ಅಹಮದಾಬಾದ್, ಡಿ.2: ಟೀಮ್ ಇಂಡಿಯಾದ ಸ್ಟಾರ್ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ(Hardik Pandya) ಫಿಟ್‌ನೆಸ್ ಪರೀಕ್ಷೆಯಲ್ಲಿ ತೇರ್ಗಡೆಯಾಗಿದ್ದು, ಇಂದು(ಮಂಗಳವಾರ) ಹೈದರಾಬಾದ್‌ನಲ್ಲಿ ನಡೆಯಲಿರುವ ಸೈಯದ್ ಮುಷ್ತಾಕ್ ಅಲಿ ಟ್ರೋಫಿಯ(Syed Mushtaq Ali Trophy) ಪಂದ್ಯದಲ್ಲಿ ಬರೋಡಾ ತಂಡದ ಪರ ಕಣಕ್ಕಿಳಿಯುವ ಸಾಧ್ಯತೆ ಇದೆ.
ತೊಡೆಯ ಗಾಯದಿಂದ ಗುಣಮುಖವಾಗಿರುವ ಹಾರ್ದಿಕ್, ಎರಡೂವರೆ ತಿಂಗಳ ನಂತರ ತಮ್ಮ ಮೊದಲ ಪಂದ್ಯವನ್ನು ಪಂಜಾಬ್ ವಿರುದ್ಧ ಆಡಲಿದ್ದಾರೆ. ಡಿ.4 ರಂದು ಗುಜರಾತ್ ವಿರುದ್ಧದ ಪಂದದಲ್ಲೂ ಅವರು ಆಡುವರು. ಈ ಎರಡೂ ಪಂದ್ಯಗಳಲ್ಲಿ ರಾಷ್ಟ್ರೀಯ ಆಯ್ಕೆ ಸಮಿತಿಯ ಪ್ರಗ್ಯಾನ್ ಓಜಾ ಹಾಜರಿದ್ದು, ದಕ್ಷಿಣ ಆಫ್ರಿಕಾ ವಿರುದ್ಧದ ಟಿ20 ಸರಣಿಗೆ ತಂಡವನ್ನು ಘೋಷಿಸುವ ಮೊದಲು ಹಾರ್ದಿಕ್ ಅವರ ಒಟ್ಟಾರೆ ಫಿಟ್‌ನೆಸ್ ಅನ್ನು ಪರಿಶೀಲಿಸಲಿದ್ದಾರೆ. ಇದೇ 9ರಿಂದ ಐದು ಪಂದ್ಯಗಳ ಟಿ20 ಸರಣಿ ನಡೆಯಲಿದೆ.
ಸೆಪ್ಟೆಂಬರ್‌ನಲ್ಲಿ ನಡೆದಿದ್ದ ಏಷ್ಯಾಕಪ್ ಟೂರ್ನಿಯಲ್ಲಿ ಮೊಣಕಾಲಿನ ಗಾಯಕ್ಕೆ ತುತ್ತಾದ ಕಾರಣ ತಂಡದಿಂದ ಹೊರಬಿದ್ದಿದ್ದರು. ಇದರಿಂದಾಗಿ ಆಸ್ಟ್ರೇಲಿಯಾ ಮತ್ತು ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಸರಣಿಯಲ್ಲಿ ಅವರು ಕಣಕ್ಕಿಳಿಯಲು ಸಾಧ್ಯವಾಗಲಿಲ್ಲ. ಪಾಂಡ್ಯ ಅಕ್ಟೋಬರ್ 21ರಿಂದ ನವೆಂಬರ್ 30ರವರೆಗೆ ಬೆಂಗಳೂರಿನ ಬಿಸಿಸಿಐ ಉತ್ಕೃಷ್ಟತಾ ಕೇಂದ್ರದಲ್ಲಿ ಪುನಶ್ಚೇತನ ಶಿಬಿರದಲ್ಲಿ ಭಾಗಿಯಾಗಿ ಚೇತರಿಸಿಕೊಂಡಿದ್ದರು.
ಇದನ್ನೂ ಓದಿ ಹೊಸ ಹುಡುಗಿ ಜೊತೆ ಮತ್ತೆ ಎಂಗೇಜ್‌ಮೆಂಟ್ ಮಾಡಿಕೊಂಡ್ರಾ ಹಾರ್ದಿಕ್ ಪಾಂಡ್ಯ?
ಫಿಟ್ನೆಸ್ ಪರೀಕ್ಷೆಗೆ ಒಳಗಾಗಲಿರುವ ಗಿಲ್
ಭಾರತ ಟಿ20 ಕ್ರಿಕೆಟ್ ತಂಡದ ಉಪ ನಾಯಕ ಶುಭಮನ್ ಗಿಲ್ ಅವರು ಕೂಡ ಬೆಂಗಳೂರಿನ ಬಿಸಿಸಿಐ ಉತ್ಕೃಷ್ಟತಾ ಕೇಂದ್ರದಲ್ಲಿ ಫಿಟ್ನೆಸ್ ಪರೀಕ್ಷೆ ಎದುರಿಸಿದ್ದಾರೆ. ಕೋಲ್ಕತ್ತದಲ್ಲಿ ನಡೆದ ದಕ್ಷಿಣ ಆಫ್ರಿಕಾ ಎದುರಿನ ಮೊದಲ ಟೆಸ್ಟ್ ಪಂದ್ಯದಲ್ಲಿ ಗಿಲ್ ಅವರು ಬ್ಯಾಟಿಂಗ್ ಮಾಡುವಾಗ ಕುತ್ತಿಗೆಯ ಸ್ನಾಯುಸೆಳೆತಕ್ಕೊಳಗಾಗಿದ್ದರು. ಹೀಗಾಗಿ ದ್ವಿತೀಯ ಟೆಸ್ಟ್ ಮತ್ತು ಏಕದಿನ ಸರಣಿಯಿಂದ ಹೊರಬಿದ್ದಿದ್ದರು.
"ಪುನರ್ವಸತಿ ಪ್ರಕ್ರಿಯೆಯಲ್ಲಿ ನಾಯಕ ಸಾಕಷ್ಟು ಶ್ರಮ ವಹಿಸಿದ್ದಾರೆ. ಎಲ್ಲವೂ ಯೋಜನೆಯ ಪ್ರಕಾರ ನಡೆದರೆ, ಅವರು ಡಿಸೆಂಬರ್ 6-7 ರೊಳಗೆ ಕಟಕ್‌ನಲ್ಲಿರಬೇಕು, ಆಗ ಟಿ20ಐ ತಂಡ ಸೇರುವ ನಿರೀಕ್ಷೆಯಿದೆ" ಎಂದು ಬಿಸಿಸಿಐ ಸೆಂಟರ್ ಆಫ್ ಎಕ್ಸಲೆನ್ಸ್‌ನ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಕಟಕ್‌ನಲ್ಲಿ ನಡೆಯುವ ಆರಂಭಿಕ ಟಿ20ಐ ನಂತರ, ಉಳಿದ ಪಂದ್ಯಗಳನ್ನು ನ್ಯೂಚಂಡೀಗಢ (ಡಿಸೆಂಬರ್ 11), ಧರ್ಮಶಾಲಾ (ಡಿಸೆಂಬರ್ 14), ಲಕ್ನೋ (ಡಿಸೆಂಬರ್ 17) ಮತ್ತು ಅಹಮದಾಬಾದ್ (ಡಿಸೆಂಬರ್ 19) ನಲ್ಲಿ ಆಡಲಾಗುತ್ತದೆ.