ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಭಾರತದ ದಾಖಲೆಯ ರನ್ ಚೇಸ್ ಬಳಿಕ ಗುವಾಹಟಿ ಪಿಚ್ ವಿರುದ್ಧ ಗೌತಮ್ ಗಂಭೀರ್ ಕಿಡಿ

Gautam Gambhir: ಪಂದ್ಯದುದ್ದಕ್ಕೂ ಬರ್ಸಾಪಾರಾದ ಪಿಚ್ ಬ್ಯಾಟಿಂಗ್‌ಗೆ ಅತ್ಯಂತ ಪೂರಕವಾಗಿತ್ತು. ಆರಂಭಿಕ ಜೋಡಿಯಾಗಿ ಗಿಲ್ ಮತ್ತು ರೋಹಿತ್ 254 ರನ್‌ಗಳ ಜೊತೆಯಾಟದ ಮೂಲಕ ಎದುರಾಳಿ ಬೌಲಿಂಗ್ ದಾಳಿಯನ್ನು ಧ್ವಂಸಗೊಳಿಸುವ ಮುನ್ನ, ವೆಸ್ಟ್ ಇಂಡೀಸ್ ತಂಡವು ಮೂರು ಶತಕಗಳ ನೆರವಿನಿಂದ ತಮ್ಮ ಏಕದಿನ ಕ್ರಿಕೆಟ್ ಇತಿಹಾಸದ ಗರಿಷ್ಠ ಮೊತ್ತವನ್ನು ದಾಖಲಿಸಿತ್ತು.

Gautam Gambhir

ಗುವಾಹಟಿ, ಅ.1: ಬುಧವಾರ ಗುವಾಹಟಿಯ ಬರ್ಸಾಪರಾ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದಿದ್ದ ಭಾರತ ಮತ್ತು ವೆಸ್ಟ್ ಇಂಡೀಸ್ ನಡುವಿನ ಎರಡನೇ ಏಕದಿನ ಪಂದ್ಯದಲ್ಲಿ ಒಟ್ಟು 811 ರನ್‌ಗಳು ದಾಖಲಾದವು. ಒಬ್ಬ ಬ್ಯಾಟರ್ ದ್ವಿಶತಕ ಬಾರಿಸಿದರೆ, ಇನ್ನೂ ಮೂವರು ತಲಾ ಶತಕ ಸಿಡಿಸಿದರು. ವೆಸ್ಟ್ ಇಂಡೀಸ್ ತನ್ನ ಏಕದಿನ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ 400 ರನ್‌ಗಳ ಗಡಿಯನ್ನು ದಾಟಿತು. ಹಾಗೆಯೇ, ಭಾರತವೂ ತನ್ನ ಏಕದಿನ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ 400ಕ್ಕೂ ಹೆಚ್ಚು ರನ್‌ಗಳ ಗುರಿಯನ್ನು ಯಶಸ್ವಿಯಾಗಿ ಬೆನ್ನಟ್ಟಿತು. ರನ್‌ಗಳ ಮಹಾಪೂರವನ್ನೇ ಹರಿಸಿದ ಪಂದ್ಯ ಹಾಗೂ ಬೌಲರ್‌ಗಳಿಗೆ ಒಂದು ದುಃಸ್ವಪ್ನದಂತಿದ್ದ ಪಂದ್ಯವಾಗಿತ್ತು. ಇದೀಗ ಇಲ್ಲಿನ ಪಿಚ್‌ ಬಗ್ಗೆ ಟೀಮ್‌ ಇಂಡಿಯಾ ಮುಖ್ಯ ಕೋಚ್‌ ಗೌತಮ್‌ ಗಂಭೀರ್‌ ಟೀಕೆ ವ್ಯಕ್ತಪಡಿಸಿದ್ದಾರೆ.

"ಪ್ರಾಮಾಣಿಕವಾಗಿ ಹೇಳಬೇಕೆಂದರೆ, ಬ್ಯಾಟ್ ಮತ್ತು ಚೆಂಡಿನ ನಡುವೆ ಇನ್ನಷ್ಟು ಪೈಪೋಟಿ ಇರಬೇಕು ಎಂದು ನನಗೆ ಅನ್ನಿಸುತ್ತದೆ. ಏಕೆಂದರೆ ನಾವು ಕ್ರಿಕೆಟ್ ಬಗ್ಗೆ ಮಾತನಾಡುತ್ತೇವೆ. ಆದರೆ ಇದು ಕ್ರಿಕೆಟ್ ಅಲ್ಲ, ಇದು ಕೇವಲ ಬ್ಯಾಟಿಂಗ್," ಎಂದು ಗಂಭೀರ್ 'ಸ್ಟಾರ್ ಸ್ಪೋರ್ಟ್ಸ್'ಗೆ ತಿಳಿಸಿದರು.

ಶುಭಮನ್‌ ಗಿಲ್‌ ವೇಗದ ದ್ವಿಶತಕ; ವೆಸ್ಟ್ ಇಂಡೀಸ್ ವಿರುದ್ಧ ದಾಖಲೆಯ ರನ್ ಚೇಸ್‌ ಮಾಡಿ ಗೆದ್ದ ಭಾರತ!

"ಈ ಪಿಚ್‌ನಲ್ಲಿ ಬೌಲಿಂಗ್ ಮಾಡುವ ಯುವ ಬೌಲರ್‌ನೊಬ್ಬನ ಬಗ್ಗೆ ಯೋಚಿಸಿ. ಎದುರಾಳಿ ತಂಡ 400 ರನ್ ಗಳಿಸುತ್ತದೆ ಮತ್ತು ನಂತರ ನಾವು ಆ 400 ರನ್‌ಗಳನ್ನು ಬೆನ್ನಟ್ಟಿ ಗೆಲ್ಲುತ್ತೇವೆ. ಸಹಜವಾಗಿಯೇ, ದಾಖಲೆಗಳ ದೃಷ್ಟಿಯಿಂದ, ಪ್ರೇಕ್ಷಕರಿಗೆ ಹಾಗೂ ಪ್ರಸಾರಕರಿಗೆ ಇದು ಅತ್ಯುತ್ತಮ ಸಂಗತಿಯೇ ಸರಿ. ಆದರೆ ಒಬ್ಬ ಅಪ್ಪಟ ಕ್ರಿಕೆಟ್ ಅಭಿಮಾನಿಯಾಗಿ ಮತ್ತು ಕೋಚ್ ಆಗಿ ನನ್ನನ್ನು ಕೇಳಿದರೆ, ನಾನು ಬೌಲರ್‌ಗಳ ಬಗ್ಗೆಯೂ ಸಹಾನುಭೂತಿ ಹೊಂದಿರಬೇಕಾಗುತ್ತದೆ" ಎಂದು ಅವರು ಹೇಳಿದರು.

ಪಂದ್ಯದುದ್ದಕ್ಕೂ ಬರ್ಸಾಪಾರಾದ ಪಿಚ್ ಬ್ಯಾಟಿಂಗ್‌ಗೆ ಅತ್ಯಂತ ಪೂರಕವಾಗಿತ್ತು. ಆರಂಭಿಕ ಜೋಡಿಯಾಗಿ ಗಿಲ್ ಮತ್ತು ರೋಹಿತ್ 254 ರನ್‌ಗಳ ಜೊತೆಯಾಟದ ಮೂಲಕ ಎದುರಾಳಿ ಬೌಲಿಂಗ್ ದಾಳಿಯನ್ನು ಧ್ವಂಸಗೊಳಿಸುವ ಮುನ್ನ, ವೆಸ್ಟ್ ಇಂಡೀಸ್ ತಂಡವು ಮೂರು ಶತಕಗಳ ನೆರವಿನಿಂದ ತಮ್ಮ ಏಕದಿನ ಕ್ರಿಕೆಟ್ ಇತಿಹಾಸದ ಗರಿಷ್ಠ ಮೊತ್ತವನ್ನು ದಾಖಲಿಸಿತ್ತು.