ವಡೋದರಾ, ಜ.31: ಭಾರತ ಮತ್ತು ಮುಂಬೈ ಇಂಡಿಯನ್ಸ್(Mumbai Indians) ತಂಡದ ನಾಯಕಿ ಹರ್ಮನ್‌ಪ್ರೀತ್ ಕೌರ್(Harmanpreet Kaur) ಅವರು ಶುಕ್ರವಾರ ನಡೆದ ಮಹಿಳಾ ಪ್ರೀಮಿಯರ್ ಲೀಗ್(WPL 2026)ನ ಗುಜರಾತ್ ಜೈಂಟ್ಸ್ ವಿರುದ್ಧದ ಪಂದ್ಯದಲ್ಲಿ ಅರ್ಧಶತಕ ಬಾರಿಸುವ ಮೂಲಕ ದಾಖಲೆಯೊಂದನ್ನು ನಿರ್ಮಿಸಿದ್ದಾರೆ. ಮಹಿಳಾ ಪ್ರೀಮಿಯರ್ ಲೀಗ್‌ನಲ್ಲಿ ಒಂದು ತಂಡದ ವಿರುದ್ಧ 500 ರನ್ ಗಳಿಸಿದ ವಿಶ್ವದ ಮೊದಲ ಮತ್ತು ಏಕೈಕ ಆಟಗಾರ್ತಿ ಎಂಬ ಹಿರಿಮೆಗೆ ಪಾತ್ರರಾಗಿದ್ದಾರೆ.
ಡಬ್ಲ್ಯೂಪಿಎಲ್‌ನಲ್ಲಿ ಮುಂಬೈ ಇಂಡಿಯನ್ಸ್ ತಂಡದ ನಾಯಕಿಯಾಗಿರುವ ಹರ್ಮನ್, ಗುಜರಾತ್ ಜೈಂಟ್ಸ್ ವಿರುದ್ಧ ಇಲ್ಲಿಯವರೆಗೆ ಆಡಿರುವ ಒಂಬತ್ತು ಡಬ್ಲ್ಯೂಪಿಎಲ್ ಪಂದ್ಯಗಳಲ್ಲಿ 504 ರನ್ ಗಳಿಸಿದ್ದಾರೆ. ಆಶ್ಲೀ ಗಾರ್ಡ್ನರ್ ನೇತೃತ್ವದ ಅಹಮದಾಬಾದ್ ಮೂಲದ ಫ್ರಾಂಚೈಸಿ ವಿರುದ್ಧ ಅವರು ಆರು ಅರ್ಧಶತಕಗಳನ್ನು ಗಳಿಸಿದ್ದಾರೆ.
WPL ನಲ್ಲಿ ಒಂದು ತಂಡದ ವಿರುದ್ಧ ಅತಿ ಹೆಚ್ಚು ರನ್ ಗಳಿಸಿದ ಬ್ಯಾಟ್ಸ್‌ಮನ್‌ಗಳ ಪಟ್ಟಿಯಲ್ಲಿ, ಹರ್ಮನ್ ನಂತರ ನ್ಯಾಟ್ ಸಿವರ್-ಬ್ರಂಟ್ ಇದ್ದಾರೆ. WPL ನಲ್ಲಿ ಮುಂಬೈ ಇಂಡಿಯನ್ಸ್ ಅನ್ನು ಪ್ರತಿನಿಧಿಸುವ ಇಂಗ್ಲಿಷ್ ಆಲ್‌ರೌಂಡರ್, ಯುಪಿ ವಾರಿಯರ್ಜ್ ವಿರುದ್ಧ ಒಂಬತ್ತು ಪಂದ್ಯಗಳಲ್ಲಿ 378 ರನ್ ಗಳಿಸಿದ್ದಾರೆ.
ಇಂದಿನ ಅಂತಿಮ ಟಿ20 ಪಂದ್ಯಕ್ಕೆ ಹಾರ್ದಿಕ್ ಪಾಂಡ್ಯಗೆ ವಿಶ್ರಾಂತಿ; ಅಕ್ಷರ್, ಇಶಾನ್‌ಗೆ ಸ್ಥಾನ
ಗುಜರಾತ್ ಜೈಂಟ್ಸ್ ವಿರುದ್ಧದ WPL 2026 ರ ಕೊನೆಯ ಲೀಗ್ ಪಂದ್ಯದಲ್ಲಿ ಬಿರುಸಿನ ಬ್ಯಾಟಿಂಗ್ ನಡೆಸಿದ ಅವರು 48 ಎಸೆತಗಳಲ್ಲಿ ಅಜೇಯ 82 ರನ್ ಗಳಿಸಿದರು. ಅವರ ಈ ಬ್ಯಾಟಿಂಗ್ ಇನಿಂಗ್ಸ್‌ನಲ್ಲಿ 8 ಬೌಂಡರಿ ಮತ್ತು 4 ಸಿಕ್ಸರ್ ಸಿಡಿಯಿತು. ಆದರೆ ತಂಡವನ್ನು ಗೆಲುವಿನ ದಡ ಸೇರಿಸಲು ಸಾಧ್ಯವಾಗಲಿಲ್ಲ. 168 ರನ್‌ಗಳ ಗುರಿಯನ್ನು ಬೆನ್ನಟ್ಟಿದ ಮುಂಬೈ ತಂಡವು 7 ವಿಕೆಟ್‌ಗೆ 156 ರನ್ ಗಳಿಸಲಷ್ಟೇ ಶಕ್ತವಾಯಿತು.
11 ರನ್‌ಗಳ ಗೆಲುವು ಸಾಧಿಸಿದ ಗುಜರಾತ್ ಜೈಂಟ್ಸ್ ತಂಡವು ಲಿಮಿನೇಟರ್‌ಗೆ ಅರ್ಹತೆ ಪಡೆಯಿತು. ಎರಡು ಬಾರಿಯ ಚಾಂಪಿಯನ್ ಮುಂಬೈ (6 ಅಂಕ) ತಂಡದ ಪ್ಲೇ ಆಫ್ ಭವಿಷ್ಯ ಭಾನುವಾರ ನಡೆಯುವ ಡೆಲ್ಲಿ ಕ್ಯಾಪಿಟಲ್ಸ್ (6 ಅಂಕ) ಮತ್ತು ಯು.ಪಿ ವಾರಿಯರ್ಸ್ (4 ಅಂಕ) ಪಂದ್ಯದ ಮೇಲೆ ನಿಂತಿದೆ. ಆ ಪಂದ್ಯದಲ್ಲಿ ವಾರಿಯರ್ಸ್ ಗೆದ್ದರೆ ಮುಂಬೈ ತಂಡಕ್ಕೆ ‘ಅದೃಷ್ಟ’ದ ಬಾಗಿಲು ತೆರೆಯಲಿದೆ.