ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ʻನಮ್ಮ ತಂಡದಲ್ಲಿ ಗುಣಮಟ್ಟದ ಬೌಲಿಂಗ್‌ ಇಲ್ಲʼ: ಭಾರತ ತಂಡದ ಬೌಲಿಂಗ್‌ ಅನ್ನು ಟೀಕಿಸಿದ ಆರ್‌ ಅಶ್ವಿನ್‌!

ವೆಸ್ಟ್‌ ಇಂಡೀಸ್‌ ವಿರುದ್ಧಧ ಟಿ20ಐಸರಣಿಯಲ್ಲಿ ಭಾರತ ತಂಡದ ಕಳಪೆ ಬೌಲಿಂಗ್‌ ಪ್ರದರ್ಶನವನ್ನು ಸ್ಪಿನ್‌ ದಿಗ್ಗಜ ರವಿಚಂದ್ರನ್‌ ಅಶ್ವಿನ್‌ ಟೀಕಿಸಿದ್ದಾರೆ. ಭಾರತ ತಂಡದಲ್ಲಿ ಪ್ರಸ್ತುತ ಗುಣಮಟ್ಟದ ಬೌಲಿಂಗ್‌ ಇಲ್ಲವೆಂದು ಅವರು ಹೇಳಿದ್ದಾರೆ. ಎರಡನೇ ಪಂದ್ಯದಲ್ಲಿ 250 ರನ್‌ಗಳಿಗೆ ವಿಂಡೀಸ್‌ ಬ್ಯಾಟರ್‌ಗಳನ್ನು ಕಟ್ಟಿ ಹಾಕುವಲ್ಲಿ ಭಾರತೀಯ ಬೌಲರ್‌ ಎಡವಿದ್ದರು.

ಭಾರತ ತಂಡದ ಬೌಲಿಂಗ್‌ ಅನ್ನು ಟೀಕಿಸಿದ ಅಶ್ವಿನ್.

ನವದೆಹಲಿ: ವೆಸ್ಟ್ ಇಂಡೀಸ್ ವಿರುದ್ಧ ಎರಡನೇ ಟಿ20ಐ ಪಂದ್ಯದಲ್ಲಿ (IND vs WI) 249 ರನ್‌ಗಳ ಬೃಹತ್ ಮೊತ್ತವನ್ನು ಉಳಿಸಿಕೊಳ್ಳುವಲ್ಲಿ ಭಾರತ ವಿಫಲವಾದ ಬೆನ್ನಲ್ಲೇ, ತಂಡದ ಬೌಲಿಂಗ್ ವಿಭಾಗದ ಸಾಮರ್ಥ್ಯದ ಬಗ್ಗೆ ಮತ್ತೆ ಚರ್ಚೆ ಆರಂಭವಾಗಿದೆ. ಭಾರತದ ಮಾಜಿ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ (R Ashwin), ಗುಣಮಟ್ಟದ ಬೌಲರ್‌ಗಳನ್ನು ರೂಪಿಸಲು ತಂಡ ಹೆಚ್ಚಿನ ಒತ್ತು ನೀಡಬೇಕೆಂದು ಎಚ್ಚರಿಸಿದ್ದಾರೆ. ಹೆಚ್ಚಿನ ರನ್‌ಗಳು ದಾಖಲಾಗುವ ಪಿಚ್‌ಗಳಲ್ಲಿ ಪರಿಸ್ಥಿತಿಗೆ ತಕ್ಕಂತೆ ಬೌಲ್‌ ಮಾಡುವ ಸಾಮರ್ಥ್ಯವಿರುವ ಜಸ್‌ಪ್ರೀತ್ ಬುಮ್ರಾ ಅವರಂತಹ ಬೌಲರ್‌ಗಳನ್ನೇ ಹಚ್ಚು ಅವಲಂಬಿಸಿರಬಾರದು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಶುಕ್ರವಾರ ರಾಂಚಿಯಲ್ಲಿ ನಡೆದ ಎರಡನೇ ಟಿ20 ಪಂದ್ಯದಲ್ಲಿ ಭಾರತ ಆರು ವಿಕೆಟ್‌ಗಳಿಂದ ಸೋಲು ಕಂಡ ಬಳಿಕ, ತಮ್ಮ ಯೂಟ್ಯೂಬ್ ಚಾನೆಲ್ ‘ಆಶ್ ಕಿ ಬಾತ್‌’ನಲ್ಲಿ ಮಾತನಾಡಿದ ಅಶ್ವಿನ್, ಬೌಲಿಂಗ್ ಸಂಪನ್ಮೂಲಗಳ ಅಭಿವೃದ್ಧಿಗೆ ಭಾರತ ದೀರ್ಘಕಾಲೀನವಾಗಿ ನೀಡುತ್ತಿರುವ ಆದ್ಯತೆ ಹಾಗೂ ಪಂದ್ಯದ ವೇಳೆ ತೋರಿದ ಆಟದ ಅರಿವಿನ ಬಗ್ಗೆ ಪ್ರಶ್ನೆ ಎತ್ತಿದರು.

IND vs WI 3rd T20I: ಶಿವಂ ದುಬೇ ಔಟ್‌? ಭಾರತದ ಸಂಭಾವ್ಯ ಪ್ಲೇಯಿಂಗ್‌ XI ವಿವರ!

“ನಾನು ಬೌಲರ್‌ಗಳನ್ನು ದೂಷಿಸುತ್ತಿಲ್ಲ. ಆದರೆ ನಮ್ಮ ಬೌಲಿಂಗ್ ವಿಭಾಗದಲ್ಲಿ ಸಾಕಷ್ಟು ಗುಣಮಟ್ಟದ ಬೌಲರ್‌ಗಳಿಲ್ಲ. ಅವರನ್ನು ಬೆಳೆಸುವುದಕ್ಕೂ ನಾವು ಸಾಕಷ್ಟು ಆದ್ಯತೆ ನೀಡಿಲ್ಲ. ಹೀಗಾಗಿಯೇ ಉತ್ತಮ ಗುಣಮಟ್ಟದ ಬೌಲರ್‌ಗಳನ್ನು ರೂಪಿಸುವ ಸಾಧ್ಯತೆ ಕಡಿಮೆಯಾಗಿದೆ. ಇಂತಹ ಪರಿಸ್ಥಿತಿಗಳಲ್ಲಿ ಬೌಲಿಂಗ್ ಮಾಡಲು ಸರಿಯಾದ ತಿಳುವಳಿಕೆ ಮತ್ತು ಪಂದ್ಯದ ಅರಿವು ಅಗತ್ಯ. ಉತ್ತಮ ಬೌಲರ್‌ಗಳನ್ನು ಬೆಳೆಸಲು ನಾವು ಸ್ವಲ್ಪ ಸಮಯ ಮೀಸಲಿಡುತ್ತೇವೆ ಎಂದು ನಾನು ನಿಜವಾಗಿಯೂ ಆಶಿಸುತ್ತೇನೆ. ಇಂದಿನ ಪಂದ್ಯದಲ್ಲಿ ಆ ಅಂಶ ಸ್ವಲ್ಪ ಕೊರತೆಯಾಗಿದೆ ಎಂದು ನನಗೆ ಅನಿಸಿತು,” ಎಂದು ಅಶ್ವಿನ್ ಹೇಳಿದ್ದಾರೆ.

ಇದೇ ವೇಳೆ, ಜಸ್‌ಪ್ರೀತ್ ಬುಮ್ರಾ ಅವರಂತಹ ಬೌಲರ್ ತಂಡದಲ್ಲಿದ್ದರೆ ನಾಯಕರು ಹೇಗೆ ಹೆಚ್ಚಿನ ಆಯ್ಕೆಗಳನ್ನು ಹೊಂದಿರುತ್ತಾರೆ ಎಂಬುದನ್ನೂ ಅಶ್ವಿನ್ ವಿವರಿಸಿದರು.

IND vs WI: ಶೇಯ್‌ ಹೋಪ್‌ ಅಬ್ಬರದಿಂದ ಗೆದ್ದು ಭಾರತಕ್ಕೆ ತಿರುಗೇಟು ನೀಡಿದ ವೆಸ್ಟ್‌ ಇಂಡೀಸ್‌!

“ರೋಹಿತ್ ಶರ್ಮಾ ಮತ್ತು ಸೂರ್ಯಕುಮಾರ್ ಯಾದವ್ ಇಬ್ಬರೂ ಒಂದು ರೀತಿಯಲ್ಲಿ ಅದೃಷ್ಟವಂತರು. ಏಕೆಂದರೆ ನಾಯಕರಾಗಿದ್ದಾಗ ಅವರ ಬಳಿ ಜಸ್‌ಪ್ರೀತ್ ಬುಮ್ರಾ ಎಂಬ ವಿಶೇಷ ಅಸ್ತ್ರವಿತ್ತು. ಅಗತ್ಯವಿದ್ದಾಗ ಅವರು ರಕ್ಷಣಾತ್ಮಕವಾಗಿ ಬೌಲಿಂಗ್ ಮಾಡಬಲ್ಲರು. ನಿಧಾನಗತಿಯ ಎಸೆತಗಳಲ್ಲಿಯೂ ಅವರಿಗೆ ಉತ್ತಮ ವೈವಿಧ್ಯವಿದೆ. ಆದರೆ ಎಲ್ಲ ಬೌಲರ್‌ಗಳೂ ಅಷ್ಟೊಂದು ಪ್ರತಿಭಾವಂತರಾಗಿರುವುದಿಲ್ಲ. ಭಾರತದ ಬೌಲಿಂಗ್ ಭವಿಷ್ಯದ ಬಗ್ಗೆ ನನಗೆ ನಿಜವಾಗಿಯೂ ಕಳವಳವಿದೆ,” ಎಂದು ಅವರು ಹೇಳಿದರು.

ರಾಂಚಿಯಲ್ಲಿ ನಡೆದಿದ್ದ ಈ ಪಂದ್ಯವು ಕೇವಲ 38.3 ಓವರ್‌ಗಳಲ್ಲಿ ಒಟ್ಟು 501 ರನ್‌ಗಳು ದಾಖಲಾಗುವುದಕ್ಕೆ ಸಾಕ್ಷಿಯಾಯಿತು. ಮೊದಲು ಬ್ಯಾಟ್ ಮಾಡಿದ ಭಾರತ, ಸಂಜು ಸ್ಯಾಮ್ಸನ್ ಅವರ 41 ಎಸೆತಗಳಲ್ಲಿ 82 ರನ್‌ಗಳು ಹಾಗೂ ತಿಲಕ್ ವರ್ಮಾ ಅವರ 18 ಎಸೆತಗಳಲ್ಲಿ 44 ರನ್‌ಗಳ ನೆರವಿನಿಂದ ಐದು ವಿಕೆಟ್‌ಗಳಿಗೆ 249 ರನ್ ಗಳಿಸಿತು.

ಭಾರತದ ವಿರುದ್ಧ ಕ್ರಿಕೆಟ್‌ನ ಮೂರೂ ಮಾದರಿಗಳಲ್ಲಿ ಶತಕ ಬಾರಿಸಿದ ಶಾಯ್ ಹೋಪ್

ಆದರೆ, ಈ ಬೃಹತ್ ಮೊತ್ತವನ್ನು ರಕ್ಷಿಸಲು ಭಾರತಕ್ಕೆ ಸಾಧ್ಯವಾಗಲಿಲ್ಲ. ಶೇಯ್‌ ಹೋಪ್ ಕೇವಲ 45 ಎಸೆತಗಳಲ್ಲಿ ಅಜೇಯ 102 ರನ್ ಸಿಡಿಸಿದರೆ, ಶೆರ್ಫೇನ್ ಋದರ್‌ಫೋರ್ಡ್ 37 ಎಸೆತಗಳಲ್ಲಿ 84 ರನ್‌ಗಳ ಸ್ಫೋಟಕ ಇನಿಂಗ್ಸ್ ಆಡಿದರು. ನಾಲ್ಕನೇ ವಿಕೆಟ್‌ಗೆ ಇವರಿಬ್ಬರು ಸೇರಿ ಗಳಿಸಿದ 120 ರನ್‌ಗಳ ಜೊತೆಯಾಟ, ವೆಸ್ಟ್ ಇಂಡೀಸ್ ತಂಡದ ಗೆಲುವಿನಲ್ಲಿ ನಿರ್ಣಾಯಕ ಪಾತ್ರ ವಹಿಸಿತು.

ವೆಸ್ಟ್ ಇಂಡೀಸ್ 18.3 ಓವರ್‌ಗಳಲ್ಲಿ ನಾಲ್ಕು ವಿಕೆಟ್ ಕಳೆದುಕೊಂಡು 252 ರನ್ ಗಳಿಸಿ ಆರು ವಿಕೆಟ್‌ಗಳ ಗೆಲುವು ದಾಖಲಿಸಿತು. ಇದರೊಂದಿಗೆ ಐದು ಪಂದ್ಯಗಳ ಟಿ20ಐ ಸರಣಿಯಲ್ಲಿ ಉಭಯ ತಂಡಗಳು ತಲಾ ಒಂದು ಪಂದ್ಯ ಗೆದ್ದು 1-1ರ ಸಮಬಲ ಸಾಧಿಸಿದವು.