ದುಬೈ: ಭಾರತ ಮತ್ತು ಪಾಕಿಸ್ತಾನ ತಂಡಗಳು (IND vs PAK) ಅಕ್ಟೋಬರ್ 5 ರಂದು ಕೊಲಂಬೊದ ಆರ್ ಪ್ರೇಮದಾಸ ಕ್ರೀಡಾಂಗಣದಲ್ಲಿ ನಡೆಯಲಿರುವ ಮಹಿಳಾ ಏಕದಿನ ವಿಶ್ವಕಪ್ (Women's ODI World Cup) ಪಂದ್ಯದಲ್ಲಿ ಪರಸ್ಪರ ಮುಖಾಮುಖಿಯಾಗಲಿವೆ. ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ (ICC) ಸೋಮವಾರ ಈ ಟೂರ್ನಿಯ ವೇಳಾಪಟ್ಟಿಯನ್ನು ಪ್ರಕಟಿಸಿದೆ. ಈ ವರ್ಷದ ಆರಂಭದಲ್ಲಿ ಚಾಂಪಿಯನ್ಸ್ ಟ್ರೋಫಿ ಮತ್ತು ನಂತರದ ಪಂದ್ಯಗಳಿಗೆ ಅಂಗೀಕರಿಸಲ್ಪಟ್ಟ ಹೈಬ್ರಿಡ್ ಮಾದರಿಯ ಪ್ರಕಾರ ಕೊಲಂಬೊವನ್ನು ತಟಸ್ಥ ಸ್ಥಳವಾಗಿ ಸೇರಿಸಲಾಗಿದೆ. ಭಾರತ ತಂಡ ಈ ಹಿಂದೆ ಐಸಿಸಿ ಚಾಂಪಿಯನ್ಸ್ ಟ್ರೋಫಿ ಪಂದ್ಯವನ್ನು ಆಡಲು ಪಾಕಿಸ್ತಾನಕ್ಕೆ ಪ್ರಯಾಣಿಸಲು ನಿರಾಕರಿಸಿತ್ತು. ಅಂದ ಹಾಗೆ ಮಹಿಳಾ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯವು ಮಧ್ಯಾಹ್ನ 3 ಗಂಟೆಗೆ ಪ್ರಾರಂಭವಾಗಲಿದೆ.
ಅಂದ ಹಾಗೆ ಭಾರತ ತಂಡ ಸೆಪ್ಟೆಂಬರ್ 30 ರಂದು ಬೆಂಗಳೂರಿನಲ್ಲಿ ಶ್ರೀಲಂಕಾ ವಿರುದ್ಧ ಈ ಟೂರ್ನಿಯಲ್ಲಿ ತನ್ನ ಅಭಿಯಾನವನ್ನು ಆರಂಭಿಸಲಿದೆ. ಭಾರತ ತಂಡ, ಅಕ್ಟೋಬರ್ 26 ರಂದು ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಬಾಂಗ್ಲಾದೇಶ ತಂಡವನ್ನು ಕೂಡ ಎದುರಿಸಲಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಗೆಲುವಿನ ಸಂಭ್ರಮಾಚರಣೆಯ ಸಂದರ್ಭದಲ್ಲಿ ಸಂಭವಿಸಿದ ಕಾಲ್ತುಳಿತದ ನಂತರ ಈ ಸ್ಥಳವು ಪಂದ್ಯಗಳನ್ನು ಆಯೋಜಿಸುವ ಹಕ್ಕನ್ನು ಕಳೆದುಕೊಳ್ಳುತ್ತದೆ ಎಂಬ ವದಂತಿಗಳು ಇದ್ದವು. ಆದರೆ, ಇದೀಗ ಈ ಎಲ್ಲಾ ಊಹಾಪೋಹಗಳಿಗೆ ತೆರೆ ಬಿದ್ದಿದೆ.
IND vs ENG: ಸೆಹ್ವಾಗ್, ದ್ರಾವಿಡ್ ದಾಖಲೆ ಮುರಿಯುವ ಸನಿಹದಲ್ಲಿ ಯಶಸ್ವಿ ಜೈಸ್ವಾಲ್!
ಭಾರತ ತಂಡದ ಇತರ ಪಂದ್ಯಗಳು ಅಕ್ಟೋಬರ್ 9 ರಂದು ದಕ್ಷಿಣ ಆಫ್ರಿಕಾ ವಿರುದ್ಧ ಮತ್ತು ಅಕ್ಟೋಬರ್ 12 ರಂದು ವಿಶಾಖಪಟ್ಟಣಂನಲ್ಲಿ ಆಸ್ಟ್ರೇಲಿಯಾ ವಿರುದ್ಧ ನಡೆಯಲಿವೆ. ಟೀಮ್ ಇಂಡಿಯಾ ಅಕ್ಟೋಬರ್ 19 ರಂದು ಇಂದೋರ್‌ನಲ್ಲಿ ಇಂಗ್ಲೆಂಡ್ ವಿರುದ್ಧ ಮತ್ತು ನಂತರ ಅಕ್ಟೋಬರ್ 23 ರಂದು ಗುವಾಹಟಿಯಲ್ಲಿ ನ್ಯೂಜಿಲೆಂಡ್ ವಿರುದ್ಧ ಸೆಣಸಲಿದೆ. ಆಸ್ಟ್ರೇಲಿಯಾ ತಂಡ, ಟೂರ್ನಿಯ ಹಾಲಿ ಚಾಂಪಿಯನ್ ಆಗಿದ್ದರೆ, ಭಾರತ ತನ್ನ ಮೊದಲ ಪ್ರಶಸ್ತಿಯನ್ನು ಗೆಲ್ಲಲು ಎದುರು ನೋಡುತ್ತಿದೆ.
ಮೊದಲನೇ ಸೆಮಿಫೈನಲ್ ಪಂದ್ಯ ಬೆಂಗಳೂರಿನಲ್ಲಿ ನಡೆಯಲಿದ್ದು, ಎರಡನೇ ಸೆಮಿಫೈನಲ್ ಪಂದ್ಯ ಕೊಲಂಬೊ ಅಥವಾ ಗುವಾಹಟಿಯಲ್ಲಿ ನಡೆಯಲಿದೆ. ಫೈನಲ್ ಪಂದ್ಯ ನವೆಂಬರ್ 2 ರಂದು ಬೆಂಗಳೂರು ಅಥವಾ ಕೊಲಂಬೊದಲ್ಲಿ ನಡೆಯಲಿದೆ. ಇದು ಎಂಟು ತಂಡಗಳ ಟೂರ್ನಿಯಾಗಿದ್ದು, ಇದರಲ್ಲಿ ತಂಡಗಳು ಪರಸ್ಪರ ಒಮ್ಮೆ ಆಡಲಿವೆ. ಅಗ್ರ ನಾಲ್ಕು ತಂಡಗಳು ಸೆಮಿಫೈನಲ್ಸ್‌ಗೆ ಪ್ರವೇಶ ಮಾಡಲಿವೆ.
ಈ ಟೂರ್ನಿಯು 1973ರಲ್ಲಿ ಪ್ರಾರಂಭವಾಗಿತ್ತು ಮತ್ತು ಈ ಬಾರಿ 13ನೇ ಆವೃತ್ತಿಯ ಟೂರ್ನಿ ನಡೆಯಲಿದೆ. 2022ರಲ್ಲಿ ಆಸ್ಟ್ರೇಲಿಯಾ ತನ್ನ ಏಳನೇ ಪ್ರಶಸ್ತಿಯನ್ನು ಗೆದ್ದುಕೊಂಡಿತ್ತು. ಅವರು ಪ್ರಸ್ತುತ ಚಾಂಪಿಯನ್ ಆಗಿದ್ದು, ಐಸಿಸಿ ಮಹಿಳಾ ಚಾಂಪಿಯನ್‌ಶಿಪ್ ಅಂಕಪಟ್ಟಿಯಲ್ಲಿ ಮೊದಲ ಸ್ಥಾನ ಪಡೆದಿದ್ದಾರೆ. ಈ ಚಾಂಪಿಯನ್‌ಶಿಪ್‌ನ ಅಗ್ರ ಆರು ತಂಡಗಳು ಸ್ವಯಂಚಾಲಿತವಾಗಿ ಏಕದಿನ ಮಹಿಳಾ ವಿಶ್ವಕಪ್‌ಗೆ ಅರ್ಹತೆ ಪಡೆಯುತ್ತವೆ.