ನ್ಯೂಜೆರ್ಸಿ, ಜೂ.20: ಫಿಫಾ ವಿಶ್ವಕಪ್ ಟೂರ್ನಿ(FIFA World Cup 2026)ಯಲ್ಲಿ ಬ್ರೆಜಿಲ್ ತಂಡ ಗೆಲುವಿನ ಶುಭಾರಂಭ ಕಂಡಿದೆ. ಶನಿವಾರ ಬೆಳಗಿನ ಜಾವ ಫಿಲಡೆಲ್ಫಿಯಾದಲ್ಲಿ ಹೈಟಿ ವಿರುದ್ಧ 3-0 ಅಂತರದ ಭರ್ಜರಿ ಜಯ ಸಾಧಿಸಿತು. ತಂಡದ ಪರ ಮ್ಯಾಥ್ಯೂಸ್ ಕುನ್ಹಾ ಎರಡು ಗೋಲು ಬಾರಿಸಿದರೆ, ವಿನಿಷಿಯಸ್ ಜೂನಿಯರ್ ಒಂದು ಗೋಲು ಗಳಿಸಿದರು. ಈ ಗೆಲುವಿನೊಂದಿಗೆ ಐದು ಬಾರಿಯ ಚಾಂಪಿಯನ್ ಗ್ರೂಪ್ 'ಸಿ' ಯಲ್ಲಿ ಅಗ್ರಸ್ಥಾನಕ್ಕೆ ಏರಿತು. ತಂಡದ ಸ್ಟಾರ್ ಆಟಗಾರ ನೈಮರ್ ಈ ಪಂದ್ಯದಲ್ಲಿಯೂ ಕಣಕ್ಕಿಳಿಯಲಿಲ್ಲ.
ತಮ್ಮ ಮೊದಲ ಪಂದ್ಯದಲ್ಲಿ ಮೊರಾಕೊ ವಿರುದ್ಧ 1-1 ಗೋಲುಗಳಿಂದ ಡ್ರಾ ಮಾಡಿಕೊಂಡ ನಂತರ, ನಾಕೌಟ್ ರೇಸ್‌ನಲ್ಲಿ ಉಳಿಯಬೇಕಿದ್ದರೆ ಬ್ರೆಜಿಲ್‌ಗೆ ಈ ಪಂದ್ಯದಲ್ಲಿ ಗೆಲುವು ಅನಿವಾರ್ಯವಾಗಿತ್ತು. ಮೊದಲಾರ್ಧದಿಂದಲೇ ಮುನ್ನುಗ್ಗಿದ ಬ್ರೆಜಿಲ್ 23ನೇ ನಿಮಿಷದಲ್ಲಿಗೋಲು ಬಾರಿಸಿ ಹಿಡಿತ ಸಾಧಿಸಿತು. ಮ್ಯಾಥ್ಯೂಸ್ ಕುನ್ಹಾ ಈ ಗೋಲು ಬಾರಿಸಿದರು. ಇದಾಗಿ 36ನೇ ನಿಮಿಷದಲ್ಲಿ ಮತ್ತೊಂದು ಗೋಲು ಬಾರಿಸಿ ತಂಡಕ್ಕೆ ಮುನ್ನಡೆ ತಂದುಕೊಟ್ಟರು.
ಹೈಟಿ ತಂಡದ ಆಟಗಾರರು ಗೋಲು ಬಾರಿಸಲು ಶಕ್ತಿ ಮೀರಿ ಪ್ರಯತ್ನಿಸಿದರೂ ಬ್ರೆಜಿಲ್ ರಕ್ಷಣಾ ಕೋಟೆಯನ್ನು ಭೇದಿಸಲು ಸಾಧ್ಯವಾಗಲಿಲ್ಲ. ಮೊದಲಾರ್ಧದ ಅಂತಿಮ ಹಂತದಲ್ಲಿ ವಿನಿಷಿಯಸ್ ಜೂನಿಯರ್ ಗೋಲು ಬಾರಿಸುವ ಮೂಲಕ ಬ್ರೆಜಿಲ್ ತಂಡದ ಮುನ್ನಡೆಯನ್ನು 3ಕ್ಕೆ ಏರಿಸಿದರು. ಸೋತರೂ ದ್ವಿತೀಯಾರ್ಧದಲ್ಲಿ ಹೈಟಿ ತಂಡ ಸುಧಾರಿತ ಪ್ರದರ್ಶನ ನೀಡಿತು.
ದೋಹಾ ಡೈಮಂಡ್ ಲೀಗ್‌ನಲ್ಲಿ ಕಳಪೆ ಆರಂಭದ ಮಧ್ಯೆಯೂ ಕಾಮನ್‌ವೆಲ್ತ್ ಕ್ರೀಡಾಕೂಟಕ್ಕೆ ಅರ್ಹತೆ ಪಡೆದ ನೀರಜ್ ಚೋಪ್ರಾ
ಮೊರಾಕೊ ಇನ್ನೂ ಹೈಟಿಯನ್ನು ಎದುರಿಸಬೇಕಾಗಿರುವುದರಿಂದ ಮತ್ತು ಬ್ರೆಜಿಲ್ ಅರ್ಹತಾ ಸುತ್ತಿನಲ್ಲಿ ಸ್ಕಾಟ್ಲೆಂಡ್ ತಂಡವನ್ನು ಎದುರಿಸಬೇಕಾಗಿರುವುದರಿಂದ, ಗ್ರೂಪ್ ಸಿ ನಲ್ಲಿ ಯಾರು ಅಗ್ರಸ್ಥಾನ ಪಡೆಯುತ್ತಾರೆ ಎಂಬುದನ್ನು ನಿರ್ಧರಿಸುವಲ್ಲಿ ಗೋಲು ವ್ಯತ್ಯಾಸವು ನಿರ್ಣಾಯಕ ಅಂಶವಾಗಬಹುದು. ಸತತ ಎರಡು ಸೋಲು ಕಂಡ ಹೈಟಿ ಪಂದ್ಯಾವಳಿಯಿಂದ ಹೊರಬಿದ್ದ ಮೊದಲ ತಂಡ ಎನಿಸಿತು. ಸ್ಕಾಟ್ಲೆಂಡ್ ವಿರುದ್ಧದ ಪಂದ್ಯದಲ್ಲಿ ನೈಮರ್ ಆಡುವ ಸಾಧ್ಯತೆ ಅಧಿವಾಗಿದೆ.
ಆಸ್ಟ್ರೇಲಿಯಾಗೆ ಸೋಲುಣಿಸಿದ ಅಮೆರಿಕ
ಆಸ್ಟ್ರೇಲಿಯಾ ವಿರುದ್ಧ 2-0 ಅಂತರದ ಗೆಲುವಿನೊಂದಿಗೆ ಸಹ-ಆತಿಥೆಯ ಮೆಕ್ಸಿಕೊ ನಂತರ ಅಮೆರಿಕ ತಂಡ ಫಿಫಾ ವಿಶ್ವಕಪ್ ನಾಕೌಟ್ ಹಂತಕ್ಕೆ ಸ್ಥಾನ ಪಡೆದ ಎರಡನೇ ತಂಡ ಎಂಬ ಹೆಗ್ಗಳಿಕೆಗೆ ಪಾತ್ರವಾಯಿತು. ಮೌರಿಸಿಯೊ ಪೊಚೆಟ್ಟಿನೊ ನೇತೃತ್ವದ ತಂಡವು ಎರಡು ಪಂದ್ಯಗಳಲ್ಲಿ ಎರಡು ಗೆಲುವುಗಳನ್ನು ಗಳಿಸಿ ಗ್ರೂಪ್ ʼಡಿʼ ಯಲ್ಲಿ ಅಗ್ರಸ್ಥಾನ ಪಡೆಯಿತು. ಇನ್ನೂ ಒಂದು ಪಂದ್ಯ ಬಾಕಿ ಇರುವಾಗಲೇ ಈ ಸಾಧನೆ ಮಾಡಿತು. 1929 ರ ನಂತರದಲ್ಲಿ ಸತತ ಎರಡು ಗೆಲುವುಗಳನ್ನು ದಾಖಲಿಸಿದ ಸಾಧನೆಗೈದಿತು.
ಅಮೆರಿಕ ತಂಡ ಪರಾಗ್ವೆ ವಿರುದ್ಧ 4-1 ಅಂತರದ ಭರ್ಜರಿ ಗೆಲುವಿನೊಂದಿಗೆ ತಮ್ಮ ಅಭಿಯಾನವನ್ನು ಆರಂಭಿಸಿತ್ತು. ಸತತ ಎರಡು ಗೆಲುವಿನ ಮೂಲಕ ಅಮೆರಿಕ ತಂಡವು ಗ್ರೂಪ್ ಡಿ ನಲ್ಲಿ ಆರು ಅಂಕಗಳೊಂದಿಗೆ ಅಗ್ರಸ್ಥಾನದಲ್ಲಿದೆ. ಆಸ್ಟ್ರೇಲಿಯಾ ತಂಡವು ಮೂರು ಅಂಕಗಳೊಂದಿಗೆ ಮುಂದುವರಿದಿದ್ದು, ಅರ್ಹತಾ ಸುತ್ತಿನ ಭರವಸೆಯನ್ನು ಜೀವಂತವಾಗಿರಿಸಿಕೊಳ್ಳಲು ಪರಾಗ್ವೆ ವಿರುದ್ಧ ಸಕಾರಾತ್ಮಕ ಫಲಿತಾಂಶದ ಅಗತ್ಯವಿದೆ.