ಲಂಡನ್, ಜೂ.25: ಲಾರ್ಡ್ಸ್‌ನಲ್ಲಿ ನಡೆದ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ತಂಡವನ್ನು 38 ರನ್‌ಗಳಿಂದ ಸೋಲಿಸುವ ಮೂಲಕ ಆತಿಥೇಯ ಇಂಗ್ಲೆಂಡ್ ತಂಡವು ಇನ್ನೂ ಒಂದು ಗುಂಪು ಪಂದ್ಯ ಬಾಕಿ ಇರುವಂತೆಯೇ ಮಹಿಳಾ ಟಿ20 ವಿಶ್ವಕಪ್(Womens T20 World Cup 2026) ಸೆಮಿಫೈನಲ್‌ಗೆ ಅರ್ಹತೆ ಪಡೆದ ಮೊದಲ ತಂಡವಾಯಿತು.
ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ಇಂಗ್ಲೆಂಡ್ ತಂಡ ಡ್ಯಾನಿ ವ್ಯಾಟ್-ಹಾಡ್ಜ್(65) ಅವರ ಅರ್ಧತಕದ ನೆರವಿನಿಂದ 7 ವಿಕೆಟ್‌ಗೆ 186 ರನ್ ಬಾರಿಸಿತು. ಇದು ಲಾರ್ಡ್ಸ್‌ನಲ್ಲಿ ಮಹಿಳಾ ಟಿ20ಯಲ್ಲಿ ದಾಖಲಾದ ಅತ್ಯಧಿಕ ಮೊತ್ತ ಮತ್ತು ಆ ಸ್ಥಳದಲ್ಲಿ ಪುರುಷ ಅಥವಾ ಮಹಿಳಾ ತಂಡವು ದಾಖಲಿಸಿದ ಎರಡನೇ ಅತ್ಯಧಿಕ ಮೊತ್ತವಾಗಿದೆ.
ಗುರಿ ಬೆನ್ನಟ್ಟಿದ ವೆಸ್ಟ್ ಇಂಡೀಸ್ 5 ವಿಕೆಟ್‌ಗೆ 148 ರನ್ ಗಳಿಸಲಷ್ಟೇ ಶಕ್ತವಾಯಿತು. ಶನಿವಾರ ನಡೆಯಲಿರುವ ತನ್ನ ಕೊನೆಯ ಗುಂಪು ಹಂತದ ಪಂದ್ಯದಲ್ಲಿ ಐರ್ಲೆಂಡ್ ತಂಡವನ್ನು ಸೋಲಿಸಿದರೆ ವೆಸ್ಟ್ ಇಂಡೀಸ್ ಸೆಮಿಫೈನಲ್ ತಲುಪಬಹುದು. ಸದ್ಯ ವಿಂಡೀಸ್ ಎರಡನೇ ಸ್ಥಾನದಲ್ಲಿದೆ.
ಫಿಫಾ ವಿಶ್ವಕಪ್: ಐತಿಹಾಸಿಕ ನಾಕೌಟ್ ಅರ್ಹತೆ ಗಳಿಸಿದ ದಕ್ಷಿಣ ಆಫ್ರಿಕಾ
ಶ್ರೀಲಂಕಾ ವಿರುದ್ಧ ಶತಕದೊಂದಿಗೆ ಟೂರ್ನಿಯನ್ನು ಆರಂಭಿಸಿದ ವ್ಯಾಟ್-ಹಾಡ್ಜ್ 32 ಎಸೆತಗಳಲ್ಲಿ ಅರ್ಧಶತಕ ಗಳಿಸಿದರು. 58 ರನ್ ಗಳಿಸಿದಾಗ ರನ್ ಔಟ್ ತಪ್ಪಿಸಿಕೊಂಡ ಅವರು 65 ರನ್ ಗಳಿಸಿದರು. ಹೀದರ್ ನೈಟ್ 43ರನ್ ಗಳಿಸಿ ರನೌಟ್ ಆದರು. ವಿಂಡೀಸ್ ಪರ ಚಿನೆಲ್ಲೆ ಹೆನ್ರಿ 30 ಎಸೆತಗಳಲ್ಲಿ ಅಜೇಯ 51 ರನ್ ಗಳಿಸಿದರು, ಆದರೆ ತಂಡವನ್ನು ಗೆಲ್ಲಿಸಲು ಸಾಧ್ಯವಾಗಲಿಲ್ಲ. ಡಿಯಾಂಡ್ರಾ ಡಾಟಿನ್ 19 ರನ್, ಶೆಮೈನ್ ಕ್ಯಾಂಪ್ಬೆಲ್ 20 ರನ್ ಗಳಿಸಿ ಔಟಾದರು.
ಇಂಗ್ಲೆಂಡ್ ತಂಡ ಗೆದ್ದರೂ ತಂಡದ ಫೀಲ್ಡಿಂಗ್ ಅತ್ಯಂತ ಕಳಪೆ ಮಟ್ಟದಿಂದ ಕೂಡಿತ್ತು. ಆರು ಕ್ಯಾಚ್‌ಗಳನ್ನು ಬಿಟ್ಟರು. ಇದು ಕಳೆದ ಎರಡು ವರ್ಷಗಳಲ್ಲಿ ಮಹಿಳಾ T20 ಅಂತರರಾಷ್ಟ್ರೀಯ ಪಂದ್ಯದಲ್ಲಿ ಅತಿ ಹೆಚ್ಚು ಕ್ಯಾಚ್‌ಗಳನ್ನು ಬಿಟ್ಟ ಅನಗತ್ಯ ದಾಖಲೆಯಾಗಿದೆ.