ನವದೆಹಲಿ: ಭಾರತ ಕ್ರಿಕೆಟ್ ತಂಡದ ಯುವ ಆರಂಭಿಕ ಬ್ಯಾಟರ್ ಯಶಸ್ವಿ ಜೈಸ್ವಾಲ್ (Yashasvi Jaiswal) ತಮ್ಮ ಕಳಪೆ ಫಾರ್ಮ್ ಬಗ್ಗೆ ಟೀಕೆ ಮಾಡುತ್ತಿದ್ದವರಿಗೆ ಬ್ಯಾಟ್ ಮೂಲಕವೇ ಉತ್ತರ ನೀಡಿದ್ದಾರೆ. ನ್ಯೂಜಿಲೆಂಡ್ ಎ ವಿರುದ್ಧದ ಸರಣಿಯಲ್ಲಿ (INDA vs NZA) ಸತತ ಎರಡು ಶತಕಗಳನ್ನು ಬಾರಿಸುವ ಮೂಲಕ ತಮ್ಮ ಹಳೆಯ ಲಯಕ್ಕೆ ಮರಳಿದ್ದಾರೆ. ಮುಂಬರುವ ಟೆಸ್ಟ್ ಸರಣಿಗೂ ಮುನ್ನ ಜೈಸ್ವಾಲ್ ಅವರ ಈ ಪ್ರದರ್ಶನ ಭಾರತ ತಂಡಕ್ಕೆ ಸಮಾಧಾನ ತಂದಿದೆ.
ನ್ಯೂಜಿಲೆಂಡ್ ಎ ವಿರುದ್ಧ ಕ್ರೈಸ್ಟ್ಚರ್ಚ್ನಲ್ಲಿ ನಡೆದಿದ್ದ ಎರಡನೇ ಅನಧಿಕೃತ ಟೆಸ್ಟ್ ಪಂದ್ಯದಲ್ಲಿ ಜೈಸ್ವಾಲ್ ಅಮೋಘ ಬ್ಯಾಟಿಂಗ್ ಪ್ರದರ್ಶನ ನೀಡಿದ್ದರು. ಅವರು ಕೇವಲ 162 ಎಸೆತಗಳಲ್ಲಿ ಅಜೇಯ 155 ರನ್ ಗಳಿಸಿದ್ದರು. ಈ ಇನಿಂಗ್ಸ್ನಲ್ಲಿ 15 ಬೌಂಡರಿ ಹಾಗೂ ಐದು ಸಿಕ್ಸರ್ಗಳು ಸೇರಿದ್ದವು. ಆರಂಭದಲ್ಲಿ ವಿಕೆಟ್ಗಳನ್ನು ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದ ಭಾರತ ಎ ತಂಡಕ್ಕೆ ಜೈಸ್ವಾಲ್ ಆಸರೆಯಾಗಿದ್ದರು. ಮತ್ತೊಂದೆಡೆ ಯಶ್ ರಾಥೋಡ್ ಕೂಡ ಶತಕ ಸಿಡಿಸಿದ್ದರು. ಇವರಿಬ್ಬರ ಉತ್ತಮ ಬ್ಯಾಟಿಂಗ್ ನೆರವಿನಿಂದ ಭಾರತ ಎ ಎರಡನೇ ಇನಿಂಗ್ಸ್ನಲ್ಲಿ 282 ರನ್ ಗಳಿಸಿ ಪಂದ್ಯವನ್ನು ಡ್ರಾ ಮಾಡಿಕೊಂಡಿತ್ತು.
IND vs NZ: ಭಾರತ ಏಕದಿನ ತಂಡದಲ್ಲಿ ಯಶಸ್ವಿ ಜೈಸ್ವಾಲ್ ಅನ್ಯಾಯವಾಗಿದೆ ಎಂದ ಆರ್ ಅಶ್ವಿನ್!
ಮೂರನೇ ಪಂದ್ಯದಲ್ಲೂ ಶತಕ
ನವೆಂಬರ್ 7ರಂದು ಲಿಂಕನ್ನ ಬರ್ಟ್ ಸುಟ್ಕ್ಲಿಫ್ ಓವಲ್ ಮೈದಾನದಲ್ಲಿ ಆರಂಭವಾದ ಮೂರನೇ ಅನಧಿಕೃತ ಟೆಸ್ಟ್ ಪಂದ್ಯದಲ್ಲೂ ಜೈಸ್ವಾಲ್ ತಮ್ಮ ಬ್ಯಾಟಿಂಗ್ ಲಯ ಮುಂದುವರಿಸಿದರು. ನ್ಯೂಜಿಲೆಂಡ್ ಎ ತಂಡದ ಬೌಲರ್ಗಳನ್ನು ಸಮರ್ಥವಾಗಿ ಎದುರಿಸಿದ ಅವರು 138 ಎಸೆತಗಳಲ್ಲಿ 102 ರನ್ ಗಳಿಸಿದರು. ಈ ಇನಿಂಗ್ಸ್ನಲ್ಲಿ 16 ಬೌಂಡರಿ ಹಾಗೂ ಎರಡು ಸಿಕ್ಸರ್ಗಳು ಸೇರಿದ್ದವು.
ಜೈಸ್ವಾಲ್ ಮತ್ತು ಸಾಯಿ ಸುದರ್ಶನ್ ಮೊದಲ ವಿಕೆಟ್ಗೆ 175 ರನ್ಗಳ ಭರ್ಜರಿ ಜೊತೆಯಾಟವಾಡಿದರು. ಸುದರ್ಶನ್ 205 ಎಸೆತಗಳಲ್ಲಿ ಅಜೇಯ 77 ರನ್ ಗಳಿಸಿದರು. ದೇವದತ್ ಪಡಿಕ್ಕಲ್ 15 ರನ್ ಗಳಿಸಿ ಔಟಾದ ಬಳಿಕ ನಾಯಕ ಧ್ರುವ್ ಜುರೇಲ್ ಕ್ರೀಸ್ಗೆ ಬಂದರು. ಮಳೆಯ ಅಡಚಣೆಯಿಂದ ಮೊದಲ ದಿನದ ಆಟ ಬೇಗನೆ ಮುಕ್ತಾಯಗೊಂಡಾಗ ಭಾರತ ಎ ತಂಡ 69.3 ಓವರ್ಗಳಲ್ಲಿ ಎರಡು ವಿಕೆಟ್ ನಷ್ಟಕ್ಕೆ 227 ರನ್ ಗಳಿಸಿತ್ತು.
ಕಳಪೆ ಫಾರ್ಮ್ನಿಂದ ಹೊರಬಂದ ಜೈಸ್ವಾಲ್
ನ್ಯೂಜಿಲೆಂಡ್ ಪ್ರವಾಸಕ್ಕೂ ಮುನ್ನ ಜೈಸ್ವಾಲ್ ಅವರ ಬ್ಯಾಟಿಂಗ್ ಫಾರ್ಮ್ ಬಗ್ಗೆ ಸಾಕಷ್ಟು ಚರ್ಚೆಗಳು ನಡೆದಿದ್ದವು. ಶ್ರೀಲಂಕಾ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಮೂರು ಇನಿಂಗ್ಸ್ಗಳಿಂದ ಕೇವಲ 77 ರನ್ ಗಳಿಸಿದ್ದರು. ನಂತರ ನ್ಯೂಜಿಲೆಂಡ್ ಎ ವಿರುದ್ಧದ ಮೊದಲ ಅನಧಿಕೃತ ಟೆಸ್ಟ್ನಲ್ಲಿ 17 ಮತ್ತು 5 ರನ್ ಗಳಿಸಿ ನಿರಾಸೆ ಮೂಡಿಸಿದ್ದರು. ಎರಡನೇ ಪಂದ್ಯದಲ್ಲೂ ಮೊದಲ ಇನಿಂಗ್ಸ್ನಲ್ಲಿ ಶೂನ್ಯಕ್ಕೆ ಔಟಾಗಿದ್ದರು. ಮುಂಬೈ ಪರ ರಣಜಿ ಟ್ರೋಫಿ ಪಂದ್ಯದಲ್ಲೂ ಖಾತೆ ತೆರೆಯಲು ವಿಫಲರಾಗಿದ್ದರು. ಹೀಗಾಗಿ ಮುಂಬರುವ ಟೆಸ್ಟ್ ಸರಣಿಗೂ ಮುನ್ನ ಅವರ ಫಾರ್ಮ್ ಬಗ್ಗೆ ಆತಂಕ ವ್ಯಕ್ತವಾಗಿತ್ತು.
ಆದರೆ ಸತತ ಎರಡು ಶತಕಗಳ ಮೂಲಕ ಜೈಸ್ವಾಲ್ ತಮ್ಮ ಸಾಮರ್ಥ್ಯವನ್ನು ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ. ಎರಡನೇ ಪಂದ್ಯದಲ್ಲಿ ಅಜೇಯ 155 ಮತ್ತು ಮೂರನೇ ಪಂದ್ಯದಲ್ಲಿ 102 ರನ್ ಗಳಿಸುವ ಮೂಲಕ ಎರಡು ಇನಿಂಗ್ಸ್ಗಳಲ್ಲಿ ಒಟ್ಟು 257 ರನ್ ಕಲೆಹಾಕಿದ್ದಾರೆ.
ʻಇನ್ನೂ 30 ರಿಂದ 40 ವಿಕೆಟ್ ಪಡೆಯಬಹುದಿತ್ತುʼ: ಮೊಹಮ್ಮದ್ ಶಮಿ ಟೆಸ್ಟ್ ನಿವೃತ್ತಿಗೆ ರವಿಶಾಸ್ತ್ರಿ ಬೇಸರ!
ನವೆಂಬರ್ 19ರಂದು ನ್ಯೂಜಿಲೆಂಡ್ ವಿರುದ್ಧ ಟೆಸ್ಟ್ ಸರಣಿ ಆರಂಭ
ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಎರಡು ಪಂದ್ಯಗಳ ಟೆಸ್ಟ್ ಸರಣಿ ನವೆಂಬರ್ 19ರಂದು ಆರಂಭವಾಗಲಿದೆ. ಈ ಸರಣಿಗೂ ಮುನ್ನ ಭಾರತ ಎ ತಂಡದ ಪರ ಆಡುತ್ತಿರುವ ಜಸ್ಪ್ರೀತ್ ಬುಮ್ರಾ, ರವೀಂದ್ರ ಜಡೇಜಾ, ಪ್ರಸಿಧ್ ಕೃಷ್ಣ ಸೇರಿದಂತೆ ಹಲವು ಪ್ರಮುಖ ಆಟಗಾರರಿಗೆ ಸ್ಥಳೀಯ ಪರಿಸ್ಥಿತಿಗಳಲ್ಲಿ ಹೊಂದಿಕೊಳ್ಳಲು ಅವಕಾಶ ಸಿಕ್ಕಿದೆ.
ಜೈಸ್ವಾಲ್ ಅವರ ಸತತ ಶತಕಗಳು ತಂಡದ ಬ್ಯಾಟಿಂಗ್ ವಿಭಾಗಕ್ಕೆ ಆತ್ಮವಿಶ್ವಾಸ ನೀಡಿವೆ. ಆರಂಭಿಕ ಬ್ಯಾಟರ್ ಆಗಿ ಅವರು ಇದೇ ಲಯವನ್ನು ಮುಂದುವರಿಸಿದರೆ ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಭಾರತಕ್ಕೆ ದೊಡ್ಡ ಅಸ್ತ್ರವಾಗಲಿದ್ದಾರೆ.