ಹರಾರೆ: ಇಂಗ್ಲೆಂಡ್ ಮತ್ತು ಐರ್ಲೆಂಡ್ ಪ್ರವಾಸದಲ್ಲಿ ಎದುರಾದ ನಿರಾಶಾದಾಯಕ ಫಲಿತಾಂಶಗಳು ತಂಡಕ್ಕೆ ಮಹತ್ವದ ಪಾಠ ಕಲಿಸಿವೆ ಎಂದು ಭಾರತ ತಂಡದ ನಾಯಕ ಶ್ರೇಯಸ್ ಅಯ್ಯರ್ (Shreyas Iyer) ಹೇಳಿದ್ದಾರೆ. ಜಿಂಬಾಬ್ವೆ ವಿರುದ್ಧದ ಮೂರು ಪಂದ್ಯಗಳ ಟಿ20ಐ ಸರಣಿಗೂ (IND vs ZIM) ಮುನ್ನ ವಿದೇಶಿ ಪರಿಸ್ಥಿತಿಗಳಲ್ಲಿ ಯಶಸ್ಸು ಸಾಧಿಸಲು ಏನು ಬೇಕು ಎಂಬುದನ್ನು ಈ ಹಿನ್ನಡೆಗಳು ತಂಡಕ್ಕೆ ಅರ್ಥಮಾಡಿಕೊಟ್ಟಿವೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಇಂಗ್ಲೆಂಡ್ ಮತ್ತು ಐರ್ಲೆಂಡ್ ವಿರುದ್ಧದ ವೈಟ್‌ಬಾಲ್ ಸರಣಿಯಲ್ಲಿ ಒಂದೂ ಪಂದ್ಯ ಗೆಲ್ಲದೆ ಭಾರತ ಹರಾರೆಗೆ ಆಗಮಿಸಿದೆ. ಟಿ20ಐ ನಾಯಕನಾಗಿ ಶ್ರೇಯಸ್ ಅಯ್ಯರ್ ಅವರ ಆರಂಭಿಕ ಅವಧಿಯೂ ಸವಾಲಿನಿಂದ ಕೂಡಿತ್ತು. ಈ ಫಲಿತಾಂಶಗಳು ಟೀಕೆಗೆ ಕಾರಣವಾದರೂ, ಈ ಅನುಭವ ತಂಡದ ಆಟಗಾರರನ್ನು ಇನ್ನಷ್ಟು ಒಗ್ಗೂಡಿಸಿದೆ. ದೀರ್ಘಾವಧಿಯಲ್ಲಿ ಈ ಅನುಭವ ತಂಡಕ್ಕೆ ಪ್ರಯೋಜನವಾಗಲಿದ್ದು, ಮುಂದಿನ ಸವಾಲುಗಳನ್ನು ಎದುರಿಸಲು ನೆರವಾಗಲಿದೆ ಎಂಬ ವಿಶ್ವಾಸವನ್ನು ಅಯ್ಯರ್ ವ್ಯಕ್ತಪಡಿಸಿದ್ದಾರೆ.
ʻಬೆಂಕಿ ಇಲ್ಲದೆ ಹೊಗೆ ಆಡುವುದಿಲ್ಲʼ: ರೋಹಿತ್ ಶರ್ಮಾರ ನಿವೃತ್ತಿ ವದಂತಿಗಳ ಬಗ್ಗೆ ಆರ್ ಅಶ್ವಿನ್ ಪ್ರತಿಕ್ರಿಯೆ!
ಮೊದಲನೇ ಟಿ20ಐ ಪಂದ್ಯದ ನಿಮಿತ್ತ ಮಾತನಾಡಿದ ಶ್ರೇಯಸ್ ಅಯ್ಯರ್, "ಇಂಗ್ಲೆಂಡ್ ಪ್ರವಾಸದಲ್ಲಿ ನಾವು ಕಠಿಣ ಹಂತವನ್ನು ಎದುರಿಸಿದ್ದೇವೆ. ಆದರೆ ಆ ಪ್ರವಾಸದಿಂದ ಸಾಕಷ್ಟು ಸಕಾರಾತ್ಮಕ ಅಂಶಗಳನ್ನೂ ಕಲಿತಿದ್ದೇವೆ. ಮುಂದಿನ ದಿನಗಳಲ್ಲಿ ತಂಡವಾಗಿ ಯಾವ ಕ್ಷೇತ್ರಗಳಲ್ಲಿ ಬೆಳೆಯಬೇಕು, ಮೈದಾನಕ್ಕಿಳಿದಾಗ ಯಾವ ರೀತಿಯ ಸಮಯೋಚಿತ ನಿರ್ಧಾರ ತೆಗೆದುಕೊಳ್ಳುವ ಸಾಮರ್ಥ್ಯ, ಆಟದ ಅರಿವು ಹಾಗೂ ಪರಿಸ್ಥಿತಿಗೆ ಹೊಂದಿಕೊಳ್ಳುವ ಗುಣ ಅಗತ್ಯ ಎಂಬುದನ್ನು ನಾವು ಸ್ಪಷ್ಟವಾಗಿ ಅರ್ಥಮಾಡಿಕೊಂಡಿದ್ದೇವೆ," ಎಂದು ಅಯ್ಯರ್ ಹೇಳಿದ್ದಾರೆ.
ಭಾರತ ಟಿ20 ತಂಡದ ನಾಯಕ ಶ್ರೇಯಸ್ ಅಯ್ಯರ್ ಅವರ ಪ್ರಕಾರ, ಜಿಂಬಾಬ್ವೆ ವಿರುದ್ಧದ ಸರಣಿಯಲ್ಲಿ ತಂಡದ ಮುಂದಿರುವ ತಕ್ಷಣದ ಸವಾಲು ಅಲ್ಲಿನ ಪರಿಸ್ಥಿತಿಗೆ ಶೀಘ್ರವಾಗಿ ಹೊಂದಿಕೊಳ್ಳುವುದಾಗಿದೆ. ತಂಡದ ಹಲವು ಆಟಗಾರರು ಮೊದಲ ಬಾರಿ ಜಿಂಬಾಬ್ವೆ ಪ್ರವಾಸ ಕೈಗೊಂಡಿರುವುದರಿಂದ, ಅಲ್ಲಿನ ಪಿಚ್, ಹವಾಮಾನ ಹಾಗೂ ಆಟದ ಪರಿಸ್ಥಿತಿಗಳಿಗೆ ಬೇಗ ಹೊಂದಿಕೊಳ್ಳುವುದು ಅತ್ಯಂತ ಮುಖ್ಯ ಎಂದ ಹೇಳಿದ ಅಯ್ಯರ್, ಈ ಸವಾಲನ್ನು ಯಶಸ್ವಿಯಾಗಿ ಎದುರಿಸಿದರೆ, ತಂಡ ಉತ್ತಮ ಪ್ರದರ್ಶನ ನೀಡಿ ಸರಣಿಯನ್ನು ಗೆಲ್ಲುವ ವಿಶ್ವಾಸದಲ್ಲಿದೆ ಎಂದು ಅವರು ತಿಳಿಸಿದ್ದಾರೆ.
ವೈಭವ್ ಇನ್; ಜಿಂಬಾಬ್ವೆ ವಿರುದ್ಧದ ಮೊದಲನೇ ಟಿ20ಐಗೆ ಭಾರತದ ಸಂಭಾವ್ಯ ಪ್ಲೇಯಿಂಗ್ XI
ಜಿಂಬಾಬ್ವೆ ವಿರುದ್ಧದ ಟಿ20ಐ ಸರಣಿಗೆ ಮುನ್ನ ಮಾತನಾಡಿದ ಭಾರತ ತಂಡದ ನಾಯಕ ಶ್ರೇಯಸ್ ಅಯ್ಯರ್, ಜಿಂಬಾಬ್ವೆಯ ಪರಿಸ್ಥಿತಿಗೆ ಎಷ್ಟು ಬೇಗ ಹೊಂದಿಕೊಳ್ಳುತ್ತೇವೆಯೋ ಅಷ್ಟು ಉತ್ತಮ ಫಲಿತಾಂಶ ಸಿಗಲಿದೆ ಎಂದು ಹೇಳಿದ್ದಾರೆ.
"ನಮ್ಮಲ್ಲಿ ಕೆಲವರು ಮೊದಲ ಬಾರಿ ಇಲ್ಲಿ ಆಡುತ್ತಿದ್ದಾರೆ. ಆದ್ದರಿಂದ ಇಲ್ಲಿನ ಪರಿಸ್ಥಿತಿಗೆ ಎಷ್ಟು ಬೇಗ ಹೊಂದಿಕೊಳ್ಳುತ್ತೇವೆಯೋ ಅಷ್ಟು ಉತ್ತಮ ಫಲಿತಾಂಶ ಪಡೆಯಲು ಸಾಧ್ಯವಾಗುತ್ತದೆ," ಎಂದು ಅವರು ಹೇಳಿದರು.
"ಫಲಿತಾಂಶಗಳು ನಮ್ಮ ಪರವಾಗಿರಲಿಲ್ಲ. ಆದರೆ ಅದರಿಂದ ತಂಡದ ಸದಸ್ಯರು ಮತ್ತಷ್ಟು ಹತ್ತಿರವಾಗಿದ್ದೇವೆ. ಮುಂದಿನ ದಿನಗಳಲ್ಲಿ ತಂಡವಾಗಿ ಹೇಗೆ ಆಡಬೇಕು, ವಿಶೇಷವಾಗಿ ಜಿಂಬಾಬ್ವೆ ವಿರುದ್ಧ ಯಾವ ರೀತಿಯ ಯೋಜನೆಯೊಂದಿಗೆ ಕಣಕ್ಕಿಳಿಯಬೇಕು ಎಂಬ ಬಗ್ಗೆ ಸಾಕಷ್ಟು ಚರ್ಚೆ ನಡೆಸಿದ್ದೇವೆ," ಎಂದು ತಿಳಿಸಿದ್ದಾರೆ.
ಮೊದಲನೇ ಎಸೆತದಿಂದಲೂ ಹೊಡೆಯುವ ತಾಕತ್ತು ನನಗೂ ಇದೆ: ಯುಕೆ ವೈಫಲ್ಯದ ಬಗ್ಗೆ ತಿಲಕ್ ವರ್ಮಾ ಪ್ರತಿಕ್ರಿಯೆ!
"ಭಾರತದ ಹೊರಗೆ ನಾವು ಈಗಾಗಲೇ ಮೂರು ಸರಣಿಗಳನ್ನು ಆಡಿದ್ದೇವೆ. ಇಂತಹ ಅನುಭವಗಳು ಆಗಾಗ ಸಿಗುವುದಿಲ್ಲ. ಇದು ತಂಡಕ್ಕೆ ಅತ್ಯುತ್ತಮ ಅನುಭವವಾಗಿದೆ. ಇದು ಸವಾಲಿನ ಹಂತ. ಇದನ್ನು ಎಷ್ಟು ಬೇಗ ಮೀರಿ ಮುಂದೆ ಸಾಗುತ್ತೇವೆಯೋ ಅಷ್ಟು ತಂಡವಾಗಿ ಬಲಿಷ್ಠರಾಗುತ್ತೇವೆ. ಆಗ ಉತ್ತಮ ಫಲಿತಾಂಶಗಳು ಸಹಜವಾಗಿಯೇ ಬರುತ್ತವೆ," ಎಂದು ಅಯ್ಯರ್ ವಿಶ್ವಾಸ ವ್ಯಕ್ತಪಡಿಸಿದರು.
ಇಂಗ್ಲೆಂಡ್ ಮತ್ತು ಐರ್ಲೆಂಡ್ ಪ್ರವಾಸದಲ್ಲಿ ಪೂರ್ಣಗೊಂಡ ಎಲ್ಲಾ ಆರು ಪಂದ್ಯಗಳಲ್ಲೂ ಸೋಲು ಕಂಡಿದ್ದ ಭಾರತ ತಂಡದ ಬಗ್ಗೆ ಮಾತನಾಡಿದ ಅಯ್ಯರ್, ನಾಯಕನಾಗಿ ತಮ್ಮ ಪ್ರಮುಖ ಜವಾಬ್ದಾರಿಗಳಲ್ಲಿ ಒಂದು ಎಂದರೆ ಆಟಗಾರರು ಹೊರಗಿನ ಟೀಕೆ ಮತ್ತು ಒತ್ತಡದಿಂದ ಮಾನಸಿಕವಾಗಿ ಕುಗ್ಗದಂತೆ ನೋಡಿಕೊಳ್ಳುವುದು ಎಂದು ಹೇಳಿದರು.