ತಿರುವನಂತಪುರಂ, ಸೆ.25: ವೆಸ್ಟ್ ಇಂಡೀಸ್ ತಂಡವು ಕಳೆದ 24 ವರ್ಷಗಳಿಂದ ಭಾರತದಲ್ಲಿ ಯಾವುದೇ ದ್ವಿಪಕ್ಷೀಯ ಏಕದಿನ ಸರಣಿಯನ್ನು ಗೆದ್ದಿಲ್ಲ. ಸೆಪ್ಟೆಂಬರ್ 27 ರಂದು ತಿರುವನಂತಪುರದಲ್ಲಿ ಆರಂಭವಾಗಲಿರುವ ಮೂರು ಪಂದ್ಯಗಳ ಸರಣಿಯಲ್ಲಿ ಈ ಬರಗಾಲವನ್ನು ಕೊನೆಗಾಣಿಸಲು ಕೋಚ್ ಡೇರೆನ್ ಸ್ಯಾಮಿ ದೃಢಸಂಕಲ್ಪ ಮಾಡಿದ್ದಾರೆ. ಫೆಬ್ರವರಿಯಲ್ಲಿ ನಡೆಯಲಿರುವ ಏಕದಿನ ವಿಶ್ವಕಪ್ ಅರ್ಹತಾ ಪಂದ್ಯಗಳಿಗೆ ಸಿದ್ಧತೆ ನಡೆಸುತ್ತಿರುವ ಕೆರಿಬಿಯನ್ ತಂಡಕ್ಕೆ ನಿರ್ಣಾಯಕ ಹಂತವಾಗಿದೆ.
ಡೇರೆನ್ ಸ್ಯಾಮಿ ಅವರು ಭಾರತದ ವಿರುದ್ಧದ ಸರಣಿಯನ್ನು, ಅರ್ಹತಾ ಸುತ್ತಿನ ಪಂದ್ಯಗಳಿಗೆ ಮುನ್ನ ಎದುರಾಗಿರುವ ತಕ್ಷಣದ ಸವಾಲು ಹಾಗೂ ತಂಡದ ಸಾಮರ್ಥ್ಯವನ್ನು ಕಾರ್ಯತಂತ್ರದ ದೃಷ್ಟಿಯಿಂದ ಅಳೆಯುವ ಅವಕಾಶ ಎಂದು ಬಣ್ಣಿಸಿದ್ದಾರೆ. ಸಹ-ಆತಿಥೇಯ ದಕ್ಷಿಣ ಆಫ್ರಿಕಾವನ್ನು ಹೊರತುಪಡಿಸಿ ಅಗ್ರ ಎಂಟು ತಂಡಗಳು ಮಾತ್ರ ನೇರ ಅರ್ಹತೆ ಪಡೆಯುವ ನಿಯಮವಿದ್ದಾಗ, ವೆಸ್ಟ್ ಇಂಡೀಸ್ 10ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದ್ದರಿಂದ 2027ರ ಏಕದಿನ ವಿಶ್ವಕಪ್‌ಗೆ ನೇರ ಅರ್ಹತೆ ಪಡೆಯುವ ಅವಕಾಶವನ್ನು ಕಳೆದುಕೊಂಡಿತು.
ಭಾರತದ ವಿರುದ್ಧದ ಸರಣಿಯಲ್ಲಿ ಸಂಪೂರ್ಣ ಜಯ (ಕ್ಲೀನ್ ಸ್ವೀಪ್) ಸಾಧಿಸಿದರೂ ಅರ್ಹತೆಗೆ ಅಗತ್ಯವಿರುವ ಅಂಕಗಳ ಕೊರತೆಯನ್ನು ನೀಗಿಸಲು ಸಾಧ್ಯವಾಗುವುದಿಲ್ಲ. ಹೀಗಾಗಿ, ವೆಸ್ಟ್ ಇಂಡೀಸ್ ಸತತ ಮೂರನೇ ಬಾರಿಗೆ ಅರ್ಹತಾ ಸುತ್ತಿನ ಪಂದ್ಯಗಳನ್ನು ಆಡಬೇಕಾದ ಅನಿವಾರ್ಯತೆ ಎದುರಾಗಿದೆ.
ಏಷ್ಯನ್ ಗೇಮ್ಸ್ ಕಬಡ್ಡಿ: ಫೈನಲ್ ಪ್ರವೇಶಿಸಿದ ಭಾರತ ಮಹಿಳಾ, ಪುರುಷರ ತಂಡ
ಸರಣಿಗೂ ಮುನ್ನ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಡೇರೆನ್ ಸ್ಯಾಮಿ, "ಭಾರತದಲ್ಲಿ ಸರಣಿಯನ್ನು ಗೆದ್ದು 24 ವರ್ಷಗಳೇ ಕಳೆದಿವೆ. ಹೀಗಾಗಿ, ಇಲ್ಲಿಗೆ ಬಂದು ನಮಗೆ ನಾವೇ ಸವಾಲು ಹಾಕಿಕೊಳ್ಳಲು ಹಾಗೂ ಏಕದಿನ ಕ್ರಿಕೆಟ್‌ನಲ್ಲಿ ನಮ್ಮ ಸಾಮರ್ಥ್ಯ ಎಷ್ಟಿದೆ ಎಂಬುದನ್ನು ಅರಿತುಕೊಳ್ಳಲು ತಂಡವಾಗಿ ನಮಗೆ ಇದೊಂದು ಉತ್ತಮ ಅವಕಾಶವಾಗಿದೆ. ನಮ್ಮಲ್ಲಿರುವ ಆಟಗಾರರಿಗೆ ಭಾರತದ ವಿರುದ್ಧ ಉತ್ತಮ ಪ್ರದರ್ಶನ ನೀಡಲು ಮತ್ತು ಕಳೆದ 24 ವರ್ಷಗಳಿಂದ ಸಾಧ್ಯವಾಗದ ಸರಣಿ ಗೆಲುವನ್ನು ಸಾಧಿಸಲು ಇದೊಂದು ಅತ್ಯುತ್ತಮ ಅವಕಾಶ ಎಂದು ನಾನು ಭಾವಿಸುತ್ತೇನೆ," ಎಂದು ಸ್ಯಾಮಿ ಹೇಳಿದ್ದಾಗಿ 'ಕ್ರಿಕ್‌ಇನ್ಫೋ' ವರದಿ ಮಾಡಿದೆ.
ವೆಸ್ಟ್ ಇಂಡೀಸ್ ಏಕದಿನ ತಂಡ
ಶೈ ಹೋಪ್ (ನಾಯಕ), ಜ್ಯುವೆಲ್ ಆಂಡ್ರ್ಯೂ, ಜಾನ್ ಕ್ಯಾಂಪ್‌ಬೆಲ್, ಕೀಸಿ ಕಾರ್ಟಿ, ರೋಸ್ಟನ್ ಚೇಸ್, ಮ್ಯಾಥ್ಯೂ ಫೋರ್ಡ್, ಜಸ್ಟಿನ್ ಗ್ರೀವ್ಸ್, ಅಮೀರ್ ಜಾಂಗೂ, ಅಲ್ಜಾರಿ ಜೋಸೆಫ್, ಶಮರ್ ಜೋಸೆಫ್, ವಿಟೆಲ್ ಲಾವ್ಸ್, ಗುಡಾಕೇಶ್ ಮೋಟಿ, ಕೀಮೋ ಪಾಲ್, ಶೆರ್ಫೇನ್ ರುದರ್‌ಫೋರ್ಡ್, ಜೇಡನ್ ಸೀಲ್ಸ್.
ವೆಸ್ಟ್ ಇಂಡೀಸ್ ಟಿ20ಐ ತಂಡ
ಶಾಯ್ ಹೋಪ್ (ನಾಯಕ), ಜ್ಯುವೆಲ್ ಆಂಡ್ರ್ಯೂ, ರೋಸ್ಟನ್ ಚೇಸ್, ಮ್ಯಾಥ್ಯೂ ಫೋರ್ಡ್, ಶಿಮ್ರಾನ್ ಹೆಟ್ಮೆಯರ್, ಅಕೇಲ್ ಹೊಸೈನ್, ಶಮರ್ ಜೋಸೆಫ್, ಗುಡಾಕೇಶ್ ಮೋಟಿ, ಕೀಮೋ ಪಾಲ್, ಕಾಮಿಲ್ ಪೂರನ್, ರೋವ್ಮನ್ ಪೊವೆಲ್, ಶೆರ್ಫೇನ್ ರುದರ್ಫೋರ್ಡ್, ಕ್ವೆಂಟಿನ್ ಸ್ಯಾಂಪ್ಸನ್, ರೊಮಾರಿಯೋ ಶೆಫರ್ಡ್, ಶಮರ್ ಸ್ಪ್ರಿಂಗರ್.