ಬೆಂಗಳೂರು, ನ.25: ಭಾರತ ಕ್ರಿಕೆಟ್ ತಂಡದ ಮಾಜಿ ಆಟಗಾರ ವೆಂಕಟೇಶ್ ಪ್ರಸಾದ್(Venkatesh Prasad) ಅವರು ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ(ಕೆಎಸ್‌ಸಿಎ)ಯ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ವರದಿಯಾಗಿದೆ. ಅಧ್ಯಕ್ಷ ಸ್ಥಾನಕ್ಕೆ ಬ್ರಿಜೇಶ್ ಪಟೇಲ್ ಬಣದಿಂದ ನಾಮಪತ್ರ ಸಲ್ಲಿಸಿದ್ದ ಪತ್ರಿಕೋದ್ಯಮಿ ಕೆ.ಎನ್.ಶಾಂತ್‌ಕುಮಾರ್(K.N. Shanth Kumar) ಅವರ ನಾಮಪತ್ರ ತಿರಸ್ಕೃತಗೊಂಡಿದೆ ಎನ್ನುವ ಸುದ್ದಿ ಬೆನ್ನಲ್ಲೇ ವೆಂಕಟೇಶ್ ಪ್ರಸಾದ್ ಅಧ್ಯಕ್ಷರಾಗಿ ನೇಮಕಗೊಳ್ಳಲಿದ್ದಾರೆ(ksca elections) ಎನ್ನಲಾಗಿದೆ. ಆದರೆ, ಕೆಎಸ್‌ಸಿಎ ಈ ವಿಚಾರವನ್ನು ಖಚಿತಪಡಿಸಿಲ್ಲ
ಹೈಕೋರ್ಟ್ ಸೂಚನೆಯಂತೆ ಡಿಸೆಂಬರ್ 7ಕ್ಕೆ ಚುನಾವಣೆ ನಡೆಸುವಂತೆ ಸೂಚನೆ ನೀಡಿತ್ತು. ಪರಿಷ್ಕೃತ ವೇಳಾಪಟ್ಟಿ ಪ್ರಕಾರ, ಸೋಮವಾರ (ನ.24) ನಾಮಪತ್ರ ಪರಿಶೀಲನೆ ನಡೆಯಿತು. ಈ ವೇಳೆ ಶಾಂತ್‌ಕುಮಾರ್ ಅವರು ಕೆಎಸ್‌ಸಿಎ ಸದಸ್ಯತ್ವಕ್ಕೆ ಸಂಬಂಧಿಸಿ ಯಾವುದೋ ಒಂದು ಶುಲ್ಕ ಪಾವತಿಸಿಲ್ಲ ಎನ್ನುವ ಕಾರಣಕ್ಕೆ ಅವರ ನಾಮಪತ್ರವನ್ನು ಅಸಿಂಧುಗೊಳಿಸಲಾಗಿದೆ ಎಂದು ಹೇಳಲಾಗುತ್ತಿದೆ. ಆದರೆ, ಈ ಬಗ್ಗೆ ಕೆಎಸ್‌ಸಿಎಯಾಗಲಿ, ಬ್ರಿಜೇಶ್ ಬಣ ಅಥವಾ ಶಾಂತ್‌ಕುಮಾರ್ ಅವರಾಗಲಿ ಅಧಿಕೃತ ಹೇಳಿಕೆ ಅಥವಾ ಪ್ರಕಟಣೆ ನೀಡಿಲ್ಲ.
ಸದ್ಯ ಚುನಾವಣೆಗೆ ಸ್ಪರ್ಧಿಸಲು ಶಾಂತ್‌ಕುಮಾರ್ ಅವರಿಗೆ ಅವಕಾಶ ನೀಡಲಾಗಿದೆಯೇ ಅಥವಾ ನಾಮಪತ್ರ ತಿರಸ್ಕೃತಗೊಳಿಸಿ ವೆಂಕಟೇಶ್ ಪ್ರಸಾದ್‌ರನ್ನು ಅವಿರೋಧವಾಗಿ ಆಯ್ಕೆ ಮಾಡಲಾಗಿದೆಯೇ ಎನ್ನುವ ಬಗ್ಗೆ ಸ್ಪಷ್ಟ ಮಾಹಿತಿ ಲಭ್ಯವಾಗಿಲ್ಲ.
ಇದನ್ನೂ ಓದಿ IND vs SA: ʻಭಾರತ ತಂಡ 201ಕ್ಕೆ ಆಲೌಟ್ʼ-ಬ್ಯಾಟ್ಸ್‌ಮನ್‌ಗಳ ಬಗ್ಗೆ ಬೇಸರ ಹೊರಹಾಕಿದ ರವಿಶಾಸ್ತ್ರಿ!
ಕೆಎಸ್‌ಸಿಎ ಚುನಾವಣೆ ಘೋಷಣೆಗೂ ಮೊದಲೇ ವೆಂಕಿ ಬಣದಿಂದ ರಾಜ್ಯ ಕ್ರಿಕೆಟ್ ಸಂಸ್ಥೆಯ ಮಾಜಿ ಖಜಾಂಚಿ ವಿನಯ್ ಮೃತ್ಯುಂಜಯ ಸ್ಪರ್ಧೆ ಮಾಡಲಿದ್ದಾರೆ ಎನ್ನುವ ಸುದ್ದಿ ಹೊರಬಿದ್ದಿತ್ತು. ಈ ನಡುವೆ ಕೆಎಸ್‌ಸಿಎ ಆಡಳಿತ ಸಮಿತಿಯಲ್ಲಿ 9 ವರ್ಷ ಪೂರೈಸಿದ ಸದಸ್ಯರು ಪದಾಧಿಕಾರಿಗಳ ಹುದ್ದೆಗೆ ಸ್ಪರ್ಧಿಸುವಂತಿಲ್ಲ ಎನ್ನುವ ನಿಯಮವನ್ನು ಕೆಎಸ್‌ಸಿಎ ಅಳವಡಿಸಿಕೊಳ್ಳುತ್ತಿರುವುದಾಗಿ ತಿಳಿದುಬಂತು. ಈ ನಿಯಮ ಕೆಎಸ್‌ಸಿಎ ಬೈಲಾಗೆ ವಿರುದ್ಧವಾಗಿದೆ, ಇದರ ಬಳಕೆ ಆಗಬಾರದು ಎಂದು ವೆಂಕಿ ಬಣ ಜಿಲ್ಲಾ ಕೋರ್ಟ್‌ನಿಂದ ತಾತ್ಕಾಲಿಕ ತಡೆ ತಂದಿತು. ಅದರ ವಿರುದ್ಧ ಕೆಎಸ್‌ಸಿಎ ಹೈಕೋರ್ಟಲ್ಲಿ ರಿಟ್ ಅರ್ಜಿ ಹಾಕಿತ್ತು.
ಕೆಎಸ್‌ಸಿಎ ಹಾಲಿ ಬೈಲಾ ಪ್ರಕಾರವೇ ಚುನಾವಣೆ ನಡೆಸಲು ಹೈಕೋರ್ಟ್ ಸೂಚನೆ ನೀಡಿರುವುದರಿಂದ ವೆಂಕಟೇಶ್ ಪ್ರಸಾದ್ ತಂಡಕ್ಕೆ ರಿಲೀಫ್ ಸಿಕ್ಕಿತ್ತು. ಹಾಲಿ ಬೈಲಾ ಪ್ರಕಾರ, 9 ವರ್ಷ ಆಡಳಿತ ಸಮಿತಿಯಲ್ಲಿ ಸದಸ್ಯರಾಗಿದ್ದವರಿಗೂ ಪದಾಧಿಕಾರಿ ಹುದ್ದೆಗೆ ಸ್ಪರ್ಧಿಸುವ ಅವಕಾಶವಿದೆ.