ದೋಹಾ, ನ.22: ಭಾನುವಾರದಂದು ನಡೆದ 'ರೈಸಿಂಗ್ ಸ್ಟಾರ್ಸ್ ಏಷ್ಯಾ ಕಪ್'ನ ಇಂಡಿಯಾ 'ಎ' ಮತ್ತು ಪಾಕಿಸ್ತಾನ 'ಎ' ತಂಡಗಳ ನಡುವಿನ ಪಂದ್ಯದಲ್ಲಿ ಹರ್ಷಿತ್ ರಾಣಾ ತಮ್ಮ ವಿಶಿಷ್ಟ ಆಕ್ರಮಣಕಾರಿ ಶೈಲಿಯನ್ನು ಪ್ರದರ್ಶಿಸಿದರು. ದೋಹಾದ ವೆಸ್ಟ್ ಎಂಡ್ ಪಾರ್ಕ್ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ಈ ತೀವ್ರ ಪೈಪೋಟಿಯ ಪಂದ್ಯದಲ್ಲಿ, ಭಾರತದ ಈ ವೇಗದ ಬೌಲರ್ ಪಾಕಿಸ್ತಾನದ ಬ್ಯಾಟರ್ಗಳೊಂದಿಗೆ ಹಲವು ಬಾರಿ ಮಾತಿನ ಚಕಮಕಿಯಲ್ಲಿ ತೊಡಗುವ ಮೂಲಕ ಅಂಪೈರ್ಗಳ ಕೆಂಗಣ್ಣಿಗೂ ಕಾರಣರಾದರು.
ಪಾಕಿಸ್ತಾನ 'ಎ' ತಂಡವು ತಮ್ಮ ಇನ್ನಿಂಗ್ಸ್ ಅನ್ನು ಭರ್ಜರಿಯಾಗಿ ಆರಂಭಿಸಿತು. ಆರಂಭಿಕ ಆಟಗಾರರಾದ ಶಮೈಲ್ ಹುಸೇನ್ ಮತ್ತು ಮಾಜ್ ಸದಾಕತ್, ಭಾರತೀಯ ಬೌಲರ್ಗಳ ಮೇಲೆ ಸವಾರಿ ನಡೆಸುತ್ತಾ 6 ಓವರ್ಗಳಲ್ಲಿ 64 ರನ್ಗಳನ್ನು ಕಲೆಹಾಕಿದರು ಮತ್ತು ಬೌಲಿಂಗ್ ವಿಭಾಗವನ್ನು ಒತ್ತಡಕ್ಕೆ ಸಿಲುಕಿಸಿದರು. ಅದರಲ್ಲೂ ರಾಣಾ ಎಸೆದ ಮೊದಲ ಎಸೆತವನ್ನೇ ಬೌಂಡರಿಗಟ್ಟಿದ ಸಿಟ್ಟು ಕೂಡ ಇತ್ತು. ಇದನ್ನು ಪಂದ್ಯದುದಕ್ಕೂ ತೋರ್ಪಡಿಸಿದರು.
ರಾಣಾ ಅವರು ರೋಹೈಲ್ ನಜೀರ್ ಅವರನ್ನು ಔಟ್ ಮಾಡಿದಾಗ ನಾಟಕೀಯ ಸನ್ನಿವೇಶ ಮುಂದುವರಿಯಿತು. ಭಾರತೀಯ ವೇಗದ ಬೌಲರ್ ಎಸೆದ ಚೆಂಡು ಬ್ಯಾಟರ್ಗೆ ವೇಗವಾಗಿ ಅಪ್ಪಳಿಸಿತು. ಚೆಂಡಿನ ದಿಕ್ಕಿಗೆ ಅಡ್ಡಲಾಗಿ ಆಡಲು ಪ್ರಯತ್ನಿಸಿದ ಬ್ಯಾಟರ್, ಸ್ಟಂಪ್ಗಳ ಮುಂದೆ ಸಿಕ್ಕಿಹಾಕಿಕೊಂಡರು. ಅಂಪೈರ್ ಔಟ್ ಎಂದು ತೀರ್ಪು ನೀಡುತ್ತಿದ್ದಂತೆಯೇ, ರಾಣಾ ತಮ್ಮ ಎದೆಯನ್ನು ಪದೇ ಪದೇ ಬಾರಿಸಿಕೊಳ್ಳುವ ಮೂಲಕ ಸಂಭ್ರಮಿಸಿದರು.
ಇದಾದ ಬಳಿಕ ಹಸನ್ ನವಾಜ್ ಅವರು ರಾಣಾ ಅವರ ಮಾತಿನ ದಾಳಿಗೆ ಗುರಿಯಾದರು. ಪಾಕಿಸ್ತಾನದ ಈ ಬ್ಯಾಟರ್ ಒಂದು ಎಸೆತವನ್ನು ಆಡದೆ ಬಿಟ್ಟಾಗ, ರಾಣಾ ಅವರ ಕಡೆಗೆ ಸನ್ನೆ ಮಾಡುತ್ತಾ ಅವರನ್ನು ಕೆಣಕುವುದನ್ನು ಮುಂದುವರಿಸಿದರು. ಆದರೆ, ನವಾಜ್ ಈ ಪ್ರಚೋದನೆಗೆ ಯಾವುದೇ ಪ್ರತಿಕ್ರಿಯೆ ನೀಡದಿರಲು ನಿರ್ಧರಿಸಿದರು. ಪಂದ್ಯದಲ್ಲಿ ಒಟ್ಟು 10 ಓವರ್ ಎಸೆದ ರಾಣಾ 77 ರನ್ಗೆ 2 ವಿಕೆಟ್ ಕಿತ್ತರು.
ಎರಡೂ ಇನಿಂಗ್ಸ್ನಲ್ಲಿ ನ್ಯೂಜಿಲೆಂಡ್ ನಾಯಕನನ್ನು ಶೂನ್ಯಕ್ಕೆ ಔಟ್ ಮಾಡಿ ವಿಶೇಷ ದಾಖಲೆ ಬರೆದ ಜಸ್ಪ್ರೀತ್ ಬುಮ್ರಾ
ಬೃಹತ್ ಮೊತ್ತ ಕಲೆ ಹಾಕಿದ ಪಾಕ್
ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ನಡೆಸಿದ ಪಾಕಿಸ್ತಾನ 49.2 ಓವರ್ಗಳಲ್ಲಿ 313 ರನ್ ಗಳಿಸಿ ಆಲೌಟ್ ಆಯಿತು. ತಂಡದ ಪರ ಮೂವರು ಬ್ಯಾಟರ್ಗಳು ಅರ್ಧಶತಕ ಸಿಡಿಸಿದರು. ಆರಂಭಿಕ ಬ್ಯಾಟರ್ ಮಾಜ್ ಸದಾಕತ್(59) ಮತ್ತು ಮಧ್ಯಮ ಕ್ರಮಾಂಕದ ಬ್ಯಾಟರ್ಗಳಾದ ಹಸನ್ ನವಾಜ್(79), ಫರ್ಹಾನ್ ಯೂಸಫ್(56) ರನ್ ಗಳಿಸಿದರು.