ಚೆನ್ನೈ, ಸೆ.10: 13 ವರ್ಷಗಳ ಬಳಿಕ ಪೂರ್ವ ವಲಯ ತಂಡ ಪ್ರತಿಷ್ಠಿತ ದುಲೀಪ್ ಟ್ರೋಫಿ ಚಾಂಪಿಯನ್ ಪಟ್ಟ ಅಲಂಕರಿಸಿದೆ. ಎಂ.ಎ. ಚಿದಂಬರಂ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಮೊದಲ ಇನ್ನಿಂಗ್ಸ್ ಮುನ್ನಡೆಯ ಆಧಾರದ ಮೇಲೆ ದಕ್ಷಿಣ ವಲಯವನ್ನು ಸೋಲಿಸಿತು. ದಕ್ಷಿಣ ವಲಯಕ್ಕೆ ಇದು ಸತತ ಎರಡನೇ ಫೈನಲ್ ಸೋಲು. ಕಳೆದ ಋತುವಿನಲ್ಲಿ ಕೇಂದ್ರ ವಲಯದ ವಿರುದ್ಧ ಸೋಲು ಕಂಡಿತ್ತು.
ಪೂರ್ವ ವಲಯದ ನಾಯಕ ಇಶಾನ್ ಕಿಶನ್ ಫೈನಲ್‌ನ ತಾರೆಯಾಗಿದ್ದು, ಮೊದಲ ಇನ್ನಿಂಗ್ಸ್‌ನಲ್ಲಿ 270 ರನ್, ದ್ವಿತೀಯ ಇನಿಂಗ್ಸ್‌ನಲ್ಲಿ 80 ರನ್ ಸೇರಿದಂತೆ ಎರಡೂ ಇನ್ನಿಂಗ್ಸ್‌ಗಳಲ್ಲಿ ಒಟ್ಟು 350 ರನ್‌ಗಳನ್ನು ಗಳಿಸಿದರು. ಕುಮಾರ್ ಕುಶಾಗ್ರ ಕೂಡ ಮೊದಲ ಇನ್ನಿಂಗ್ಸ್‌ನಲ್ಲಿ ಶತಕ ಗಳಿಸುವ ಮೂಲಕ ಬ್ಯಾಟಿಂಗ್‌ನಲ್ಲಿ ಮಿಂಚಿದರು. ಹದಿನೈದು ವರ್ಷ ವಯಸ್ಸಿನ ವೈಭವ್ ಸೂರ್ಯವಂಶಿ ಚೊಚ್ಚಲ ಟ್ರೋಫಿ ಗೆದ್ದರು.
ಜಸ್‌ಪ್ರೀತ್ ಬುಮ್ರಾ ಫಿಟ್; ಆಫ್ಘಾನ್ ಸೇರಿ ಏಷ್ಯನ್ ಗೇಮ್ಸ್‌ನಿಂದ ಹೊರಬಿದ್ದ ಹರ್ಷಿತ್ ರಾಣ
ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಪೂರ್ವ ವಲಯವು ಮೊದಲ ಇನ್ನಿಂಗ್ಸ್‌ನಲ್ಲಿ 708 ರನ್‌ಗಳಿಗೆ ಆಲೌಟ್ ಆಯಿತು. ಗುರಿ ಹಿಂಬಾಲಿಸಿದ ದಕ್ಷಿಣ ವಲಯವು ಮೊಹಮ್ಮದ್ ಶಮಿ ಮತ್ತು ಮುಖೇಶ್ ಕುಮಾರ್ ಬೌಲಿಂಗ್ ದಾಳಿಗೆ ತತ್ತರಿಸಿ 336 ರನ್‌ಗಳಿಗೆ ಆಲೌಟ್ ಮಾಡಿದರು.
372 ರನ್‌ಗಳ ಭರ್ಜರಿ ಮುನ್ನಡೆ ಸಾಧಿಸಿದರೂ ಪೂರ್ವ ವಲಯ ಫಾಲೋ-ಆನ್ ಹೇರದೆ 2ನೇ ಇನ್ನಿಂಗ್ಸ್ ಬ್ಯಾಟಿಂಗ್ ಆರಂಭಿಸಿ 7 ವಿಕೆಟ್‌ಗೆ 388ರನ್ ಬಾರಿಸಿತು. ಅಂತಿಮ ದಿನವಾದ ಗುರುವಾರ ದಿನದಾಟಕ್ಕೆ ಮೊದಲೇ ಉಭಯ ತಂಡದ ನಾಯಕರು ಪಂದ್ಯವನ್ನು ಡ್ರಾ ಮಾಡಿಕೊಂಡರು. ಮೊದಲ ಇನಿಂಗ್ಸ್ ಮುನ್ನಡೆ ಆಧಾರದಲ್ಲಿ ಪೂರ್ವ ವಲಯ ಚಾಂಪಿಯನ್ ಪಟ್ಟ ಅಲಂಕರಿಸಿತು.
ದ್ವಿತೀಯ ಇನಿಂಗ್ಸ್‌ನಲ್ಲಿ ಮೊಹಮ್ಮದ್ ಕೌನೇನ್ ಖುರೇಷಿ ಅಮೋಘ ಶತಕ ಬಾರಿಸಿ ಸಂಭ್ರಮಿಸಿದರು. 7ನೇ ಕ್ರಮಾಂಕದಲ್ಲಿ ಆಡಲಿಳಿದ ಅವರು ಯಾರೂ ನಿರೀಕ್ಷೆಯೇ ಮಾಡದಂತೆ ಅಜೇಯ ಶತಕ ಬಾರಿಸಿ ಮಿಂಚಿದರು. ಸೊಗಸಾದ ಬ್ಯಾಟಿಂಗ್ ನಡೆಸಿದ ಅವರು 190 ಎಸೆತಗಳಿಂದ 4 ಸಿಕ್ಸರ್ ಮತ್ತು 13 ಬೌಂಡರಿ ನೆರವಿನಿಂದ ಅಜೇಯ 116 ರನ್ ಬಾರಿಸಿದರು. ಇವರಿಗೆ ಮತ್ತೊಂದು ತುದಿಯಲ್ಲಿ ಉತ್ತಮ ಸಾಥ್ ನೀಡಿದ ಅನುಕೂಲ್ ರಾಯ್ ಅರ್ಧಶತಕ ಸಿಡಿಸಿದರು. ಅವರು 64 ರನ್ ಗಳಿಸಿದರು.
ಸಂಕ್ಷಿಪ್ತ ಸ್ಕೋರು
ಮೊದಲ ಇನಿಂಗ್ಸ್: ಪೂರ್ವ ವಲಯ- 163 ಓವರ್‌ಗಳಲ್ಲಿ 708. ದಕ್ಷಿಣ ವಲಯ- 107.3 ಓವರ್‌ಗಳಲ್ಲಿ 336.
ಎರಡನೇ ಇನಿಂಗ್ಸ್: ಪೂರ್ವ ವಲಯ- 7ಕ್ಕೆ 388 ಡ್ರಾ (ಶಿಖರ್ ಮೋಹನ್ 52, ಇಶಾನ್ ಕಿಶನ್ 80, ಕುಮಾರ ಕುಶಾಗ್ರ 46 , ಮೊಹಮ್ಮದ್ ಕೌನೇನ್ ಖುರೇಷಿ ಅಜೇಯ 116, ಅನುಕೂಲ್ ರಾಯ್ 64, ಮೊಹಮ್ಮದ್ ಸಿರಾಜ್ 47ಕ್ಕೆ1, ಎಂ.ಡಿ. ನಿಧೀಶ್ 28ಕ್ಕೆ2). ಪಂದ್ಯ ಶ್ರೇಷ್ಠ: ಇಶಾನ್ ಕಿಶನ್, ಸರಣಿ ಶ್ರೇಷ್ಠ: ತಿಲಕ್ ವರ್ಮಾ.