ಲಂಡನ್: ಈ ಬಾರಿಯ ಇಂಗ್ಲೆಂಡ್(IND vs ENG Test Series) ಮತ್ತು ಭಾರತ ನಡುವಣ ಆ್ಯಂಡರ್‌ಸನ್-ತೆಂಡುಲ್ಕರ್(Anderson–Tendulkar Trophy) ಸರಣಿ, ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲೇ ಹಲವು ದಾಖಲೆಗಳಿಗೆ ಸಾಕ್ಷಿಯಾಗಿದೆ. ಇದರಲ್ಲಿ ವೈಯಕ್ತಿಕ ಮತ್ತು ತಂಡ ದಾಖಲೆ ಕೂಡ ನಿರ್ಮಾಣವಾಗಿದೆ. ಈ ಪಟ್ಟಿಗೆ ಮತ್ತೊಂದು ದಾಖಲೆ ಸೇರ್ಪಡೆಗೊಂಡಿದೆ.
ಸರಣಿವೊಂದರಲ್ಲಿ 9 ಆಟಗಾರರು 400ಕ್ಕಿಂತ ಹೆಚ್ಚು ರನ್ ದಾಖಲಿಸಿದ್ದಾರೆ. ಟೆಸ್ಟ್ ಇತಿಹಾಸದಲ್ಲಿ ಇದೇ ಮೊದಲು. ಭಾರತದ ಐವರು, ಇಂಗ್ಲೆಂಡ್‌ನ ನಾಲ್ವರು ಈ ಸಾಧನೆಗೈದರು. ಭಾರತ ಪರ ಶುಭಮನ್ ಗಿಲ್, ಕೆ.ಎಲ್ ರಾಹುಲ್, ರವೀಂದ್ರ ಜಡೇಜಾ, ಯಶಸ್ವಿ ಜೈಸ್ವಾಲ್, ರಿಷಭ್ ಪಂತ್ 400ಕ್ಕಿಂತ ಹೆಚ್ಚು ರನ್ ಗಳಿಸಿದರೆ, ಇಂಗ್ಲೆಂಡ್‌ನ ಜೋ ರೂಟ್, ಹ್ಯಾರಿ ಬ್ರೂಕ್, ಬೆನ್ ಡಕೆಟ್ ಹಾಗೂ ಜೇಮಿ ಸ್ಮಿತ್ ಈ ಮೈಲುಗಲ್ಲು ತಲುಪಿದರು.
ಭಾರತ ಹಾಗೂ ಇಂಗ್ಲೆಂಡ್ ನಡುವಿನ ಟೆಸ್ಟ್ ಸರಣಿ ಕ್ಲೈಮ್ಯಾಕ್ಸ್ ಹಂತಕ್ಕೆ ಬಂದು ನಿಂತಿದೆ. ಇಲ್ಲಿನ ದಿ ಓವಲ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ 5ನೇ ಹಾಗೂ ಕೊನೆಯ ಟೆಸ್ಟ್‌ನಲ್ಲಿ 4ನೇ ದಿನದ ಅಂತ್ಯಕ್ಕೆ 6 ವಿಕೆಟ್ ನಷ್ಟಕ್ಕೆ 339 ರನ್ ಗಳಿಸಿರುವ ಇಂಗ್ಲೆಂಡ್, ಸೋಮವಾರ ಗೆಲ್ಲಬೇಕಿದ್ದರೆ 35 ರನ್ ಗಳಿಸಬೇಕಿದೆ. ಭಾರತಕ್ಕೆ 4 ವಿಕೆಟ್‌ನ ಅಗತ್ಯವಿದೆ. ಹೀಗಾಗಿ ಕೆನ್ನಿಂಗ್ಟನ್ ಓವಲ್ ಕ್ರೀಡಾಂಗಣದತ್ತ ಈಗ ಕ್ರಿಕೆಟ್‌ಪ್ರೇಮಿಗಳ ಕುತೂಹಲದ ದೃಷ್ಟಿ ನೆಟ್ಟಿದೆ. ಭಾರತ ಗೆದ್ದರೆ ಸರಣಿಯನ್ನು 2-2 ಅಂತರದಿಂದ ಡ್ರಾ ಮಾಡಿಕೊಳ್ಳಬಹುದು.
ದುಬಾರಿಯಾದ ಕ್ಯಾಚ್ ಜೀವದಾನ
19 ರನ್ ಗಳಿಸಿದ್ದಾಗ ಪ್ರಸಿದ್ಧ್‌ರ ಬೌಲಿಂಗ್‌ನಲ್ಲಿ ಬ್ರೂಕ್ ಬಾರಿಸಿದ ಚೆಂಡು ಮಿಡ್ ವಿಕೆಟ್‌ನ ಬೌಂಡರಿ ಗೆರೆ ಬಳಿ ಇದ್ದ ಸಿರಾಜ್‌ರ ಕೈ ಸೇರಿತು. ಆದರೆ ಸಿರಾಜ್ ಗೆರೆ ತುಳಿದ ಕಾರಣ, ಬ್ರೂಕ್‌ಗೆ ಜೀವದಾನ ಸಿಕ್ಕಿತು. ಇದರ ಸಂಪೂರ್ಣ ಲಾಭವೆತ್ತಿದ ಅವರು ಆ ಬಳಿಕ ಭಾರತೀಯರನ್ನು ಬೆಂಡೆತ್ತಿ 91 ಎಸೆತದಲ್ಲಿ ಶತಕ ಪೂರೈಸಿದರು. ಒಟ್ಟು 111 ರನ್ ಬಾರಿಸಿದರು. ಒಂದೊಮ್ಮೆ ಸಿರಾಜ್ ಈ ಕ್ಯಾಚ್ ಯಶಸ್ವಿಯಾಗಿ ಹಿಡಿಯುತ್ತಿದ್ದರೆ ಭಾರತ ಪಂದ್ಯವನ್ನು ಆರಾಮವಾಗಿ ಗೆಲ್ಲಬಹುದಿತ್ತು.