಮರಿಸಿಕೊಂಡಿದ್ದಾರೆ.
ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಹಾಕಿದ ವಿರಾಟ್ ಕೊಹ್ಲಿ, “ವರ್ಷಗಳ ಹಿಂದೆ ಎದುರಾಳಿಯಾಗಿದ್ದ ನೀವು, ಕಾಲಕ್ರಮೇಣ ಆತ್ಮೀಯ ಸ್ನೇಹಿತರಾಗಿದ್ದೀರಿ. ನಿಮ್ಮ ಬ್ಯಾಟಿಂಗ್ ಅನ್ನು ನೋಡುವುದು ಹಾಗೂ ಹಲವು ವರ್ಷಗಳ ಕಾಲ ನಿಮ್ಮ ವಿರುದ್ಧ ಸ್ಪರ್ಧಿಸುವುದು ನನಗೆ ಸಂತೋಷದ ಅನುಭವವಾಗಿತ್ತು. ಆದರೆ ಅದಕ್ಕಿಂತಲೂ ಹೆಚ್ಚಾಗಿ, ನಮ್ಮ ಸ್ನೇಹ ಮತ್ತು ಕ್ರಿಕೆಟ್ ಸೇರಿದಂತೆ ಜೀವನದ ವಿವಿಧ ವಿಷಯಗಳ ಕುರಿತಾಗಿ ನಾವು ಹಂಚಿಕೊಂಡ ಅಭಿಪ್ರಾಯಗಳನ್ನು ನಾನು ಬಹಳ ಮೌಲ್ಯಯುತವಾಗಿ ಕಾಣುತ್ತೇನೆ."
Kane Williamson: ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಹಠಾತ್ ವಿದಾಯ ಹೇಳಿದ ಕೇನ್ ವಿಲಿಯಮ್ಸನ್!
"ನಾವು ಮಾತನಾಡುವ ಅಥವಾ ಭೇಟಿಯಾಗುವ ಪ್ರತಿಯೊಂದು ಕ್ಷಣವನ್ನೂ ನಾನು ಸದಾ ನೆನಪಿನಲ್ಲಿಟ್ಟುಕೊಳ್ಳುತ್ತೇನೆ. ಸಹೋದರ, ನಿಮ್ಮ ಮುಂದಿನ ಜೀವನಕ್ಕೆ ನನ್ನ ಹೃತ್ಪೂರ್ವಕ ಶುಭಾಶಯಗಳು. ನೀವು ನಿಮ್ಮ ಕರ್ತವ್ಯವನ್ನು ಅತ್ಯುತ್ತಮವಾಗಿ ನಿರ್ವಹಿಸಿದ್ದೀರಿ. ಈಗ ನಿಮ್ಮ ಸಾಧನೆಗಳನ್ನು ಆನಂದಿಸುವ ಸಮಯ ಬಂದಿದೆ. ನೆಮ್ಮದಿಯಿಂದ ವಿಶ್ರಾಂತಿ ಪಡೆಯಿರಿ. ಅದ್ಭುತ ವೃತ್ತಿಜೀವನಕ್ಕೆ ಅಭಿನಂದನೆಗಳು ಗೆಳೆಯ. ಜೀವನದ ಹೊಸ ಅಧ್ಯಾಯ ಈಗಷ್ಟೇ ಆರಂಭವಾಗಿದೆ,” ಎಂದು ವಿರಾಟ್ ಭಾವನಾತ್ಮಕವಾಗಿ ಸಂದೇಶವನ್ನು ನೀಡಿದ್ದಾರೆ.
ವಿರಾಟ್ ಕೊಹ್ಲಿ-ಕೇನ್ ವಿಲಿಯಮ್ಸನ್ ಬಾಂಧವ್ಯ
ಇಬ್ಬರೂ ಆಟಗಾರರು ಸುಮಾರು ಒಂದೇ ಅವಧಿಯಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪ್ರವೇಶಿಸಿ, ಯುವ ಟೂರ್ನಿಗಳು, ಅಂತಾರಾಷ್ಟ್ರೀಯ ಪಂದ್ಯಗಳು ಹಾಗೂ ಫ್ರಾಂಚೈಸಿ ಕ್ರಿಕೆಟ್‌ನಲ್ಲಿ ಅನೇಕ ಬಾರಿ ಮುಖಾಮುಖಿಯಾಗಿದ್ದರು. ಆರಂಭದಲ್ಲಿ ಮೈದಾನದಲ್ಲಿ ಒಬ್ಬರಿಗಿಂತ ಒಬ್ಬರು ಮೇಲುಗೈ ಸಾಧಿಸಲು ಪ್ರಯತ್ನಿಸಿದ್ದ ಈ ಇಬ್ಬರ ನಡುವಿನ ಪೈಪೋಟಿ, ಕಾಲಕ್ರಮೇಣ ಪರಸ್ಪರ ಗೌರವ ಮತ್ತು ಅಭಿಮಾನದಿಂದ ಕೂಡಿದ ಗಾಢ ಸ್ನೇಹವಾಗಿ ರೂಪುಗೊಂಡಿತು.
ವಿಲಿಯಮ್ಸನ್ ಮತ್ತು ಕೊಹ್ಲಿ ಅವರು ಆಸ್ಟ್ರೇಲಿಯಾದ ಸ್ಟೀವ್ ಸ್ಮಿತ್ ಹಾಗೂ ಇಂಗ್ಲೆಂಡ್‌ನ ಜೋ ರೂಟ್ ಅವರೊಂದಿಗೆ ಕ್ರಿಕೆಟ್ ಜಗತ್ತಿನ ಪ್ರಸಿದ್ಧ ‘ಫ್ಯಾಬ್ ಫೋರ್’ (Fab Four) ಬಳಗದ ಭಾಗವಾಗಿಯೂ ಗುರುತಿಸಿಕೊಂಡಿದ್ದಾರೆ. ಕಳೆದ ಒಂದು ದಶಕದ ಅವಧಿಯಲ್ಲಿ ವಿಶ್ವದ ಶ್ರೇಷ್ಠ ಬ್ಯಾಟರ್‌ಗಳ ಕುರಿತ ಚರ್ಚೆಗಳಲ್ಲಿ ಈ ನಾಲ್ವರೂ ಪ್ರಮುಖ ಸ್ಥಾನ ಪಡೆದಿದ್ದು, ವಿವಿಧ ಮಾದರಿಗಳಲ್ಲಿ ಹೊಸ ಮಾನದಂಡಗಳನ್ನು ನಿರ್ಮಿಸಿದ್ದಾರೆ.
ಈ ನಾಲ್ವರಲ್ಲಿ ಕೊಹ್ಲಿ ಮತ್ತು ವಿಲಿಯಮ್ಸನ್ ತಮ್ಮ ವಿಭಿನ್ನ ಬ್ಯಾಟಿಂಗ್ ಶೈಲಿಗಳಿದ್ದರೂ, ನಿರಂತರ ಸ್ಥಿರ ಪ್ರದರ್ಶನದ ಮೂಲಕ ವಿಶೇಷವಾಗಿ ಗಮನ ಸೆಳೆದಿದ್ದಾರೆ. ಅವರ ಪ್ರತಿಭೆ, ಸಮರ್ಪಣೆ ಮತ್ತು ನಿರಂತರ ಸಾಧನೆಗಳು ಅಭಿಮಾನಿಗಳು ಮಾತ್ರವಲ್ಲದೆ ಎದುರಾಳಿ ಆಟಗಾರರ ಮೆಚ್ಚುಗೆಯನ್ನೂ ಗಳಿಸಿವೆ. ಪ್ರತಿಸ್ಪರ್ಧಿಗಳಾಗಿ ಆರಂಭವಾದ ಈ ಪಯಣ, ಪರಸ್ಪರ ಗೌರವ ಮತ್ತು ಸ್ನೇಹದ ಸಂಕೇತವಾಗಿ ಬೆಳೆದಿದ್ದು, ಕ್ರಿಕೆಟ್ ಜಗತ್ತಿನಲ್ಲಿ ಒಂದು ಅಪರೂಪದ ಉದಾಹರಣೆಯಾಗಿ ಉಳಿದಿದೆ.