ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಭಾರತ ತಂಡದಲ್ಲಿ ಮೊಹಮ್ಮದ್‌ ಶಮಿಗೆ ಸ್ಥಾನ ಸಿಗದೇ ಇರಲು ಕಾರಣ ತಿಳಿಸಿದ ಅಜಿತ್‌ ಅಗರ್ಕರ್‌!

IND vs AFG: ಅಫ್ಘಾನಿಸ್ತಾನ ವಿರುದ್ಧದ ಏಕೈಕ ಟೆಸ್ಟ್‌ ಪಂದ್ಯ ಹಾಗೂ ಮೂರು ಪಂದ್ಯಗಳ ಏಕದಿನ ಸರಣಿಗೆ ಭಾರತ ತಂಡವನ್ನು ಬಿಸಿಸಿಐ ಮೇ 19 ರಂದು ಪ್ರಕಟಿಸಿದ್ದು. ಆದರೆ, ಹಿರಿಯ ವೇಗಿ ಮೊಹಮ್ಮದ್‌ ಶಮಿ ಅವರನ್ನು ಎರಡೂ ತಂಡಗಳಿಂದ ಕೈ ಬಿಡಲಾಗಿದೆ. ಭಾರತ ತಂಡವನ್ನು ಪ್ರಕಟಿಸಿದ ಬಳಿಕ ಬಿಸಿಸಿಐ ಚೀಫ್‌ ಸೆಲೆಕ್ಟರ್‌ ಅಜಿತ್‌ ಅಗರ್ಕರ್‌, ಶಮಿ ಆಯ್ಕೆ ಮಾಡದ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.

ಮೊಹಮ್ಮದ್‌ ಶಮಿ ಬಗ್ಗೆ ಅಜಿತ್‌ ಅಗರ್ಕರ್‌ ಹೇಳಿಕೆ.

ನವದೆಹಲಿ: ಅಫ್ಘಾನಿಸ್ತಾನ ವಿರುದ್ಧ ಏಕೈಕ ಟೆಸ್ಟ್‌ ಪಂದ್ಯ ಹಾಗೂ ಮೂರು ಪಂದ್ಯಗಳ ಏಕದಿನ ಸರಣಿಗೆ ಭಾರತ (Indian Cricket Team) ತಂಡವನ್ನು ಬಿಸಿಸಿಐ ಪ್ರಕಟಿಸಿದ್ದು, ಹಿರಿಯ ವೇಗಿ ಮೊಹಮ್ಮದ್‌ ಶಮಿ (Mohammed Shami) ಅವರನ್ನು ಕೈ ಬಿಟ್ಟಿದೆ. ಪಂದ್ಯವನ್ನು ಪ್ರಕಟಿಸಿದ ಬಳಿಕ ಬಿಸಿಸಿಐ ಚೀಫ್‌ ಸೆಲೆಕ್ಟರ್‌ ಅಜಿತ್‌ ಅಗರ್ಕರ್‌ ಸುದ್ದಿಗೋಷ್ಠಿಯನ್ನು ಹಮ್ಮಿಕೊಂಡಿದ್ದರು. ಈ ವೇಳೆ ಅವರು ಹಲವು ಪ್ರಶ್ನೆಗಳಿಗೆ ಉತ್ತರ ನೀಡಿದ್ದಾರೆ. ಮೊಹಮ್ಮದ್‌ ಶಮಿ ಅವರಿಗೆ ಭಾರತ ತಂಡದಲ್ಲಿ ಅವಕಾಶ ನೀಡದೇ ಇರಲು ಕಾರಣವೇನೆಂದು ಅಜಿತ್‌ ಅಗರ್ಕರ್‌ ಬಹಿರಂಗಪಡಿಸಿದ್ದಾರೆ.

ಭಾರತ ತಂಡದ ಮುಖ್ಯ ಆಯ್ಕೆಗಾರ ಅಜಿತ್‌ ಅಗರ್ಕರ್‌, ವೇಗಿ ಮೊಹಮ್ಮದ್‌ ಶಮಿ ಅವರನ್ನು ಮತ್ತೆ ರಾಷ್ಟ್ರೀಯ ತಂಡಕ್ಕೆ ಕರೆಸಿಕೊಳ್ಳುವ ಬಗ್ಗೆ ಆಯ್ಕೆ ಸಮಿತಿ ಸಭೆಯಲ್ಲಿ ಯಾವುದೇ ಚರ್ಚೆ ನಡೆದಿಲ್ಲ ಎಂದು ತಿಳಿಸಿದ್ದಾರೆ. ಶಮಿ ಪ್ರಸ್ತುತ ಟಿ20 ಕ್ರಿಕೆಟ್‌ನಲ್ಲಿ ಮಾತ್ರ ಬೌಲ್‌ ಮಾಡಲು ದೈಹಿಕವಾಗಿ ಸಿದ್ಧರಾಗಿದ್ದಾರೆ, ಆದರೆ ದೀರ್ಘಾವಧಿ ಕ್ರಿಕೆಟ್‌ಗೆ ಇನ್ನೂ ಪೂರ್ಣ ಫಿಟ್ ಆಗಿಲ್ಲ ಎಂದು ಹೇಳಿದ್ದಾರೆ.

IND vs AFG: ರಿಷಭ್‌ ಪಂತ್‌ಗೆ ಕೊಕ್‌, ಅಫ್ಘಾನಿಸ್ತಾನ ವಿರುದ್ದ ಏಕದಿನ ಸರಣಿಗೆ ಭಾರತ ತಂಡ ಪ್ರಕಟ!

ಮೊಹಮ್ಮದ್‌ ಶಮಿ ಬಗ್ಗೆ ಅಗರ್ಕರ್‌ ಅಚ್ಚರಿ ಹೇಳಿಕೆ

ಈ ಹೇಳಿಕೆಯಿಂದ ಶಮಿ ಅವರ ಫಿಟ್ನೆಸ್ ಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಆಯ್ಕೆದಾರರು ಎಚ್ಚರಿಕೆಯಿಂದ ನಿರ್ಧಾರ ತೆಗೆದುಕೊಳ್ಳುತ್ತಿದ್ದಾರೆ ಎಂಬುದು ಸ್ಪಷ್ಟವಾಗಿದೆ. ವಿಶೇಷವಾಗಿ ಟೆಸ್ಟ್ ಹಾಗೂ ಏಕದಿನ ಮಾದರಿಗಳಲ್ಲಿ ನಿರಂತರ ದೈಹಿಕ ಸಾಮರ್ಥ್ಯ ಮತ್ತು ಹೆಚ್ಚಿನ ಓವರ್‌ಗಳನ್ನು ಬೌಲ್‌ ಮಾಡುವ ಸಾಮರ್ಥ್ಯಕ್ಕೆ ಹೆಚ್ಚಿನ ಮಹತ್ವ ನೀಡಲಾಗುತ್ತಿದೆ.

“ನಮಗೆ ತಿಳಿಸಿರುವ ಮಾಹಿತಿಯ ಪ್ರಕಾರ, ಈ ಕ್ಷಣದಲ್ಲಿ ಅವರ ದೇಹ ಟಿ20 ಕ್ರಿಕೆಟ್ ಆಡಲು ಮಾತ್ರ ಅವಕಾಶ ನೀಡುತ್ತಿದೆ. ಅವರು ಈ ವರ್ಷ ದೇಶಿ ಸೀಸನ್ ಆಡಿರುವುದು ನನಗೆ ಗೊತ್ತಿದೆ. ಆದರೆ ನನಗೆ ಬಂದಿರುವ ಮಾಹಿತಿ ಏನೆಂದರೆ, ಪ್ರಸ್ತುತ ಅವರು ಟಿ20 ಕ್ರಿಕೆಟ್‌ಗೆ ಮಾತ್ರ ಸಿದ್ಧರಾಗಿದ್ದಾರೆ. ಆದ್ದರಿಂದ ಅವರ ಬಗ್ಗೆ ಯಾವುದೇ ಚರ್ಚೆ ನಡೆದಿಲ್ಲ,” ಎಂದು ಅಜಿತ್‌ ಅಗರ್ಕರ್‌ ಸುದ್ದಿಗೋಷ್ಠಿಯಲ್ಲಿ ಹೇಳಿದರು.

IND vs AFG: ರಿಷಭ್‌ ಪಂತ್‌ರನ್ನು ಟೆಸ್ಟ್‌ ಉಪ ನಾಯಕತ್ವದಿಂದ ಕೆಳಗಿಳಿಸಲು ಕಾರಣವೇನು?

ಈ ಮೂಲಕ ಮೊಹಮ್ಮದ್‌ ಶಮಿ ಅವರ ಫಿಟ್ನೆಸ್ ಇನ್ನೂ ಸಂಪೂರ್ಣವಾಗಿ ದೀರ್ಘಾವಧಿ ಸ್ವರೂಪದ ಕ್ರಿಕೆಟ್‌ಗೆ ಹೊಂದಿಕೆಯಾಗಿಲ್ಲ ಎಂಬುದನ್ನು ಆಯ್ಕೆ ಸಮಿತಿ ಸ್ಪಷ್ಟಪಡಿಸಿದೆ. ಶಮಿ ಅವರು 2025ರ ಐಸಿಸಿ ಚಾಂಪಿಯನ್ಸ್‌ ಟ್ರೋಫಿ ಬಳಿಕ ಭಾರತ ತಂಡದ ಪರ ಯಾವುದೇ ಮಾದರಿಯಲ್ಲೂ ಆಡಿಲ್ಲ. ಆ ಟೂರ್ನಿಯಲ್ಲಿ ಅವರು ವರುಣ್‌ ಚಕ್ರವರ್ತಿ ಅವರೊಂದಿಗೆ ಸೇರಿ ಭಾರತ ತಂಡದ ಪರ ಜಂಟಿಯಾಗಿ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಆಗಿ ಹೊರಹೊಮ್ಮಿದ್ದರು.

35 ವರ್ಷದ ಈ ಅನುಭವಿ ವೇಗಿ, 2025-26ರ ರಣಜಿ ಟ್ರೋಫಿ ಟೂರ್ನಿಯಲ್ಲಿ ಬಂಗಾಳ ತಂಡವನ್ನು ಸೆಮಿಫೈನಲ್ ಹಂತಕ್ಕೆ ತಲುಪಿಸುವಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಏಳು ಪಂದ್ಯಗಳಲ್ಲಿ ಅವರು 16.72ರ ಸರಾಸರಿಯಲ್ಲಿ 37 ವಿಕೆಟ್‌ಗಳನ್ನು ಪಡೆದು ಗಮನಾರ್ಹ ಪ್ರದರ್ಶನ ನೀಡಿದ್ದರು. ಇದರ ಜೊತೆಗೆ ವಿಜಯ್‌ ಹಝಾರೆ ಟ್ರೋಫಿ ಹಾಗೂ ಸೈಯದ್‌ ಮುಷ್ತಾಕ್‌ ಅಲಿ ಟ್ರೋಫಿ ಟೂರ್ನಿಗಳಲ್ಲಿಯೂ ಅವರು ಉತ್ತಮ ಪ್ರದರ್ಶನ ನೀಡಿ ತಮ್ಮ ಅನುಭವ ಮತ್ತು ಸಾಮರ್ಥ್ಯವನ್ನು ಮತ್ತೊಮ್ಮೆ ಸಾಬೀತುಪಡಿಸಿದ್ದರು.

ಪ್ರಸ್ತುತ ನಡೆಯುತ್ತಿರುವ 2026ರ ಐಪಿಎಲ್‌ ಟೂರ್ನಿಯಲ್ಲಿ ಮೊಹಮ್ಮದ್‌ ಶಮಿ ಲಖನೌ ಸೂಪರ್‌ ಜಯಂಟ್ಸ್‌ ತಂಡದ ಪರವಾಗಿ ಆಡುತ್ತಿದ್ದು, ಅವರು 12 ಪಂದ್ಯಗಳಲ್ಲಿ 10 ವಿಕೆಟ್‌ಗಳನ್ನು ಪಡೆದು ತಮ್ಮ ಅನುಭವವನ್ನು ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ. ಆದಾಗ್ಯೂ, ರಾಷ್ಟ್ರೀಯ ತಂಡದಲ್ಲಿ ಅವರಿಗೆ ಅವಕಾಶ ನೀಡಲು ಬಿಸಿಸಿಐ ಸೆಲೆಕ್ಟರ್‌ಗಳ ಮನಸು ಮಾಡಲಿಲ್ಲ.