ʻನಾಯಕತ್ವದಿಂದ ತೆಗೆಯುವ ಅಗತ್ಯವಿರಲಿಲ್ಲʼ: ರೋಹಿತ್ ಶರ್ಮಾಗೆ ಸಬಾ ಕರಿಮ್ ಬೆಂಬಲ!
ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿಗೆ ಅಜಿತ್ ಅಗರ್ಕರ್ ನೇತೃತ್ವದ ಆಯ್ಕೆ ಸಮಿತಿ 15 ಆಟಗಾರರ ತಂಡವನ್ನು ಪ್ರಕಟಿಸಿದೆ. ಇದರ ಜೊತೆಗೆ ಏಕದಿನ ತಂಡದ ನಾಯಕತ್ವದಿಂದ ರೋಹಿತ್ ಶರ್ಮಾ ಅವರನ್ನು ಕೆಳಗಿಳಿಸಲಾಗಿದ್ದು, ಗಿಲ್ ಅವರಿಗೆ ನಾಯಕತ್ವದ ಸ್ಥಾನ ನೀಡಲಾಗಿದೆ. ಆಯ್ಕೆ ಸಮಿತಿಯ ಈ ನಿರ್ಧಾರವನ್ನು ಮಾಜಿ ಸೆಲೆಕ್ಟರ್ ಸಬಾ ಕರಿಮ್ ಬಲವಾಗಿ ಖಂಡಿಸಿದ್ದಾರೆ.

ರೋಹಿತ್ ಶರ್ಮಾರಿಂದ ನಾಯಕತ್ವ ಕಸಿದುಕೊಂಡ ಬಗ್ಗೆ ಸಬಾ ಕರಿಮ್ ಆಕ್ರೋಶ. -

ದುಬೈ: ಆಸ್ಟ್ರೇಲಿಯಾ ವಿರುದ್ಧ ಅಕ್ಟೋಬರ್ 19 ರಂದು ಆರಂಭವಾಗಲಿರುವ ಮೂರು ಪಂದ್ಯಗಳ ಏಕದಿನ ಸರಣಿಗೆ (IND vs AUS) ಅಜಿತ್ ಅಗರ್ಕರ್ ನೇತೃತ್ವದ ಆಯ್ಕೆ ಸಮಿತಿಯು 15 ಮಂದಿ ಆಟಗಾರರ ಭಾರತ (India's ODI Squad) ತಂಡವನ್ನು ಪ್ರಕಟಿಸಿದೆ. ಇದರೊಂದಿಗೆ ರೋಹಿತ್ ಶರ್ಮಾ (Rohit Sharma) ಅವರನ್ನು ಏಕದಿನ ತಂಡದ ನಾಯಕನ ಸ್ಥಾನದಿಂದ ಕೆಳಗಿಳಿಸಿ ಶುಭಮನ್ ಗಿಲ್ (Shubman Gill) ಅವರನ್ನು ಏಕದಿನ ತಂಡದ ನಾಯಕನನ್ನಾಗಿ ನೇಮಕ ಮಾಡಲಾಗಿದೆ. ಆಯ್ಕೆ ಸಮಿತಿಯ ಈ ನಿರ್ಧಾರಕ್ಕೆ ವ್ಯಾಪಾಕ ಟೀಕೆ ವ್ಯಕ್ತವಾಗುತ್ತಿದೆ. ಇದರ ಬೆನ್ನಲ್ಲೇ ಈ ಬಗ್ಗೆ ಮಾಜಿ ಸೆಲೆಕ್ಟರ್ ಸಬಾ ಕರಿಮ್ (Saba Karim) ಬೇಸರ ಹೊರಕಿದ್ದಾರೆ. ರೋಹಿತ್ ಶರ್ಮಾ ತಂಡದ ಭಾಗವಾಗಿದ್ದರೂ, ಅವರನ್ನು ನಾಯಕನ ಪಟ್ಟದಿಂದ ಕೆಳಗಿಳಿಸಿರುವುದು ಖಂಡನೀಯ ಎಂದು ಹೇಳಿದ್ದಾರೆ.
"ಇದು ತುಂಬಾ ಹಠಾತ್ ನಿರ್ಧಾರ ಎಂದು ನಾನು ಭಾವಿಸುತ್ತೇನೆ ಮತ್ತು ಅದರ ಅಗತ್ಯವಿರಲಿಲ್ಲ. ಅವರು (ರೋಹಿತ್ ಶರ್ಮಾ) ಒಬ್ಬ ವಿಜೇತ ನಾಯಕ, ಅವರು ನಿಮಗೆ ಸತತ ಟ್ರೋಫಿಗಳನ್ನು ಗೆದ್ದುಕೊಟ್ಟಿದ್ದಾರೆ. ನೀವು ಈ ರೀತಿಯಲ್ಲಿ ವಿದಾಯ ಹೇಳಿದ್ದೀರಿ. ಇದು ನನಗೆ ತುಂಬಾ ಅಚ್ಚರಿ ತಂದಿದೆ ಮತ್ತು ಆಘಾತ ತಂದಿದೆ. ಅವರಿಂದ ನಾಯಕತ್ವ ಹಿಂಪಡೆಯಲು ಇನ್ನೂ ಸಮಯವಿತ್ತು ಹಾಗೂ ಆತುರಪಡುವ ಅಗತ್ಯವಿಲ್ಲ. 2027ರಲ್ಲಿ ವಿಶ್ವಕಪ್ ಇದೆ ಮತ್ತು ಅವರು ಒಂದೇ ಸ್ವರೂಪದಲ್ಲಿ ಮಾತ್ರ ಆಡುತ್ತಾರೆ ಎಂದು ಈಗಾಗಲೇ ತಿಳಿಸಿದ್ದರು. ಅವರು ಈ ತಂಡವನ್ನು ಅದ್ಭುತವಾಗಿ ಕಟ್ಟಿದ್ದಾರೆ. ಚಾಂಪಿಯನ್ಸ್ ಟ್ರೋಫಿಯನ್ನು ಗೆದ್ದ ತಂಡ, ಅದಕ್ಕೂ ಮೊದಲು ಟಿ20 ವಿಶ್ವಕಪ್ ಗೆದ್ದಿದೆ. ತಂಡ ಪ್ರಸ್ತುತ ಟಿ20ಐ ಕ್ರಿಕೆಟ್ನಲ್ಲಿ ಉತ್ತಮ ಪ್ರದರ್ಶನವನ್ನು ತೋರುತ್ತಿದೆ ಎಂದರೆ, ಇದಕ್ಕೆ ಕಾರಣ ರೋಹಿತ್ ಶರ್ಮಾ," ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
IND vs AUS: ಯಶಸ್ವಿ ಜೈಸ್ವಾಲ್ ಔಟ್, ಆಸ್ಟ್ರೇಲಿಯಾ ಏಕದಿನ ಸರಣಿಗೆ ಭಾರತದ ಬಲಿಷ್ಠ ಪ್ಲೇಯಿಂಗ್ XI
"ಹೇಗೆ ನಾಯಕತ್ವವನ್ನು ವಹಿಸಿಕೊಳ್ಳಬೇಕೆಂಬುದನ್ನು ಇದ್ದಕ್ಕಿದ್ದಂತೆ ಮರೆಯುವುದು ಅಥವಾ ಈ ಸ್ವರೂಪದಲ್ಲಿ ತಂಡವನ್ನು ಮುನ್ನಡೆಸುವುದು ಅವರಿಗೆ ಗೊತ್ತಿಲ್ಲ ಎಂಬುದು ಇದಲ್ಲ. ಹಾಗೆಯೇ ಈ ಸ್ವರೂಪದಲ್ಲಿ ಹೇಗೆ ರನ್ ಗಳಿಸಬೇಕೆಂಬುದು ಅವರಿಗೆ ಗೊತ್ತಿಲ್ಲ ಎಂದಲ್ಲ. ಇನಿಂಗ್ಸ್ ಅನ್ನು ಆರಂಭಿಸುವ ಮೂಲಕ ರನ್ ರೇಟ್ ಅನ್ನು ಹೇಗೆ ನಿರ್ವಹಿಸಬೇಕೆಂಬುದನ್ನು ಅವರು ಎಲ್ಲರಿಗೂ ತೋರಿಸಿದ್ದಾರೆ. ಹಾಗಾಗಿ ಅವರನ್ನು ಒಡಿಐ ನಾಯಕತ್ವದಿಂದ ಹಠಾತ್ ಕೆಳಗೆ ಇಳಿಸಿದ್ದು ನನಗೆ ಆಘಾತ ತಂದಿದೆ," ಎಂದು ಸಬಾ ಕರಿಮ್ ಬೇಸರ ವ್ಯಕ್ತಪಡಿಸಿದ್ದಾರೆ.
ಸೂರ್ಯಕುಮಾರ್ ಯಾದವ್ ನಾಯಕತ್ವವೂ ಅಂತ್ಯ: ಸಬಾ ಕರಿಮ್
ಟೀಮ್ ಇಂಡಿಯಾ ರೆಡ್ ಬಾಲ್ ಮತ್ತು ವೈಟ್ ಬಾಲ್ ಕ್ರಿಕೆಟ್ನಲ್ಲಿ ಪ್ರತ್ಯೇಕ ನಾಯಕತ್ವ ಹೊಂದಬೇಕು. ಆದರೆ ಆಯ್ಕೆದಾರರು ಬೇರೆಯೇ ಯೋಚಿಸುವಂತೆ ಕಾಣುತ್ತಿದೆ. 2026ರ ಟಿ20 ವಿಶ್ವಕಪ್ ಬಳಿಕ ಟಿ20ಐ ತಂಡದ ನಾಯಕತ್ವದಿಂದ ಸೂರ್ಯಕುಮಾರ್ ಅವರಿಗೆ ಕೊಕ್ ಕೊಡಬಹುದು ಮತ್ತು ಗಿಲ್ ಅವರನ್ನು ಎಲ್ಲಾ ಸ್ವರೂಪದ ನಾಯಕನಾಗಿ ಆಯ್ಕೆ ಮಾಡಬಹುದು ಎಂದು ಭವಿಷ್ಯ ನುಡಿದಿದ್ದಾರೆ.
IND vs AUS: ಭಾರತ ಒಡಿಐ ತಂಡದಿಂದ ಜಸ್ಪ್ರೀತ್ ಔಟ್? ಇದಕ್ಕೆ ಕಾರಣ ಇಲ್ಲಿದೆ!
"ಮೂರು ಸ್ವರೂಪಗಳಿಗೆ ಭಾರತ ತಂಡ ಬೇರೆ ಬೇರೆ ನಾಯಕರನ್ನು ಹೊಂದಲು ಬಯಸುವುದಿಲ್ಲ ಎಂಬ ನಿರ್ದೇಶನವಿದೆ ಎಂದು ನಾನು ಭಾವಿಸುತ್ತೇನೆ. ಅವರ ಅಂತ್ಯವೂ ಬರೆಯಲ್ಪಡಬಹುದು ಎಂದು ನಾನು ನಂಬುತ್ತೇನೆ (ಸೂರ್ಯ ಅವರನ್ನು T20I ನಾಯಕ ಸ್ಥಾನದಿಂದ ತೆಗೆದುಹಾಕುವ ಸಾಧ್ಯತೆಯ ಬಗ್ಗೆ ಹೇಳುವುದಾದರೆ), ಬಹುಶಃ ವಿಶ್ವಕಪ್ ನಂತರ. ಏಕೆಂದರೆ, ಆಯ್ಕೆ ಸಮಿತಿಯ ಈ ನಿರ್ಧಾರಗಳು, ತಂಡದ ನಿರ್ವಹಣೆ ಮತ್ತು ಆಯ್ಕೆದಾರರು ನಿಭಾಯಿಸಲು ಕಷ್ಟಕರವೆಂದು ನಾನು ಭಾವಿಸುತ್ತೇನೆ. ಬಹು ನಾಯಕರನ್ನು ಹೊಂದಿರುವುದು ಆಟಗಾರರಿಗೆ ಕಷ್ಟಕರವಾಗಿಸುತ್ತದೆ ಎಂಬ ಆಯ್ಕೆದಾರರ ಮನಸ್ಥಿತಿ ಇದಾಗಿದೆ ಎಂದು ತೋರುತ್ತದೆ," ಎಂದು ಹೇಳಿದ್ದಾರೆ.
"ಆ ಅಭಿಪ್ರಾಯವನ್ನು ನಾನು ಒಪ್ಪುವುದಿಲ್ಲ. ವಿಭಿನ್ನ ಸ್ವರೂಪಗಳಿಗೆ ವಿಭಿನ್ನ ನಾಯಕರನ್ನು ಹೊಂದುವ ಅವಶ್ಯಕತೆಯಿದೆ ಅಥವಾ ಕನಿಷ್ಠ ವೈಟ್-ಬಾಲ್ ಮತ್ತು ರೆಡ್-ಬಾಲ್ ಕ್ರಿಕೆಟ್ಗೆ ಪ್ರತ್ಯೇಕ ನಾಯಕರನ್ನು ಹೊಂದುವ ಅವಶ್ಯಕತೆಯಿದೆ ಎಂದು ನಾನು ನಂಬುತ್ತೇನೆ. ವೈಟ್-ಬಾಲ್ ಮತ್ತು ರೆಡ್-ಬಾಲ್ ತಂಡಗಳು ವಿಭಿನ್ನ ದೃಷ್ಟಿಕೋನಗಳು, ವಿಧಾನಗಳು ಮತ್ತು ಸಿದ್ಧತೆಗಳನ್ನು ಹೊಂದಿರುವುದರಿಂದ ಅದಕ್ಕಾಗಿ ಯಾವುದೇ ಹೆಚ್ಚುವರಿ ಕೆಲಸ ಅಗತ್ಯವಿಲ್ಲ," ಎಂದು ಸಬಾ ಕರಿಮ್ ವಿವರಿಸಿದ್ದಾರೆ.