ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ರಾಹುಲ್‌-ಗಿಲ್‌ ಶತಕ; ಮೊದಲ ದಿನವೇ ಹಿಡಿತ ಸಾಧಿಸಿದ ಭಾರತ

ಶುಭಮನ್ ಗಿಲ್ ಒಂದು ವರ್ಷದ ಅವಧಿಯಲ್ಲಿ 1,000 ಟೆಸ್ಟ್ ರನ್ ಗಳಿಸಿದ ಮೊದಲ ಭಾರತೀಯ ನಾಯಕ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಒಟ್ಟಾರೆಯಾಗಿ, ಗಿಲ್ 1,000 ಟೆಸ್ಟ್ ರನ್ ಗಳಿಸಿದ 11 ನೇ ಭಾರತೀಯ ನಾಯಕ. ಇನ್ನಿಂಗ್ಸ್‌ಗಳ ವಿಷಯದಲ್ಲಿ ಈ ಸಾಧನೆಗೈದ ಎರಡನೇ ಭಾರತೀಯ. ದಾಖಲೆ ದಂತಕಥೆ ಸುನಿಲ್ ಗವಾಸ್ಕರ್(14 ಇನಿಂಗ್ಸ್‌) ಹೆಸರಿನಲ್ಲಿದೆ.

shubman gill and kl rahul

ಮುಲ್ಲನ್‌ಪುರ, ಜೂ.6: ಪ್ರವಾಸಿ ಅಫ್ಘಾನಿಸ್ತಾನ ವಿರುದ್ಧದ ಏಕೈಕ ಟೆಸ್ಟ್‌(IND vs AFG One-off Test) ಪಂದ್ಯದ ಮೊದಲ ದಿನವೇ ಆತಿಥೇಯ ಭಾರತ ತಂಡ ಹಿಡಿತ ಸಾಧಿಸಿದೆ. ಕೆ.ಎಲ್‌ ರಾಹುಲ್‌(100) ಮತ್ತು ನಾಯಕ ಶುಭಮನ್‌ ಗಿಲ್‌ ಅಜೇಯ ಶತಕದ ನೆರವಿನಿಂದ ಮೊದಲ ದಿನದಾಟದ ಅಂತ್ಯಕ್ಕೆ 3 ವಿಕೆಟ್‌ಗೆ 368 ರನ್‌ ಗಳಿಸಿದೆ.

ಮುಲ್ಲಾನ್‌ಪುರ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಈ ಟೆಸ್ಟ್‌ ಪಂದ್ಯದಲ್ಲಿ ಟಾಸ್‌ ಗೆದ್ದ ಶುಭಮನ್‌ ಗಿಲ್‌, ಮೊದಲು ಬ್ಯಾಟಿಂಗ್‌ ಮಾಡಲು ನಿರ್ಧರಿಸಿದರು. ನಾಯಕನ ಆಯ್ಕೆಯನ್ನು ಸಮರ್ಥಿಸಿಕೊಂಡ ಆರಂಭಿಕ ಬ್ಯಾಟರ್‌ಗಳಾದ ಯಶಸ್ವಿ ಜೈಸ್ವಾಲ್‌ ಮತ್ತು ಕೆ.ಎಲ್‌ ರಾಹುಲ್‌ ಉತ್ತಮ ಆರಂಭ ಒದಗಿಸಿದರು. ಈ ಜೋಡಿ ಮೊದಲ ವಿಕೆಟ್‌ಗೆ 41 ರನ್‌ ಕಲೆಹಾಕಿತು. ಜೈಸ್ವಾಲ್‌( 24) ರನ್‌ ಗಳಿಸಿದರು.

ಜೈಸ್ವಾಲ್‌ ವಿಕೆಟ್‌ ಪತನದ ಬಳಿಕ ರಾಹುಲ್‌ ಜತೆಗೂಡಿದ ಸಾಯಿ ಸುದರ್ಶನ್‌ 77.88ರ ಸ್ಟ್ರೈಕ್‌ರೇಟ್‌ನಲ್ಲಿ ಬ್ಯಾಟಿಂಗ್‌ ನಡೆಸಿ ಅರ್ಧಶತಕ ಬಾರಿಸಿದರು. ಒಂದು ಹಂತದಲ್ಲಿ ರಾಹುಲ್‌ ಅವರನ್ನು ಹಿಂದಿಕ್ಕಿ ಶತಕ ಬಾರಿಸುವ ಅಂಚಿನಲ್ಲಿದ್ದರು. ಆದರೆ 81 ರನ್‌ ಗಳಿಸಿದ ವೇಳೆ ಆತುರ ಬ್ಯಾಟಿಂಗ್‌ ನಡೆಸಲು ಮುಂದಾಗಿ ಕೀಪರ್‌ ಅಫ್ಸರ್ ಜಜೈಗೆ ಕ್ಯಾಚ್ ನೀಡಿ ವಿಕೆಟ್‌ ಕಳೆದುಕೊಂಡರು. 2ನೇ ವಿಕೆಟ್‌ಗೆ ರಾಹುಲ್‌ ಮತ್ತು ಸಾಯಿ ಸುದರ್ಶನ್‌ 180ರನ್‌ಗಳ ಅಮೂಲ್ಯ ಜತೆಯಾಟ ನಡೆಸಿದರು.

ಜೀವದಾನ ಪಡೆದು ಶತಕ ಬಾರಿಸಿದ ರಾಹುಲ್‌

11ನೇ ಓವರ್‌ನಲ್ಲಿ ಕೀಪರ್‌ ಕ್ಯಾಚ್ ಆಗಿದ್ದರೂ ಅಂಪೈರ್‌ ಮತ್ತು ಆಫ್ಘಾನ್‌ ನಾಯಕ ರಿವ್ಯೂ ಪಡೆಯದೇ ಇದ್ದ ಕಾರಣ ಜೀವದಾನ ಪಡೆದ ರಾಹುಲ್‌ ಇದರ ಸಂಪೂರ್ಣ ಲಾಭವೆತ್ತಿದರು. ಟಿವಿ ಅಂಪೈರ್‌ ಪರಿಶೀಲನೆ ವೇಳೆ ಸ್ನೀಕೊ ಮೀಟರ್‌ನಲ್ಲಿ ಚೆಂಡು ಬ್ಯಾಟಿಗೆ ತಾಗಿರುವುದು ಸ್ಪಷ್ಟವಾಗಿ ಕಾಣಿಸುತ್ತಿತ್ತು. ಆದರೆ ಅದಾಗಲೇ ಸಮಯ ಮೀರಿ ಹೋಗಿತ್ತು. ಆ ಬಳಿಕ ತಾಳ್ಮೆಯ ಬ್ಯಾಟಿಂಗ್‌ ನಡೆಸಿದ ರಾಹುಲ್‌ ಶತಕ ಬಾರಿಸಿ ಮಿಂಚಿದರು. ಆದರೆ ಶತಕ ಬಾರಿಸಿದ ಮರು ಎಸೆತದಲ್ಲೆ ವಿಕೆಟ್‌ ಕಳೆದುಕೊಂಡರು. 165 ಎಸೆತಗಳಲ್ಲಿ 11 ಬೌಂಡರಿ ಸಿಡಿಸಿ ಭರ್ತಿ 100 ರನ್‌ ಗಳಿಸಿದರು. ಇದು ರಾಹುಲ್‌ ಅವರ 12ನೇ ಟೆಸ್ಟ್‌ ಶತಕ. ರಾಹುಲ್‌ ವಿಕೆಟ್‌ ಪತನದ ಬಳಿಕ ಬಿರುಸಿನ ಬ್ಯಾಟಿಂಗ್‌ ನಡೆಸಿದ ಶುಭಮನ್‌ ಗಿಲ್‌ ಅಜೇಯ ಶತಕ ಬಾರಿಸಿದರು. ಇವರ ಜತೆಗಾರ ರಿಷಭ್‌ ಪಂತ್‌ ಕೂಡ ಬೀಸಾಟ ನಡೆಸಿ ಅರ್ಧಶತಕ ಪೂರ್ತಿಗೊಳಿಸಿದರು. ಶುಭಮನ್‌ ಗಿಲ್‌(103*) ಮತ್ತು ರಿಷಭ್‌ ಪಂತ್‌(50*) ರನ್‌ ಗಳಿಸಿದ್ದು, ಎರಡನೇ ದಿನಕ್ಕೆ ಬ್ಯಾಟಿಂಗ್‌ ಕಾಯ್ದುಕೊಂಡಿದ್ದಾರೆ.

ದಾಖಲೆ ಬರೆದ ಗಿಲ್‌

ಶುಭಮನ್ ಗಿಲ್ ಒಂದು ವರ್ಷದ ಅವಧಿಯಲ್ಲಿ 1,000 ಟೆಸ್ಟ್ ರನ್ ಗಳಿಸಿದ ಮೊದಲ ಭಾರತೀಯ ನಾಯಕ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಒಟ್ಟಾರೆಯಾಗಿ, ಗಿಲ್ 1,000 ಟೆಸ್ಟ್ ರನ್ ಗಳಿಸಿದ 11 ನೇ ಭಾರತೀಯ ನಾಯಕ. ಇನ್ನಿಂಗ್ಸ್‌ಗಳ ವಿಷಯದಲ್ಲಿ ಈ ಸಾಧನೆಗೈದ ಎರಡನೇ ಭಾರತೀಯ. ದಾಖಲೆ ದಂತಕಥೆ ಸುನಿಲ್ ಗವಾಸ್ಕರ್(14 ಇನಿಂಗ್ಸ್‌) ಹೆಸರಿನಲ್ಲಿದೆ.



ಮಾನವ್ ಸುತಾರ್ ಪದಾರ್ಪಣೆ

ಭಾರತ ಈ ಪಂದ್ಯದಲ್ಲಿ 23 ವರ್ಷದ ರಾಜಸ್ಥಾನ ಮೂಲದ ಮಾನವ್ ಸುತಾರ್‌ಗೆ ಚೊಚ್ಚಲ ಅವಕಾಶ ನೀಡಿತು. ದೀರ್ಘ ಸ್ವರೂಪದ ಕ್ರಿಕೆಟ್‌ನಲ್ಲಿ ಭಾರತವನ್ನು ಪ್ರತಿನಿಧಿಸಿದ 319 ನೇ ಆಟಗಾರ ಎಂಬ ಹೆಗ್ಗಳಿಕೆಗೆ ಅವರು ಪಾತ್ರರಾದರು. ಕುಲ್‌ದೀಪ್ ಯಾದವ್ ಕ್ಯಾಪ್‌ ನೀಡಿ ತಂಡಕ್ಕೆ ಸ್ವಾಗತಿಸಿದರು.