ಲಕ್ನೋ: ಸೋಮವಾರ ನಡೆದಿದ್ದ ಸನ್‌ರೈಸರ್ಸ್ ಹೈದರಾಬಾದ್(LSG vs SRH) ವಿರುದ್ಧದ ಮಹತ್ವದ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ತಂಡ 6 ವಿಕೆಟ್ ಅಂತರದ ಸೋಲು ಕಾಣುವ ಮೂಲಕ ಹಾಲಿ ಆವೃತ್ತಿಯ ಐಪಿಎಲ್(IPL 2025) ಟೂರ್ನಿಯಿಂದ ಹೊರಬಿದಿತು. ಸೋಲು ಕಂಡರೂ ಹೈದರಾಬಾದ್ ತಂಡದ ವೇಗಿ ಹರ್ಷಲ್ ಪಟೇಲ್(Harshal Patel) ದಾಖಲೆಯೊಂದನ್ನು ಬರೆದರು.
ಹರ್ಷಲ್ ಪಟೇಲ್ ಒಂದು ವಿಕೆಟ್ ಕೀಳುವ ಮೂಲಕ ಐಪಿಎಲ್‌ನಲ್ಲಿ ಅತಿ ವೇಗವಾಗಿ 150 ವಿಕೆಟ್ ಪೂರ್ತಿಗೊಳಿಸಿದ ಲಸಿತ್ ಮಾಲಿಂಗ ಅವರ ದಾಖಲೆ ಮುರಿದರು. ಜತೆಗೆ ಐಪಿಎಲ್‌ನಲ್ಲಿ ಈ ಸಾಧನೆ ಮಾಡಿದ ಮೊದಲ ಭಾರತೀಯ ಬೌಲರ್ ಎನಿಸಿಕೊಂಡರು. ಆದರೆ ಬೌಲಿಂಗ್‌ನಲ್ಲಿ ಹರ್ಷಲ್ ದುಬಾರಿಯಾದರು. 49 ರನ್ ಬಿಟ್ಟುಕೊಟ್ಟರು.
ಸೋತು ಹೊರಬಿದ್ದ ಲಕ್ನೋ
ಏಕಾನ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದಿದ್ದ ಈ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಲಕ್ನೋ ಸೂಪರ್ ಜೈಂಟ್ಸ್ ತಂಡ ಆರಂಭಿಕ ಬ್ಯಾಟರ್‌ಗಳಾದ ಮಿಚೆಲ್ ಮಾರ್ಷ್ ಮತ್ತು ಐಡೆನ್ ಮಾರ್ಕ್ರಮ್ ಅರ್ಧಶತಕದ ನೆರವಿನಿಂದ 7 ವಿಕೆಟ್‌ಗೆ 205 ರನ್ ಮೊತ್ತ ಪೇರಿಸಿತು. ಜವಾಬಿತ್ತ ಸನ್‌ರೈಸರ್ಸ್ ಹೈದರಾಬಾದ್ ದಿಟ್ಟ ರೀತಿಯ ಬ್ಯಾಟಿಂಗ್ ಮೂಲಕ 18.2 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 206 ರನ್ ಬಾರಿಸಿ ಗೆಲುವು ಸಾಧಿಸಿ ಲಕ್ನೋ ತಂಡವನ್ನು ಪ್ಲೇಆಫ್‌ರೇಸ್‌ನಿಂದ ಹೊರದಬ್ಬಿತು.
ಚೇಸಿಂಗ್ ವೇಳೆ ಹೈದರಾಬಾದ್ ತಂಡಕ್ಕೆ ಎಡಗೈ ಆರಂಭಿಕ ಬ್ಯಾಟರ್ ಅಭಿಷೇಕ್ ಶರ್ಮ ಅರ್ಧಶತಕ ಬಾರಿಸುವ ಮೂಲಕ ಆಸರೆಯಾದರು. ಆರಂಭದಿಂದಲೇ ಆಕ್ರಮಣಕಾರಿ ಬ್ಯಾಟಿಂಗ್‌ಗೆ ಒತ್ತುಕೊಟ್ಟ ಅವರು 6 ಸಿಕ್ಸರ್ ಮತ್ತು 4 ಬೌಂಡರಿ ಸಿಡಿಸಿ 59 ರನ್ ಬಾರಿಸಿದರು.