ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

IND vs ENG 5th Test: ಓವಲ್‌ ಟೆಸ್ಟ್‌ ಗೆದ್ದ ಭಾರತ; ಸರಣಿ ಡ್ರಾದಲ್ಲಿ ಅಂತ್ಯ

ಭುಜದ ಗಾಯದಿಂದಾಗಿ ಮೊದಲ ಇನ್ನಿಂಗ್ಸ್‌ನಲ್ಲಿ ಬ್ಯಾಟ್‌ ಮಾಡದ ಕ್ರಿಸ್‌ ವೋಕ್ಸ್‌ ತಂಡದ ಗೆಲುವಿಗಾಗಿ ಬ್ಯಾಂಡೆಜ್‌ ಸುತ್ತಿದ್ದರೂ ಒಂದೇ ಕೈಯಲ್ಲಿ ಬ್ಯಾಟಿಂಗ್‌ ನಡೆಸಲು ಕ್ರೀಸ್‌ಗೆ ಬಂದರು. ಈ ವೇಳೆ ಟ್ರೆಂಟ್ ಬ್ರಿಡ್ಜ್‌ನಲ್ಲಿ ಮಾಲ್ಕಮ್ ಮಾರ್ಷಲ್ ಒಂಟಿ ಕೈಯಲ್ಲಿ ಬ್ಯಾಟಿಂಗ್ ಮಾಡುತ್ತಿದ್ದ ಚಿತ್ರ ಒಂದು ಕ್ಷಣ ಕಣ್ಣ ಮುಂದೆ ಬಂದಿತು.

ಲಂಡನ್‌: ಕ್ರಿಕೆಟ್‌ ಅಭಿಮಾನಿಗಳನ್ನು ತುದಿಗಾಲಲ್ಲಿ ನಿಲ್ಲುವಂತೆ ಮಾಡಿದ್ದ ಓವಲ್‌ ಟೆಸ್ಟ್‌ ಪಂದ್ಯದಲ್ಲಿ ಕೊನೆಗೂ ಭಾರತ ಗೆದ್ದು ಬೀಗಿದೆ. 5ನೇ ಹಾಗೂ ಕೊನೆಯ ಟೆಸ್ಟ್‌ನಲ್ಲಿ ಉತ್ಕೃಷ್ಟ ಮಟ್ಟದ ಬೌಲಿಂಗ್‌ ಪ್ರದರ್ಶನ ತೋರಿದ‌ ಮೊಹಮ್ಮದ್ ಸಿರಾಜ್‌ ‌ಮತ್ತು ಪ್ರಸಿದ್ಧ್‌ ಕೃಷ್ಣ ತಂಡಕ್ಕೆ ರೋಚಕ ಹಾಗೂ ಸ್ಮರಣೀಯ ಗೆಲುವು ತಂದುಕೊಟ್ಟರು. 6 ರನ್‌ ಅಂತರದಿಂದ ಗೆದ್ದ ಭಾರತ, ಈ ಗೆಲುವಿನೊಂದಿಗೆ ಆ್ಯಂಡರ್‌ಸನ್‌-ತೆಂಡುಲ್ಕರ್‌ ಟೆಸ್ಟ್‌ ಸರಣಿಯನ್ನು 2-2 ಅಂತರದಿಂದ ಡ್ರಾ ಮಾಡಿಕೊಂಡಿತು.

ಭಾರತ ನೀಡಿದ 374 ರನ್‌ಗಳ ಬೃಹತ್‌ ಗೆಲುವಿನ ಗುರಿ ಹಿಂಬಾಲಿಸಿದ್ದ ಇಂಗ್ಲೆಂಡ್‌ ನಾಲ್ಕನೇ ದಿನದಾಟದ 4ನೇ ದಿನದ ಅಂತ್ಯಕ್ಕೆ 6 ವಿಕೆಟ್‌ ನಷ್ಟಕ್ಕೆ 339 ರನ್‌ ಗಳಿಸಿತ್ತು. ಅಂತಿಮ ದಿನದಾಟದಲ್ಲಿ ಗೆಲುವಿಗೆ ಬೇಕಾದ 35 ರನ್‌ ಹಿಂಬಾಲಿಸಿದ ಆಂಗ್ಲರು 367 ರನ್‌ಗೆ ಆಲೌಟ್‌ ಆಗಿ 6 ರನ್‌ ಅಂತರದಿಂದ ಸೋಲು ಕಂಡರು.

ಕನ್ನಡಿಗ ಪ್ರಸಿದ್ಧ್‌ ಕೃಷ್ಣ ಎಸೆತ ಇನಿಂಗ್ಸ್‌ನ ಮೊದಲ ಓವರ್‌ನಲ್ಲಿ ಸತತವಾಗಿ ಜೇಮಿ ಓವರ್ಟನ್‌ ಬೌಂಡರಿ ಬಾರಿಸಿದರು. ಆದರೆ ಮುಂದಿನ ಓವರ್‌ನಲ್ಲಿ ಮೊಹಮ್ಮದ್‌ ಸಿರಾಜ್‌ ಅಪಾಯಕಾರಿ ಸ್ಮಿತ್‌ ವಿಕೆಟ್‌ ಬೇಟೆಯಾಡಿದರು. ಈ ಹಂತದಲ್ಲಿ ಭಾರತ ತಂಡದಲ್ಲಿ ಮತ್ತೆ ಗೆಲುವಿನ ಆಸೆ ಚಿಗುರಿತು. ಎಲ್ಲರ ಮುಖದಲ್ಲಿಯೂ ಹೊಳಪು ಮರುಕಳಿಸಿತು. ಮುಂದಿನ ಓವರ್‌ನಲ್ಲಿ ಓವರ್ಟನ್‌ಗೂ ಸಿರಾಜ್‌ ಪೆವಿಲಿಯನ್‌ ದಾರಿ ತೋರಿಸಿದರು. ಜೋ ರೂಟ್‌ ಹೇಳಿದಂತೆ ಪಂದ್ಯವನ್ನು ಗೆಲ್ಲಲು ಮೊಹಮ್ಮದ್ ಸಿರಾಜ್ ನೈಜ ಹೋರಾಟಗಾರ, ತಮ್ಮ ಸರ್ವಸ್ವವನ್ನು ಅರ್ಪಿಸುತ್ತಾರೆ ಎಂದು ಹೇಳಿದ ಮಾತು ಅಕ್ಷರಶಃ ನಿಜವಾಯಿತು. 5 ವಿಕೆಟ್‌ ಕಿತ್ತು ಮಿಂಚಿದರು. ಇವರಿಗೆ ಮತ್ತೊಂದು ತುದಿಯಲ್ಲಿ ಸಾಥ್‌ ನೀಡಿದ ಪ್ರಸಿದ್ಧ್‌ 4 ವಿಕೆಟ್‌ ಕಿತ್ತರು. ನಾಲ್ಕನೇ ದಿನ ಬ್ರೂಕ್‌ ಕ್ಯಾಚ್‌ ಕೈಚೆಲ್ಲಿ ವಿಲನ್‌ ಎನಿಸಿಕೊಂಡಿದ್ದ ಸಿರಾಜ್‌ ಅಂತಿಮ ದಿನದಾಟದಲ್ಲಿ ಹೀರೋ ಎನಿಸಿಕೊಂಡರು. ಕೆಲ ಕಾಲ ಭಾರತಕ್ಕೆ ಕಾಡಿದ ಗಸ್ ಅಟ್ಕಿನ್ಸನ್(17) ಅವರನ್ನು ಕ್ಲೀನ್‌ ಬೌಲ್ಡ್‌ ಮಾಡಿದ ಸಿರಾಜ್‌ ಭಾರತದ ಗೆಲುವು ಸಾರಿದರು.

ಭುಜದ ಗಾಯದಿಂದಾಗಿ ಮೊದಲ ಇನ್ನಿಂಗ್ಸ್‌ನಲ್ಲಿ ಬ್ಯಾಟ್‌ ಮಾಡದ ಕ್ರಿಸ್‌ ವೋಕ್ಸ್‌ ತಂಡದ ಗೆಲುವಿಗಾಗಿ ಬ್ಯಾಂಡೆಜ್‌ ಸುತ್ತಿದ್ದರೂ ಒಂದೇ ಕೈಯಲ್ಲಿ ಬ್ಯಾಟಿಂಗ್‌ ನಡೆಸಲು ಕ್ರೀಸ್‌ಗೆ ಬಂದರು. ಈ ವೇಳೆ ಟ್ರೆಂಟ್ ಬ್ರಿಡ್ಜ್‌ನಲ್ಲಿ ಮಾಲ್ಕಮ್ ಮಾರ್ಷಲ್ ಒಂಟಿ ಕೈಯಲ್ಲಿ ಬ್ಯಾಟಿಂಗ್ ಮಾಡುತ್ತಿದ್ದ ಚಿತ್ರ ಒಂದು ಕ್ಷಣ ಕಣ್ಣ ಮುಂದೆ ಬಂದಿತು. ವೋಕ್ಸ್‌ ಬ್ಯಾಟಿಂಗ್‌ ನಡೆಸಲು ಬಂದರೂ ತಂಡಕ್ಕೆ ಗೆಲುವು ಮಾತ್ರ ಒಲಿಯಲಿಲ್ಲ.