ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಐಪಿಎಲ್‌ ಫೈನಲ್‌ ಬಳಿಕ ಭೀಕರ ಕಾರು ಅಪಘಾತ, ಪ್ರಾಣಾಪಾಯದಿಂದ ಪಾರಾಗಿದ್ದ ಮೈಕಲ್‌ ಕ್ಲಾರ್ಕ್‌!

2026ರ ಐಪಿಎಲ್ ಫೈನಲ್ ಪಂದ್ಯ ವೀಕ್ಷಿಸಿದ ಬಳಿಕ ವಿಮಾನ ನಿಲ್ದಾಣದತ್ತ ತೆರಳುತ್ತಿದ್ದ ವೇಳೆ ಆಸ್ಟ್ರೇಲಿಯಾದ ಮಾಜಿ ನಾಯಕ ಮೈಕಲ್‌ ಕ್ಲಾರ್ಕ್‌ ಪ್ರಯಾಣಿಸುತ್ತಿದ್ದ ಕಾರು ಭೀಕರ ಅಪಘಾತಕ್ಕೀಡಾಗಿದೆ. ಈ ದುರ್ಘಟನೆಯಲ್ಲಿ ಕ್ಲಾರ್ಕ್ ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದು, ಅವರ ದೇಹದ ಕೆಲ ಭಾಗಗಳಲ್ಲಿ ಮೂಗೇಟುಗಳಾಗಿವೆ. ಈ ಬಗ್ಗೆ ಸ್ವತಃ ಆಸೀಸ್‌ ಮಾಜಿ ನಾಯಕ ಬಹಿರಂಗಪಡಿಸಿದ್ದಾರೆ.

ಕಾರು ಅಪಘಾತದಲ್ಲಿ ಪ್ರಾಣಾಪಾಯದಿಂದ ಪಾರಾದ ಮೈಕಲ್‌ ಕ್ಲಾರ್ಕ್‌.

ನವದೆಹಲಿ: ಇಂಡಿಯನ್ ಪ್ರೀಮಿಯರ್ ಲೀಗ್ (IPL 2026) ಟೂರ್ನಿಯ ಫೈನಲ್ ಪಂದ್ಯ ಕೇವಲ ಮೈದಾನದಲ್ಲಿನ ಆಟಕ್ಕಷ್ಟೇ ಅಲ್ಲ, ಗುಜರಾತ್‌ನ ರಸ್ತೆಗಳಲ್ಲಿ ಮಧ್ಯರಾತ್ರಿ ನಡೆದಿದ್ದ ಭೀಕರ ತುರ್ತು ಘಟನೆಗಳಿಗೂ ಸಾಕ್ಷಿಯಾಯಿತು. ಪಂದ್ಯ ಮುಗಿದ ಕೆಲವೇ ಗಂಟೆಗಳ ನಂತರ, ಗುಜರಾತ್‌ ಟೈಟನ್ಸ್‌ ತಂಡದ ಬಸ್‌ಗೆ ಬೆಂಕಿ ಹೊತ್ತಿಕೊಂಡ ಪರಿಣಾಮ ಆಟಗಾರರು ರಸ್ತೆಬದಿಯಲ್ಲಿ ಸಿಲುಕಿಕೊಂಡ ಘಟನೆ ಸಂಭವಿಸಿತು. ಅಷ್ಟೇ ಅಲ್ಲ ಅದೇ ರಾತ್ರಿ ಆಸ್ಟ್ರೇಲಿಯಾದ ಮಾಜಿ ನಾಯಕ ಮೈಕಲ್‌ ಕ್ಲಾರ್ಕ್‌ ಅವರು ಪ್ರಯಾಣಿಸುತ್ತಿದ್ದ ಕಾರು ಕೂಡ ಅಪಘಾತಕ್ಕೀಡಾಗಿತ್ತು. ಅದೃಷ್ಟವಶಾತ್‌ ಅವರು ಜೀವಾಪಾಯದಿಂದ ಪಾರಾಗಿದ್ದರು.

ಮೇ 31 ರಂದು ಭಾನುವಾರ ಫೈನಲ್ ಪಂದ್ಯದ ನಂತರ ವಿಮಾನ ನಿಲ್ದಾಣದತ್ತ ತೆರಳುತ್ತಿದ್ದ ವೇಳೆ ಆಸ್ಟ್ರೇಲಿಯಾದ ಮಾಜಿ ನಾಯಕ ಮೈಕಲ್‌ ಕ್ಲಾರ್ಕ್‌ ಅವರ ಕಾರು ಭೀಕರ ಅಪಘಾತಕ್ಕೀಡಾಗಿದ್ದು, ಅವರು ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ.

ಅದೇ ರಾತ್ರಿ, ಗುಜರಾತ್‌ ಟೈಟನ್ಸ್‌ ತಂಡದ ಬಸ್‌ನಲ್ಲಿ ಶಾರ್ಟ್ ಸರ್ಕ್ಯೂಟ್ ಶಂಕೆಯಿಂದ ಬೆಂಕಿ ಕಾಣಿಸಿಕೊಂಡ ಘಟನೆ ಸಂಭವಿಸಿತ್ತು. ಈ ಘಟನೆಯಿಂದಾಗಿ ತಂಡದ ನಾಯಕ ಶುಭಮನ್‌ ಗಿಲ್‌ ಸೇರಿದಂತೆ ಸಂಪೂರ್ಣ ತಂಡ ಕೆಲಕಾಲ ರಸ್ತೆಬದಿಯಲ್ಲಿ ಸಿಲುಕಿಕೊಂಡಿತ್ತು. ನಂತರ ಬೇರೆ ವಾಹನ ಆಗಮಿಸಿದ ಬಳಿಕ ಆಟಗಾರರು ತಮ್ಮ ಪ್ರಯಾಣವನ್ನು ಮುಂದುವರಿಸಿದ್ದರು.

IPL 2026ರ ಟೂರ್ನಿಯ ಟಾಪ್‌ 5 ಕ್ಯಾಚ್‌ಗಳನ್ನು ಪಡೆದ ಐವರು ಆಟಗಾರರು!

ಅಪಘಾತದ ಬಗ್ಗೆ ವಿವರಿಸಿದ ಮೈಕಲ್‌ ಕ್ಲಾರ್ಕ್‌

2026ರ ಐಪಿಎಲ್ ಟೂರ್ನಿಯ ಅಧಿಕೃತ ಕಾಮೆಂಟರಿ ಪ್ಯಾನೆಲ್‌ನ ಭಾಗವಾಗಿದ್ದ ಆಸ್ಟ್ರೇಲಿಯಾದ ಮಾಜಿ ನಾಯಕ ಮೈಕಲ್‌ ಕ್ಲಾರ್ಕ್‌, ವಿಮಾನ ನಿಲ್ದಾಣಕ್ಕೆ ತೆರಳುತ್ತಿದ್ದ ಸಂದರ್ಭದಲ್ಲಿ ತಮ್ಮ ವಾಹನದ ಮುಂಭಾಗದ ಸೀಟಿನಲ್ಲಿ ನಿದ್ರಿಸುತ್ತಿದ್ದರು. ಇದೇ ವೇಳೆ ಅವರ ಕಾರು ಹೆದ್ದಾರಿಯಲ್ಲಿ ಮುಂದೆ ಸಾಗುತ್ತಿದ್ದ ದೊಡ್ಡ ಸೆಮಿ-ಟ್ರೇಲರ್ ಲಾರಿಯ ಹಿಂಭಾಗಕ್ಕೆ ಡಿಕ್ಕಿ ಹೊಡೆದಿದೆ.

ಈ ಕುರಿತು ಮಾತನಾಡಿದ ಕ್ಲಾರ್ಕ್, ಮಧ್ಯರಾತ್ರಿ ಈ ಅಪಘಾತ ಸಂಭವಿಸಿತ್ತು. ಕಾರು ಚಾಲಕ ಮುಂದಿರುವ ಭಾರೀ ವಾಹನವನ್ನು ಸರಿಯಾಗಿ ಗಮನಿಸಲಿಲ್ಲ, ಹಾಗಾಗಿ ಅಪಘಾತ ಸಂಭವಿಸಿತ್ತು ಎಂದು ತಿಳಿಸಿದ್ದಾರೆ.

“ಲಾರಿಯ ಬ್ರೇಕ್ ಲೈಟ್‌ಗಳು ಕೆಲಸ ಮಾಡುತ್ತಿರಲಿಲ್ಲ ಎಂದು ಚಾಲಕ ನನಗೆ ವಿವರಿಸಿದರು. ಈ ಕಾರಣದಿಂದ ನಮ್ಮ ಕಾರು ಲಾರಿಯ ಹಿಂಭಾಗಕ್ಕೆ ಡಿಕ್ಕಿ ಹೊಡೆದಿತು,” ಎಂದು ಅವರು ಪಾಡ್‌ಕಾಸ್ಟ್‌ವೊಂದರಲ್ಲಿ ತಿಳಿಸಿದ್ದಾರೆ.

IPL 2026: ಆರ್‌ಸಿಬಿ ಎದುರು ಸೋಲಿನ ಬಳಿಕ ಶುಭಮನ್‌ ಗಿಲ್‌ ಭಾವನಾತ್ಮಕ ಪೋಸ್ಟ್!

“ಆ ವಾಹನ ದೊಡ್ಡ ಸೆಮಿ-ಟ್ರೈಲರ್ ಆಗಿತ್ತು. ನಮ್ಮ ಕಾರು ಅದರ ಕೆಳಗೆ ದೂರಿತ್ತು. ಇದರ ಪರಿಣಾಮ ಕಾರಿನ ಮುಂಭಾಗ ಸಂಪೂರ್ಣವಾಗಿ ಹಾನಿಯಾಗಿತ್ತು,” ಎಂದು ಅವರು ಹೇಳಿದ್ದಾರೆ.

“ಕಾರು ಡಿಕ್ಕಿಯಾದ ಬಳಿಕ ಮುಂಭಾಗ ನಮ್ಮ ಕಾಲುಗಳನ್ನು ತಳ್ಳಲ್ಪಟ್ಟ ಅನುಭವವಾಯಿತು. ನನಗೆ ಕೇವಲ ಮೂಗೇಟುಗಳಷ್ಟೇ ಆಯಿತು. ಆದರೆ ನನ್ನ ಚಾಲಕನಿಗೆ ಕಾಲಿನಲ್ಲಿ ಸಣ್ಣ ಮುರಿತವಾಗಿರುವ ಸಾಧ್ಯತೆ ಇದೆ ಎಂದು ನಾನು ಭಾವಿಸುತ್ತೇನೆ,” ಎಂದು ಕ್ಲಾರ್ಕ್ ತಿಳಿಸಿದ್ದಾರೆ.

ಬಿಸಿಸಿಐ ಮತ್ತು ಸ್ಥಳೀಯರಿಂದ ನೆರವು

ಕಂಪನಿ ಸ್ವಾಮ್ಯದ ವಾಹನಕ್ಕೆ ಸಂಭವಿಸಿದ ಹಾನಿಯ ಬಗ್ಗೆ ಭಯಗೊಂಡ ಕಾರು ಚಾಲಕ ಆರಂಭದಲ್ಲಿ ವೈದ್ಯಕೀಯ ನೆರವು ಪಡೆಯಲು ನಿರಾಕರಿಸಿದ್ದಾರೆ ಎಂದು ವರದಿಯಾಗಿದೆ.

“ಅವರು ತುಂಬಾ ಭಯಗೊಂಡಿದ್ದರು, ಇದರಿಂದಾಗಿ ನನಗೂ ಅವರ ಮೇಲೆ ಹೆಚ್ಚಿನ ಕಾಳಜಿ ಉಂಟಾಯಿತು. ಅದು ಅವರ ಕಾರಲ್ಲ, ಕಂಪನಿಯ ವಾಹನವಾಗಿತ್ತು,” ಎಂದು ಹೇಳಿದ ಕ್ಲಾರ್ಕ್, “ನಾನು ಅವರಿಗೆ ಆಸ್ಪತ್ರೆಗೆ ಹೋಗು ಎಂದು ಹೇಳಿದೆ. ಆದರೆ ಅವರು ‘ಇಲ್ಲ, ಇಲ್ಲ’ ಎಂದಿದ್ದ. ನಂತರ ಅವರು ಆಸ್ಪತ್ರೆಗೆ ಹೋಗಿದ್ದಾರೋ, ಇಲ್ಲವೋ ಎಂಬುದು ನನಗೆ ತಿಳಿದಿಲ್ಲ,” ಎಂದು ಅವರು ವಿವರಿಸಿದ್ದಾರೆ.

2027ರ ಐಪಿಎಲ್‌ ಟೂರ್ನಿಯಲ್ಲಿ ಸನ್‌ರೈಸರ್ಸ್‌ ಹೈದರಾಬಾದ್‌ಗೆ ಇಶಾನ್‌ ಕಿಶನ್‌ ನಾಯಕ!

“ಮೊದಲು ಭಾರತದಲ್ಲಿರುವ ಒಳ್ಳೆಯ ಜನರಿಗೆ, ದೇವರಿಗೆ ಧನ್ಯವಾದಗಳನ್ನು ತಿಳಿಸಬೇಕು. ಅವರಿಂದ ನಾನು ಸುರಕ್ಷಿತವಾಗಿ ಮನೆಗೆ ತಲುಪಿದ್ದೇನೆ. ಬಿಸಿಸಿಐನ ಎಲ್ಲರೂ ನನ್ನ ಆರೋಗ್ಯ ವಿಚಾರಿಸುತ್ತಿದ್ದಾರೆ. ಅವರು ಅದ್ಭುತವಾಗಿ ಸಹಾಯ ಮಾಡಿದ್ದಾರೆ, ಇದಕ್ಕಾಗಿ ನಾನು ತುಂಬಾ ಕೃತಜ್ಞನಾಗಿದ್ದೇನೆ.”

“ನನಗೆ ಇದು ಸಂಪೂರ್ಣ ಆಘಾತವಾಗಿತ್ತು, ಏಕೆಂದರೆ ನಾನು ಗಾಢ ನಿದ್ರೆಯಲ್ಲಿ ಇದ್ದೆ. ನಂತರ ಎಚ್ಚರವಾದಾಗ, ಟ್ರಕ್‌ನ ಕೆಳಗೆ ಸಿಕ್ಕಿಬೀಳುವಷ್ಟು ಹತ್ತಿರ ಇದ್ದುದನ್ನು ನೋಡಿದ್ದೆ…ತವರಿಗೆ ಮರಳುವಾಗ ಇಂಥಾ ಘಟನೆಗಳು ಒಳ್ಳೆಯದಲ್ಲ, ಆದರೆ ನಾನು ವಿಮಾನವನ್ನು ಹತ್ತಿಕೊಂಡೆ. ಇದಕ್ಕಾಗಿ ನಾನು ಬಹಳ ಅದೃಷ್ಟವಂತ,” ಎಂದು ಅವರು ತಿಳಿಸಿದ್ದಾರೆ.