ಮುಂಬಯಿ: ಮಾದಕದ್ರವ್ಯ ಸೇವನೆ ಆರೋಪದಲ್ಲಿ ಅಮಾನತು ಶಿಕ್ಷೆ ಪೂರ್ಣಗೊಳಿಸಿರುವ ದಕ್ಷಿಣ ಆಫ್ರಿಕಾದ ವೇಗಿ ಕಗಿಸೊ ರಬಾಡ(Kagiso Rabada) ಅವರು ಗುಜರಾತ್ ಟೈಟಾನ್ಸ್(Gujarat Titans) ತಂಡವನ್ನು ಸೇರಿಕೊಂಡಿದ್ದಾರೆ ಎಂದು ಗುಜರಾತ್ ಟೈಟಾನ್ಸ್‌ನ ಕ್ರಿಕೆಟ್ ನಿರ್ದೇಶಕ ವಿಕ್ರಮ್ ಸೋಲಂಕಿ(Vikram Solanki) ತಿಳಿಸಿದ್ದಾರೆ. ಇಂದು ನಡೆಯುವ ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ(IPL 2025) ರಬಾಡ ಕಣಕ್ಕಿಳಿಯಲಿದ್ದಾರೆ.
ಗುಜರಾತ್ ಟೈಟಾನ್ಸ್ ಪರ ಮೊದಲ 2 ಪಂದ್ಯಗಳಲ್ಲಿ ಆಡಿದ ನಂತರ ವೈಯಕ್ತಿಕ ಕಾರಣ ನೀಡಿ ಐಪಿಎಲ್ 18ನೇ ಆವೃತ್ತಿಯಿಂದ ಹೊರಗುಳಿದಿದ್ದರು. ಆ ಬಳಿಕ ಅವರು ಕಾರ್ಯಕ್ಷಮತೆ ಹೆಚ್ಚಿಸುವ ಉದ್ದೀಪನವಲ್ಲದ ನಿಷೇಧಿತ ರಿಕ್ರಿಯೇಷನಲ್ ಡ್ರಗ್ (ಮನರಂಜನಾ ಉದ್ದೀಪನ) ಬಳಕೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿ ತಾತ್ಕಾಲಿಕವಾಗಿ ಅಮಾನತುಗೊಂಡಿದ್ದರು. ಇದೀಗ ಶಿಕ್ಷೆ ಪೂರ್ಣಗೊಳಿಸಿ ಮತ್ತೆ ಐಪಿಎಲ್‌ಗೆ ಮರಳಿದ್ದಾರೆ.
'ರಬಾಡ ಅವರು ತನ್ನ ತಪ್ಪಿಗೆ ವಿಷಾದ ವ್ಯಕ್ತಪಡಿಸಿದ್ದಾರೆ. ದಕ್ಷಿಣ ಆಫ್ರಿಕಾದ ಮಾದಕದ್ರವ್ಯ ಮುಕ್ತ ಕ್ರೀಡಾ ಸಂಸ್ಥೆ (ಎಸ್ಎಐಡಿಎಸ್) ತನಿಖೆಯನ್ನು ಪೂರ್ಣಗೊಳಿಸಿದೆ. ಹೀಗಾಗಿ ಐಪಿಎಲ್‌ನ ಉಳಿದ ಪಂದ್ಯಗಳಲ್ಲಿ ರಬಾಡ ಆಯ್ಕೆಗೆ ಲಭ್ಯವಿದ್ದಾರೆ' ಎಂದು ಗುಜರಾತ್ ಟೈಟನ್ಸ್ ತನ್ನ ಹೇಳಿಕೆಯಲ್ಲಿ ತಿಳಿಸಿದೆ. ದಕ್ಷಿಣ ಆಫ್ರಿಕಾ ಪರ 70 ಟೆಸ್ಟ್, 106 ಏಕದಿನ, 65 ಟಿ20 ಪಂದ್ಯ ಆಡಿದ್ದು, ಒಟ್ಟಾರೆ 550ಕ್ಕೂ ಅಧಿಕ ವಿಕೆಟ್ ಕಬಳಿಸಿದ್ದಾರೆ.
ಇದನ್ನೂ ಓದಿ IPL 2025: ಐಪಿಎಲ್‌ನಲ್ಲಿ ನೂತನ ದಾಖಲೆ ಬರೆದ ಪ್ಯಾಟ್ ಕಮಿನ್ಸ್
ವಾಂಖೆಡೆ ಕ್ರೀಡಾಂಗಣದಲ್ಲಿ ಇಂದು ಬಲಿಷ್ಠ ತಂಡಗಳಾದ ಮುಂಬೈ ಮತ್ತು ಗುಜರಾತ್ ಸೆಣಸಾಟ ನಡೆಸಲಿದೆ. ಸತತ 5 ಗೆಲುವಿನೊಂದಿಗೆ ಮುನ್ನಗುತ್ತಿರುವ ಮುಂಬೈ ಈ ಪಂದ್ಯವನ್ನು ಗೆದ್ದು ಅಗ್ರಸ್ಥಾನ ವಶಪಡಿಸಿಕೊಳ್ಳುವ ತವಕದಲ್ಲಿದೆ. ಇನನ್ನೊಂದೆಡೆ ಗುಜರಾತ್‌ನ ಅಗ್ರ ಮೂವರು ಬ್ಯಾಟರ್‌ಗಳಾದ ಸಾಯಿ ಸುದರ್ಶನ್ (504 ರನ್), ಶುಭಮಾನ್ ಗಿಲ್ (465) ಹಾಗೂ ಜೋಸ್ ಬಟ್ಲರ್ (470) ಅವರನ್ನು ಕಟ್ಟಿಹಾಕುವುದು ಮುಂಬೈಗೆ ಸವಾಲೆನಿಸಲಿದೆ.