ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಫಿಫಾ ವಿಶ್ವಕಪ್‌: ಫ್ರಾನ್ಸ್‌ vs ಸ್ಪೇನ್‌ ಜಿದ್ದಾಜಿದ್ದಿನ ಸೆಮಿಫೈನಲ್‌ ಪಂದ್ಯಕ್ಕೆ ಕ್ಷಣಗಣನೆ

FIFA World Cup 2026: ಹಾಲಿ ವಿಶ್ವಕಪ್‌ನಲ್ಲಿ ಅತಿಹೆಚ್ಚು ಗೋಲು ಬಾರಿಸಿರುವ ಅಗ್ರ-5 ಆಟಗಾರರ ಪೈಕಿ ನಾಲ್ವರು ಸೆಮೀಸ್‌ನಲ್ಲಿ ಆಡಲಿದ್ದಾರೆ. ಲಿಯೋನೆಲ್‌ ಮೆಸ್ಸಿ ಹಾಗೂ ಕೀಲಿಯನ್‌ ಎಂಬಾಪೆ ತಲಾ 8 ಗೋಲು ಗಳಿಸಿ ಜಂಟಿ ಮೊದಲ ಸ್ಥಾನದಲ್ಲಿದ್ದಾರೆ. ಇಂಗ್ಲೆಂಡ್‌ನ ಹ್ಯಾರಿ ಕೇನ್‌ ಹಾಗೂ ಜ್ಯೂಡ್‌ ಬೆಲ್ಲಿಂಗ್‌ಹ್ಯಾಮ್‌ ತಲಾ 6 ಗೋಲು ದಾಖಲಿಸಿದ್ದಾರೆ. ಹೀಗಾಗಿ ಗೋಲ್ಡನ್‌ ಬೂಟ್‌ ರೇಸ್‌ನಲ್ಲಿ ತೀವ್ರ ಪೈಪೋಟಿ ಏರ್ಪಟ್ಟಿದೆ.

France vs Spain

ಅಟ್ಲಾಂಟಾ, ಜು.14: ಫಿಫಾ ವಿಶ್ವಕಪ್‌ನ ಸೆಮಿಫೈನಲ್‌ ಪಂದ್ಯಗಳಿಗೆ ಕ್ಷಣಗಣನೆ ಶುರುವಾಗಿದೆ. ಬದ್ಧವೈರಿಗಳ ನಡುವೆ ತೀವ್ರ ಜಿದ್ದಾಜಿದ್ದಿ ಏರ್ಪಡುವ ನಿರೀಕ್ಷೆ ಮೂಡಿಸಿದೆ. ಮೊದಲ ಸೆಮಿಯಲ್ಲಿ ಫ್ರಾನ್ಸ್‌ ಹಾಗೂ ಸ್ಪೇನ್‌ ಎದುರಾದರೆ, 2ನೇ ಸೆಮೀಸ್‌ನಲ್ಲಿ ಅರ್ಜೆಂಟೀನಾ ಹಾಗೂ ಇಂಗ್ಲೆಂಡ್‌ ಮುಖಾಮುಖಿ ಆಗಲಿವೆ. ಈ ನಾಲ್ಕೂ ತಂಡಗಳು ಮಾಜಿ ಚಾಂಪಿಯನ್‌ಗಳೇ. ಹೀಗಾಗಿ, ಯಾರಿಗೆ ಮತ್ತೊಮ್ಮೆ ಟ್ರೋಫಿ ಒಲಿಯಲಿದೆ ಎನ್ನುವ ಕುತೂಹಲವೂ ಇದೆ.

ಫ್ರಾನ್ಸ್‌ vs ಸ್ಪೇನ್‌

ಫ್ರಾನ್ಸ್ ಹಾಗೂ ಸ್ಪೇನ್‌ 2024ರ ಯುರೋಪಿಯನ್ ಚಾಂಪಿಯನ್‌ಶಿಪ್‌ನ ಸೆಮೀಸ್‌ನಲ್ಲಿ ಸೆಣಸಿದ್ದವು. ಅಲ್ಲಿ ಸ್ಪೇನ್‌ 2-1ರಲ್ಲಿ ಗೆದ್ದು, ಚಾಂಪಿಯನ್‌ ಸಹ ಆಗಿತ್ತು. 2024-25ರ ಯುಇಎಫ್‌ಎ ನೇಷನ್ಸ್‌ ಲೀಗ್‌ನ ಸೆಮೀಸ್‌ನಲ್ಲೂ ಸ್ಪೇನ್‌ ಮೇಲುಗೈ ಸಾಧಿಸಿತ್ತು. ಫ್ರಾನ್ಸ್‌ ವಿರುದ್ಧ 5-4ರಲ್ಲಿ ಜಯಿಸಿತ್ತು. ಕೇವಲ 2 ವರ್ಷದಲ್ಲಿ ಮತ್ತೊಂದು ಪ್ರತಿಷ್ಠಿತ ಟೂರ್ನಿಯ ಸೆಮೀಸ್‌ನಲ್ಲಿ ಉಭಯ ತಂಡಗಳು ಪರಸ್ಪರ ಎದುರಾಗಲು ಸಜ್ಜಾಗಿವೆ. ಹೀಗಾಗಿ, ಫ್ರಾನ್ಸ್‌ ಈಗ ಸೇಡಿಗೆ ಕಾಯುತ್ತಿದೆ. ಎಂಬಾಪೆ ಪ್ರಚಂಡ ಫಾರ್ಮ್‌ನಲ್ಲಿರುವುದು ಫ್ರಾನ್ಸ್‌ಗೆ ಆನೆ ಬಲ. ಇತ್ತಂಡಗಳ ಸೆಮಿ ಪಂದ್ಯ ಭಾರತೀಯ ಕಾಲಮಾಲ ಇಂದು ರಾತ್ರಿ 12.30ಕ್ಕೆ ನಡೆಯಲಿದೆ.

ಜಪಾನ್ ಓಪನ್: ಸಿಂಧು, ಲಕ್ಷ್ಯ ಸೇನ್ ಪದಕ ಭರವಸೆ

ಅರ್ಜೆಂಟೀನಾ vs ಇಂಗ್ಲೆಂಡ್‌

ಅರ್ಜೆಂಟೀನಾ ಹಾಗೂ ಇಂಗ್ಲೆಂಡ್‌ ನಡುವಣ ಪಂದ್ಯ ಕ್ರಿಕೆಟ್‌ನಲ್ಲಿ ಭಾರತ-ಪಾಕಿಸ್ತಾನ ಪಂದ್ಯಕ್ಕೆ ಇದ್ದಷ್ಟೇ ಕುತೂಹಲವಿದೆ. ಶೇ.100ರಷ್ಟು, ಬದ್ಧವೈರಿಗಳ ನಡುವಿನ ಕಾದಾಟ ಎಂದು ಕರೆಯಬಹುದು. 1986ರ ಫುಟ್ಬಾಲ್‌ ವಿಶ್ವಕಪ್‌ನ ಕ್ವಾರ್ಟರ್‌ ಫೈನಲ್‌ನಲ್ಲಿ ಉಭಯ ದೇಶಗಳ ಎದುರಾದಾಗ, ಡಿಯಾಗೋ ಮರಡೋನಾರ ‘ಹ್ಯಾಂಡ್‌ ಆಫ್‌ ಗಾಡ್‌’ ಗೋಲು ದಾಖಲಾಗಿತ್ತು. ಅದೇ ಪಂದ್ಯದಲ್ಲಿ ಮರಡೋನಾ, ಶತಮಾನದ ಶ್ರೇಷ್ಠ ಗೋಲು ಎಂದು ಕರೆಸಿಕೊಳ್ಳುವಂತಹ ಗೋಲು ಬಾರಿಸಿ, ಇಂಗ್ಲೆಂಡನ್ನು ವಿಶ್ವಕಪ್‌ನಿಂದ ಹೊರದಬ್ಬಿದ್ದರು. ಒಟ್ಟಾರೆ ಇತ್ತಂಡಗಳ ಪಂದ್ಯ ಪ್ರತಿಷ್ಠಿತ ಮತ್ತು ಸೇಡಿದ ಪಂದ್ಯವಾಗಿದೆ.

ಗೋಲ್ಡನ್‌ ಬೂಟ್‌ ರೇಸ್‌

ಹಾಲಿ ವಿಶ್ವಕಪ್‌ನಲ್ಲಿ ಅತಿಹೆಚ್ಚು ಗೋಲು ಬಾರಿಸಿರುವ ಅಗ್ರ-5 ಆಟಗಾರರ ಪೈಕಿ ನಾಲ್ವರು ಸೆಮೀಸ್‌ನಲ್ಲಿ ಆಡಲಿದ್ದಾರೆ. ಲಿಯೋನೆಲ್‌ ಮೆಸ್ಸಿ ಹಾಗೂ ಕೀಲಿಯನ್‌ ಎಂಬಾಪೆ ತಲಾ 8 ಗೋಲು ಗಳಿಸಿ ಜಂಟಿ ಮೊದಲ ಸ್ಥಾನದಲ್ಲಿದ್ದಾರೆ. ಇಂಗ್ಲೆಂಡ್‌ನ ಹ್ಯಾರಿ ಕೇನ್‌ ಹಾಗೂ ಜ್ಯೂಡ್‌ ಬೆಲ್ಲಿಂಗ್‌ಹ್ಯಾಮ್‌ ತಲಾ 6 ಗೋಲು ದಾಖಲಿಸಿದ್ದಾರೆ. ಹೀಗಾಗಿ ಗೋಲ್ಡನ್‌ ಬೂಟ್‌ ರೇಸ್‌ನಲ್ಲಿ ತೀವ್ರ ಪೈಪೋಟಿ ಏರ್ಪಟ್ಟಿದೆ.