ನವದೆಹಲಿ: ಮುಂಬರುವ 2026 ಇಂಡಿಯನ್ ಪ್ರೀಮಿಯರ್ ಲೀಗ್ (IPL 2026) ಟೂರ್ನಿಯ ಆಟಗಾರರ ಮಿನಿ ಹರಾಜು ಡಿಸೆಂಬರ್ ಮಧ್ಯೆದಲ್ಲಿ ನಡೆಯಲಿದೆ ಎಂದು ವರದಿಯಾಗಿದೆ. ಡಿಸೆಂಬರ್ 15 ಅಥವಾ 16 ರಂದು ಮಿನಿ ಹರಾಜು (IPL 2026 Mini Auction) ಅಬುಧಾಬಿಯಲ್ಲಿ ನಡೆಯಲಿದೆ ಎಂದು ಇಂಡಿಯಾ ಟುಡೇ ತನ್ನ ವರದಿಯಲ್ಲಿ ತಿಳಿಸಿದೆ. ಐಪಿಎಲ್ ಆಡಳಿತ ಮಂಡಳಿಯು ಪ್ರಸ್ತುತ ಲಾಜಿಸ್ಟಿಕ್ಸ್ ಅನ್ನು ಅಂತಿಮಗೊಳಿಸುತ್ತಿದ್ದು, ಮುಂಬರುವ ದಿನಗಳಲ್ಲಿ ಅಧಿಕೃತ ದೃಢೀಕರಣವನ್ನು ನಿರೀಕ್ಷಿಸಲಾಗಿದೆ. ಇದರೊಂದಿಗೆ ಸತತ ಮೂರನೇ ಬಾರಿ ಐಪಿಎಲ್ ಹರಾಜನ್ನು ವಿದೇಶದಲ್ಲಿ ನಡೆಸಿದಂತಾಗಲಿದೆ.
2024ರ ಐಪಿಎಲ್ ಟೂರ್ನಿಯ ಮಿನಿ ಹರಾಜು ದುಬೈನಲ್ಲಿ ನಡೆದಿತ್ತು.ಇದಾದ ಬಳಿಕ 2025ರ ಐಪಿಎಲ್ ಟೂರ್ನಿಯ ಮೆಗಾ ಹರಾಜು ಸೌದಿ ಅರೇಬಿಯಾದ ಜೆಡ್ಡಾದಲ್ಲಿ ನಡೆಸಲಾಗಿತ್ತು. ಈ ಬಾರಿ ಐಪಿಎಲ್ ಮಿನಿ ಹರಾಜನ್ನು ಅಬುಧಾಬಿಯಲ್ಲಿ ನಡೆಸುವ ಬಗ್ಗೆ ಎಲ್ಲಾ ಫ್ರಾಂಚೈಸಿಗಳು ಚರ್ಚೆ ನಡೆಸುತ್ತಿವೆ. ಇದಕ್ಕೆ ಎಲ್ಲಾ ಫ್ರಾಂಚೈಸಿಗಳು ಒಪ್ಪಿಗೆ ನೀಡಿದ ಬಳಿಕ ದಿನಾಂಕ ಮತ್ತು ಸ್ಥಳವನ್ನು ಅಂತಿಮಗೊಳಿಸಲಾಗುತ್ತಿದೆ.
ಕಳೆದ ವರ್ಷ ಸೌದಿ ಅರೇಬಿಯಾದಲ್ಲಿ ಮೆಗಾ ಹರಾಜು ನಡೆಯಿತು ಹಾಗಾಗಿ ಅವರು ಈ ಬಾರಿ ಮಿನಿ ಹರಾಜು ನಡೆಯಲಿದೆ. ತಂಡದ ಸಂಪೂರ್ಣ ಬದಲಾವಣೆ ಮಾಡುವ ಬದಲು, ಡೆತ್ ಬೌಲಿಂಗ್, ಪವರ್-ಹಿಟ್ಟಿಂಗ್ ಮತ್ತು ಗಾಯಗೊಂಡ ಆಟಗಾರರಿಗೆ ಬ್ಯಾಕಪ್ ಆಯ್ಕೆಗಳಂತಹ ಪ್ರಮುಖ ಸ್ಥಾನಗಳನ್ನು ಬಲಪಡಿಸುವತ್ತ ಫ್ರಾಂಚೈಸಿಗಳು ಗಮನಹರಿಸುತ್ತಿವೆ. ಆ ಮೂಲಕ ಫ್ರಾಂಚೈಸಿಗಳು ತಾವು ಎದುರು ನೋಡುತ್ತಿರುವ ಆಟಗಾರರನ್ನು ಸೇರಿಸಿಕೊಳ್ಳುವ ನಿರೀಕ್ಷೆಯಿದೆ.
IPL 2026 Mini Auction: ಸಂಜು ಅಥವಾ ಸುಂದರ್?; ಐಪಿಎಲ್ 2026 ಮಿನಿ ಹರಾಜಿಗೂ ಮುನ್ನ ಸಿಎಸ್‌ಕೆ ಸಿಇಒ ಮಹತ್ವದ ಹೇಳಿಕೆ
ಅಬುಧಾಬಿಯ ಬಲವಾದ ಮೂಲಸೌಕರ್ಯ ಮತ್ತು ಅಂತಾರಾಷ್ಟ್ರೀಯ ಕ್ರಿಕೆಟ್ ಟೂರ್ನಿಗಳನ್ನು ಆಯೋಜಿಸುವಲ್ಲಿನ ಅನುಭವವು ಉತ್ತಮವಾಗಿರುವ ಕಾರಣ 2026ರ ಐಪಿಎಲ್ ಹರಾಜನ್ನು ಇಲ್ಲಿ ನಡೆಸಲಾಗುತ್ತಿದೆ. ಇದರ ಸಾಮೀಪ್ಯ ಮತ್ತು ದೊಡ್ಡ ಪ್ರಮಾಣದ ಕ್ರೀಡಾಕೂಟಗಳನ್ನು ನಿರ್ವಹಿಸುವ ಸಾಮರ್ಥ್ಯವನ್ನು ಅಬುಧಾಬಿ ಹೊಂದಿದೆ. ಹಾಗಾಗಿ ತಂಡಗಳು ಮತ್ತು ಪ್ರಸಾರಕರಿಗೆ ಇದು ಅನುಕೂಲಕರ ಸ್ಥಳವಾಗಿದೆ.
ನವೆಂಬರ್ 15ಕ್ಕೂ ಮುಂಚಿತವಾಗಿ ತಂಡಗಳು ತಮ್ಮ ರಿಟೈನ್ ಆಟಗಾರರ ಪಟ್ಟಿ ಮತ್ತು ಹರಾಜಿಗೆ ಬಿಡುಗಡೆ ಮಾಡಲಿರುವ ಆಟಗಾರರ ಪಟ್ಟಿಗಳನ್ನು ಬಿಡುಗಡೆ ಮಾಡಲಿವೆ. ಏಕೆಂದರೆ ಫ್ರಾಂಚೈಸಿಗಳು ಬಜೆಟ್ ಅನ್ನು ಸಮತೋಲನಗೊಳಿಸಲು ಮತ್ತು ತಂಡದ ಡೆಪ್ತ್ ಅನ್ನು ಸುಧಾರಿಸಲು ಎದುರು ನೋಡುತ್ತಿದ್ದಾರೆ. ಬಿಡ್ಡಿಂಗ್ ವಾರ್ ಪ್ರವೇಶಿಸುವ ಮುನ್ನ ಹೆಚ್ಚಿನ ನಮ್ಯತೆಯನ್ನು ಸೃಷ್ಟಿಸಲು ಹಲವು ಫ್ರಾಂಚೈಸಿಗಳು ಕೆಲ ಹೆಚ್ಚಿನ ಮೌಲ್ಯದ ಆಟಗಾರರನ್ನು ಬಿಡುಗಡೆ ಮಾಡುವ ಸಾಧ್ಯತೆಯಿದೆ.
IPL 2026: ಪಂಜಾಬ್ ಕಿಂಗ್ಸ್ ಮಿನಿ ಹರಾಜಿಗೆ ಬಿಡುಗಡೆ ಮಾಡಲಿರುವ ಐವರು ಆಟಗಾರರು!
2026ರ ಐಪಿಎಲ್ ಹರಾಜಿನ ಸ್ಥಳ ಮತ್ತು ನಿಖರವಾದ ದಿನಾಂಕಗಳನ್ನು ದೃಢೀಕರಿಸುವ ಅಧಿಕೃತ ಘೋಷಣೆ ಶೀಘ್ರದಲ್ಲೇ ನಿರೀಕ್ಷಿಸಲಾಗಿದೆ ಎಂದು ಮೂಲಗಳು ಇಂಡಿಯಾ ಟುಡೇಗೆ ತಿಳಿಸಿವೆ. ದಿನಾಂಕ ಖಚಿತವಾದ ಬಳಿಕ ಎಲ್ಲಾ ಫ್ರಾಂಚೈಸಿಗಳ ಗಮನ ಯುಎಇ ರಾಜಧಾನಿಯತ್ತ ತಿರುಗಲಿದೆ. ತಂಡದ ಮಾಲೀಕರು, ತರಬೇತುದಾರರು ಮತ್ತು ಸ್ಕೌಟ್‌ಗಳು ಅಬುಧಾಬಿಗೆ ಪ್ರಯಾಣ ಬೆಳೆಸಲಿದ್ದಾರೆ.