ಡಲ್ಲಾಸ್, ಜು.15: ಸತತ ಮೂರನೇ ಬಾರಿಗೆ ಫೈನಲ್‌ಗೇರುವ ತವಕದಲ್ಲಿದ್ದ ಬಲಿಷ್ಠ ಫ್ರಾನ್ಸ್ ತಂಡಕ್ಕೆ ಲಾ ರೋಜಾ ಖ್ಯಾತಿಯ 2010ರ ಚಾಂಪಿಯನ್ ಸ್ಪೇನ್ ಬಲವಾದ ಪೆಟ್ಟು ನೀಡಿದೆ. ಬುಧವಾರ ನಡೆದ ಫಿಫಾ ವಿಶ್ವಕಪ್ ಸೆಮಿಫೈನಲ್ ಪಂದ್ಯದಲ್ಲಿ ಫ್ರಾನ್ಸ್ ತಂಡವನ್ನು 2-0 ಅಂತರದಿಂದ ಹಿಮ್ಮೆಟ್ಟಿಸಿ ಸ್ಪೇನ್ ತಂಡ ಫೈನಲ್‌ಗೆ ಲಗ್ಗೆಯಿಟ್ಟಿದೆ. ಈ ಮೂಲಕ 16 ವರ್ಷದ ಬಳಿಕ ಸ್ಪೇನ್ ತಂಡ ವಿಶ್ವಕಪ್ ಪ್ರಶಸ್ತಿ ಸುತ್ತಿಗೇರಿತು.
23 ನೇ ನಿಮಿಷದಲ್ಲಿ ಲ್ಯಾಮಿನ್ ಯಮಲ್ ಅವರು ಪೆನಾಲ್ಟಿ ಮೂಲಕ ಗೋಲು ಬಾರಿಸಿ ಸ್ಪೇನ್‌ಗೆ ಆರಂಭಿಕ ಮುನ್ನಡೆ ತಂದುಕೊಟ್ಟರು. ಪಂದ್ಯದ ಆರಂಭದಿಂದಲೂ ಸ್ಪೇನ್ ತನ್ನ ಶಕ್ತಿಯಾಗಿದ್ದ ರಕ್ಷಣಾ ಪಡೆಯನ್ನು ದಾಳವಾಗಿ ಉರುಳಿಸಿತು. ಸ್ಟಾರ್ ಸ್ಟ್ರೈಕರ್ ಕಿಲಿಯನ್ ಎಂಬಾಪೆ ಮತ್ತು ಅತಿ ಹೆಚ್ಚು ಗೋಲುಗಳಿಗೆ ನೆರವಾಗಿದ್ದ ಮೈಕೆಲ್ ಒಲಿಸ್ ರಿಗೆ ಯಾವುದೇ ಗೋಲುಗಳಿಸಲು ಅವಕಾಶ ನೀಡದೇ ಒತ್ತಡ ಹೇರುತ್ತಲೇ ಹೋಯಿತು. ಟೂರ್ನಿಯಲ್ಲಿ 8 ಗೋಲು ಸಿಡಿಸಿದ್ದ ಎಂಬಾಪೆ ಈ ಪಂದ್ಯದಲ್ಲಿ ಕನಿಷ್ಠ ಒಂದು ಗೋಲು ಬಾರಿಸಲು ವಿಫಲರಾದರು.
ದ್ವಿತೀಯಾರ್ಧದಲ್ಲಿಯೂ ಸ್ಪೇನ್ ತಂಡ ಪಂದ್ಯದಲ್ಲಿ ಹಿಡಿತ ಸಾಧಿಸಿತು. 58ನೇ ನಿಮಿಷದಲ್ಲಿ ಪೆಡ್ರೊ ಪೊರೊ ಗೋಲು ಬಾರಿಸಿ ಮುನ್ನಡೆಯನ್ನು ಎರಡಕ್ಕೇರಿಸಿದರು. ಪಂದ್ಯದ ಕೊನೆಯ ಹಂತದಲ್ಲಿ ಫ್ರಾನ್ಸ್ ಕೆಲವು ದಾಳಿಗಳನ್ನು ನಡೆಸಿದರೂ, ಸ್ಪೇನ್ ಗೋಲ್ ಕೀಪರ್ ಉನೈ ಸೀಮನ್ ಮತ್ತು ಮಾರ್ಕ್ ಕುಕುರೆಲ್ಲಾ ಅವರ ಯಶಸ್ವಿ ರಕ್ಷಣೆಯಿಂದ ಗೋಲು ಗಳಿಸಲು ಸಾಧ್ಯವಾಗಲಿಲ್ಲ.
ಸ್ಪೇನ್ ತಂಡ ಈ ಗೆಲುವಿನೊಂದಿಗೆ ಎಲ್ಲಾ ಅಂತರರಾಷ್ಟ್ರೀಯ ಪಂದ್ಯಾವಳಿಯಲ್ಲಿ ಸತತ 37 ಪಂದ್ಯಗಳ ಅಜೇಯ ಓಟವನ್ನು ಮುಂದುವರಿಸಿ, ಇಟಲಿಯ ಸಾರ್ವಕಾಲಿಕ ಯುರೋಪಿಯನ್ ದಾಖಲೆಯನ್ನು ಸರಿಗಟ್ಟಿದೆ.
IND vs ENG: ಅಕ್ಷರ್ ಪಟೇಲ್ ಆಲ್‌ರೌಂಡರ್ ಆಟಕ್ಕೆ ಮಣಿದ ಇಂಗ್ಲೆಂಡ್, ಭಾರತ ಶುಭಾರಂಭ!
2024ರ ಯುರೋ ಕಪ್, 2025ರ ನೇಷನ್ಸ್ ಲೀಗ್ ಸೆಮೀಸ್‌ನಲ್ಲಿ ಕ್ರಮವಾಗಿ 2-1 ಮತ್ತು 5-4 ರಿಂದ ಫ್ರಾನ್ಸ್ ತಂಡವನ್ನು ಮಣಿಸಿ ಸ್ಪೇನ್ ಮೇಲುಗೈ ಸಾಧಿಸಿತ್ತು. ಫಿಫಾ ವಿಶ್ವಕಪ್ ಸೆಮಿಯಲ್ಲಿಯೂ ಸ್ಪೇನ್ ಮತ್ತೊಮ್ಮೆ ಗೆದ್ದು ಬೀಗಿತು.
ಸೋಲು ಕಂಡ ಫ್ರಾನ್ಸ್ ತಂಡವು ಶನಿವಾರ ನಡೆಯಲಿರುವ ಮೂರನೇ ಸ್ಥಾನಕ್ಕಾಗಿ ನಡೆಯುವ ಪಂದ್ಯದಲ್ಲಿ ಕಣಕ್ಕಿಳಿಯಲಿದೆ. ಅಲ್ಲಿ ಅರ್ಜೆಂಟೀನಾ ಮತ್ತು ಇಂಗ್ಲೆಂಡ್ ನಡವಣ ಪಂದ್ಯದಲ್ಲಿ ಸೋತ ತಂಡವನ್ನು ಎದುರಿಸಲಿದ್ದಾರೆ.