ನವದೆಹಲಿ, ಆ.29: ನೆದರ್ಲ್ಯಾಂಡ್ಸ್ ಮತ್ತು ಬೆಲ್ಜಿಯಂನಲ್ಲಿ ನಡೆದ ಹಾಕಿ ವಿಶ್ವಕಪ್‌ನಲ್ಲಿ ಐತಿಹಾಸಿಕ ಐದನೇ ಸ್ಥಾನ ಪಡೆದ ಭಾರತೀಯ ಮಹಿಳಾ ತಂಡಕ್ಕೆ ಹಾಕಿ ಇಂಡಿಯಾ 50 ಲಕ್ಷ ನಗದು ಬಹುಮಾನಗಳನ್ನು ಘೋಷಿಸಿದೆ. 1974ರ ಚೊಚ್ಚಲ ಆವೃತ್ತಿಯಲ್ಲಿ ನಾಲ್ಕನೇ ಸ್ಥಾನ ಪಡೆದ ನಂತರ ವಿಶ್ವಕಪ್‌ನಲ್ಲಿ ಭಾರತ ವನಿತೆಯರ ಅತ್ಯುತ್ತಮ ಸಾಧನೆಯಾಗಿದೆ.
ಸಲೀಮಾ ಟೆಟೆ ನಾಯಕತ್ವದ ಭಾರತ ತಂಡವು ಗುರುವಾರ ಆಮ್‌ಸ್ಟೆಲ್ವೀನ್‌ನಲ್ಲಿ ನಡೆದ ಪಂದ್ಯದಲ್ಲಿ 3–1 ಗೋಲುಗಳಿಂದ ವಿಶ್ವದ ಐದನೇ ಕ್ರಮಾಂಕದ ಜರ್ಮನಿ ತಂಡಕ್ಕೆ ಆಘಾತ ನೀಡಿ ಐದನೇ ಸ್ಥಾನದೊಂದಿಗೆ ಅಭಿಯಾನ ಮುಗಿಸಿತ್ತು.
"ಭಾರತ ಮಹಿಳಾ ಹಾಕಿಗೆ ಇದು ಐತಿಹಾಸಿಕ ಫಲಿತಾಂಶವಾಗಿದೆ. 52 ವರ್ಷಗಳ ನಂತರ ವಿಶ್ವಕಪ್‌ನಲ್ಲಿ ಐದನೇ ಸ್ಥಾನ ಗಳಿಸುವುದು ಟೂರ್ನಿಯುದ್ದಕ್ಕೂ ಆಟಗಾರ್ತಿಯರು ತೋರಿಸಿರುವ ಕಠಿಣ ಪರಿಶ್ರಮ, ಸ್ಥಿರತೆ ಮತ್ತು ಹೋರಾಟದ ಮನೋಭಾವಕ್ಕೆ ಸಾಕ್ಷಿಯಾಗಿದೆ. ತಂಡಕ್ಕೆ 50 ಲಕ್ಷ ಬಹುಮಾನ ಘೋಷಿಸಿದ್ದೇನೆ" ಎಂದು ಹಾಕಿ ಇಂಡಿಯಾ ಅಧ್ಯಕ್ಷ ದಿಲೀಪ್ ಟಿರ್ಕಿ ಹೇಳಿದ್ದಾರೆ.
ಏಷ್ಯನ್ ಗೇಮ್ಸ್‌ಗೆ ತೆರಳಿದ್ದ ಭಾರತದ ಓಟಗಾರ ಅಭಿಷೇಕ್ ಪಾಲ್‌ಗೆ ನಾಡಾ ನೋಟಿಸ್ ಜಾರಿ
ಭಾರತವು ಟೂರ್ನಿಯಲ್ಲಿ ಆರು ಪಂದ್ಯಗಳನ್ನು ಆಡಿದ್ದು, ಹಾಲಿ ಚಾಂಪಿಯನ್ ಆಗಿರುವ ಡಚ್ ತಂಡದ ವಿರುದ್ಧ ಮಾತ್ರ ಸೋತಿತು. ಚೀನಾ, ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾ ತಂಡಗಳನ್ನು ಡ್ರಾದಲ್ಲಿ ಕೊನೆಗೊಳಿಸಿದರೂ, ಜರ್ಮನಿ ವಿರುದ್ಧದ ಗೆಲುವಿನ ಜೊತೆಗೆ ದಕ್ಷಿಣ ಆಫ್ರಿಕಾ ವಿರುದ್ಧ 6-1 ಅಂತರದ ಗೆಲುವು ದಾಖಲಿಸಿತ್ತು.
ಸೆಮಿಫೈನಲ್‌ಗೆ ಅರ್ಹತೆ ಪಡೆಯಲು ಎರಡನೇ ಪೂಲ್ ಹಂತದ ತನ್ನ ಕೊನೆಯ ಪಂದ್ಯದಲ್ಲಿ, ಆಸ್ಟ್ರೇಲಿಯಾ ವಿರುದ್ಧ ಗೆಲುವು ಅಗತ್ಯವಿತ್ತು ಆದರೆ ಗೋಲುರಹಿತ ಡ್ರಾ ಸಾಧಿಸಿದ ಕಾರಣ ಸೆಮಿ ಟಿಕೆಟ್ ಕೈ ತಪ್ಪಿತು. ಭಾರತವು ಆಸ್ಟ್ರೇಲಿಯಾದಂತೆಯೇ ಅಂಕಗಳು ಮತ್ತು ಗೋಲು ವ್ಯತ್ಯಾಸವನ್ನು ಹೊಂದಿತ್ತು ಆದರೆ ಕಡಿಮೆ ಗೋಲುಗಳನ್ನು ಗಳಿಸಿದ ಕಾರಣ ಅಂತಿಮ-ನಾಲ್ಕು ಸ್ಥಾನವನ್ನು ಕಳೆದುಕೊಂಡಿತು. 50 ಲಕ್ಷ ಬಹುಮಾನ ಮೊತ್ತದಲ್ಲಿ ಪ್ರತಿ ಆಟಗಾರ್ತಿಯರಿಗೆ 2 ಲಕ್ಷ ಮತ್ತು ಸಿಬ್ಬಂದಿ ಸದಸ್ಯರಿಗೆ ಒಂದು ಲಕ್ಷ ಸಿಗಲಿದೆ.
ಭಾರತ ಪುರುಷರ ಹಾಕಿ ತಂಡವು ಎಂಟನೇ ಸ್ಥಾನದೊಂದಿಗೆ ಅಭಿಯಾನ ಮುಗಿಸಿತು. ಶುಕ್ರವಾರ ನಡೆದ ರೋಚಕ ಪಂದ್ಯದಲ್ಲಿ ನಿಗದಿತ ಸಮಯದ ಅಂತ್ಯಕ್ಕೆ 3–3 ಗೋಲು ಗಳಿಂದ ಬೆಲ್ಜಿಯಂ ವಿರುದ್ಧ ಸಮಬಲ ಸಾಧಿಸಿತು. ತದನಂತರ ಶೂಟೌಟ್‌ನಲ್ಲಿ 3–4ರಿಂದ ಸೋಲನುಭವಿಸಿತು.