ನವದೆಹಲಿ: ಇಂಡಿಯನ್ ಪ್ರೀಮಿಯರ್ ಲೀಗ್ 2026ರ (IPL 2026) ಟೂರ್ನಿಯಲ್ಲಿ ತಮ್ಮ ಸ್ಪೋಟಕ ಬ್ಯಾಟಿಂಗ್ ಮೂಲಕ ವಿಶ್ವದ ಶ್ರೇಷ್ಠ ಬೌಲರ್‌ಗಳಿಗೆ ಭೀತಿ ಹುಟ್ಟಿಸಿದ್ದ ರಾಜಸ್ಥಾನ್ ರಾಯಲ್ಸ್ ತಂಡದ ಆರಂಭಿಕ ವೈಭವ್ ಸೂರ್ಯವಂಶಿ (Vaibhav Sooryanshi) ಅವರನ್ನು ದಕ್ಷಿಣ ಆಫ್ರಿಕಾ ಮಾಜಿ ವೇಗಿ ಡೇಲ್ ಸ್ಟೇನ್ (Dale Steyn) ಮುಕ್ತಕಂಠದಿಂದ ಗುಣಗಾನ ಮಾಡಿದ್ದಾರೆ. ಕ್ರಿಕೆಟ್ ದಿಗ್ಗಜರಾದ ಸಚಿನ್ ತೆಂಡೂಲ್ಕರ್ ಹಾಗೂ ವಿರಾಟ್ ಕೊಹ್ಲಿ ಅವರಿಗಿಂತಲೂ ವೈಭವ್ ಸೂರ್ಯವಂಶಿ ಅತ್ಯುತ್ತಮ ಸಾಮರ್ಥ್ಯವನ್ನು ಹೊಂದಿದ್ದಾರೆಂದು ಆಫ್ರಿಕಾ ದಿಗ್ಗಜ ವೇಗಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಇತ್ತೀಚೆಗೆ ಅಂತ್ಯವಾಗಿದ್ದ 2026ರ ಐಪಿಎಲ್ ಟೂರ್ನಿಯಲ್ಲಿ ವೈಭವ್ ಸೂರ್ಯವಂಶಿ ಶ್ರೇಷ್ಠ ಬ್ಯಾಟಿಂಗ್ ಪ್ರದರ್ಶನವನ್ನು ತೋರಿದ್ದರು. ಅವರು 776 ರನ್‌ಗಳನ್ನು ಸಿಡಿಸುವ ಮೂಲಕ ಆರೆಂಜ್ ಕ್ಯಾಪ್ ಮುಡಿಗೇರಿಸಿಕೊಂಡಿದ್ದರು. ಅಲ್ಲದೆ ಈ ಟೂರ್ನಿಯಲ್ಲಿ ಅವರು ಅತಿ ಹೆಚ್ಚು ಸಿಕ್ಸರ್‌ಗಳನ್ನು ಬಾರಿಸುವ ಮೂಲಕ ಆರ್‌ಸಿಬಿ ದಿಗ್ಗಜ ಕ್ರಿಸ್ ಗೇಲ್ ದಾಖಲೆಯನ್ನು ಮುರಿದಿದ್ದರು. ಇದರ ಫಲವಾಗಿ ಅವರು ಐರ್ಲೆಂಡ್ ಹಾಗೂ ಇಂಗ್ಲೆಂಡ್ ವಿರುದ್ಧದ ಟಿ20ಐ ಸರಣಿಗಳ ಭಾರತ ತಂಡದಲ್ಲಿ ಅವರು ಸ್ಥಾನವನ್ನು ಪಡೆದಿದ್ದಾರೆ.
IND-A vs AFG-A: 200ರ ಸ್ಟ್ರೈಕ್ ರೇಟ್‌ನಲ್ಲಿ ಆಡಿದರೂ ಸಿಕ್ಸರ್ ಬಾರಿಸಿದ ವೈಭವ್ ಸೂರ್ಯವಂಶಿ!
ಐದನೇ ಆವೃತ್ತಿಯ ದಕ್ಷಿಣ ಆಫ್ರಿಕಾ ಟಿ20 ಲೀಗ್ ನಿಮಿತ್ತ ಮಾತನಾಡಿದ ಡೇಲ್ ಸ್ಟೇನ್, "ನೀವು ಸಚಿನ್ ತೆಂಡೂಲ್ಕರ್ ಮತ್ತು ವಿರಾಟ್ ಕೊಹ್ಲಿ ಅವರಂತಹ ದಿಗ್ಗಜರ ಬಗ್ಗೆ ಯೋಚಿಸುತ್ತೀರಿ. ಆದರೆ ಈ ಯುವ ಆಟಗಾರ (ವೈಭವ್ ಸೂರ್ಯವಂಶಿ) ಭವಿಷ್ಯದಲ್ಲಿ ಸ್ಫೋಟಕ ಸಾಧನೆ ಮಾಡುವ ಸಾಮರ್ಥ್ಯ ಹೊಂದಿದ್ದಾರೆ. ಅವರ ವೃತ್ತಿಜೀವನದ ಅಂತ್ಯದ ವೇಳೆಗೆ, ಅವನು ಈ ಇಬ್ಬರು ದಿಗ್ಗಜರ ಒಟ್ಟು ಸಾಧನೆಗಿಂತಲೂ ದೊಡ್ಡ ಮಟ್ಟದ ಪ್ರಭಾವ ಬೀರುವ ಆಟಗಾರನಾಗಿ ಹೊರಹೊಮ್ಮಬಹುದು,” ಎಂದು ಭವಿಷ್ಯ ನುಡಿದಿದ್ದಾರೆ.
ದಕ್ಷಿಣ ಆಫ್ರಿಕಾದಲ್ಲಿ ಸಾಕಷ್ಟು ಪ್ರತಿಭಾವಂತ ಆಟಗಾರರಿದ್ದಾರೆ. ಆದರೆ, ವೈಭವ್ ಸೂರ್ಯವಂಶಿ ಅವರ ರೀತಿ ಬೇರೆ ಯಾರೂ ಇಲ್ಲ. ಪ್ರಸ್ತುತ ಅಂತಾರಾಷ್ಟ್ರೀಯ ಕ್ರಿಕೆಟ್ ಆಡುತ್ತಿರುವ ಆಟಗಾರರಿಗಿತ ವೈಭವ್ ಅತ್ಯಂತ ಉತ್ತಮ ಬ್ಯಾಟ್ಸ್‌ಮನ್ ಎಂದು ಡೇಲ್ ಸ್ಟೇನ್ ತಿಳಿಸಿದ್ದಾರೆ.
IND vs AFG: ಮೊಹಿಂದರ್ ಅಮರನಾಥ್ ದಾಖಲೆ ಮುರಿಯುವ ಸನಿಹದಲ್ಲಿ ರೋಹಿತ್ ಶರ್ಮಾ!
"ದಕ್ಷಿಣ ಆಫ್ರಿಕಾದಲ್ಲಿ ಸದ್ಯ 14 ಅಥವಾ 15ರ ವಯಸ್ಸಿನ ರೀತಿ ಅತ್ಯುತ್ತಮ ಪ್ರತಿಭಾವಂತ ಆಟಗಾರರಿದ್ದಾರೆಂದು ನಾನು ಭಾವಿಸುವುದಿಲ್ಲ. ಒಂದು ವೇಳೆ ಇದ್ದರೂ, ನನಗೆ ಅವರ ಬಗ್ಗೆ ತಿಳಿದಿಲ್ಲ. ಸ್ಥಳೀಯ ಪ್ರತಿಭಾನ್ವೇಷಕರಷ್ಟು ನಾನು ಎಲ್ಲ ಬೆಳವಣಿಗೆಗಳನ್ನು ಹತ್ತಿರದಿಂದ ಗಮನಿಸುತ್ತಿಲ್ಲ. ಆದರೆ ಒಂದು ವಿಷಯವನ್ನು ಖಚಿತವಾಗಿ ಹೇಳಬಲ್ಲೆ. ದಕ್ಷಿಣ ಆಫ್ರಿಕಾದಲ್ಲಿ ಪ್ರತಿಭಾವಂತ ಆಟಗಾರರ ಕೊರತೆಯೇ ಇಲ್ಲ. ನಮ್ಮ ಕ್ರಿಕೆಟ್ ವ್ಯವಸ್ಥೆಯ ಮೂಲಕ ಅತ್ಯುತ್ತಮ ಪ್ರತಿಭೆಗಳು ನಿರಂತರವಾಗಿ ಹೊರಹೊಮ್ಮುತ್ತಿವೆ. ಶಾಲಾ ಕ್ರಿಕೆಟ್ ವಲಯದಿಂದಲೇ ಅಸಾಧಾರಣ ಪ್ರತಿಭೆ ಹೊಂದಿರುವ 19 ವರ್ಷದೊಳಗಿನ ಹಾಗೂ 15 ವರ್ಷದೊಳಗಿನ ಆಟಗಾರರು ಉತ್ತಮವಾಗಿ ಬೆಳೆಯುತ್ತಿದ್ದು, ಮುಂದಿನ ಹಂತಗಳಿಗೆ ಮುನ್ನಡೆಯುತ್ತಿದ್ದಾರೆ,” ಎಂದು ಅವರು ಹೇಳಿದ್ದಾರೆ.
"ವೈಭವ್ ಸೂರ್ಯವಂಶಿ ಅತ್ಯಂತ ವಿಭಿನ್ನವಾದ ಆಟಗಾರ. ಪ್ರಸ್ತುತ ಅಂತಾರಾಷ್ಟ್ರೀಯ ಕ್ರಿಕೆಟ್ ಆಡುತ್ತಿರುವ ಆಟಗಾರರಿಗಿಂತ ವೈಭವ್ ಸೂರ್ಯವಂಶಿ ಉತ್ತಮವಾಗಿದ್ದಾರೆ. ಅವರು ನಿಜವಾದ ಅರ್ಥದಲ್ಲಿ ಅದ್ಭುತ ಪ್ರತಿಭೆಯ ಯುವ ಆಟಗಾರ. ಭಾರತೀಯ ಕ್ರಿಕೆಟ್‌ಗೆ ಅಮೂಲ್ಯವಾದ ಸಂಪತ್ತಾಗಿದ್ದಾರೆ,” ಎಂದು ಡೇಲ್ ಸ್ಟೇನ್ ಮತ್ತಷ್ಟು ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ.