ನವದೆಹಲಿ, ಮೇ 9: ಶುಕ್ರವಾರ ರಾತ್ರಿ ನಡೆದಿದ್ದ ಇಂಡಿಯನ್ ಪ್ರೀಮಿಯರ್ ಲೀಗ್(IPL 2026) ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್(Delhi Capitals) ತಂಡ ಕೋಲ್ಕತಾ ನೈಟ್ ರೈಡರ್ಸ್(Kolkata Knight Riders) ವಿರುದ್ಧ 8 ವಿಕೆಟ್ ಅಂತರದ ಸೋಲು ಕಂಡಿತ್ತು. ಈ ಸೋಲಿನೊಂದಿಗೆ ಡೆಲ್ಲಿ ಕ್ಯಾಪಿಟಲ್ಸ್ 150 ಐಪಿಎಲ್ ಪಂದ್ಯಗಳಲ್ಲಿ ಸೋತ ಮೊದಲ ತಂಡ ಎಂಬ ಅನಗತ್ಯ ದಾಖಲೆಯನ್ನು ತನ್ನ ಹೆಸರಿಗೆ ಸೇರಿಸಿಕೊಂಡಿದೆ.
ತವರಿನ ಅಭಿಮಾನಿಗಳ ಸಮ್ಮುಖದಲ್ಲಿ ಕೆಕೆಆರ್ ವಿರುದ್ಧದ ಸೋಲು ಡಿಸಿ ತಂಡಕ್ಕೆ ಐಪಿಎಲ್ 2026 ರಲ್ಲಿ 7 ನೇ ಸೋಲು ಮತ್ತು ಒಟ್ಟಾರೆಯಾಗಿ ಐಪಿಎಲ್‌ನಲ್ಲಿ 150 ನೇ ಸೋಲಾಗಿದೆ. ಐಪಿಎಲ್‌ನಲ್ಲಿ ಅತಿ ಹೆಚ್ಚು ಸೋಲುಗಳನ್ನು ಹೊಂದಿರುವ ತಂಡಗಳ ಪಟ್ಟಿಯಲ್ಲಿ ಅವರು ಅಗ್ರಸ್ಥಾನದಲ್ಲಿದ್ದಾರೆ.
ಡೆಲ್ಲಿ ಕ್ಯಾಪಿಟಲ್ಸ್ ತಂಡವು ಐಪಿಎಲ್‌ನಲ್ಲಿ 147 ಸಂಪೂರ್ಣ ಸೋಲುಗಳನ್ನು ಮತ್ತು ಸೂಪರ್ ಓವರ್‌ನಲ್ಲಿ ಮೂರು ಸೋಲುಗಳನ್ನು ಅನುಭವಿಸಿದೆ. ಪಂಜಾಬ್ ಕಿಂಗ್ಸ್(144) ಮತ್ತು ಆರ್‌ಸಿಬಿ(139) ಕ್ರಮವಾಗಿ ಎರಡು ಮತ್ತು ಮೂರನೇ ಸ್ಥಾನದಲ್ಲಿದೆ.
IPL 2026: 6 ಸೋಲಿನ ಬಳಿಕ ಸತತ 4 ಪಂದ್ಯ ಗೆದ್ದ ಕೆಕೆಆರ್ ತಂಡದ ಪ್ಲೇ-ಆಫ್ ಲೆಕ್ಕಾಚಾರ
ಒಟ್ಟಾರೆ ಅತಿ ಹೆಚ್ಚು ಟಿ20 ಪಂದ್ಯಗಳನ್ನು ಸೋತ ದಾಖಲೆ ಇಂಗ್ಲಿಷ್ ತಂಡ ಮಿಡ್ಲ್‌ಸೆಕ್ಸ್ ಹೆಸರಲ್ಲಿದೆ. ಲಂಡನ್ ಮೂಲದ ತಂಡವು ಇಲ್ಲಿಯವರೆಗೆ ಆಡಿರುವ 272 ಟಿ20 ಪಂದ್ಯಗಳಲ್ಲಿ 171 ಸಂಪೂರ್ಣ ಸೋಲುಗಳನ್ನು ಅನುಭವಿಸಿದೆ. ಡೆಲ್ಲಿ ಕ್ಯಾಪಿಟಲ್ಸ್ 285 ಪಂದ್ಯಗಳಲ್ಲಿ 150 ಸಂಪೂರ್ಣ ಸೋಲುಗಳೊಂದಿಗೆ ಈಗ ಮೂರನೇ ಸ್ಥಾನದಲ್ಲಿದೆ.
ಐಪಿಎಲ್‌ನಲ್ಲಿ ಅತ್ಯಧಿಕ ಸೋಲು ಕಂಡ ತಂಡಗಳು
ಡೆಲ್ಲಿ ಕ್ಯಾಪಿಟಲ್ಸ್-150
ಪಂಜಾಬ್ ಕಿಂಗ್ಸ್-144
ಆರ್‌ಸಿಬಿ-139
ಕೋಲ್ಕತಾ-133
ಮುಂಬೈ ಇಂಡಿಯನ್ಸ್-130
ಪಂದ್ಯದ ಬಗ್ಗೆ ಹೇಳುವುದಾದರೆ, ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ನೈಟ್ ರೈಡರ್ಸ್ ತಂಡ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಎಂಟು ವಿಕೆಟ್‌ಗಳಿಂದ ಸೋಲಿಸಿತು. 143 ರನ್‌ಗಳ ಗುರಿಯನ್ನು ಬೆನ್ನಟ್ಟಿದ ಮೂರು ಬಾರಿಯ ಚಾಂಪಿಯನ್ ತಂಡವು ಕೇವಲ 14.2 ಓವರ್‌ಗಳಲ್ಲಿ ಗುರಿಯನ್ನು ತಲುಪಿತು.
ಸೀಸನ್ ಮುಗಿದಿದೆ: ಡೆಲ್ಲಿ ಕ್ಯಾಪಿಟಲ್ಸ್ ಮುಂದಿನ ವರ್ಷಕ್ಕೆ ಯೋಜನೆ ಆರಂಭಿಸಲಿದೆ ಎಂದ ಅಕ್ಷರ್ ಪಟೇಲ್
ಅಲೆನ್ ಹಾಗೂ ಕ್ಯಾಮರೂನ್ ಗ್ರೀನ್ ಮೂರನೇ ವಿಕೆಟ್‌ಗೆ ಮುರಿಯದ ಜೊತೆಯಾಟದಲ್ಲಿ 116 ರನ್ ಸೇರಿಸಿ ಇನ್ನೂ 34 ಎಸೆತಗಳು ಬಾಕಿ ಇರುವಾಗಲೇ ತಂಡಕ್ಕೆ ಗೆಲುವು ತಂದುಕೊಟ್ಟರು. ಫಿನ್ ಅಲೆನ್ ಭರ್ತಿ 100 ರನ್ ಬಾರಿಸಿದರೆ, ಗ್ರೀನ್ 33 ರನ್ ಗಳಿಸಿದರು.
ಕೋಲ್ಕತಾ ತಂಡ 10 ಪಂದ್ಯಗಳನ್ನು ಆಡಿ 4 ಗೆಲುವು ಸಾಧಿಸಿ 9 ಅಂಕ ಕಲೆಹಾಕಿದೆ. ಉಳಿದ ನಾಲ್ಕು ಪಂದ್ಯಗಳನ್ನು ಗೆಲ್ಲುವಲ್ಲಿ ಯಶಸ್ವಿಯಾದರೆ, ಒಟ್ಟಾರೆ 17 ಅಂಕದೊಂದಿಗೆ ಪ್ಲೇ-ಆಫ್ ಪ್ರವೇಶ ಪಡೆಯಲಿದೆ.