ಲಂಡನ್: ಆಂಡರ್ಸನ್-ತೆಂಡೂಲ್ಕರ್(ENG vs IND) ಟ್ರೋಫಿ ಟೆಸ್ಟ್ ಸರಣಿಯ ಅಂತಿಮ ಪಂದ್ಯಕ್ಕೂ ಮುನ್ನ ರಿಷಭ್ ಪಂತ್(Rishabh Pant) ಸರಣಿಯಿಂದ ಹೊರಬಿದ್ದಿದಾರೆ. ನಾಲ್ಕನೇ ಪಂದ್ಯದ ಮೊದಲ ದಿನದಾಟದ ವೇಳೆ ಕಾಲಿನ ಬೆರಳಿನ ಮುರಿತಕ್ಕೆ ಒಳಗಾಗಿದ್ದ ಪಂತ್(Injured Rishabh Pant) ನೋವಿನ ಮಧ್ಯೆಯೂ ಬ್ಯಾಟಿಂಗ್ ನಡೆಸಿದ್ದರು. ಇದೀಗ ಅವರನ್ನು ಸರಣಿಯಿಂದ ಕೈಬಿಟ್ಟು ಅವರ ಸ್ಥಾನಕ್ಕೆ ಬದಲಿಗರಾಗಿ ತಮಿಳುನಾಡಿನ ಎನ್.ಜಗದೀಶನ್ ತಂಡಕ್ಕೆ ಸೇರಿಸಿಕೊಳ್ಳಲಾಗಿದೆ. ರಿಷಭ್ ಪಂತ್ ಗಾಯದಿಂದ ಚೇತರಿಸಿಕೊಳ್ಳಲು 6 ವಾರ ಬೇಕಾಗಬಹುದು ಎಂದು ವರದಿಯಾಗಿದೆ.
ಸರಣಿಯುದ್ದಕ್ಕೂ ದಿಟ್ಟ ಬ್ಯಾಟಿಂಗ್ ಪ್ರದರ್ಶನ ತೋರಿದ್ದ ರಿಷಭ್ ಪಂತ್ ಅಲಭ್ಯತೆ ಭಾರತ ತಂಡಕ್ಕೆ ಕೊಂಚ ಹಿನ್ನಡೆ ತರಬಹುದು. ಪ್ರಸ್ತುತ ಸರಣಿಯಲ್ಲಿ ಪಂತ್ ಭಾರತದ ಪರ ಮೂರನೇ ಅತಿ ಹೆಚ್ಚು ರನ್ ಗಳಿಸಿದ ಆಟಗಾರ ಎನಿಸಿದ್ದರು. 5ನೇ ಪಂದ್ಯ ಜುಲೈ 31 ರಂದು ಲಂಡನ್‌ನ ದಿ ಓವಲ್‌ನಲ್ಲಿ ನಡೆಯಲಿದೆ.
"ಸ್ಕ್ಯಾನಿಂಗ್‌ನಲ್ಲಿ ಪಂತ್ ಅವರ ಬಲಗಾಲಿನಲ್ಲಿ ಮುರಿತವನ್ನು ದೃಢಪಡಿಸಿದವು. ಇದರಿಂದಾಗಿ ಅವರು ಪ್ರವಾಸದ ಉಳಿದ ಪಂದ್ಯಗಳಿಗೆ ಲಭ್ಯವಿಲ್ಲ. ಬಿಸಿಸಿಐ ವೈದ್ಯಕೀಯ ತಂಡವು ಅವರ ಚೇತರಿಕೆಯ ಮೇಲ್ವಿಚಾರಣೆಯನ್ನು ಮುಂದುವರಿಸುತ್ತದೆ. "ತಂಡವು ಅವರಿಗೆ ಶೀಘ್ರವಾಗಿ ಚೇತರಿಸಿಕೊಳ್ಳಬೇಕೆಂದು ಹಾರೈಸುತ್ತದೆ" ಎಂದು ಬಿಸಿಸಿಐ ತನ್ನ ಹೇಳಿಕೆಯಲ್ಲಿ ತಿಳಿಸಿದೆ.
ದೇಶೀಯ ಕ್ರಿಕೆಟ್‌ನಲ್ಲಿ ಸ್ಥಿರ ಪ್ರದರ್ಶನ ನೀಡಿದ ಹಿನ್ನೆಲೆಯಲ್ಲಿ 28 ವರ್ಷದ ಜಗದೀಶನ್ ತಮ್ಮ ಮೊದಲ ಟೆಸ್ಟ್ ತಂಡಕ್ಕೆ ಕರೆ ಪಡೆದಿದ್ದಾರೆ. ಜಗದೀಶನ್ ತಂಡ ಸೇರಿದರೂ ಆಡುವ ಬಳಗದಲ್ಲಿ ಅವಕಾಶ ಪಡೆಯುವುದು ಅನುಮಾನ. ಧ್ರುವ್ ಜುರೆಲ್ ಅವರು ಅವಕಾಶ ಪಡೆಯಬಹುದು. ಕೆಎಲ್ ರಾಹುಲ್ ಫಿಟ್ನೆಸ್ ಸಮಸ್ಯೆಯಿಂದಾಗಿ ವಿಕೆಟ್ ಕೀಪಿಂಗ್ ಮಾಡುತ್ತಿಲ್ಲ.
ಜಗದೀಶನ್ 52 ಪ್ರಥಮ ದರ್ಜೆ ಪಂದ್ಯಗಳಿಂದ 10 ಶತಕಗಳು ಮತ್ತು 14 ಅರ್ಧಶತಕಗಳು ಸೇರಿದಂತೆ 3,373 ರನ್ ಗಳಿಸಿದ್ದಾರೆ.
5ನೇ ಪಂದ್ಯಕ್ಕೆ ಭಾರತ ಪರಿಷ್ಕೃತ ತಂಡ
ಶುಭಮನ್ ಗಿಲ್ (ನಾಯಕ), ಯಶಸ್ವಿ ಜೈಸ್ವಾಲ್, ಕೆಎಲ್ ರಾಹುಲ್, ಸಾಯಿ ಸುದರ್ಶನ್, ಅಭಿಮನ್ಯು ಈಶ್ವರನ್, ಕರುಣ್ ನಾಯರ್, ರವೀಂದ್ರ ಜಡೇಜಾ, ಧ್ರುವ್ ಜುರೆಲ್ (ವಿ.ಕೀ.), ವಾಷಿಂಗ್ಟನ್ ಸುಂದರ್, ಶಾರ್ದೂಲ್ ಠಾಕೂರ್, ಜಸ್ಪ್ರೀತ್ ಸಿಂಗ್ ಬುಮ್ರಾ, ಮೊಹಮ್ಮದ್ ಸಿರಾಜ್, ಪ್ರಸಿದ್ಧ್ ಕೃಷ್ಣ, ಅರ್ಶ್‌ದೀಪ್, ಆಕಾಶ್ ದೀಪ್, ಕೆ.ಎಲ್. ನಾರಾಯಣ ಜಗದೀಸನ್ (ವಿ.ಕೀ.)
ಇದನ್ನೂ ಓದಿ IND vs ENG: ಜಸ್‌ಪ್ರೀತ್ ಬುಮ್ರಾ ಟೆಸ್ಟ್ ಕ್ರಿಕೆಟ್‌ಗೆ ವಿದಾಯ ಹೇಳಲಿದ್ದಾರೆಂದ ಮೊಹಮ್ಮದ್ ಕೈಫ್!