ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ʻಅವರು ಮ್ಯಾಚ್‌ ವಿನ್ನರ್‌ʼ: ಔಟ್‌ ಆಫ್‌ ಫಾರ್ಮ್ ಕುಲ್ದೀಪ್‌ ಯಾದವ್‌ಗೆ ಸ್ಪಿನ್‌ ಕೋಚ್‌ ಬೆಂಬಲ!

IND vs SL: ಗಾಲೆಯಲ್ಲಿ ನಡೆದಿದ್ದ ಮೊದಲ ಟೆಸ್ಟ್‌ ಪಂದ್ಯದಲ್ಲಿ ಭಾರತದ ಸ್ಪಿನ್ನರ್ ಕುಲ್ದೀಪ್ ಯಾದವ್ ನಿರೀಕ್ಷಿತ ಮಟ್ಟದ ಪ್ರದರ್ಶನ ನೀಡಲು ವಿಫಲರಾದರೂ, ಎರಡನೇ ಟೆಸ್ಟ್‌ನಲ್ಲಿ ಅವರು ಭರ್ಜರಿ ಕಮ್‌ಬ್ಯಾಕ್ ಮಾಡಲಿದ್ದಾರೆ ಎಂದು ಭಾರತದ ಸ್ಪಿನ್ ಬೌಲಿಂಗ್ ಕೋಚ್ ಸಾಯಿಜ್ ಬಹುತುಲೆ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಕುಲ್ದೀಪ್‌ ಯಾದವ್‌ ಮ್ಯಾಚ್‌ ವಿನ್ನರ್‌ ಎಂದ ಸಾಯಿರಾಜ್‌ ಬಹುತುಲೆ.

ನವದೆಹಲಿ: ಶ್ರೀಲಂಕಾ ವಿರುದ್ಧದ ಮೊದಲ ಟೆಸ್ಟ್‌ ಪಂದ್ಯದಲ್ಲಿ (IND vs SL) ಕುಲ್ದೀಪ್ ಯಾದವ್ (Kuldeep Yadav) ನಿರೀಕ್ಷಿತ ಮಟ್ಟದ ಪ್ರದರ್ಶನ ನೀಡಲು ವಿಫಲರಾದರೂ ಕೇವಲ ಒಂದು ಪಂದ್ಯದಿಂದ ಅವರನ್ನು ಕೈಬಿಡುವ ಯಾವುದೇ ಉದ್ದೇಶ ಭಾರತ ತಂಡದ ಮ್ಯಾನೇಜ್‌ಮೆಂಟ್‌ಗೆ ಇಲ್ಲ. ಕೊಲಂಬೊದಲ್ಲಿ ನಡೆಯಲಿರುವ ಎರಡನೇ ಟೆಸ್ಟ್‌ನಲ್ಲಿ ಕುಲ್ದೀಪ್ ಯಾದವ್‌ ಬಲಿಷ್ಠವಾಗಿ ಕಮ್‌ಬ್ಯಾಕ್ ಮಾಡಲಿದ್ದಾರೆ ಎಂದು ಭಾರತದ ಸ್ಪಿನ್ ಬೌಲಿಂಗ್ ಕೋಚ್ ಸಾಯಿರಾಜ್ ಬಹುತುಲೆ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಕುಲ್ದೀಪ್ ಗಾಲೆ ಟೆಸ್ಟ್‌ನ ಎರಡೂ ಇನಿಂಗ್ಸ್‌ಗಳಲ್ಲಿ ಒಟ್ಟು 25 ಓವರ್‌ ಬೌಲ್‌ ಮಾಡಿ ಕೇವಲ ಒಂದು ವಿಕೆಟ್ ಪಡೆದಿದ್ದರು. ಮೊದಲ ಇನಿಂಗ್ಸ್‌ನಲ್ಲಿ ಕಮಿಂದು ಮೆಂಡಿಸ್ ಅವರನ್ನು ಔಟ್ ಮಾಡಿದ್ದು ಅವರ ಏಕೈಕ ಯಶಸ್ಸಾಗಿತ್ತು. ಆ ಇನಿಂಗ್ಸ್‌ನಲ್ಲಿ 14 ಓವರ್‌ಗಳಲ್ಲಿ 65 ರನ್ ನೀಡಿದ್ದ ಕುಲ್ದೀಪ್, ಎರಡನೇ ಇನಿಂಗ್ಸ್‌ನಲ್ಲಿ 11 ಓವರ್‌ ಬೌಲ್‌ ಮಾಡಿ 38 ರನ್ ನೀಡಿದರೂ ಯಾವುದೇ ವಿಕೆಟ್ ಪಡೆಯಲಿಲ್ಲ.

“ಅವರು ಅತ್ಯಂತ ಉತ್ತಮವಾಗಿ ಬೌಲ್‌ ಮಾಡುತ್ತಿದ್ದಾರೆ. ಗಾಲೆಯಲ್ಲಿ ಎದುರಾದ ಪರಿಸ್ಥಿತಿಯಿಂದಾಗಿ ಅವರು ವಿಭಿನ್ನ ಪಾತ್ರವನ್ನು ನಿರ್ವಹಿಸಬೇಕಾಯಿತು. ನನ್ನ ಪ್ರಕಾರ ಅವರು ಯಾವಾಗಲೂ ಪಂದ್ಯ ಗೆಲ್ಲಿಸಬಲ್ಲ ಆಟಗಾರ. ಖಂಡಿತವಾಗಿಯೂ ಅವರು ನಮ್ಮ ತಂಡದ ಯೋಜನೆಗಳಲ್ಲಿದ್ದಾರೆ,” ಎಂದು ಸಿಂಹಳೀಸ್ ಸ್ಪೋರ್ಟ್ಸ್ ಕ್ಲಬ್‌ನಲ್ಲಿ ಸುದ್ದಿಗಾರರೊಂದಿಗೆ ಬಹುತುಲೆ ಹೇಳಿದ್ದಾರೆ.

ಸುತಾರ್, ಜಡೇಜಾ ಭರ್ಜರಿ ಪ್ರದರ್ಶನ

ಭಾರತದ ಇತರ ಇಬ್ಬರು ಸ್ಪಿನ್ನರ್‌ಗಳಾದ ಮಾನವ್ ಸುತಾರ್ ಮತ್ತು ರವೀಂದ್ರ ಜಡೇಜಾ ಅವರ ಪ್ರದರ್ಶನಕ್ಕೆ ಹೋಲಿಸಿದರೆ ಕುಲ್ದೀಪ್ ಅವರ ಪ್ರದರ್ಶನ ಗಮನಾರ್ಹವಾಗಿತ್ತು. ಸುತಾರ್ ಮತ್ತು ಜಡೇಜಾ ಒಟ್ಟಾಗಿ 14 ವಿಕೆಟ್‌ಗಳನ್ನು ಪಡೆದಿದ್ದರು. ಸುತಾರ್ ಪಂದ್ಯದಲ್ಲಿ 10 ವಿಕೆಟ್‌ಗಳೊಂದಿಗೆ ಭಾರತದ ಸ್ಪಿನ್ ದಾಳಿಯನ್ನು ಮುನ್ನಡೆಸಿದರೆ, ಜಡೇಜಾ ನಾಲ್ಕು ವಿಕೆಟ್ ಪಡೆದಿದ್ದರು. ಪ್ರಥಮ ಇನಿಂಗ್ಸ್‌ನಲ್ಲಿ ಶ್ರೀಲಂಕಾ 284 ರನ್‌ಗಳಿಗೆ ಆಲೌಟ್ ಆಗುವವನ್ನು ಮಾನವ್‌ ಸುತಾರ್‌ ಬಹುಮುಖ್ಯ ಪಾತ್ರವನ್ನು ವಹಿಸಿದ್ದರು. ಈ ಇನಿಂಗ್ಸ್‌ ಮಾನವ್‌ ನಾಲ್ಕು ವಿಕೆಟ್ ಪಡೆದು ಪರಿಣಾಮಕಾರಿ ಪ್ರದರ್ಶನ ನೀಡಿದ್ದರು. ಜಡೇಜಾ ಮೂರು ವಿಕೆಟ್ ಕಬಳಿಸಿದ್ದರು.

ಕುಲ್ದೀಪ್ ಅವರ ಬೌಲಿಂಗ್ ಶೈಲಿಗೆ ಗಾಲೆಯ ಪರಿಸ್ಥಿತಿಗಳು ಅನುಕೂಲಕರವಾಗಿರಲಿಲ್ಲ ಎಂದು ಬಹುತುಲೆ ಅಭಿಪ್ರಾಯಪಟ್ಟಿದ್ದಾರೆ. ಆರಂಭದಲ್ಲಿ ಹೊಳಪು ಕಳೆದುಕೊಂಡ ಬಳಿಕ ಕೂಕಾಬುರಾ ಚೆಂಡು ಮೃದುವಾಗುತ್ತಿದ್ದಂತೆ, ರಿಸ್ಟ್ ಸ್ಪಿನ್ನರ್‌ಗೆ ಬೆರಳುಗಳಿಂದ ಬೌಲ್‌ ಮಾಡುವ ಸ್ಪಿನ್ನರ್‌ಗಳಷ್ಟು ನೆರವು ಪಡೆಯುವುದು ಕಷ್ಟ.

“ಮೃದುವಾದ ಚೆಂಡಿನೊಂದಿಗೆ ಎಲ್ಲಾ ಸ್ಪಿನ್ನರ್‌ಗಳಿಗೂ ಕಷ್ಟವಾಗುತ್ತದೆ. ಆದರೆ ಎಡಗೈ ಅಥವಾ ಆಫ್ ಸ್ಪಿನ್ನರ್‌ಗಳಂತಹ ಫಿಂಗರ್ ಸ್ಪಿನ್ನರ್‌ಗಳಿಗೆ ಅದು ಸ್ವಲ್ಪ ಸುಲಭವಾಗುತ್ತದೆ. ಲೆಗ್ ಸ್ಪಿನ್ನರ್‌ಗೆ ಮೃದುವಾದ ಚೆಂಡಿನಿಂದ ಇನ್ನಷ್ಟು ಕಷ್ಟ. ಚೆಂಡಿನ ಸೀಮ್ ಕೆಳಗೆ ಜಾರಿಹೋಗುತ್ತದೆ,” ಎಂದು ಬಹುತುಲೆ ವಿವರಿಸಿದ್ದಾರೆ.

ಪಿಚ್ ನಿಧಾನಗತಿಗೆ ತಿರುಗಿದಾಗ ಕುಲ್ದೀಪ್ ತಮ್ಮ ಬೌಲಿಂಗ್‌ನ ವೇಗ ಮತ್ತು ಟ್ರಾಜೆಕ್ಟರಿಯನ್ನು ಬದಲಾಯಿಸಬೇಕಾಯಿತು ಎಂದು ಅವರು ಹೇಳಿದ್ದಾರೆ. “ಒಂದು ಪಂದ್ಯದಿಂದ ಅವರ ಪ್ರದರ್ಶನ ಅಥವಾ ಅವರು ಅನುಸರಿಸುತ್ತಿರುವ ವಿಧಾನವನ್ನು ನಿರ್ಧರಿಸಲಾಗುವುದಿಲ್ಲ. ಅವರಿಗೆ ನೀಡಲಾದ ಪಾತ್ರಕ್ಕೆ ಹೊಂದಿಕೊಳ್ಳಲು ಅವರು ತಮ್ಮ ಅತ್ಯುತ್ತಮ ಪ್ರಯತ್ನ ಮಾಡಿದ್ದಾರೆ,” ಎಂದು ಬಹುತುಲೆ ಹೇಳಿದ್ದಾರೆ.

ಕೊಲಂಬೊದಲ್ಲಿ ಕಮ್‌ಬ್ಯಾಕ್‌ಗೆ ಅವಕಾಶ

ಆಗಸ್ಟ್ 23ರಂದು ಕೊಲಂಬೊದಲ್ಲಿ ಎರಡನೇ ಟೆಸ್ಟ್ ಆರಂಭವಾಗಲಿದ್ದು, ವಿಭಿನ್ನ ಪಿಚ್‌ನಲ್ಲಿ ಕುಲ್ದೀಪ್ ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸಲು ಮತ್ತೊಂದು ಅವಕಾಶ ಪಡೆಯಲಿದ್ದಾರೆ. ಗಾಲೆಯಲ್ಲಿ ನಡೆದಿದ್ದ ಮೊದಲ ಟೆಸ್ಟ್‌ನಲ್ಲಿ ಭಾರತ 165 ರನ್‌ಗಳ ಭರ್ಜರಿ ಗೆಲುವು ದಾಖಲಿಸಿ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ. ಶ್ರೀಲಂಕಾ ನೆಲದಲ್ಲಿ ಟೆಸ್ಟ್ ಕ್ರಿಕೆಟ್‌ನಲ್ಲಿ ಇದು ಭಾರತಕ್ಕೆ ಸತತ ಆರನೇ ಗೆಲುವು ಇದಾಗಿದೆ.