ನವದೆಹಲಿ: ಭಾರತೀಯ ಹಾಗೂ ಆಂಧ್ರ ಕ್ರಿಕೆಟ್ ತಂಡದ ವಿಕೆಟ್ ಕೀಪರ್-ಬ್ಯಾಟ್ಸ್‌ಮನ್ ಕೆಎಸ್ ಭರತ್ (KS Bharat Retirement) ಅವರು ಅಂತಾರಾಷ್ಟ್ರೀಯ ಹಾಗೂ ಭಾರತದ ಕ್ರಿಕೆಟ್‌ಗೆ ತಮ್ಮ 32ನೇ ವಯಸ್ಸಿನಲ್ಲಿಯೇ ವಿದಾಯ ಹೇಳುವ ಮೂಲಕ ಅಚ್ಚರಿ ಮೂಡಿಸಿದ್ದಾರೆ. ಅವರು ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಅವರ ಕಮ್‌ಬ್ಯಾಕ್ ಕಠಿಣವಾಗಿದ್ದರೂ ಕನಿಷ್ಠ ದೇಶಿ ಕ್ರಿಕೆಟ್‌ನಲ್ಲಿ ಇನ್ನಷ್ಟು ವರ್ಷಗಳ ಮುಂದುವರಿಯಬಹುದಿತ್ತು. ಆದರೆ, ಅವರು ಬಹುಶಃ ವಿದೇಶಿ ಲೀಗ್‌ಗಳಲ್ಲಿ ಆಡಲು ಬಯಸುತ್ತಿರಬಹುದು. ಹಾಗಾಗಿ ಈ ನಿರ್ಧಾರವನ್ನು ತೆಗೆದುಕೊಂಡಿದ್ದಾರೆಂದು ಅಂದಾಜಿಸಬಹುದು. ಅಂದ ಹಾಗೆ ಅವರು ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿಯೂ ಹಲವು ತಂಡಗಳ ಪರ ಆಡಿದ್ದಾರೆ.
“ಹೆಮ್ಮೆಯ ಹೃದಯ ಮತ್ತು ಕೃತಜ್ಞತೆಯ ಭಾವನೆಯೊಂದಿಗೆ ನಾನು ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸುತ್ತಿದ್ದೇನೆ. ನನ್ನ ದೇಶಕ್ಕಾಗಿ ಆಡುವ ಅವಕಾಶ ನನ್ನ ಜೀವನದ ಅತ್ಯುನ್ನತ ಗೌರವವಾಗಿದೆ. ಈ ಪಯಣ ಅಪಾರ ಸಹನಶೀಲತೆ, ದೃಢತೆ ಮತ್ತು ಶಕ್ತಿಯನ್ನು ಬೇಡಿಕೊಂಡಿತ್ತಾದರೂ ಭಾರತವನ್ನು ಟೆಸ್ಟ್ ಕ್ರಿಕೆಟ್‌ನಲ್ಲಿ ಪ್ರತಿನಿಧಿಸಿದ ಗೌರವವು ಆ ಪ್ರತಿಯೊಂದು ಕ್ಷಣಕ್ಕೂ ಸಾರ್ಥಕತೆಯನ್ನು ನೀಡಿದೆ."
ʻಕ್ರಾಸ್ ಬ್ಯಾಟಿಂಗ್ ಶಾಟ್ಸ್ ಆಡುವುದನ್ನು ನಿಲ್ಲಿಸಿʼ: ರಿಷಭ್ ಪಂತ್‌ಗೆ ಬಾಲ್ಯದ ಕೋಚ್ ಸಲಹೆ!
"ನಾಲ್ಕು ಸದಸ್ಯರ ನಮ್ಮ ಕುಟುಂಬವು ಎರಡು ದಶಕಗಳ ಕಾಲ ಒಂದೇ ಕನಸನಲ್ಲಿ ಜೀವಿಸಿದೆ. ನನ್ನ ಅಕ್ಕ, ತಾಯಿ ಮತ್ತು ತಂದೆಗೆ ಹೃತ್ಪೂರ್ವಕ ಧನ್ಯವಾದಗಳು. ಅವರು ನನಗಾಗಿ ಅತ್ಯುತ್ತಮ ವಾತಾವರಣ ಮತ್ತು ಬೆಂಬಲವನ್ನು ಸದಾ ನೀಡಿದ್ದಾರೆ. ನಾನು ಅವರ ಪ್ರೀತಿ, ಶಿಸ್ತು ಮತ್ತು ಕಠಿಣ ಪರಿಶ್ರಮದ ಫಲ,” ಎಂದು ಭರತ್ ಅವರು ಗುರುವಾರ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿರುವ ಭಾವನಾತ್ಮಕ ಸಂದೇಶದಲ್ಲಿ ತಿಳಿಸಿದ್ದಾರೆ.
2019ರಲ್ಲಿ ಟೆಸ್ಟ್ ಕ್ರಿಕೆಟ್‌ಗೆ ಪದಾರ್ಪಣೆ
ಕೆಎಸ್ ಭರತ್ ಅವರು 2019ರ ನವೆಂಬರ್‌ನಲ್ಲಿ ಭಾರತ ಟೆಸ್ಟ್ ತಂಡಕ್ಕೆ ಆಯ್ಕೆಯಾಗಿದ್ದರೂ ರಿಷಭ್ ಪಂತ್ ಕಾರು ಅಪಘಾತದಲ್ಲಿ ಗಂಭೀರ ಗಾಯಕ್ಕೆ ತುತ್ತಾದ ಬಳಿಕ ಆಂಧ್ರ ಆಟಗಾರ 2023ರ ಫೆಬ್ರವರಿ ತಿಂಗಳಲ್ಲಿ ಭಾರತದ ಪರ ಟೆಸ್ಟ್ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದರು. 2021ರ ನವೆಂಬರ್‌ನಲ್ಲಿ ಕಾನ್ಪುರ್ ಟಸ್ಟ್ ಪಂದ್ಯದ ವೇಳೆ ವೃದ್ದಿಮಾನ್ ಸಹಾ ಗಾಯಕ್ಕೆ ತುತ್ತಾದ ಬಳಿಕ ವಿಕೆಟ್ ಕೀಪರ್ ಕಾರ್ಯವನ್ನು ನಿರ್ವಹಿಸಿ ಎರಡು ಕ್ಯಾಚ್‌ಗಳು ಹಾಗೂ ಒಂದು ಪರಿಣಾಮಕಾರಿ ಸ್ಟಂಪ್ ಔಟ್ ಮಾಡಿದ್ದನ್ನು ಕೂಡ ಭರತ್ ಇದೀಗ ಸ್ಮರಿಸಿಕೊಂಡಿದ್ದಾರೆ.
7 ಟೆಸ್ಟ್ ಪಂದ್ಯಗಳಿಂದ 223 ರನ್
ಇಂಗ್ಲೆಂಡ್ ಎದುರು ತಮ್ಮ ತವರು ಅಂಗಣ ವಿಶಾಖಪಟ್ಟಣಂನಲ್ಲಿ ಎರಡನೇ ಟೆಸ್ಟ್ ಪಂದ್ಯವನ್ನು ಆಡಿದ ಬಳಿಕ ವಿಕೆಟ್ ಕೀಪಿಂಗ್ ಹಾಗೂ ಬ್ಯಾಟಿಂಗ್‌ನಲ್ಲಿ ಅಸ್ಥಿರ ಪ್ರದರ್ಶನಕ್ಕಾಗಿ ಕೆಎಸ್ ಭರತ್ ಟೆಸ್ಟ್ ತಂಡದಲ್ಲಿ ತಮ್ಮ ಸ್ಥಾನವನ್ನು ಕಳೆದುಕೊಂಡರು. ಅವರು ತಮ್ಮ ಟೆಸ್ಟ್ ವೃತ್ತಿ ಜೀವನದಲ್ಲಿ ಏಳು ಪಂದ್ಯಗಳನ್ನು ಆಡಿದ್ದಾರೆ. ಇದರಲ್ಲಿ ಅವರು ಆಸ್ಟ್ರೇಲಿಯಾ ವಿರುದ್ಧ 2023ರ ಐಸಿಸಿ ವಿಶ್ವ ಟೆಸ್ಟ್ ಚಂಪಿಯನ್‌ಷಿಪ್ ಫೈನಲ್ ಪಂದ್ಯ ಕೂಡ ಒಳಗೊಂಡಿದೆ. ಅವರು ತಮ್ಮ ದೀರ್ಘಾವಧಿ ಸ್ವರೂಪದಲ್ಲಿ 20.09ರ ಸರಾಸರಿಯಲ್ಲಿ 223 ರನ್‌ಗಳನ್ನು ಮಾತ್ರ ಗಳಿಸಿದ್ದಾರೆ. ಇದರಲ್ಲಿ ಒಂದೇ ಒಂದು ಅರ್ಧಶತಕವನ್ನು ಗಳಿಸಿಲ್ಲವಾದರೂ 44 ರನ್ ಇವರ ವೈಯಕ್ತಿಕ ಗರಿಷ್ಠ ಮೊತ್ತವಾಗಿದೆ.
ಕೆಎಸ್ ಭರತ್ ಅವರ ಐಪಿಎಲ್ ವೃತ್ತಿ ಜೀವನ
ಐಪಿಎಲ್‌ನಲ್ಲಿ ಭರತ್ ಅವರ ಪಯಣ 2015ರಲ್ಲಿ ಡೆಲ್ಲಿ ಡೇರ್‌ಡೆವಿಲ್ಸ್ ತಂಡದೊಂದಿಗೆ ಆರಂಭವಾಗಿತ್ತು. ಬಳಿಕ 2021ರ ಋತುವಿನಲ್ಲಿ ಅವರು ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಕಣಕ್ಕಿಳಿದಿದ್ದರು. ಆ ಋತುವಿನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ರೋಚಕ ಪಂದ್ಯದಲ್ಲಿ ಅವರು ಅಜೇಯ 78 ರನ್‌ಗಳ ಸಿಡಿಲಬ್ಬರದ ಇನಿಂಗ್ಸ್ ಆಡಿ ತಂಡಕ್ಕೆ ಕೊನೆಯ ಎಸೆತದಲ್ಲಿ ಜಯ ತಂದುಕೊಟ್ಟಿದ್ದರು. ಪಂದ್ಯದಲ್ಲಿ ಅಂತಿಮ ಚೆಂಡಿನಲ್ಲಿ ಆವೇಶ್ ಖಾನ್ ಅವರ ಬೌಲಿಂಗ್‌ನಲ್ಲಿ ನೇರವಾಗಿ ಸಿಕ್ಸರ್ ಬಾರಿಸುವ ಮೂಲಕ ಆರ್‌ಸಿಬಿಗೆ ಸ್ಮರಣೀಯ ಗೆಲುವು ತಂದುಕೊಟ್ಟಿದ್ದರು.
ಇದಾದ ನಂತರದ ಮೂರು ವರ್ಷಗಳಲ್ಲಿ ಭರತ್ ಅವರು ಕ್ರಮವಾಗಿ ಡೆಲ್ಲಿ ಕ್ಯಾಪಿಟಲ್ಸ್ (2022), ಗುಜರಾತ್ ಟೈಟನ್ಸ್ (2023) ಹಾಗೂ 2024ರಲ್ಲಿ ಪ್ರಶಸ್ತಿ ಗೆದ್ದ ಕೋಲ್ಕತ್ತಾ ನೈಟ್ ರೈಡರ್ಸ್ ತಂಡಗಳ ಭಾಗವಾಗಿದ್ದರು. ಆದರೆ ಈ ಅವಧಿಯಲ್ಲಿ ಅವರಿಗೆ ಹೆಚ್ಚಿನ ಅವಕಾಶಗಳು ಸಿಕ್ಕಿರಲಿಲ್ಲ.
IND vs AFG: ಅಫ್ಘಾನಿಸ್ತಾನ ವಿರುದ್ಧದ ಏಕದಿನ ಸರಣಿಗೆ ರೋಹಿತ್ ಶರ್ಮಾ ಅನುಮಾನ!
ದೇಶಿ ಕ್ರಿಕೆಟ್ ಅಂಕಿಅಂಶಗಳು
ದೇಶಿ ಕ್ರಿಕೆಟ್‌ನಲ್ಲಿ ಭರತ್ ಅವರು ವಿಶಿಷ್ಟ ದಾಖಲೆಯನ್ನು ಹೊಂದಿದ್ದಾರೆ. 2014-15ರ ರಣಜಿ ಟ್ರೋಫಿ ಋತುವಿನಲ್ಲಿ ಗೋವಾ ವಿರುದ್ಧ ಆಂಧ್ರ ಪರ ಆಡಿದ ವೇಳೆ ಕೇವಲ 311 ಎಸೆತಗಳಲ್ಲಿ 308 ರನ್‌ಗಳ ಭರ್ಜರಿ ತ್ರಿಶತಕ ಸಿಡಿಸುವ ಮೂಲಕ ರಣಜಿ ಟ್ರೋಫಿಯಲ್ಲಿ ತ್ರಿಶತಕ ದಾಖಲಿಸಿದ ಮೊದಲ ವಿಕೆಟ್‌ಕೀಪರ್-ಬ್ಯಾಟರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು.
ಒಟ್ಟಾರೆ ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ 113 ಪಂದ್ಯಗಳನ್ನು ಆಡಿರುವ ಭರತ್, 36.53ರ ಸರಾಸರಿಯಲ್ಲಿ 6,102 ರನ್‌ಗಳನ್ನು ಕಲೆಹಾಕಿದ್ದಾರೆ. ಇದಲ್ಲದೆ, ಲಿಸ್ಟ್ ‘ಎ’ ಕ್ರಿಕೆಟ್‌ನಲ್ಲಿ 2,692 ರನ್‌ಗಳು ಹಾಗೂ ಟಿ20 ಮಾದರಿಯ ಪಂದ್ಯಗಳಲ್ಲಿ 1,812 ರನ್‌ಗಳನ್ನು ತಮ್ಮ ಖಾತೆಗೆ ಸೇರಿಸಿಕೊಂಡಿದ್ದಾರೆ.