ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

IND vs WI: ಮೊದಲನೇ ಟಿ20ಐ ಪಂದ್ಯದಲ್ಲಿ ವೈಭವ್‌ ಸೂರ್ಯವಂಶಿ ಏಕೆ ಆಡುತ್ತಿಲ್ಲ? ಕಾರಣ ಇಲ್ಲಿದೆ!

ವೆಸ್ಟ್ ಇಂಡೀಸ್ ವಿರುದ್ಧ ಲಖನೌನಲ್ಲಿ ನಡೆಯುತ್ತಿರುವ ಮೊದಲ ಟಿ20ಐ ಪಂದ್ಯಕ್ಕೆ ಭಾರತ ತಂಡದ ಆಡುವ 11ರ ಬಳಗದಲ್ಲಿ 15 ವರ್ಷದ ಯುವ ಬ್ಯಾಟರ್ ವೈಭವ್ ಸೂರ್ಯವಂಶಿಗೆ ಸ್ಥಾನ ನೀಡಲಾಗಿಲ್ಲ. ಏಷ್ಯನ್ ಗೇಮ್ಸ್‌ನಲ್ಲಿ ಭಾರತ ತಂಡದ ಪರ ಆಡಿದ್ದ ವೈಭವ್, ಶ್ರೀಲಂಕಾ ವಿರುದ್ಧದ ಸೆಮಿಫೈನಲ್ ಹಾಗೂ ಪಾಕಿಸ್ತಾನ ವಿರುದ್ಧದ ಫೈನಲ್ ಪಂದ್ಯದಲ್ಲಿ ಆಡುವ ಅವಕಾಶ ಪಡೆದಿದ್ದರು. ಆದರೆ ವೆಸ್ಟ್ ಇಂಡೀಸ್ ವಿರುದ್ಧದ ಟಿ20 ಸರಣಿಯ ಆರಂಭಿಕ ಪಂದ್ಯದಲ್ಲಿ ಅವರು ಬೆಂಚ್ ಕಾಯಬೇಕಾಗಿದೆ.

ವಿಂಡೀಸ್‌ ಮೊದಲನೇ ಟಿ20ಐನಲ್ಲಿ ವೈಭವ್‌ ಸೂರ್ಯವಂಶಿಗೆ ಏಕೆ ಸ್ಥಾನ ನೀಡಿಲ್ಲ?

ಲಖನೌ: ಏಷ್ಯನ್ ಗೇಮ್ಸ್‌ನಲ್ಲಿ ಚಿನ್ನ ಗೆಲ್ಲಲು ಪ್ರಮುಖ ಪಾತ್ರ ವಹಿಸಿದ್ದ ವೈಭವ್ ಸೂರ್ಯವಂಶಿ (Vaibhav Sooryavanshi) ವೆಸ್ಟ್ ಇಂಡೀಸ್ ವಿರುದ್ಧದ ಮೊದಲ ಟಿ20ಐ ಪಂದ್ಯದಲ್ಲಿ (IND vs WI) ಭಾರತ ತಂಡದ ಪ್ಲೇಯಿಂಗ್‌ XIನಿಂದ ಹೊರಗುಳಿದಿದ್ದಾರೆ. ಮಂಗಳವಾರ (ಅಕ್ಟೋಬರ್ 6) ಲಖನೌನ ಭಾರತ ರತ್ನ ಶ್ರೀ ಅಟಲ್ ಬಿಹಾರಿ ವಾಜಪೇಯಿ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯುತ್ತಿರು ಪಂದ್ಯದಲ್ಲಿ ಭಾರತ ತಂಡ ಒಟ್ಟು ನಾಲ್ಕು ಬದಲಾವಣೆಗಳನ್ನು ಮಾಡಿಕೊಂಡು ಕಣಕ್ಕೆ ಇಳಿಯಿತು.

ಅಕ್ಟೋಬರ್ 3ರಂದು ನಿಶಿನ್‌ನಲ್ಲಿ ನಡೆದಿದ್ದ ಏಷ್ಯನ್ ಗೇಮ್ಸ್ ಫೈನಲ್‌ನಲ್ಲಿ ಪಾಕಿಸ್ತಾನವನ್ನು ಮಣಿಸಿದ ತಂಡಕ್ಕೆ ಹೋಲಿಸಿದರೆ ಭಾರತ ನಾಲ್ಕು ಬದಲಾವಣೆಗಳನ್ನು ಮಾಡಿಕೊಂಡಿದೆ. ವೈಭವ್ ಬದಲಿಗೆ ವೇಗಿ ಅರ್ಷದೀಪ್ ಸಿಂಗ್ ತಂಡಕ್ಕೆ ಮರಳಿದ್ದಾರೆ. ಸಂಜು ಸ್ಯಾಮ್ಸನ್ ಮತ್ತು ಅಭಿಷೇಕ್ ಶರ್ಮಾ ಮತ್ತೊಮ್ಮೆ ಭಾರತದ ಆರಂಭಿಕ ಜೋಡಿಯಾಗಿ ಕಣಕ್ಕಿಳಿಯಲಿದ್ದು, ಇಶಾನ್ ಕಿಶನ್ ಮೂರನೇ ಕ್ರಮಾಂಕಕ್ಕೆ ಮರಳಿದ್ದಾರೆ.

IND vs WI 1st T20I: ಟಾಸ್‌ ಗೆದ್ದು ಬೌಲಿಂಗ್‌ ಆರಿಸಿಕೊಂಡ ಟೀಮ್‌ ಇಂಡಿಯಾ!

ಕುಲ್ದೀಪ್ ಯಾದವ್ ತಂಡಕ್ಕೆ ಮರಳಿರುವ ಹಿನ್ನೆಲೆಯಲ್ಲಿ ಇತ್ತೀಚಿನ ಪಂದ್ಯಗಳಲ್ಲಿ ನಿರೀಕ್ಷಿತ ಪ್ರದರ್ಶನ ನೀಡದ ರವಿ ಬಿಷ್ಣೋಯ್ ಸ್ಥಾನ ಕಳೆದುಕೊಂಡಿದ್ದಾರೆ. ಜಸ್‌ಪ್ರಿತ್ ಬುಮ್ರಾಗೆ ಈ ಸರಣಿಯಲ್ಲಿ ವಿಶ್ರಾಂತಿ ನೀಡಲಾಗಿರುವುದರಿಂದ ಮಯಾಂಕ್ ಯಾದವ್‌ಗೆ ಅವಕಾಶ ದೊರೆತಿದೆ. ಇದೇ ವೇಳೆ, ವಾಷಿಂಗ್ಟನ್ ಸುಂದರ್ ಬದಲಿಗೆ ನಮನ್ ಧೀರ್ ಭಾರತ ಪರ ಟಿ20 ಕ್ರಿಕೆಟ್‌ಗೆ ಪದಾರ್ಪಣೆ ಮಾಡುತ್ತಿದ್ದಾರೆ. ವಾಷಿಂಗ್ಟನ್ ಅವರನ್ನು ರೆಡ್-ಬಾಲ್ ಕ್ರಿಕೆಟ್‌ಗೆ ಗಮನಹರಿಸಲು ತಂಡದಿಂದ ಬಿಡುಗಡೆ ಮಾಡಲಾಗಿದೆ.

ವೈಭವ್ ಸೂರ್ಯವಂಶಿ ಏಕೆ ಆಡುತ್ತಿಲ್ಲ?

ಜಪಾನ್‌ನಲ್ಲಿ ನಡೆದಿದ್ದ ಕಠಿಣ ಪರಿಸ್ಥಿತಿಗಳ ಹಿನ್ನೆಲೆಯಲ್ಲಿ ಭಾರತ ಹೆಚ್ಚುವರಿ ಬ್ಯಾಟರ್‌ನೊಂದಿಗೆ ಕಣಕ್ಕಿಳಿದಿತ್ತು. ಇದೀಗ ತನ್ನ ಸಾಮಾನ್ಯ ಸಂಯೋಜನೆಗೆ ಮರಳಲು ತಂಡ ನಿರ್ಧರಿಸಿರುವುದರಿಂದ ವೈಭವ್‌ಗೆ ಆಡುವ ಬಳಗದಲ್ಲಿ ಸ್ಥಾನ ದೊರೆತಿಲ್ಲ.

ಶ್ರೀಲಂಕಾ ವಿರುದ್ಧದ ಏಷ್ಯನ್ ಗೇಮ್ಸ್ ಸೆಮಿಫೈನಲ್‌ನಲ್ಲಿ ವೈಭವ್ 21 ಎಸೆತಗಳಲ್ಲಿ 37 ರನ್ ಗಳಿಸಿ ಪ್ರಮುಖ ಕೊಡುಗೆ ನೀಡಿದ್ದರು. 15 ವರ್ಷದ ಈ ಯುವ ಬ್ಯಾಟರ್ ಏಷ್ಯನ್ ಗೇಮ್ಸ್‌ನಲ್ಲಿ ಭಾರತ ಚಿನ್ನದ ಪದಕ ಗೆಲ್ಲುವ ಅಭಿಯಾನದಲ್ಲಿ ಗಮನಾರ್ಹ ಪ್ರದರ್ಶನ ನೀಡಿದ್ದರು.

IPL 2027: ಡೆಲ್ಲಿ ಕ್ಯಾಪಿಟಲ್ಸ್‌ ತಂಡಕ್ಕೆ ನೂತನ ಹೆಡ್‌ ಕೋಚ್‌ ಆಗಿ ಸೌರವ್‌ ಗಂಗೂಲಿ ನೇಮಕ!

ಕಳೆದ ತಿಂಗಳು ಭಾರತದ ಮುಖ್ಯ ಕೋಚ್ ಗೌತಮ್ ಗಂಭೀರ್, ವೈಭವ್ ಉತ್ತಮ ಫಾರ್ಮ್‌ನಲ್ಲಿದ್ದರೂ ಟಿ20 ವಿಶ್ವಕಪ್ ಗೆದ್ದ ಅಭಿಷೇಕ್ ಶರ್ಮಾ–ಸಂಜು ಸ್ಯಾಮ್ಸನ್ ಆರಂಭಿಕ ಜೋಡಿಯೇ ಮೊದಲ ಆಯ್ಕೆಯಾಗಿ ಮುಂದುವರಿಯಲಿದೆ ಎಂದು ಸ್ಪಷ್ಟಪಡಿಸಿದ್ದರು. ಜಿಂಬಾಬ್ವೆ ಪ್ರವಾಸದಲ್ಲಿ ವೈಭವ್ ‘ಪ್ಲೇಯರ್ ಆಫ್ ದಿ ಸೀರೀಸ್’ ಪ್ರಶಸ್ತಿ ಪಡೆದಿದ್ದರು. ಆದರೆ ಬಳಿಕ ಅಫ್ಘಾನಿಸ್ತಾನ ವಿರುದ್ಧದ ಮೂರು ಪಂದ್ಯಗಳ ಸರಣಿ ಹಾಗೂ ಜಪಾನ್ ವಿರುದ್ಧದ ಏಕೈಕ ಪಂದ್ಯದಲ್ಲೂ ಅವರಿಗೆ ಆಡುವ ಅವಕಾಶ ಸಿಕ್ಕಿರಲಿಲ್ಲ.

ಉಭಯ ತಂಡಗಳ ಪ್ಲೇಯಿಂಗ್‌ XI

ಭಾರತ: ಅಭಿಷೇಕ್ ಶರ್ಮಾ, ಸಂಜು ಸ್ಯಾಮ್ಸನ್ (ವಿಕೆಟ್‌ಕೀಪರ್), ಇಶಾನ್ ಕಿಶನ್, ಶ್ರೇಯಸ್ ಅಯ್ಯರ್ (ನಾಯಕ), ತಿಲಕ್ ವರ್ಮಾ, ಶಿವಂ ದುಬೆ, ನಮನ್ ಧೀರ್, ಅಕ್ಷರ್ ಪಟೇಲ್, ಅರ್ಷದೀಪ್ ಸಿಂಗ್, ಕುಲ್ದೀಪ್ ಯಾದವ್,ಮಯಾಂಕ್ ಯಾದವ್

ವೆಸ್ಟ್ ಇಂಡೀಸ್: ಶೇಯ್‌ ಹೋಪ್ (ವಿಕೆಟ್‌ಕೀಪರ್‌/ನಾಯಕ), ಕಮಿಲ್ ಪೂರನ್, ಶಿಮ್ರಾನ್ ಹೆಟ್ಮಾಯರ್, ರೊವ್ಮನ್‌ ಪೊವೆಲ್, ಶೆರ್ಫೇನ್ ಋದರ್‌ಫೋರ್ಡ್, ರೊಮ್ಯಾರಿಯೊ ಶೆಫರ್ಡ್, ಮ್ಯಾಥ್ಯೂ ಫೋರ್ಡ್, ರಾಸ್ಟನ್ ಚೇಸ್, ಅಕೀಲ್ ಹೊಸೇನ್, ಶಮರ್ ಸ್ಪ್ರಿಂಗರ್, ಶಮರ್ ಜೋಸೆಫ್