ಗುವಾಹಟಿ, ಎ.7: ಇಂದು (ಮಂಗಳವಾರ) ನಡೆಯಲಿರುವ ಐಪಿಎಲ್ ಟೂರ್ನಿಯ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ಮತ್ತು ಮುಂಬೈ ಇಂಡಿಯನ್ಸ್(RR vs MI) ತಂಡಗಳು ಮುಖಾಮುಖಿಯಾಗಲಿವೆ. ಈ ಪಂದ್ಯಕ್ಕೂ ಭಾರೀ ಮಳೆ ಭೀತಿ ಎದುರಾಗಿದ್ದು ಪಂದ್ಯ ನಡೆಯುವುದು ಅನುಮಾನ ಎನ್ನಲಾಗಿದೆ. ಸೋಮವಾರ ಕೋಲ್ಕತಾದಲ್ಲಿ ನಡೆಯಬೇಕಿದ್ಧ ಕೆಕೆಆರ್ ಮತ್ತು ಪಂಜಾಬ್ ನಡುವಣ ಪಂದ್ಯ ಮಳೆಯಿಂದ ರದ್ದಾಗಿತ್ತು.
ಅಕ್ಯೂವೆದರ್ ಪ್ರಕಾರ, ಇಂದು ಗುವಾಹಟಿಯಲ್ಲಿ ಮಳೆಯಾಗುವ ಸಾಧ್ಯತೆ ಶೇ. 49 ರಿಂದ ಶೇ. 55 ರಷ್ಟು ಇದ್ದು, ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ. ಈ ಮೈದಾನದ ಒಳಚರಂಡಿ ವ್ಯವಸ್ಥೆಯೂ ತೀರಾ ಕಳಪೆಯಾಗಿದೆ. ಒಂದೊಮ್ಮೆ ಮಳೆಯಿಂದ ಅಡಚಣೆಯಾದರೆ ಪಂದ್ಯಕ್ಕೆ ಮೈದಾನವನ್ನು ಇಲ್ಲಿ ಸಿದ್ಧಪಡಿಸುವುದು ಕೂಡ ಸವಾಲಿನಿಂದ ಕೂಡಿದೆ. ಹೀಗಾಗಿ ಮಳೆ ಬಂದರೆ ಬಹುತೇಕ ಪಂದ್ಯ ರದ್ದಾಗುವ ಸಾಧ್ಯತೆ ಹೆಚ್ಚು.
ಮಧ್ಯಾಹ್ನ 1 ರಿಂದ 3 ಗಂಟೆಯ ಸುಮಾರಿಗೆ ಮಳೆ ಸಾಕಷ್ಟು ಹಾನಿಯನ್ನುಂಟುಮಾಡುವ ಸಾಧ್ಯತೆ ಇದೆ. ಈ ಸಮಯದಲ್ಲಿ ಗುಡುಗು ಸಹಿತ ಮಳೆಯಾಗುವ ಮುನ್ಸೂಚನೆ ಇದೆ. ಒಂದೊಮ್ಮೆ ಮಳೆಯಿಂದ ಪಂದ್ಯ ರದ್ದಾದರೆ ಉಭಯ ತಂಡಗಳಿಗೂ ತಲಾ ಒಂದು ಅಂಕ ಹಂಚಲಾಗುತ್ತದೆ.
ರಾಜಸ್ಥಾನ್ ರಾಯಲ್ಸ್ ತಂಡ ಕಳೆದ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ವಿರುದ್ಧ ಅದ್ಭುತ ಜಯ ಸಾಧಿಸಿತ್ತು. ಮುಂಬೈ ಇಂಡಿಯನ್ಸ್ ತಂಡ ಡೆಲ್ಲಿ ವಿರುದ್ಧ ಹೀನಾಯ ಸೋಲು ಕಂಡಿತ್ತು. ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಹಿಂದಿನ ಪಂದ್ಯವನ್ನು ತಪ್ಪಿಸಿಕೊಂಡಿದ್ದ ಮುಂಬೈ ಇಂಡಿಯನ್ಸ್ ತಂಡಕ್ಕೆ ನಾಯಕ ಹಾರ್ದಿಕ್ ಪಾಂಡ್ಯ ಮರಳುವಿಕೆಯಿಂದ ಹೊಸ ಉತ್ಸಾಹ ಬಂದಿದೆ. ಮತ್ತೆ ಗೆಲುವಿನ ಹಾದಿಗೆ ಮರಳುವ ಉತ್ಸಾಹದಲ್ಲಿದೆ.
ಮುಖಾಮುಖಿ
ಉಭಯ ತಂಡಗಳು ಈವರೆಗಿನ ಐಪಿಎಲ್ ಟೂರ್ನಿಯಲ್ಲಿ 31 ಪಂದ್ಯಗಳನ್ನು ಆಡಿದ್ದು ಈ ಪೈಕಿ ಮುಂಬೈ ಇಂಡಿಯನ್ಸ್ 16 ಮತ್ತು ರಾಜಸ್ಥಾನ್ 14 ಪಂದ್ಯ ಗೆದ್ದಿದೆ. ಒಂದು ಪಂದ್ಯ ಫಲಿತಾಂಶ ಕಂಡಿಲ್ಲ.
ಯುವ ಆಟಗಾರರನ್ನು ನೆಚ್ಚಿಕೊಂಡಿರುವ ರಾಜಸ್ಥಾನ್ ತಂಡ ಎಲ್ಲ ವಿಭಾಗದಲ್ಲಿಯೂ ಬಲಷ್ಠವಾಗಿದೆ. ಬೌಲಿಂಗ್ ವಿಭಾಗದಲ್ಲಿ ಸ್ಪಿನ್ನರ್ ರವಿ ಬಿಷ್ಣೋಯಿ, ವೇಗಿ ಜೋಫ್ರಾ ಆರ್ಚರ್, ತುಷಾರ್ ದೇಶಪಾಂಡೆ ಅವರು ಈಚೆಗೆ ಗುಜರಾತ್ ಟೈಟನ್ಸ್ ಎದುರಿನ ಪಂದ್ಯದಲ್ಲಿ ತಮ್ಮ ತಂಡವನ್ನು ಗೆಲುವಿನತ್ತ ಮುನ್ನಡೆಸಿದ್ದರು. ಅದರಲ್ಲೂ ಜೋಫ್ರಾ ಮತ್ತು ತುಷಾರ್ ಅವರು ಕೊನೆಯ ಎರಡು ಓವರ್‌ಗಳಲ್ಲಿ ಎದುರಾಳಿಗಳಿಗೆ ಸೋಲಿನ ಆಘಾತ ನೀಡಿದ್ದರು.
Virat Kohli: 'ಧುರಂಧರ್-2' ಚಿತ್ರದ ವಿಮರ್ಶೆ ನೀಡಿದ ವಿರಾಟ್ ಕೊಹ್ಲಿ
15 ವರ್ಷದ ವೈಭವ್ ಸೂರ್ಯವಂಶಿ ಮತ್ತು ಯಶಸ್ವಿ ಜೈಸ್ವಾಲ್ ಅವರು ಉತ್ತಮ ಆರಂಭ ನೀಡುವಲ್ಲಿ ಯಶಸ್ವಿಯಾಗಿದ್ದಾರೆ. ಧ್ರುವ ಜುರೇಲ್ ಕಳೆದ ಪಂದ್ಯದಲ್ಲಿ ತಂಡದ ಗೆಲುವಿನ ರೂವಾರಿ ಯಾಗಿದ್ದರು. ಶಿಮ್ರಾನ್ ಹೆಟ್ಮೆಯರ್, ಆಲ್‌ರೌಂಡರ್ ರವೀಂದ್ರ ಜಡೇಜ, ಶುಭಂ ದುಬೆ ಅವರು ಮಧ್ಯಮ ಕ್ರಮಾಂಕಕ್ಕೆ ಬಲ ತುಂಬುವ ಆಟಗಾರರಾಗಿದ್ದಾರೆ.