ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಮೊಹ್ಸಿನ್‌ ನಖ್ವಿ ಅವರನ್ನುʻಟ್ರೋಫಿ ಕಳ್ಳ ನಖ್ವಿʼ ಎಂದು ಕರೆದ ಕ್ರಿಕೆಟ್‌ ಫ್ಯಾನ್ಸ್! ವಿಡಿಯೊ

2026ರ ಮಹಿಳಾ ಏಷ್ಯಾ ಕಪ್‌ ಟೂರ್ನಿಯ ಫೈನಲ್‌ ಪಂದ್ಯದಲ್ಲಿ ಭಾರತ ತಂಡ, ಶ್ರೀಲಂಕಾ ತಂಡವನ್ನು ಮಣಿಸಿ 8ನೇ ಬಾರಿ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿತು. ಫೈನಲ್‌ ಪಂದ್ಯದ ಬಳಿಕ ಭಾರತ ತಂಡ, ಏಷ್ಯನ್‌ ಕ್ರಿಕೆಟ್‌ ಕೌನ್ಸಿಲ್‌ ಅಧ್ಯಕ್ಷ ಮೊಹ್ಸಿನ್‌ ನಖ್ವಿ ಅವರಿಂದ ಟ್ರೋಫಿಯನ್ನು ಸ್ವೀಕರಿಸಲು ನಿರಾಕರಿಸಿತು. ಇದಾದ ಬಳಿಕ ಮೈದಾನದಲ್ಲಿ ಹೈಡ್ರಾಮಾ ನಡೆದಿತ್ತು. ಅಭಿಮಾನಿಯೊಬ್ಬರು ಮೊಹ್ಸಿನ್‌ ನಖ್ವಿಯನ್ನು ಟ್ರೋಫಿ ಕಳ್ಳ ಎಂದು ಕೂಗಿದ್ದಾರೆ.

ಮೊಹ್ಸಿನ್‌ ನಖ್ವಿಯನ್ನು ಟ್ರೋಫಿ ಕಳ್ಳ ಎಂದು ಕರೆದ ಫ್ಯಾನ್ಸ್‌.

ದುಬೈ: ಶ್ರೀಲಂಕಾ ತಂಡವನ್ನು ಫೈನಲ್‌ ಹಣಾಹಣಿಯಲ್ಲಿ ಮಣಿಸಿದ ಭಾರತ ತಂಡ, 2026ರ ಮಹಿಳಾ ಏಷ್ಯಾಕಪ್ (Women's Asia Cup 2026) ಪ್ರಶಸ್ತಿಯನ್ನು ಗೆದ್ದುಕೊಂಡಿತು. ಆದರೆ, ಹರ್ಮನ್‌ಪ್ರೀತ್‌ ಕೌರ್‌ ನಾಯಕತ್ವದ ಭಾರತ ತಂಡ, ಮತ್ತೊಮ್ಮೆ ಟ್ರೋಫಿ ಸ್ವೀಕರಿಸದೆ ದುಬೈ ಕ್ರೀಡಾಂಗಣದಿಂದ ನಿರ್ಗಮಿಸಿತು. ಏಷ್ಯನ್ ಕ್ರಿಕೆಟ್ ಕೌನ್ಸಿಲ್ (ACC) ಅಧ್ಯಕ್ಷ ಹಾಗೂ ಪಾಕಿಸ್ತಾನ ಕ್ರಿಕೆಟ್ ಮಂಡಳಿ (PCB) ಮುಖ್ಯಸ್ಥ ಮೊಹ್ಸಿನ್ ನಖ್ವಿ ಅವರಿಂದ ಟ್ರೋಫಿ ಸ್ವೀಕರಿಸಲು ಭಾರತ ತಂಡ ನಿರಾಕರಿಸಿದ ಬಳಿಕ, ಭಾರತೀಯ ಅಭಿಮಾನಿಗಳು “ಟ್ರೋಫಿ ಕಳ್ಳ ನಖ್ವಿ” ಎಂದು ಘೋಷಣೆ ಕೂಗಿದ್ದಾರೆ.

ಭಾನುವಾರ ದುಬೈ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದಿದ್ದ ಮಹಿಳಾ ಏಷ್ಯಾಕಪ್ ಫೈನಲ್‌ನಲ್ಲಿ ಭಾರತ ತಂಡ ಶ್ರೀಲಂಕಾವನ್ನು ಮಣಿಸಿ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿತು. ಆದರೆ ಭಾರತ ತಂಡ, ನಖ್ವಿ ಅವರಿಂದ ಟ್ರೋಫಿ ಸ್ವೀಕರಿಸಲು ನಿರಾಕರಿಸಿದ್ದರಿಂದ ಅಧಿಕೃತ ಟ್ರೋಫಿ ಪ್ರದಾನ ಸಮಾರಂಭ ನಡೆಯಲಿಲ್ಲ.

ಪ್ರಶಸ್ತಿ ಪ್ರದಾನ ಸಮಾರಂಭದ ಬಳಿಕ ನಖ್ವಿ ಕ್ರೀಡಾಂಗಣದಿಂದ ಹೊರಡುತ್ತಿದ್ದ ಸಂದರ್ಭದಲ್ಲಿ, ಅಲ್ಲಿದ್ದ ಭಾರತೀಯ ಅಭಿಮಾನಿಗಳು “ಟ್ರೋಫಿ ಕಳ್ಳ ನಖ್ವಿ” ಎಂದು ಘೋಷಣೆ ಕೂಗಿದ್ದಾರೆ. ಈ ಘೋಷಣೆಗಳ ವಿಡಿಯೊಗಳು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೇಗವಾಗಿ ವೈರಲ್ ಆಗುತ್ತಿವೆ.

ಮೊಹ್ಸಿನ್‌ ನಖ್ವಿಯಿಂದ ಮಹಿಳಾ ಏಷ್ಯಾ ಕಪ್‌ ಸ್ವೀಕರಿಸದೇ ಇರಲು ಕಾರಣ ತಿಳಿಸಿದ ಕೋಚ್‌ ಅಮೋಲ್‌ ಮಝುಮ್ದಾರ್‌!

ಈ ಘಟನೆ ಕಳೆದ ವರ್ಷದ ಪುರುಷರ ಏಷ್ಯಾಕಪ್ ಫೈನಲ್‌ನ ವಿವಾದವನ್ನು ಮತ್ತೊಮ್ಮೆ ನೆನಪಿಸಿದೆ. ಆಗಲೂ ಮೊಹ್ಸಿನ್ ನಖ್ವಿ ಅವರೊಂದಿಗೆ ಉಂಟಾದ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಭಾರತ ಪುರುಷರ ತಂಡ ಟ್ರೋಫಿ ಸ್ವೀಕರಿಸದೆ ಕ್ರೀಡಾಂಗಣದಿಂದ ನಿರ್ಗಮಿಸಿತ್ತು.

ಶ್ರೀಲಂಕಾ ನಾಯಕಿಗೆ ರನ್ನರ್‌ಅಪ್ ಚೆಕ್ ನೀಡಿದ ನಖ್ವಿ

ಭಾನುವಾರದ ಫೈನಲ್ ಪಂದ್ಯಕ್ಕೆ ನಖ್ವಿ ಅವರು ದುಬೈ ಕ್ರೀಡಾಂಗಣದಲ್ಲಿ ಉಪಸ್ಥಿತರಿದ್ದರು. ಪ್ರಶಸ್ತಿ ಪ್ರದಾನ ಸಮಾರಂಭ ಆರಂಭವಾದಾಗ ಅವರು ವೇದಿಕೆಗೆ ಆಗಮಿಸಿ ಶ್ರೀಲಂಕಾ ನಾಯಕಿ ಚಾಮರಿ ಅಟಪಟ್ಟು ಅವರಿಗೆ ರನ್ನರ್‌ಅಪ್ ಚೆಕ್ ಹಸ್ತಾಂತರಿಸಿದರು.

ಆದರೆ ಮೊಹ್ಸಿನ್ ನಖ್ವಿ ಅವರು ಪಾಕಿಸ್ತಾನದ ಗೃಹ ಸಚಿವರೂ ಆಗಿರುವ ಹಿನ್ನೆಲೆಯಲ್ಲಿ ಭಾರತ ತಂಡದ ಆಟಗಾರರು ಅಧಿಕೃತ ಟ್ರೋಫಿ ಪ್ರದಾನ ಸಮಾರಂಭದಲ್ಲಿ ಭಾಗವಹಿಸಲಿಲ್ಲ. ಚಾಮರಿ ಅಟಪಟ್ಟು ಅವರು ಶ್ರೀಲಂಕಾ ಮಾಜಿ ಕ್ರಿಕೆಟಿಗ ಫರ್ವೇಜ್ ಮಹರೂಫ್ ಅವರೊಂದಿಗೆ ಮಾತನಾಡಿದ ಬಳಿಕ ಪ್ರಸಾರದ ಕಾರ್ಯಕ್ರಮ ಅಂತ್ಯಗೊಂಡಿತು. ಬಳಿಕ ನಖ್ವಿ ಅವರು ಇತರ ಎಸಿಸಿ ಅಧಿಕಾರಿಗಳೊಂದಿಗೆ ಮೈದಾನದಿಂದ ಹೊರಟುಹೋದರು.



ಭಾರತ ತಂಡ ಟ್ರೋಫಿ ಸ್ವೀಕರಿಸದೇ ಇರಲು ಕಾರಣವೇನು?

ಶ್ರೀಲಂಕಾ ವಿರುದ್ಧದ ಫೈನಲ್‌ನಲ್ಲಿ ಗೆದ್ದು 2026ರ ಮಹಿಳಾ ಏಷ್ಯಾ ಕಪ್ ಚಾಂಪಿಯನ್ ಆದ ಬಳಿಕ, ಪಾಕಿಸ್ತಾನ ಕ್ರಿಕೆಟ್ ಮುಖ್ಯಸ್ಥ ಮೊಹ್ಸಿನ್ ನಖ್ವಿ ಅವರಿಂದ ಟ್ರೋಫಿ ಸ್ವೀಕರಿಸಲು ಭಾರತ ಮಹಿಳಾ ತಂಡ ನಿರಾಕರಿಸಿತ್ತು. ಈ ನಿರ್ಧಾರದ ಹಿಂದಿನ ಕಾರಣವನ್ನು ಭಾರತ ತಂಡದ ಮುಖ್ಯ ಕೋಚ್ ಅಮೋಲ್ ಮಜುಂದಾರ್ ಬಹಿರಂಗಪಡಿಸಿದ್ದಾರೆ.

ಪಂದ್ಯದ ಬಳಿಕ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಜುಂದಾರ್‌, “ಈ ನಿರ್ಧಾರವನ್ನು ಬಿಸಿಸಿಐ ತೆಗೆದುಕೊಂಡಿದೆ ಮತ್ತು ನಾವು ಅದನ್ನು ಬೆಂಬಲಿಸುತ್ತೇವೆ. ನಮಗೆ ಈ ಟೂರ್ನಿ ಮುಗಿದಿದೆ. ನಾವು ಚಾಂಪಿಯನ್ಸ್. ಅದು ನಮಗೆ ಸಾಕು. ‘ಏಷ್ಯಾ ಕಪ್ 2026ರ ಚಾಂಪಿಯನ್ಸ್ ಭಾರತ’ ಎಂದು ದೊಡ್ಡ ಪರದೆಯಲ್ಲೇ ತೋರಿಸಲಾಗಿದೆ. ನಮ್ಮ ಪಾಲಿಗೆ ಈ ಟೂರ್ನಿ ಅಧಿಕೃತವಾಗಿ ಮುಗಿದಿದೆ,” ಎಂದು ಅವರು ಹೇಳಿದರು.