ಜೈಪುರ: ಸಿಕ್ಕಿಂ ವಿರುದ್ಧದ ಪಂದ್ಯದಲ್ಲಿ ಭರ್ಜರಿ ಶತಕ ಸಿಡಿಸುವ ಮೂಲಕ 7 ವರ್ಷಗಳ ಬಳಿಕ ವಿಜಜ ಹಝಾರೆ ಟ್ರೋಫಿ ಟೂರ್ನಿಗೆ (Vijay Hazare Trophy 2025) ಮರಳಿದ್ದ ಭಾರತ ಹಾಗೂ ಮುಂಬೈ ತಂಡದ ಹಿರಿಯ ಬ್ಯಾಟ್ಸ್‌ಮನ್ ರೋಹಿತ್ ಶರ್ಮಾ (Rohit Sharma), ಎರಡನೇ ಸುತ್ತಿನ ಪಂದ್ಯದಲ್ಲಿ ಖಾತೆ ತೆರೆಯದ ಗೋಲ್ಡನ್ ಡಕ್‌ಔಟ್ ಆದರು. ಶುಕ್ರವಾರ ಇಲ್ಲಿನ ಸವಾಯ್ ಮಾನ್ಸಿಂಗ್ ಕ್ರೀಡಾಂಗಣದಲ್ಲಿ ಉತ್ತರಾಖಂಡ ವಿರುದ್ಧದ ಪಂದ್ಯದಲ್ಲಿ ಶತಕ ಸಿಡಿಸಲಿದ್ದಾರೆಂದು ಎಲ್ಲರೂ ಭಾವಿಸಿದ್ದರು. ಆದರೆ, ಪಂದ್ಯದ ಮೊಟ್ಟ ಮೊದಲ ಓವರ್‌ನ ಕೊನೆಯ ಎಸೆತದಲ್ಲಿ ಪೈನ್ ಲೆಗ್‌ನಲ್ಲಿ ಕ್ಯಾಚ್ ಕೊಟ್ಟು ವಿಕೆಟ್ ಒಪ್ಪಿಸಿದರು. ಅಂದ ಹಾಗೆ ಟೀಮ್ ಇಂಡಿಯಾ ಮಾಜಿ ನಾಯಕನನ್ನು ಔಟ್ ಮಾಡುವ ಮೂಲಕ ದೇವೇಂದ್ರ ಸಿಂಗ್ ಬೋರಾ (Devendra Singh Bora) ಎಲ್ಲರ ಮೆಚ್ಚುಗೆಗೆ ಪಾತ್ರರಾದರು.
ಪಂದ್ಯದ ಮೊದಲನೇ ಓವರ್‌ನಲ್ಲಿ ಅದ್ಭುತವಾಗಿ ಬೌಲ್ ಮಾಡಿದ್ದ ದೇವೇಂದ್ರ ಸಿಂಗ್ ಬೋರಾ ಕೊನೆಯ ಎಸೆತದಲ್ಲಿ ಟೀಮ್ ಇಂಡಿಯಾ ಮಾಜಿ ನಾಯಕನನ್ನು ಬುದ್ದುವಂತಿಕೆಯಿಂದ ಔಟ್ ಮಾಡಿದರು. ರೋಹಿತ್ ಶರ್ಮಾ ಪುಲ್ ಶಾಟ್‌ಗಳಲ್ಲಿ ಪ್ರವೀಣರಾಗಿದ್ದಾರೆ. ಆದರೆ, ಮೊದಲನೇ ಓವರ್‌ನ ಕೊನೆಯ ಎಸೆತವನ್ನು ದೇವೇಂದ್ರ ಸಿಂಗ್ ಬೋರಾ, ಬ್ಯಾಟ್ಸ್‌ಮನ್ ಬಾಡಿ ಲೈನ್ ಮೇಲೆ ಬೌನ್ಸರ್ ಹಾಕಿದರು. ಈ ವೇಳೆ ಹಿಟ್‌ಮ್ಯಾನ್ ಸಿಕ್ಸರ್ ಬಾರಿಸಲು ಪುಲ್ ಮಾಡಿದರು. ಆದರೆ, ಚೆಂಡು ಬ್ಯಾಟ್‌ಗೆ ಸರಿಯಾಗಿ ಸಿಗಲಿಲ್ಲ ಹಾಗೂ ಪೈನ್ ಲೆಗ್‌ನಲ್ಲಿ ನಿಂತಿದ್ದ ಜಗಮೋಹನ್ ನಾಗರಕೋಟಿ ಬೌಂಡರಿ ಲೈನ್ ಬಳಿ ಸುಲಭವಾಗಿ ಕ್ಯಾಚ್ ಪಡೆದರು. ಇದಾದ ಬಳಿಕ 20 ರನ್ ಗಳಿಸಿದ ಬಳಿಕ ಅಂಗ್‌ಕೃಷ್ ರಘುವಂಶಿ ಕೂಡ ಔಟ್ ಆದರು.
Vijay Hazare Trophy: ಶತಕ ಸಿಡಿಸಿದ ಮುಂದಿನ ಪಂದ್ಯದಲ್ಲಿಯೇ ಡಕ್‌ಔಟ್ ಆದ ರೋಹಿತ್ ಶರ್ಮಾ!
ದೇವೇಂದ್ರ ಸಿಂಗ್ ಬೋರಾ ಯಾರು?
ಉತ್ತರಾಖಂಡ ತಂಡದ ವೇಗದ ಬೌಲರ್ ದೇವೇಂದ್ರ ಸಿಂಗ್ ಬೋರಾ ಅವರ ಪಾಲಿಗೆ ಮುಂಬೈ ವಿರುದ್ಧದ ಪಂದ್ಯದ ಲಿಸ್ಟ್ ಎ ಕ್ರಿಕೆಟ್‌ನ ಮೂರನೇ ಪಂದ್ಯವಾಗಿದೆ. ಇದಕ್ಕೂ ಮುನ್ನ ಅವರು ವಿಜಯ್ ಹಝಾರೆ ಟ್ರೋಫಿ ಟೂರ್ನಿಯ ಮೊದಲನೇ ಸುತ್ತಿನ ಪಂದ್ಯದಲ್ಲಿ ಹಿಮಾಚಲ ಪ್ರದೇಶ ಲಿಸ್ಟ್ ಎ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದರು. ತಮ್ಮ ಚೊಚ್ಚಲ ಪಂದ್ಯದಲ್ಲಿ ಬೌಲ್ ಮಾಡಿದ್ದ 8.3 ಓವರ್‌ಗಳಿಗೆ 44 ರನ್‌ಗಳನ್ನು ನೀಡಿ 4 ವಿಕೆಟ್‌ಗಳನ್ನು ಕಬಳಿಸಿದರು. ಲಿಸ್ಟ್ ಎ ಕ್ರಿಕೆಟ್‌ನಲ್ಲಿ ಅವರು 19.50ರ ಸರಾಸರಿ ಮತ್ತು 20.2ರ ಸ್ಟ್ರೈಕ್ ರೇಟ್ ಹೊಂದಿದ್ದಾರೆ.
ಇನ್ನು ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಅವರು ಆಡಿದ 15 ಪಂದ್ಯಗಳಿಂದ 30 ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಇದರಲ್ಲಿ 79ಕ್ಕೆ 6 ವಿಕೆಡ್ ವೈಯಕ್ತಿಕ ಅತ್ಯುತ್ತಮ ಬೌಲಿಂಗ್ ಸ್ಪೆಲ್ ಆಗಿದೆ. ಇಲ್ಲಿಯವರೆಗೂ ಅವರು ತಮ್ಮ ಪ್ರಥಮ ದರ್ಜೆ ಕ್ರಿಕೆಟ್ ವೃತ್ತಿ ಜೀವನದಲ್ಲಿ ಒಮ್ಮೆ 5 ವಿಕೆಟ್ ಸಾಧನೆ ಮಾಡಿದ್ದಾರೆ. ಈ ವರ್ಷದ ಆರಂಭದಲ್ಲಿ ಬೋರಾ ಉತ್ತರಾಖಂಡ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಡೆಹ್ರಾಡೂನ್ ವಾರಿಯರ್ಸ್ ಪರ ಭಾರಿ ಪ್ರಭಾವ ಬೀರಿದ್ದರು. ಅವರು ಏಳು ಪಂದ್ಯಗಳಲ್ಲಿ 7.91ರ ಎಕಾನಮಿ ರೇಟ್‌ನಲ್ಲಿ 9 ವಿಕೆಟ್‌ಗಳನ್ನು ಕಬಳಿಸಿದರು.]
331 ರನ್ ಕಲೆ ಹಾಕಿದ ಮುಂಬೈ
ರೋಹಿತ್ ಶರ್ಮಾ ಡಕ್‌ಔಟ್ ಆದ ಹೊರತಾಗಿಯೂ ಹಾರ್ದಿಕ್ ತೋಮರ್ (93 ರನ್) ಹಾಗೂ ಮುಶೀರ್ ಖಾನ್ ಮತ್ತು ಸರ್ಫರಾಝ್ ಖಾನ್ ಅವರ ತಲಾ ಅರ್ಧಶತಕಗಳ ಬಲದಿಂದ ಮುಂಬೈ ತಂಡ ತನ್ನ ಪಾಲಿನ 50 ಓವರ್‌ಗಳಿಗೆ 7 ವಿಕೆಟ್‌ಗಳ ನಷ್ಟಕ್ಕೆ 331 ರನ್‌ಗಳನ್ನು ಕಲೆ ಹಾಕಿತು. ಈ ಪಂದ್ಯದಲ್ಲಿ ದೇವೇಂದ್ರ ಸಿಂಗ್ 10 ಓವರ್‌ಗಳಿಗೆ 74 ರನ್ ನೀಡಿ 4 ವಿಕೆಟ್‌ಗಳನ್ನು ಕಬಳಿಸಿದರು. ನಂತರ ಗುರಿಯನ್ನು ಹಿಂಬಾಲಿಸಿದ ಉತ್ತರಾಖಂಡ ತಂಡ 50 ಓವರ್‌ಗಳಿಗೆ 9 ವಿಕೆಟ್‌ಗಳ ನಷ್ಟಕ್ಕೆ 280 ರನ್‌ಗಳಿಗೆ ಸೀಮಿತವಾಯಿತು. ಅಂತಿಮವಾಗಿ ಮುಂಬೈ 51 ರನ್‌ಗಳಿಂದ ಗೆಲುವು ಸಾಧಿಸಿತು.