ನವದೆಹಲಿ: ಭಾರತ ತಂಡದ ಮಾಜಿ ನಾಯಕ ಹಾಗೂ ಆಧುನಿಕ ಕ್ರಿಕೆಟ್ ದಿಗ್ಗಜ ವಿರಾಟ್ ಕೊಹ್ಲಿಗೆ (Virat Kohli) ವಿದಾಯ ಪಂದ್ಯ ನೀಡದ ಬಗ್ಗೆ ಮಾಜಿ ಕ್ರಿಕೆಟಿಗ ಕೃಷ್ಣಮಾಚಾರಿ ಶ್ರೀಕಾಂತ್ (K Srikkanth) ಬೇಸರ ವ್ಯಕ್ತಪಡಿಸಿದ್ದಾರೆ. ಟೆಸ್ಟ್ ಕ್ರಿಕೆಟ್‌ನಲ್ಲಿ ಅಭೂತ ಪೂರ್ವ ಸಾಧನೆ ಮಾಡಿರುವ ಅವರಿಗೆ ಅದ್ಧೂರಿ ವಿದಾಯದ ಪಂದ್ಯವನ್ನು ನೀಡಬೇಕಾಗಿತ್ತು ಎಂದು ಅವರು ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಈ ಲೆಕ್ಕಾಚಾರದಲ್ಲಿ ಅವರು ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಆಡಬೇಕಾಗಿತ್ತು ಎಂದು ತಿಳಿಸಿದ್ದಾರೆ.
2025ರ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಆಡುತ್ತಿದ್ದ ವೇಳೆ ವಿರಾಟ್ ಕೊಹ್ಲಿ ತಮ್ಮ ಟೆಸ್ಟ್ ವೃತ್ತಿ ಜೀವನಕ್ಕೆ ವಿದಾಯ ಹೇಳಿದ್ದರು. ಆಸ್ಟ್ರೇಲಿಯಾ ವಿರುದ್ಧ 2024-25ರ ಬಾರ್ಡರ್-ಗವಾಸ್ಕರ್ ಟ್ರೋಫಿ ಟೆಸ್ಟ್ ಸರಣಿಯಲ್ಲಿ ಆಡಿದ ಬಳಿಕ ಅವರು ದೆಹಲಿ ತಂಡದ ಪರ ಕೊನೆಯ ಬಾರಿ ರಣಜಿ ಟ್ರೋಫಿ ಪಂದ್ಯದ ಮೂಲಕ ಅವರು ತಮ್ಮ ರೆಡ್ ಬಾಲ್ ಕ್ರಿಕೆಟ್‌ಗೆ ಗುಡ್‌ಬೈ ಹೇಳಿದ್ದರು.
ಹೋದವರ್ಷ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಗೂ ಮುನ್ನ ವಿರಾಟ್ ಕೊಹ್ಲಿ ರೆಡ್ ಬಾಲ್ ಕ್ರಿಕೆಟ್‌ಗೆ ವಿದಾಯ ಹೇಳಿದ್ದರು. ಅವರು ತಮ್ಮ ಟೆಸ್ಟ್ ವೃತ್ತಿ ಜೀವನದಲ್ಲಿ 10000 ರನ್‌ಗಳನ್ನು ಪೂರ್ಣಗೊಳಿಸಲು ಇನ್ನು ಕೇವಲ 770 ರನ್‌ಗಳು ಮಾತ್ರ ಅಗತ್ಯವಿತ್ತು. ವಿರಾಟ್ ಕೊಹ್ಲಿ ಟೆಸ್ಟ್‌ಗೆ ವಿದಾಯ ಹೇಳಿದ ಕೆಲ ದಿನಗಳಲ್ಲಿಯೇ ರೋಹಿತ್ ಶರ್ಮಾ ಕೂಡ ತಮ್ಮ ದೀರ್ಘಾವಧಿ ಸಹ ಆಟಗಾರನ ಹಾದಿಯನ್ನು ತುಳಿದಿದ್ದರು. ಹಾಗಾಗಿ ಇಬ್ಬರು ದಿಗ್ಗಜರ ಅನುಪಸ್ಥಿತಿಯಲ್ಲಿ ಭಾರತ ತಂಡ, ಇಂಗ್ಲೆಂಡ್ ವಿರುದ್ಧ ಟೆಸ್ಟ್ ಸರಣಿಯನ್ನು ಆಡಿತ್ತು.
2030ರವರೆಗೂ ವಿರಾಟ್ ಕೊಹ್ಲಿ ಆರ್‌ಸಿಬಿ ಪರ ಆಡಲಿದ್ದಾರೆಂದ ರಾಜೇಶ್ ಮೆನನ್!
ವಿರಾಟ್ ಕೊಹ್ಲಿ ಟೆಸ್ಟ್ ಕ್ರಿಕೆಟ್‌ಗೆ ವಿದಾಯ ಹೇಳಿದ ಒಂದು ವರ್ಷದ ಬಳಿಕ ಇದರ ಬಗ್ಗೆ ಕೃಷ್ಣಮಾಚಾರಿ ಶ್ರೀಕಾಂತ್ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಮಾಜಿ ನಾಯಕನಿಗೆ ವಿದಾಯದ ಪಂದ್ಯವನ್ನು ನೀಡಬೇಕಾಗಿತ್ತೆಂದು ಅವರು ಹೇಳಿದ್ದಾರೆ. ಭವಿಷ್ಯದ ಐಸಿಸಿ ಹಾಲ್ ಫೇಮ್ ಪಡೆಯಬಲ್ಲ ಆಟಗಾರ, ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಆಡಬೇಕಾಗಿತ್ತು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
"ನನ್ನ ಪ್ರಕಾರ, ವಿರಾಟ್ ಕೊಹ್ಲಿ ಅವರು ಇಂಗ್ಲೆಂಡ್‌ನಲ್ಲಿ ಟೆಸ್ಟ್ ಸರಣಿಯನ್ನು ಆಡಬೇಕಾಗಿತ್ತು. ಅವರು ವಿಭಿನ್ನ ಹಂತದಲ್ಲಿದ್ದಾರೆ. ಇದು ವಯಸ್ಸಿನ ವಿಷಯವಲ್ಲ. ಅವರಲ್ಲಿನ ಉತ್ಸಾಹ, ಆಕ್ರಮಣಶೀಲತೆ ಹಾಗೂ ಅವರು ಅದ್ಭುತವಾಗಿದ್ದಾರೆ. ಅವರು ಟಿ20 ಕ್ರಿಕೆಟ್‌ನಲ್ಲಿ ಅದ್ಭುತವಾಗಿ ಆಡಿದ್ದರು ಹಾಗೂ ಐಪಿಎಲ್ ಟೂರ್ನಿಯಲ್ಲಿಯೂ ಕೂಡ. ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಅವರು ಖಂಡಿತವಾಗಿಯೂ ಆಡಬೇಕಾಗಿತ್ತು. ಅವರಿಗೆ ಅದ್ಧೂರಿ ವಿದಾಯದ ಪಂದ್ಯವನ್ನು ನೀಡಬೇಕಾಗಿತ್ತು. ಏಕೆಂದರೆ ಅವರು ಭಾರತೀಯ ಕ್ರಿಕೆಟ್‌ನಲ್ಲಿ ಸಾಕಷ್ಟು ನೀಡಿದ್ದಾರೆ. ಆದರೆ, ಇದು ಅನಿರೀಕ್ಷಿತವಾಗಿ ನಡೆದಿಲ್ಲ," ಎಂದು ಕೆ ಶ್ರೀಕಾಂತ್ ಬೇಸರ ವ್ಯಕ್ತಪಡಿಸಿದ್ದಾರೆ.
ʻಅವರು ಬಂದಾಗ ನಮ್ಮ ವಿಶ್ವಾಸ ಕುಸಿದಿತ್ತುʼ: ರವಿ ಶಾಸ್ತ್ರಿಯ ಮೊದಲ ಭೇಟಿಯನ್ನು ನೆನೆದ ವಿರಾಟ್ ಕೊಹ್ಲಿ!
ವಿರಾಟ್ ಕೊಹ್ಲಿ ಅವರು ತಮ್ಮ ಟೆಸ್ಟ್ ವೃತ್ತಿ ಜೀವನವನ್ನು 123 ಪಂದ್ಯಗಳಿಂದ 9230 ರನ್‌ಗಳ ಮೂಲಕ ಮುಗಿಸಿದ್ದಾರೆ. ಇದರಲ್ಲಿ ಅವರು 30 ಶತಕಗಳು ಹಾಗೂ 31 ಅರ್ಧಶತಕಗಳನ್ನು ಬಾರಿಸಿದ್ದಾರೆ. 2011ರಲ್ಲಿ ಅವರು ಟೆಸ್ಟ್ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದರು. ಆರಂಭಿಕ ಹಂತದಲ್ಲಿ ಅವರು ತಂಡದಿಂದ ತಮ್ಮ ಸ್ಥಾನವನ್ನು ಕಳೆದುಕೊಂಡರೂ ನಂತರ ಅವರು ತಂಡದ ನಿಯಮಿತ ಆಟಗಾರರಾಗಿದ್ದರು.
2014-15ರ ಸಾಲಿನಲ್ಲಿ ಭಾರತ ಟೆಸ್ಟ್ ತಂಡಕ್ಕೆ ನಾಯಕನಾಗುವ ಮೂಲಕ ಎಂಎಸ್ ಧೋನಿಯ ಸ್ಥಾನವನ್ನು ತುಂಬಿದ್ದ ಕೊಹ್ಲಿ, ಭಾರತೀಯ ಟೆಸ್ಟ್ ತಂಡದ ಯಶಸ್ವಿ ನಾಯಕರಾಗಿದ್ದಾರೆ. ಇವರ ನಾಯಕತ್ವದಲ್ಲಿ ಭಾರತ ತಂಡ 68 ಟೆಸ್ಟ್ ಪಂದ್ಯಗಳನ್ನು ಆಡಿದ್ದು, 40ರಲ್ಲಿ ಗೆಲುವು ಪಡೆದಿದೆ. ಅಲ್ಲದೆ ಆಸ್ಟ್ರೇಲಿಯಾದಲ್ಲಿ ಟೆಸ್ಟ್ ಸರಣಿ ಗೆದ್ದ ಮೊದಲ ಏಷ್ಯಾ ತಂಡದ ನಾಯಕ ಎನಿಸಿಕೊಂಡಿದ್ದಾರೆ.