ನವದೆಹಲಿ, ಫೆ.4: 2026 ರ ಐಸಿಸಿ ಪುರುಷರ ಟಿ 20 ವಿಶ್ವಕಪ್(T20 World Cup 2026)ಗೆ ಮುನ್ನ ತಂಡದೊಂದಿಗೆ ಸಂಪರ್ಕ ಸಾಧಿಸಲು ಭಾರತದ ಮುಖ್ಯ ಕೋಚ್ ಗೌತಮ್ ಗಂಭೀರ್(Gautam Gambhir) ಮಂಗಳವಾರ ರಾತ್ರಿ ದೆಹಲಿಯಿಂದ ಮುಂಬೈಗೆ ಪ್ರಯಾಣ ಬೆಳೆಸಿದರು. ಮೂರನೇ ಬಾರಿಗೆ ಟ್ರೋಫಿ ಗೆದ್ದು ಇತಿಹಾಸವನ್ನು ಸೃಷ್ಟಿಸಲು ಭಾರತ ತಂಡ ಸಜ್ಜಾಗಿದೆ. ಇದರ ನಡುವೆ ಫೆ.15ರಂದು ಕೊಲಂಬೊದಲ್ಲಿ ನಿಗದಿಯಾಗಿರುವ ಭಾರತ ವಿರುದ್ಧ ಐಸಿಸಿ ಟಿ20 ವಿಶ್ವಕಪ್ ಪಂದ್ಯ ಬಹಿಷ್ಕರಿಸುವುದಾಗಿ ಪಾಕಿಸ್ತಾನ ಸರ್ಕಾರ ಹೇಳಿದೆ.
ಪಾಕಿಸ್ತಾನದ ಕುರಿತು ಮಾಧ್ಯಮದವರು ಪ್ರಶ್ನಿಸಿದಾಗ ಗಂಭೀರ್ ಯಾವುದೇ ಪ್ರತಿಕ್ರಿಯೆಯನ್ನು ನೀಡಿಲ್ಲ. ಅವರು ಪ್ರಶ್ನೆಗೆ ಪ್ರತಿಕ್ರಿಯಿಸಲು ಹಿಂಜರಿದರು. ಬದಲಾಗಿ, ಪಂದ್ಯಾವಳಿಗೆ ಮುಂಚಿತವಾಗಿ ವರದಿಗಾರರ ಶುಭಾಶಯಗಳಿಗೆ ಧನ್ಯವಾದ ತಿಳಿಸಿ ಪಾಕಿಸ್ತಾನಕ್ಕೆ ಸಂಬಂಧಿಸಿದ ವಿಷಯದ ಬಗ್ಗೆ ಪ್ರತಿಕ್ರಿಯಿಸುವುದನ್ನು ತಪ್ಪಿಸಿದರು.
ಪಿಸಿಬಿಗೆ ಐಸಿಸಿ ಎಚ್ಚರಿಕೆ
ಭಾರತ ತಂಡದ ವಿರುದ್ಧದ ಪಂದ್ಯವನ್ನು ಬಹಿಷ್ಕಾರ ಮಾಡಿದರೆ ಪಾಕಿಸ್ತಾನ ತೀವ್ರ ಸಂಕಷ್ಟಕ್ಕೆ ಸಿಲುಕಲಿದೆ. ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ICC) ಕೂಡ ಎಚ್ಚರಿಕೆ ನೀಡಿದೆ. ಇದರ ಜೊತೆಗೆ ಪಾಕಿಸ್ತಾನಕ್ಕೆ ಭಾರಿ ದಂಡ ಮತ್ತು ಸಂಭಾವ್ಯ ನಿಷೇಧವೂ ಎದುರಾಗಬಹುದು. ಪಾಕಿಸ್ತಾನಕ್ಕೆ ಐಸಿಸಿ ನೀಡಬೇಕಾದ ವಾರ್ಷಿಕ ಆದಾಯ ಹಂಚಿಕೆಯನ್ನು ಸಂಪೂರ್ಣವಾಗಿ ತಡೆಹಿಡಿಯುವ ಸಾಧ್ಯತೆ ಇದೆ. ಈ ಆದಾಯದ ಮೊತ್ತವು ಸುಮಾರು 3.5 ಕೋಟಿ ರು ಅಮೆರಿಕನ್ ಡಾಲರ್‌ಗಳಷ್ಟಿದ್ದು, ಆ ಮೊತ್ತದಿಂದಲೇ ಅಧಿಕೃತ ಪ್ರಸಾರಕರಿಗೆ ಪಾವತಿ ಮಾಡುವ ಆಯ್ಕೆಯನ್ನು ಐಸಿಸಿ ಪರಿಗಣಿಸುತ್ತಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.
T20 World Cup: ಪಾಕಿಸ್ತಾನಕ್ಕೆ ಮತ್ತೊಂದು ಸಂಕಷ್ಟ; ಪಿಸಿಬಿಗೆ ಐಸಿಸಿ ವಾರ್ನಿಂಗ್!
ಪಾಕ್ ತಂಡದೊಳಗೆ ಗೊಂದಲ
ಪಾಕಿಸ್ತಾನ ತಂಡದ ನಾಯಕ ಸಲ್ಮಾನ್ ಅಲಿ ಆಘಾ ಈ ಬೆಳವಣಿಗೆಯ ಕುರಿತು ಪ್ರತಿಕ್ರಿಯೆ ನೀಡಿದ್ದು, ಮಂಡಳಿಯ ನಿರ್ಧಾರದ ಮುಂದೆ ತಾನು ಅಸಹಾಯಕ ಎಂದು ಹೇಳಿಕೊಂಡಿದ್ದಾರೆ. ನಾವೇನೂ ಮಾಡಲು ಸಾಧ್ಯವಿಲ್ಲ, ಮಂಡಳಿಯ ಆದೇಶಗಳನ್ನು ಪಾಲಿಸುವುದು ಅಷ್ಟೇ ನಮ್ಮ ಕೆಲಸ ಎಂದು ಅವರು ಹೇಳಿದ್ದಾರೆ.
ಐಸಿಸಿ ನಿಯಮ ಏನು ಹೇಳುತ್ತದೆ?
ಐಸಿಸಿಯ ಪ್ರತಿ ಸದಸ್ಯ ರಾಷ್ಟ್ರವು ಸ್ವತಂತ್ರವಾಗಿ ಕಾರ್ಯನಿರ್ವಹಿಸಬೇಕು. ಯಾವುದೇ ದೇಶದ ಕ್ರಿಕೆಟ್ ಮಂಡಳಿಯ ಪರವಾಗಿ ಆ ದೇಶದ ಸರ್ಕಾರ ಅಥವಾ ಸಾರ್ವಜನಿಕ ಇಲಾಖೆ ನಿರ್ಧಾರ ಕೈಗೊಳ್ಳುವಂತಿಲ್ಲ. ಒಂದೊಮ್ಮೆ ಕ್ರಿಕೆಟ್ ಮಂಡಳಿಯ ಕಾರ್ಯಚಟುವಟಿಕೆಗಳಲ್ಲಿ ಸರ್ಕಾರ ತಲೆಹಾಕಿದರೆ, ಆ ದೇಶವನ್ನು ಅಮಾನತುಗೊಳಿಸಲು ಐಸಿಸಿಗೆ ಹಕ್ಕಿದೆ.