ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

U-19 World Cup 2026: ಆರೋನ್‌ ಜಾರ್ಜ್‌ ಶತಕ, ಅಫ್ಘಾನಿಸ್ತಾನ ವಿರುದ್ಧ ಗೆದ್ದು ಫೈನಲ್‌ಗೆ ಪ್ರವೇಶಿಸಿದ ಭಾರತ!

ಆರೋನ್‌ ಜಾರ್ಜ್‌ ಶತಕ ಹಾಗೂ ವೈಭವ್‌ ಸೂರ್ಯವಂಶಿ ಅರ್ಧಶತಕದ ಬಲದಿಂದ ಭಾರತ ಕಿರಿಯರ ತಂಡ, 2026ರ ಐಸಿಸಿ ಅಂಡರ್‌-19 ವಿಶ್ವಕಪ್‌ ಟೂರ್ನಿಯ ಸೆಮಿಫೈನಲ್‌ನಲ್ಲಿ ಅಫ್ಘಾನಿಸ್ತಾನ ವಿರುದ್ಧ 7 ವಿಕೆಟ್‌ಗಳ ದಾಖಲೆಯ ಗೆಲುವು ಸಾಧಿಸಿತು. ಈ ಗೆಲುವಿನ ಮೂಲಕ ಭಾರತ ತಂಡ, ಫೈನಲ್‌ಗೆ ಪ್ರವೇಶ ಮಾಡಿದೆ.

ಅಫ್ಘಾನಿಸ್ತಾನ ವಿರುದ್ಧ ಶತಕ ಬಾರಿಸಿದ ಆರೋನ್‌ ಜಾರ್ಜ್‌.

ಹರಾರೆ: ಆರೋನ್‌ ಜಾರ್ಜ್‌ (Aaron Gearge) ಶತಕ ಹಾಗೂ ವೈಭವ್‌ ಸೂರ್ಯವಂಶಿ (Vaibhav Suryavanshi) ಅರ್ಧಶತಕದ ಬಲದಿಂದ ಭಾರತ ಕಿರಿಯರ ತಂಡ, 2026ರ ಅಂಡರ್‌-19 ವಿಶ್ವಕಪ್‌ (U-19 World Cup 2026) ಟೂರ್ನಿಯ ಸೆಮಿಫೈನಲ್‌ ಪಂದ್ಯದಲ್ಲಿ ಅಫ್ಘಾನಿಸ್ತಾನ ವಿರುದ್ಧ 7 ವಿಕೆಟ್‌ಗಳ ದಾಖಲೆಯ ಗೆಲುವು ಸಾಧಿಸಿದೆ. ಆ ಮೂಲಕ ಆಯುಷ್‌ ಮ್ಹಾತ್ರೆ ನಾಯಕತ್ವದ ಭಾರತ ತಂಡ ಫೈನಲ್‌ಗೆ ಪ್ರವೇಶ ಮಾಡಿದೆ. ಭಾರತ ತಂಡದ ಚೇಸಿಂಗ್‌ನಲ್ಲಿ ಅದ್ಭುತವಾಗಿ ಬ್ಯಾಟ್‌ ಮಾಡಿ ಶತಕ ಬಾರಿಸಿದ ಆರೋನ್‌ ಜಾರ್ಜ್‌ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಇಲ್ಲಿನ ಹರಾರೆ ಸ್ಪೋರ್ಟ್ಸ್‌ ಮೈದಾನದಲ್ಲಿ ಅಫ್ಘಾನಿಸ್ತಾನ ತಂಡ ನೀಡಿದ್ದ 311 ರನ್‌ಗಳ ಗುರಿಯನ್ನು ಹಿಂಬಾಲಿಸಿದ ಭಾರತ ತಂಡ, ಆರೋನ್‌ ಜಾರ್ಜ್‌ ಶತಕ ಹಾಗೂ ವೈಭವ್‌ ಸೂರ್ಯವಂಶಿ ಮತ್ತು ಆಯುಷ್‌ ಮ್ಹಾತ್ರೆ ಅವರ ಅರ್ಧಶತಕಗಳ ಬಲದಿಂದ 41.1 ಓವರ್‌ಗಳಿಗೆ 3 ವಿಕೆಟ್‌ ನಷ್ಟಕ್ಕೆ 311 ರನ್‌ ಗಳಿಸಿ ಭರ್ಜರಿ ಗೆಲುವು ದಾಖಲಿಸಿತು. ಆ ಮೂಲಕ ಅಂಡರ್‌-19 ವಿಶ್ವಕಪ್‌ ಟೂರ್ನಿಯಲ್ಲಿ ಅತಿ ಹೆಚ್ಚು ರನ್‌ ಚೇಸ್‌ ಮಾಡಿದ ತಂಡ ಎಂಬ ದಾಖಲೆಯನ್ನು ಭಾರತ ಬರೆಯಿತು.

T20 World Cup: ʻಭಾರತ vs ಪಾಕಿಸ್ತಾನ ಪಂದ್ಯ ನಡೆದೇ ನಡೆಯುತ್ತೆʼ-ಆರ್‌ ಅಶ್ವಿನ್‌ಭವಿಷ್ಯ ನಿಜವಾಗುತ್ತಾ?

ವೈಭವ್‌ ಸೂರ್ಯವಂಶಿ ಸ್ಪೋಟಕ ಅರ್ಧಶತಕ

ಭಾರತದ ಇನಿಂಗ್ಸ್‌ ಆರಂಭಿಸಿದ ವೈಭವ್‌ ಸೂರ್ಯವಂಶಿ ಹಾಗೂ ಆರೋನ್‌ ಜಾರ್ಜ್‌ ಅವರು ಮೊದಲನೇ ವಿಕೆಟ್‌ಗೆ 90 ರನ್‌ಗಳನ್ನು ಕಲೆ ಹಾಕಿದರು. ಆ ಮೂಲಕ ಭಾರತ ತಂಡಕ್ಕೆ ಭರ್ಜರಿ ಆರಂಭವನ್ನು ನೀಡಿದರು. ಎಂದಿನಂತೆ ಸ್ಪೋಟಕ ಬ್ಯಾಟ್‌

ಮಾಡಿದ ವೈಭವ್‌, ಆಫ್ಘನ್‌ ಬೌಲರ್‌ಗಳನ್ನು ಬಲವಾಗಿ ದಂಡಿಸಿದರು. ಅವರು ಆಡಿದ ಕೇವಲ 33 ಎಸೆತಗಳಲ್ಲಿ 4 ಸಿಕ್ಸರ್‌ ಹಾಗೂ 9 ಬೌಂಡರಿಗಳೊಂದಿಗೆ 68 ರನ್‌ಗಳನ್ನು ಗಳಿಸಿದರು. ಆ ಮೂಲಕ ಭಾರತ ತಂಡಕ್ಕೆ ಭರ್ಜರಿ ಆರಂಭವನ್ನು ತಂದುಕೊಟ್ಟು ವಿಕೆಟ್‌ ಒಪ್ಪಿಸಿದರು.



ಆರೋನ್‌ ಜಾರ್ಜ್‌ ಶತಕ

ವೈಭವ್‌ ಸೂರ್ಯವಂಶಿ ವಿಕೆಟ್‌ ಒಪ್ಪಿಸಿದ ಬಳಿಕ ಒಂದು ತುದಿಯಲ್ಲಿ ಗಟ್ಟಿಯಾಗಿ ನಿಂತು ಬ್ಯಾಟ್‌ ಮಾಡಿದ ಆರೋನ್‌ ಜಾರ್ಜ್‌, ಸೊಗಸಾಗಿ ಬ್ಯಾಟ್‌ ಮಾಡಿದರು. ಅವರು ಆಡಿದ 104 ಎಸೆತಗಳಲ್ಲಿ ಎರಡು ಸಿಕ್ಸರ್‌ ಹಾಗೂ 15 ಬೌಂಡರಿಗಳೊಂದಿಗೆ 115 ರನ್‌ಗಳನ್ನು ಕಲೆ ಹಾಕಿದರು ಹಾಗೂ ಪ್ರಸಕ್ತ ಟೂರ್ನಿಯಲ್ಲಿ ಮೊದಲ ಶತಕವನ್ನು ಬಾರಿಸಿದರು. ಆ ಮೂಲಕ ಭಾರತ ತಂಡದ ಗೆಲುವಿಗೆ ನೆರವು ನೀಡಿ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು. ಇದಕ್ಕೂ ಮುನ್ನ ಮಧ್ಯಮ ಕ್ರಮಾಂಕದಲ್ಲಿ ನಾಯಕನ ಆಟವನ್ನು ಆಡಿದ ಆಯುಷ್‌ ಮ್ಹಾತ್ರೆ ಅವರು 59 ಎಸೆತಗಳಲ್ಲಿ 62 ರನ್‌ ಗಳಿಸಿದರು. ಕೊನೆಯಲ್ಲಿ ವಿಹಾನ್‌ ಮೆಲ್ಹೋತ್ರಾ ಅಜೇಯ 38 ರನ್‌ ಗಳಿಸಿದರು.

310 ರನ್‌ ಕಲೆ ಹಾಕಿದ ಅಫ್ಘಾನಿಸ್ತಾನ

ಇದಕ್ಕೂ ಮುನ್ನ ಟಾಸ್‌ ಗೆದ್ದು ಮೊದಲು ಬ್ಯಾಟ್‌ ಮಾಡಿದ ಅಫ್ಘಾನಿಸ್ತಾನ ತಂಡ, ಫೈಸಲ್‌ ಶಿನೋಝಡ ಹಾಗೂ ಉಜೈರುಲ್ಲಾ ನಯಾಝೈ ಅವರ ಶತಕಗಳ ಬಲದಿಂದ ತನ್ನ ಪಾಲಿನ 50 ಓವರ್‌ಗಳಿಗೆ 4 ವಿಕೆಟ್‌ಗಳ ನಷ್ಟಕ್ಕೆ 310 ರನ್‌ಗಳನ್ನು ಕಲೆ ಹಾಕಿತು. ಆ ಮೂಲಕ ಎದುರಾಳಿ ಭಾರತ ತಂಡಕ್ಕೆ 311 ರನ್‌ಗಳ ಗುರಿಯನ್ನು ನೀಡಿತು.

ICC T20I Rankings: ಟಿ20ಐ ಬ್ಯಾಟ್ಸ್‌ಮನ್‌ಗಳ ಶ್ರೇಯಾಂದಲ್ಲಿ 32 ಸ್ಥಾನ ಏರಿಕೆ ಕಂಡ ಇಶಾನ್‌ ಕಿಶನ್!

ಶಿನೋಝಡ-ನಯಾಝೈ ಶತಕ

ಅಫ್ಘಾನಿಸ್ತಾನ ತಂಡದ ಪರ ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳಾದ ಫೈಸಲ್‌ ಶಿನೋಝಡ ಹಾಗೂ ಉಜೈರುಲ್ಲಾ ನಯಾಝೈ ಅವರು ತಲಾ ಶತಕಗಳನ್ನು ಬಾರಿಸಿದರು. ಈ ಇಬ್ಬರನ್ನೂ ಔಟ್‌ ಮಾಡಲು ಭಾರತೀಯ ಬೌಲರ್‌ಗಳ ಸಾಕಷ್ಟು ಹರಸಾಹಸ ಪಟ್ಟರೂ ಯಶಸ್ವಿಯಾಗಲಿಲ್ಲ. ಫೈಸಲ್‌ ಶಿನೋಝಡ ಆಡಿದ 93 ಎಸೆತಗಳಲ್ಲಿ 15 ಬೌಂಡರಿಗಳೊಂದಿಗೆ 110 ರನ್‌ಗಳನ್ನು ಬಾರಿಸಿದರು. ಇವರ ಜೊತೆಗೆ 148 ರನ್‌ಗಳ ಜೊತೆಯಾಟವನ್ನು ಆಡಿದ ಉಜೈರುಲ್ಲಾ ನಯಾಝೈ ಅವರು 86 ಎಸೆತಗಳಲ್ಲಿ ಎರಡು ಸಿಕ್ಸರ್‌ ಹಾಗೂ 12 ಬೌಂಡರಿಗಳೊಂದಿಗೆ ಅಜೇಯ 101 ರನ್‌ಗಳನ್ನು ಗಳಿಸಿದರು. ಭಾರತದ ಪರ ದೀಪೇಶ್‌ ದೇವೇಂದ್ರ ಹಾಗೂ ಕಾನಿಷ್ಖ ಚೌವ್ಹಾಣ್‌ ತಲಾ ಎರಡೆರಡು ವಿಕೆಟ್‌ ಪಡೆದರು.