ಮೆಕ್ಸಿಕೊ, ಜು.6: ಪೋರ್ಚುಗಲ್‌ನ ದಿಗ್ಗಜ ಫುಟ್ಬಾಲ್ ಆಟಗಾರ ಕ್ರಿಸ್ಟಿಯಾನೊ ರೊನಾಲ್ಡೊ(Cristiano Ronaldo) ಅವರು 2026 ರ ಫಿಫಾ ವಿಶ್ವಕಪ್ ತಮ್ಮ ವೃತ್ತಿಜೀವನದ ಕೊನೆಯ ಪಂದ್ಯವಾಗಲಿದೆ ಎಂದು ದೃಢಪಡಿಸಿದ್ದಾರೆ. ಪಂದ್ಯಾವಳಿಯ ಪ್ರತಿ ಕ್ಷಣವನ್ನು ಸವಿಯಲು ಬಯಸುತ್ತೇನೆ ಮತ್ತು 16 ರ ಸುತ್ತಿನಲ್ಲಿ ಸ್ಪೇನ್ ವಿರುದ್ಧ ಪೋರ್ಚುಗಲ್‌ನ ಪ್ರಯಾಣ ಕೊನೆಗೊಳ್ಳಬಾರದು ಎಂದು ಆಶಿಸುತ್ತೇನೆ ಎಂದು ಹೇಳಿದರು.
ಸೋಮವಾರ ತಡರಾತ್ರಿ ಡಲ್ಲಾಸ್‌ನಲ್ಲಿ ನಡೆಯಲಿರುವ ನಾಕೌಟ್ ಪಂದ್ಯಕ್ಕೂ ಮುನ್ನ ಮಾತನಾಡಿದ ಪೋರ್ಚುಗಲ್ ನಾಯಕ ರೊನಾಲ್ಡೊ, ಫುಟ್‌ಬಾಲ್‌ನ ಅತಿದೊಡ್ಡ ವೇದಿಕೆಯಲ್ಲಿ ತಮ್ಮ ಕೊನೆಯ ಪ್ರದರ್ಶನವಾಗಲಿದೆ ಎಂದು ಬಹಿರಂಗಪಡಿಸುವ ಮೂಲಕ ವಿಶ್ವಕಪ್ ಭವಿಷ್ಯದ ಕುರಿತಾದ ಊಹಾಪೋಹಗಳಿಗೆ ಅಂತ್ಯ ಹಾಡಿದರು.
"ಇದು ನನ್ನ ಕೊನೆಯ ವಿಶ್ವಕಪ್ ಆಗಿರುತ್ತದೆ. ಆದರೆ ನಾಳೆಯೇ(ಸ್ಪೇನ್ ವಿರುದ್ಧ) ನನ್ನ ಕೊನೆಯ ಪಂದ್ಯವಲ್ಲ ಎಂದು ಭಾವಿಸುತ್ತೇನೆ" ಎಂದು ರೊನಾಲ್ಡೊ ಹೇಳಿದರು. 41 ವರ್ಷದ ಅವರು ಈಗ ತಮ್ಮ ಏಕೈಕ ಗಮನ ಟೂರ್ನಮೆಂಟ್‌ನಲ್ಲಿ ಪ್ರತಿದಿನ ಆನಂದಿಸುವುದು ಮತ್ತು ಪೋರ್ಚುಗಲ್ ಸ್ಪರ್ಧೆಯಲ್ಲಿ ಆಳವಾಗಿ ಮುನ್ನಡೆಯಲು ಸಹಾಯ ಮಾಡುವುದು ಎಂದು ಹೇಳಿದರು.
ಫಿಫಾ ವಿಶ್ವಕಪ್‌ನಿಂದ ಹೊರಬಿದ್ದ ಬ್ರೆಜಿಲ್; ನೇಮರ್ ಕಣ್ಣೀರಿನ ವಿದಾಯ
"ಇದು ಕೊನೆಯ ವಿಶ್ವಕಪ್ ಆಗಿರುವುದರಿಂದ ಸಾಧ್ಯವಾದಷ್ಟು ಆನಂದಿಸಲು ಬಯಸುತ್ತೇನೆ" ಎಂದು ಅವರು ಹೇಳಿದರು. ಸಕ್ತ ವಿಶ್ವಕಪ್‌ನಲ್ಲಿ ಈಗಾಗಲೇ 3 ಗೋಲುಗಳನ್ನು ಗಳಿಸಿರುವ ರೊನಾಲ್ಡೊ, ಪೋರ್ಚುಗಲ್ ತಂಡವು ಪ್ರಶಸ್ತಿ ಗೆಲ್ಲುವ ಭರವಸೆಯೊಂದಿಗೆ ಅಖಾಡಕ್ಕಿಳಿದಿದೆ ಎಂದು ಹೇಳಿದ್ದಾರೆ.
ಫಿಫಾ ವಿಶ್ವಕಪ್‌ನಲ್ಲಿ ಅತಿ ಹೆಚ್ಚು ಪಂದ್ಯಗಳನ್ನು ಆಡಿದ ಆಟಗಾರರ ಸಾಲಿನಲ್ಲಿ ಅರ್ಜೆಂಟೀನಾದ ಲಯೊನೆಲ್ ಮೆಸ್ಸಿ ನಂತರದ ಸ್ಥಾನದಲ್ಲಿ ಕ್ರಿಸ್ಟಿಯಾನೊ ರೊನಾಲ್ಡೊ ಕಾಣಿಸಿಕೊಂಡಿದ್ದಾರೆ. ಈವರೆಗೆ ಮೆಸ್ಸಿ 30 ಹಾಗೂ ರೊನಾಲ್ಡೊ 26 ವಿಶ್ವಕಪ್ ಪಂದ್ಯಗಳನ್ನು ಆಡಿದ್ದಾರೆ. ಈ ಪೈಕಿ ಅತಿ ಹೆಚ್ಚು ಗೋಲು ಸರದಾರರ ಪಟ್ಟಿಯಲ್ಲಿ 20 ಗೋಲುಗಳೊಂದಿಗೆ ಮೆಸ್ಸಿ ಅಗ್ರಸ್ಥಾನದಲ್ಲಿದ್ದಾರೆ. ರೊನಾಲ್ಡೊ ಈವರೆಗೆ 11 ಗೋಲುಗಳನ್ನು ಗಳಿಸಿದ್ದಾರೆ.
ನೇಮರ್ ನಿವೃತ್ತಿ
16ನೇ ಸುತ್ತಿನ ಪಂದ್ಯದಲ್ಲಿ ಬ್ರೆಜಿಲ್ ತಂಡ ನಾರ್ವೆ ವಿರುದ್ಧ ಆಘಾತಕಾರಿ ಸೋಲು ಅನುಭವಿಸಿತು. ಸೋಲಿನ ಬೆನ್ನಲ್ಲೇ ಬ್ರೆಜಿಲ್‌ನ ಸ್ಟಾರ್ ಆಟಗಾರ ನೇಮರ್ ಅಂತರರಾಷ್ಟ್ರೀಯ ಫುಟ್‌ಬಾಲ್‌ನಿಂದ ನಿವೃತ್ತಿ ಘೋಷಿಸಿದರು. 68ನೇ ನಿಮಿಷದಲ್ಲಿ ಮೈದಾನಕ್ಕಿಳಿದ ನೇಮಾರ್, ಹೆಚ್ಚುವರಿ( 90+10ನೇ ನಿಮಿಷ) ಸಮಯದಲ್ಲಿ ಗೋಲೊಂದನ್ನು ಬಾರಿಸಿದರು. ನೇಮರ್ ಅವರ ವಿದಾಯದೊಂದಿಗೆ ಬ್ರೆಜಿಲ್ ಫುಟ್‌ಬಾಲ್‌ನ ಸುವರ್ಣ ಯುಗವೊಂದು ಅಂತ್ಯಗೊಂಡಂತಾಗಿದೆ. ಸೋಲಿನ ಆಘಾತದಲ್ಲಿ ಅವರು ಮೈದಾನದಲ್ಲಿ ಬಿಕ್ಕಿ ಬಿಕ್ಕಿ ಕಣ್ಣೀರಿಟ್ಟ ದೃಶ್ಯವು ಅಭಿಮಾನಿಗಳನ್ನು ಭಾವುಕರನ್ನಾಗಿ ಮಾಡಿತು.