ಮುಂಬಯಿ: ಸೆಪ್ಟೆಂಬರ್ 30 ರಿಂದ ಭಾರತವು ಐಸಿಸಿ ಮಹಿಳಾ ಕ್ರಿಕೆಟ್ ವಿಶ್ವಕಪ್ 2025 ಅನ್ನು ಆಯೋಜಿಸಲಿದ್ದು, ಭಾರತದ ನಾಯಕಿ ಹರ್ಮನ್‌ಪ್ರೀತ್ ಕೌರ್ ತವರು ನೆಲದಲ್ಲಿ ಈ ಬಾರಿ ವಿಶ್ವಕಪ್ ಗೆಲ್ಲುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಭಾರತ ತಂಡವು ಕ್ರಮವಾಗಿ 2005 ಮತ್ತು 2017 ರಲ್ಲಿ ವಿಶ್ವಕಪ್ ಫೈನಲ್ ತಲುಪುವ ಮೂಲಕ ಎರಡು ಬಾರಿ ವಿಶ್ವಕಪ್ ಗೆಲ್ಲುವ ಸನಿಹಕ್ಕೆ ಬಂದಿತ್ತು. ಆದಾಗ್ಯೂ, ಎರಡೂ ಸಂದರ್ಭಗಳಲ್ಲಿಯೂ ಫೈನಲ್‌ನಲ್ಲಿ ಸೋತಿತ್ತು. ಇದೀಗ ತವರಿನಲ್ಲಿ ನಡೆಯುವ ಮೆಗಾ ಟೂರ್ನಿಗೆ ಕೇವಲ 50 ದಿನಗಳ ಬಾಕಿ ಇದೆ. ಈ ಸಂದರ್ಭದಲ್ಲಿ ಮಾತನಾಡಿರುವ ತಂಡದ ನಾಯಕ ಕೌರ್, ತಡೆಗೋಡೆಯನ್ನು ಮುರಿದು ದೇಶಕ್ಕಾಗಿ ಏನಾದರೂ ವಿಶೇಷವಾದದ್ದನ್ನು ಮಾಡಲು ತಂಡ ದೃಢನಿಶ್ಚಯ ಹೊಂದಿದೆ ಎಂದು ಹೇಳಿದ್ದಾರೆ.
"ಎಲ್ಲಾ ಭಾರತೀಯರು ಕಾಯುತ್ತಿರುವ ಆ ಕ್ಷಣವನ್ನು ಈಡೇರಿಸಲು ನಾವು ಬಯಸುತ್ತೇವೆ. ವಿಶ್ವಕಪ್‌ಗಳು ಯಾವಾಗಲೂ ವಿಶೇಷವಾಗಿರುತ್ತವೆ. ಯಾವಾಗಲೂ ನನ್ನ ದೇಶಕ್ಕಾಗಿ ವಿಶೇಷವಾದದ್ದನ್ನು ಮಾಡಲು ಬಯಸುತ್ತೇನೆ. ನಾನು ಯುವಿ ಭಯ್ಯಾ (ಯುವರಾಜ್ ಸಿಂಗ್) ಅವರನ್ನು ನೋಡಿದಾಗಲೆಲ್ಲಾ ಅದು ನನಗೆ ಬಹಳಷ್ಟು ಪ್ರೇರಣೆ ನೀಡುತ್ತದೆ" ಎಂದು ಕೌರ್ ಏಕದಿನ ವಿಶ್ವಕಪ್‌ನ ಟ್ರೋಫಿ ಅನಾವರಣ ಸಮಾರಂಭದಲ್ಲಿ ಹೇಳಿದರು.
13ನೇ ಆವೃತ್ತಿಯ ಟೂರ್ನಿಯಲ್ಲಿ ಎಂಟು ತಂಡಗಳು ರೌಂಡ್ ರಾಬಿನ್ ಸ್ವರೂಪದಲ್ಲಿ ಸ್ಪರ್ಧಿಸಲಿದ್ದು, ಅಗ್ರ ನಾಲ್ಕು ತಂಡಗಳು ಸೆಮಿಫೈನಲ್‌ಗೆ ಅರ್ಹತೆ ಪಡೆಯುತ್ತವೆ. ವಿಶ್ವಕಪ್ ಟೂರ್ನಿಗೂ ಮುನ್ನ ಭಾರತ ಸೆಪ್ಟೆಂಬರ್ 14 ರಿಂದ ಆಸ್ಟ್ರೇಲಿಯಾ ವಿರುದ್ಧ ಮೂರು ಪಂದ್ಯಗಳ ಏಕದಿನ ಸರಣಿಯನ್ನು ಆಡಲಿದೆ. ಹಾಲಿ ಚಾಂಪಿಯನ್‌ಗಳ ವಿರುದ್ಧ ಆಡುತ್ತಿರುವ ಕಾರಣ ಟೂರ್ನಿಗೆ ಪರಿಪೂರ್ಣ ತಯಾರಿ ನಡೆಸಲು ಈ ಸರಣಿ ಮಹತ್ವದ್ದಾಗಿದೆ.
Harmanpreet Kaur eyes history at home — the 2025 Women's ODI World Cup glory! 🏆🏏#CricketTwitter pic.twitter.com/wvJi4v4Jwn
— Female Cricket (@imfemalecricket) August 11, 2025
"ಆಸ್ಟ್ರೇಲಿಯಾ ವಿರುದ್ಧ ಆಡುವುದು ಯಾವಾಗಲೂ ಸವಾಲಿನ ಸಂಗತಿ ಮತ್ತು ನಮ್ಮ ಸ್ಥಾನಮಾನ ಏನೆಂದು ನಮಗೆ ತಿಳಿಯುತ್ತದೆ. ಸರಣಿ (ಆಸ್ಟ್ರೇಲಿಯಾ ವಿರುದ್ಧ ಮೂರು ಏಕದಿನ ಪಂದ್ಯಗಳು) ನಮಗೆ ಹೆಚ್ಚಿನ ಆತ್ಮವಿಶ್ವಾಸವನ್ನು ನೀಡುತ್ತದೆ. ನಮ್ಮ ತರಬೇತಿ ಶಿಬಿರಗಳಲ್ಲಿ ನಾವು ಸಾಕಷ್ಟು ಪ್ರಯತ್ನ ಮಾಡುತ್ತಿದ್ದೇವೆ ಮತ್ತು ಫಲಿತಾಂಶಗಳು ತೋರಿಸುತ್ತಿವೆ" ಎಂದು ಹರ್ಮನ್‌ಪ್ರೀತ್ ಹೇಳಿದರು.