ನವದೆಹಲಿ: ಅಹಮದಾಬಾದ್‌ನಲ್ಲಿ ಮೇ 31 ರಂದು ನಡೆದಿದ್ದ 2026ರ ಇಂಡಿಯನ್ ಪ್ರೀಮಿಯರ್ ಲೀಗ್ (IPL 2026) ಟೂರ್ನಿಯ ಫೈನಲ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ವಿರುದ್ಧ ಗುಜರಾತ್ ಟೈಟನ್ಸ್ (GT) 5 ವಿಕೆಟ್ ಸೋಲು ಅನುಭವಿಸಿತು. ಇದರೊಂದಿಗೆ ಎರಡನೇ ಪ್ರಶಸ್ತಿ ಗೆಲ್ಲುವ ಕನಸು ಭಗ್ನವಾಯಿತು. ಪಂದ್ಯದ ಬಳಿಕ ಸಾಮಾಜಿಕ ಜಾಲತಾಣ ಇನ್‌ಸ್ಟಾಗ್ರಾಂನಲ್ಲಿ ಸಂದೇಶ ಹಂಚಿಕೊಂಡ ತಂಡದ ನಾಯಕ ಶುಭಮನ್ ಗಿಲ್, ಸೋಲಿನ ನೋವನ್ನು ವ್ಯಕ್ತಪಡಿಸುವ ಜೊತೆಗೆ ತಂಡದ ಹೋರಾಟದ ಮನೋಭಾವ ಮತ್ತು ಕ್ರಿಕೆಟ್ ನೀಡುವ ಜೀವನ ಪಾಠಗಳ ಬಗ್ಗೆ ಮನದಾಳದ ಮಾತುಗಳನ್ನು ಹಂಚಿಕೊಂಡರು.
"ನಾವು ಗೆಲುವಿನ ಅಂಚಿನವರೆಗೆ ತಲುಪಿದ್ದೆವು. ಆದರೆ ಅಂತಿಮ ಗುರಿ ಮುಟ್ಟಲು ಸಾಧ್ಯವಾಗಲಿಲ್ಲ. ಈ ಸೋಲು ತುಂಬಾ ನೋವುಂಟು ಮಾಡಿದೆ ಮತ್ತು ನಿರಾಸೆಯ ಭಾರವೂ ಹೆಚ್ಚಾಗಿದೆ. ಆದರೆ ನಾವು ಪ್ರೀತಿಸುವ ಈ ಆಟ ಜೀವನದ ಅನೇಕ ಮಹತ್ವದ ಪಾಠಗಳನ್ನು ಕಲಿಸುತ್ತದೆ. ಈ ಆಟ ನನಗೆ ಕಲಿಸಿದ ಒಂದು ವಿಷಯವೆಂದರೆ, ನಾವು ಮತ್ತೆ ಎದ್ದು ನಿಲ್ಲುತ್ತಾ, ಎಂದಿಗೂ ಕೈಚೆಲ್ಲದೆ ಮುಂದುವರಿದರೆ ಸೋಲಿನಲ್ಲಿ ನಿಜವಾದ ಸೋಲು ಎಂಬುದೇ ಇರುವುದಿಲ್ಲ," ಎಂದು ಗಿಲ್ ಬರೆದುಕೊಂಡಿದ್ದಾರೆ.
2027ರ ಐಪಿಎಲ್ ಟೂರ್ನಿಯಲ್ಲಿ ಸನ್‌ರೈಸರ್ಸ್ ಹೈದರಾಬಾದ್‌ಗೆ ಇಶಾನ್ ಕಿಶನ್ ನಾಯಕ!
"ನಮ್ಮ ತಂಡದೊಂದಿಗೆ ಸುಖ-ದುಃಖದ ಎಲ್ಲ ಸಂದರ್ಭಗಳಲ್ಲೂ ಬೆಂಬಲವಾಗಿ ನಿಂತ ಪ್ರತಿಯೊಬ್ಬರಿಗೂ ನಾನು ಹೃತ್ಪೂರ್ವಕ ಧನ್ಯವಾದಗಳನ್ನು ಸಲ್ಲಿಸುತ್ತೇನೆ. ನಿಮ್ಮ ಉತ್ಸಾಹ, ಪ್ರೋತ್ಸಾಹ ಮತ್ತು ಬೆಂಬಲವೇ ನಮ್ಮನ್ನು ಕೊನೆಯ ಕ್ಷಣದವರೆಗೂ ಹೋರಾಡುವಂತೆ ಮಾಡಿತು," ಎಂದು ಅವರು ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹೇಳಿದ್ದಾರೆ.
ಗುಜರಾತ್ ತಂಡದ ನಾಯಕ ಗಿಲ್, ಅಭಿಮಾನಿಗಳ ನಿರಂತರ ಬೆಂಬಲಕ್ಕೆ ಕೃತಜ್ಞತೆ ವ್ಯಕ್ತಪಡಿಸಿ, ತಂಡದ ಪಯಣದಲ್ಲಿ ಅವರ ಪಾತ್ರ ಅತ್ಯಂತ ಮಹತ್ವದ್ದಾಗಿದೆ ಎಂದು ಉಲ್ಲೇಖಿಸಿದ್ದಾರೆ.
2026ರ ಐಪಿಎಲ್ ಫೈನಲ್ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡುವಂತಾಗಿದ್ದ ಗುಜರಾತ್ ಟೈಟನ್ಸ್, 20 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 155 ರನ್‌ಗಳನ್ನು ಮಾತ್ರ ಗಳಿಸಿತು. ತಂಡದ ಪರ ವಾಷಿಂಗ್ಟನ್ ಸುಂದರ್ 37 ಎಸೆತಗಳಲ್ಲಿ ಐದು ಬೌಂಡರಿಗಳ ನೆರವಿನಿಂದ ಅಜೇಯ 50 ರನ್‌ಗಳನ್ನು ಗಳಿಸಿದರು. ಗಿಲ್ 18 ಎಸೆತಗಳಲ್ಲಿ ಮೂರು ಬೌಂಡರಿಗಳೊಂದಿಗೆ 20 ರನ್‌ಗಳನ್ನು ಗಳಿಸಿದರು. ಇವರಿಬ್ಬರನ್ನು ಹೊರತುಪಡಿಸಿ ಬೇರೆ ಯಾವುದೇ ಬ್ಯಾಟರ್ 20 ರನ್‌ಗಳ ಗಡಿ ದಾಟಲು ಸಾಧ್ಯವಾಗಲಿಲ್ಲ.
ವೈಭವ್ ಸೂರ್ಯವಂಶಿಗೆ ಅಗ್ರ ಸ್ಥಾನ: 2026ರ ಐಪಿಎಲ್ ಟೂರ್ನಿಯಲ್ಲಿ ಅತಿ ಹೆಚ್ಚು ರನ್ ಗಳಿಸಿದ ಟಾಪ್ 5 ಬ್ಯಾಟರ್ಸ್!
ಆರ್‌ಸಿಬಿ ಪರ ರಸಿಖ್ ದಾರ್ ಸಲಾಮ್ 27 ರನ್‌ಗಳಿಗೆ 3 ವಿಕೆಟ್, ಭುವನೇಶ್ವರ್ ಕುಮಾರ್ 29 ರನ್‌ಗಳಿಗೆ 2 ವಿಕೆಟ್ ಹಾಗೂ ಜಾಶ್ ಹೇಝಲ್‌ವುಡ್ 37 ರನ್‌ಗಳಿಗೆ 2 ವಿಕೆಟ್ ಪಡೆದು ನಿಯಮಿತವಾಗಿ ವಿಕೆಟ್‌ಗಳನ್ನು ಕಬಳಿಸಿದರು.
ಗುರಿ ಬೆನ್ನಟ್ಟಿದ ಆರ್‌ಸಿಬಿ ಉತ್ತಮ ಆರಂಭ ಪಡೆದಿತು. ವೆಂಕಟೇಶ್ ಅಯ್ಯರ್ (16 ಎಸೆತಗಳಲ್ಲಿ 32 ರನ್; 4 ಬೌಂಡರಿ, 2 ಸಿಕ್ಸರ್) ಮತ್ತು ವಿರಾಟ್ ಕೊಹ್ಲಿ ಮೊದಲ ವಿಕೆಟ್‌ಗೆ 62 ರನ್‌ಗಳ ಜೊತೆಯಾಟ ಕಟ್ಟಿದರು. ಆದಾಗ್ಯೂ, ಗುಜರಾತ್ ಟೈಟನ್ಸ್ ಹೋರಾಟ ಮುಂದುವರಿಸಿ ಒಂದು ಹಂತದಲ್ಲಿ ಆರ್‌ಸಿಬಿಯನ್ನು 132/5ಕ್ಕೆ ಕಟ್ಟಿಹಾಕಿತು. ಆದರೆ ವಿರಾಟ್ ಕೊಹ್ಲಿ 42 ಎಸೆತಗಳಲ್ಲಿ 9 ಬೌಂಡರಿ ಮತ್ತು 3 ಸಿಕ್ಸರ್‌ಗಳ ನೆರವಿನಿಂದ ಅಜೇಯ 75 ರನ್‌ಗಳ ಅಮೋಘ ಇನಿಂಗ್ಸ್ ಆಡಿ, ಇನ್ನೂ ಎರಡು ಓವರ್‌ಗಳು ಬಾಕಿ ಇರುವಾಗಲೇ ತಂಡವನ್ನು ಗೆಲುವಿನ ದಡ ಸೇರಿಸಿದರು.