ಧೋನಿಯ 100 ಕೋಟಿ ರೂ. ಮಾನನಷ್ಟ ಮೊಕದ್ದಮೆ ಪ್ರಕರಣ: ವಿಚಾರಣೆ ಆರಂಭಿಸಲು ಹೈಕೋರ್ಟ್ ಆದೇಶ
ಈ ವರ್ಷದ ಅಕ್ಟೋಬರ್ 20 ಮತ್ತು ಡಿಸೆಂಬರ್ 10ರ ನಡುವೆ ವಿಚಾರಣೆ ಮತ್ತು ಪಾಟಿ ಸವಾಲಿಗೆ ತಾನು ಲಭ್ಯನಿದ್ದೇನೆ ಎಂಬುದಾಗಿ ಧೋನಿ ಅಫಿದಾವಿತ್ ಮೂಲಕ ನ್ಯಾಯಾಲಯಕ್ಕೆ ತಿಳಿಸಿದ್ದಾರೆ. ಚೆನ್ನೈಯಲ್ಲಿ ಪರಸ್ಪರ ಸಮ್ಮತವಾಗಿರುವ ಸ್ಥಳವೊಂದರಲ್ಲಿ ಧೋನಿಯ ಸಾಕ್ಷ್ಯವನ್ನು ದಾಖಲಿಸಲು ನ್ಯಾ. ಸಿ.ವಿ. ಕಾರ್ತಿಕೇಯನ್ ಅಡ್ವೊಕೇಟ್ ಕಮಿಶನರ್ ಒಬ್ಬರನ್ನು ನೇಮಿಸಿದ್ದಾರೆ.


ಚೆನ್ನೈ: 2013ರ ಐಪಿಎಲ್ ಬೆಟ್ಟಿಂಗ್ ಹಗರಣದಲ್ಲಿ(IPL betting scam) ತಮ್ಮ ಹೆಸರನ್ನು ಎಳೆದು ತಂದಿದ್ದಕ್ಕಾಗಿ ಜೀ ಮೀಡಿಯಾ ಕಾರ್ಪೊರೇಷನ್, ಪತ್ರಕರ್ತ ಸುಧೀರ್ ಚೌಧರಿ, ನಿವೃತ್ತ ಐಪಿಎಸ್ ಅಧಿಕಾರಿ ಜಿ. ಸಂಪತ್ ಕುಮಾರ್(G. Sampath Kumar) ಮತ್ತು ನ್ಯೂಸ್ ನೇಷನ್ ನೆಟ್‌ವರ್ಕ್‌ನಿಂದ ₹100 ಕೋಟಿ ಪರಿಹಾರ ಕೋರಿ ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ(MS Dhoni) ಸಲ್ಲಿಸಿದ್ದ 10 ವರ್ಷಗಳ ಹಿಂದಿನ ಮಾನನಷ್ಟ ಮೊಕದ್ದಮೆಯ ವಿಚಾರಣೆಯನ್ನು ಪ್ರಾರಂಭಿಸಲು ಮದ್ರಾಸ್ ಹೈಕೋರ್ಟ್ ಆದೇಶಿಸಿದೆ.
ಈ ವರ್ಷದ ಅಕ್ಟೋಬರ್ 20 ಮತ್ತು ಡಿಸೆಂಬರ್ 10ರ ನಡುವೆ ವಿಚಾರಣೆ ಮತ್ತು ಪಾಟಿ ಸವಾಲಿಗೆ ತಾನು ಲಭ್ಯನಿದ್ದೇನೆ ಎಂಬುದಾಗಿ ಧೋನಿ ಅಫಿದಾವಿತ್ ಮೂಲಕ ನ್ಯಾಯಾಲಯಕ್ಕೆ ತಿಳಿಸಿದ್ದಾರೆ.ಚೆನ್ನೈಯಲ್ಲಿ ಪರಸ್ಪರ ಸಮ್ಮತವಾಗಿರುವ ಸ್ಥಳವೊಂದರಲ್ಲಿ ಧೋನಿಯ ಸಾಕ್ಷ್ಯವನ್ನು ದಾಖಲಿಸಲು ನ್ಯಾ. ಸಿ.ವಿ. ಕಾರ್ತಿಕೇಯನ್ ಅಡ್ವೊಕೇಟ್ ಕಮಿಶನರ್ ಒಬ್ಬರನ್ನು ನೇಮಿಸಿದ್ದಾರೆ.
ನ್ಯಾಯಾಲಯದ ಆವರಣದಲ್ಲಿ ಸಂಭವಿಸಬಹುದಾದ ಅಡಚಣೆಯನ್ನು ನಿವಾರಿಸುವ ನಿಟ್ಟಿನಲ್ಲಿ ಈ ಕ್ರಮ ತೆಗೆದುಕೊಳ್ಳಲಾಗಿದೆ. ಹಿರಿಯ ವಕೀಲ ಪಿಆರ್ ರಾಮನ್ ಸಲ್ಲಿಸಿದ ಅಫಿಡವಿಟ್‌ನಲ್ಲಿ, ಧೋನಿ ವಿಚಾರಣೆಯನ್ನು ತ್ವರಿತಗೊಳಿಸಲು ಇಚ್ಛಿಸಿದ್ದಾರೆ. 'ಒಂದು ದಶಕಕ್ಕೂ ಹೆಚ್ಚು ಕಾಲ ಹೈಕೋರ್ಟ್‌ನಲ್ಲಿ ಬಾಕಿ ಇರುವ ಮೊಕದ್ದಮೆಯ ವಿಲೇವಾರಿಯಲ್ಲಿ ಅನಗತ್ಯ ವಿಳಂಬ ತಪ್ಪಿಸುವ ಮತ್ತು ಮೊಕದ್ದಮೆಯ ನ್ಯಾಯಯುತ ಮತ್ತು ತ್ವರಿತ ತೀರ್ಪನ್ನು ಬೆಂಬಲಿಸುವ ಉದ್ದೇಶದಿಂದ ವಿನಂತಿ ಮಾಡಲಾಗಿದೆ. ನಾನು ಅಡ್ವೊಕೇಟ್ ಆಯುಕ್ತರಿಗೆ ನಾನು ಸಂಪೂರ್ಣ ಸಹಕಾರ ನೀಡುತ್ತೇನೆ ಮತ್ತು ವಿಚಾರಣೆ ಮತ್ತು ಸಾಕ್ಷ್ಯಗಳ ದಾಖಲಾತಿಗೆ ಸಂಬಂಧಿಸಿದಂತೆ ಈ ಗೌರವಾನ್ವಿತ ನ್ಯಾಯಾಲಯ ಹೊರಡಿಸಿದ ಎಲ್ಲ ನಿರ್ದೇಶನಗಳನ್ನು ಪಾಲಿಸುತ್ತೇನೆ' ಎಂದು ಅಫಿಡವಿಟ್‌ನಲ್ಲಿ ಹೇಳಲಾಗಿದೆ.
ಧೋನಿ ದಾಖಲಿಸಿದ್ದ ಕ್ರಿಮಿನಲ್ ನ್ಯಾಯಾಂಗ ನಿಂದನೆ ಪ್ರಕರಣದಲ್ಲಿ 2023ರಲ್ಲಿ ಐಪಿಎಸ್ ಅಧಿಕಾರಿ ಜಿ.ಸಂಪತ್‌ಕುಮಾರ್ ಅವರಿಗೆ ಮದ್ರಾಸ್ ಹೈಕೋರ್ಟ್ 15 ದಿನಗಳ ಜೈಲು ಶಿಕ್ಷೆ ವಿಧಿಸಿತ್ತು. ನಂತರ 2024 ರಲ್ಲಿ ಸುಪ್ರೀಂ ಕೋರ್ಟ್ ಶಿಕ್ಷೆಗೆ ತಡೆ ನೀಡಿತು.
2013ರ ಐಪಿಎಲ್ ಬೆಟ್ಟಿಂಗ್ ಹಗರಣಕ್ಕೆ ತಮಗೆ ನಂಟಿದೆ ಎಂಬುದಾಗಿ ಸಂಪತ್‌ಕುಮಾರ್ ಹೇಳಿಕೆ ನೀಡಿದ್ದರು. ಇದಕ್ಕಾಗಿ ಅವರ ವಿರುದ್ಧ ಧೋನಿ ಅವರು ಮಾನನಷ್ಟ ಮೊಕದ್ದಮೆ ದಾಖಲಿಸಿದ್ದರು. ಈ ವಿಚಾರವಾಗಿ ಪ್ರತಿಕ್ರಿಯಿಸುವ ವೇಳೆ, ಸಂಪತ್‌ಕುಮಾರ್ ಅವರು ಸುಪ್ರೀಂ ಕೋರ್ಟ್ ಹಾಗೂ ಹೈಕೋರ್ಟ್ ವಿರುದ್ಧ ಅವಹೇಳನಕಾರಿ ಆರೋಪಗಳನ್ನು ಮಾಡಿದ್ದರು ಎಂದು ದೂರಿದ್ದ ಧೋನಿ, ಅವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.
ಇದನ್ನೂ ಓದಿ MS Dhoni: ʼಡಿಸೆಂಬರ್‌ನಲ್ಲಿ ಅಂತಿಮ ನಿರ್ಧಾರʼ; ಧೋನಿ ಐಪಿಎಲ್ ನಿವೃತ್ತಿ ಖಚಿತ