ಹರಾರೆ: ಗುರುವಾರ ಇಲ್ಲಿನ ಹರಾರೆ ಸ್ಪೋರ್ಟ್ಸ್ ಕ್ಲಬ್‌ನಲ್ಲಿ ನಡೆಯುತ್ತಿರುವ ಮೊದಲನೇ ಟಿ20ಐ ಪಂದ್ಯದಲ್ಲಿ ಭಾರತ ಹಾಗೂ ಜಿಂಬಾಬ್ವೆ (IND vs ZIM) ತಂಡಗಳು ಕಾದಾಟ ನಡೆಸುತ್ತಿವೆ. ಈ ಪಂದ್ಯದ ಭಾರತ ತಂಡದ ಪ್ಲೇಯಿಂಗ್ XIನಲ್ಲಿ ಚೊಚ್ಚಲ ಅವಕಾಶ ಪಡೆಯುವ ಮೂಲಕ ಅಶೋಕ್ ಶರ್ಮಾ (Ashok Sharma) ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದಾರೆ. ಪಂದ್ಯದ ಟಾಸ್‌ಗೂ ಮುನ್ನ ಭಾರತ ತಂಡದ ಸಹಾಯಕ ಕೋಚ್ ಸುನೀಲ್ ಜೋಶಿ ಅವರು ಭಾರತ ತಂಡದ ಕ್ಯಾಪ್ ನೀಡುವ ಮೂಲಕ ರಾಜಸ್ಥಾನ್ ಮೂಲದ ವೇಗಿಯನ್ನು ಟೀಮ್ ಇಂಡಿಯಾಗೆ ಅಧಿಕೃತವಾಗಿ ಬರ ಮಾಡಿಕೊಂಡರು.
2026ರ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಅಶೋಕ್ ಶರ್ಮಾ ಅವರು ಗುಜರಾತ್ ಟೈಟನ್ಸ್ ತಂಡದ ಪರ ಆಡಿದ್ದರು. ತಮ್ಮ ವೇಗದ ಬೌಲಿಂಗ್ ಕೌಶಲದ ಮೂಲಕ ಅವರು ಗಮನ ಸೆಳೆದಿದ್ದರು. ಮೊದಲನೇ ಟಿ20ಐ ಪಂದ್ಯದಲ್ಲಿ ಆಡುವ ರೇಸ್‌ನಲ್ಲಿ ಯಶ್ ಠಾಕೂರ್ ಹಾಗೂ ಅಶೋಕ್ ಶರ್ಮಾ ನಡುವೆ ಪೈಪೋಟಿ ನಡೆದಿತ್ತು. ಆದರೆ, ಟೀಮ್ ಮ್ಯಾನೇಜ್‌ಮೆಂಟ್ ಅಂತಿಮವಾಗಿ ಅಶೋಕ್ ಶರ್ಮಾ ಅವರನ್ನು ಪರಿಗಣಿಸಿದರು.
ಜಿಂಬಾಬ್ವೆ ವಿರುದ್ಧ ಟಾಸ್ ಗೆದ್ದು ಬೌಲಿಂಗ್ ಆಯ್ದುಕೊಂಡ ಭಾರತ
ಅಶೋಕ್ ಶರ್ಮಾ ಅವರು 16 ಟಿ20 ಪಂದ್ಯಗಳಿಂದ 28 ವಿಕೆಟ್‌ಗಳನ್ನು ಕಬಳಿಸಿದ್ದಾರೆ.ಇನ್ನು ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಆಡಿದ ಆರು ಪಂದ್ಯಗಳಿಂದ 6 ವಿಕೆಟ್‌ಗಳನ್ನು ಪಡೆದಿದ್ದಾರೆ. ಜಿಂಬಾಬ್ವೆನಲ್ಲಿ ಭಾರತದ ಪರ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ 23ನೇ ಆಟಗಾರ ಅಶೋಕ್ ಶರ್ಮಾ.
ಈ ಹಿಂದಿನ ಜಿಂಬಾಬ್ವೆ ಪ್ರವಾಸದಲ್ಲಿ 2024ರಲ್ಲಿ ಭಾರತದ ಪರ ಧ್ರುವ್ ಜುರೆಲ್, ರಿಯಾನ್ ಪರಾಗ್, ತುಷಾರ್ ದೇಶಪಾಂಡೆ ಹಾಗೂ ಸಾಯಿ ಸುದರ್ಶನ್ ಕೂಡ ಟಿ20ಐ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದರು. ಇದೀಗ ಈ ಸಾಲಿಗೆ ರಾಜಸ್ಥಾನ್ ವೇಗದ ಬೌಲರ್ ಸೇರ್ಪಡೆಯಾಗಿದ್ದಾರೆ.
ಟಾಸ್ ಗೆದ್ದು ಬೌಲಿಂಗ್ ಆರಿಸಿಕೊಂಡ ಭಾರತ
ಇನ್ನು ಈ ಪಂದ್ಯದಲ್ಲಿ ಟಾಸ್ ಗೆದ್ದ ಭಾರತ ತಂಡದ ನಾಯಕ ಶ್ರೇಯಸ್ ಅಯ್ಯರ್ ಬೌಲಿಂಗ್ ಆರಿಸಿಕೊಂಡರು ಹಾಗೂ ಎದುರಾಳಿ ಜಿಂಬಾಬ್ವೆ ತಂಡವನ್ನು ಮೊದಲ ಬ್ಯಾಟಿಂಗ್‌ಗೆ ಆಹ್ವಾನಿಸಿದರು. ಐರ್ಲೆಂಡ್ ಹಾಗೂ ಇಂಗ್ಲೆಂಡ್ ವಿರುದ್ಧದ ಎರಡು ಟಿ20ಐ ಸರಣಿಗಳಲ್ಲಿ ಸೋಲು ಅನುಭವಿಸಿದ್ದ ಶ್ರೇಯಸ್ ಅಯ್ಯರ್, ಇದೀಗ ತಮ್ಮ ನಾಯಕತ್ವದಲ್ಲಿ ಮೊದಲ ಪಂದ್ಯದ ಗೆಲುವಿನ ನಿರೀಕ್ಷೆಯಲ್ಲಿದ್ದಾರೆ.
ಉಭಯ ತಂಡಗಳ ಪ್ಲೇಯಿಂಗ್ XI
ಭಾರತ : ವೈಭವ್ ಸೂರ್ಯವಂಶಿ, ಅಭಿಷೇಕ್ ಶರ್ಮಾ, ಇಶಾನ್ ಕಿಶನ್ (ವಿಕೆಟ್ ಕೀಪರ್), ಶ್ರೇಯಸ್ ಅಯ್ಯರ್ (ನಾಯಕ), ತಿಲಕ್ ವರ್ಮಾ, ರಿಂಕು ಸಿಂಗ್, ಶಿವಂ ದುಬೆ, ರವಿ ಬಿಷ್ಣೋಯ್, ಪ್ರಿನ್ಸ್ ಯಾದವ್, ಅಶೋಕ್ ಶರ್ಮಾ, ಮಯಾಂಕ್ ಯಾದವ್
ಜಿಂಬಾಬ್ವೆ: ಬ್ರಿಯನ್ ಬೆನೆಟ್, ತಡಿವಾಣಶೆ ಮಾರುಮಣಿ (ವಿಕೆಟ್ ಕೀಪರ್), ಬೆನ್ ಕರನ್, ಡಿಯಾನ್ ಮಾಯರ್ಸ್, ಸಿಕಂದರ್ ರಾಝಾ (ನಾಯಕ), ರಯಾನ್ ಬರ್ಲ್, ವೆಸ್ಲೀ ಮಾಧೆವೆರೆ, ಬ್ರಾಡ್ ಎವಾನ್ಸ್. ನ್ಯೂಮನ್ ನ್ಯಾಮ್ಹುರಿ, ರಿಚರ್ಡ್ ಎನ್‌ಗರಾವಾ, ಬ್ಲೆಸಿಂಗ್ ಮುಝರಬಾನಿ