ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಇನ್ನು ಮುಂದೆ ಏರ್‌ ಇಂಡಿಯಾ ವಿಮಾನ ಹತ್ತಲ್ಲ: ಆಸೀಸ್‌ ಮಾಜಿ ಕ್ರಿಕೆಟಿಗನ ಶ‍ಪಥ

Ahmedabad Plane Crash: ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಹಾಗೂ ಕೇಂದ್ರದ ಇತರ ಸಂಸ್ಥೆಗಳ ಅಧಿಕಾರಿಗಳ ತಂಡ ಗುಜರಾತ್‌ ವಿಮಾನ ದುರಂತ ಸಂಭವಿಸಿದ ಸ್ಥಳಕ್ಕೆ ಶುಕ್ರವಾರ ಭೇಟಿ ನೀಡಿ ಪರಿಶೀಲನೆ ನಡೆಸಿದೆ. ವಿಮಾನ ಪತನವಾದ ಸ್ಥಳಕ್ಕೆ ಭೇಟಿ ನೀಡಿದ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ.

ಸಿಡ್ನಿ: ಗುರುವಾರ ಮಧ್ಯಾಹ್ನ 1.39ರ ಸುಮಾರಿಗೆ ಅಹಮದಾಬಾದ್‌ನಿಂದ ಲಂಡನ್‌ಗೆ ಹೊರಟಿದ್ದ ಏರ್‌ ಇಂಡಿಯಾ ವಿಮಾನವು ಟೇಕಾಫ್‌ ಆದ ಕೆಲವೇ ಕ್ಷಣಗಳಲ್ಲಿ ಪತನಗೊಂಡು(Ahmedabad Plane Crash), ವೈದ್ಯಕೀಯ ಕಾಲೇಜು ಸಂಕೀರ್ಣಕ್ಕೆ ಅಪ್ಪಳಿಸಿದ ದುರಂತದಲ್ಲಿ 265 ಮಂದಿ ಮೃತಪಟ್ಟಿದ್ದರು. ದುರಂತದ ಬಳಿಕ ಅನೇಕರು ವಿಮಾನ ಯಾನದ ಬಗ್ಗೆ ಆತಂಕ ವ್ಯಕ್ತಪಡಿಸುತ್ತಲೇ ಇದ್ದಾರೆ. ಈ ಮಧ್ಯೆ ಆಸ್ಟ್ರೇಲಿಯಾದ ಮಾಜಿ ಕ್ರಿಕೆಟಿಗ ಡೇವಿಡ್‌ ವಾರ್ನರ್‌(David Warner) ಯಾವುದೇ ಕಾರಣಕ್ಕೂ ಇನ್ನು ಮುಂದೆ ಏರ್‌ ಇಂಡಿಯಾ ವಿಮಾನದಲ್ಲಿ(air india flight) ಪ್ರಯಾಣಿಸುವುದಿಲ್ಲ ಎಂದ ಶಪ‍ಥ ಮಾಡಿದ್ದಾರೆ.

ಈ ಬಗ್ಗೆ ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್‌ ಮಾಡಿರುವ ವಾರ್ನರ್‌, ಇನ್ನು ಮುಂದೆ ಏರ್‌ ಇಂಡಿಯಾ ವಿಮಾನದಲ್ಲಿ ಪ್ರಯಾಣಿಸುವುದಿಲ್ಲ’ ಎಂದು ತಿಳಿಸಿದ್ದಾರೆ. ಜತೆಗೆ ಏರ್‌ ಇಂಡಿಯಾ ಕಂಪನಿಯ ಮಾಜಿ ಉದ್ಯೋಗಿ ವಿವೇಕ್‌ ಎಂಬುವವರ ಹಳೆಯ ಪೋಸ್ಟ್‌ವೊಂದನ್ನು ವಾರ್ನರ್‌ ಮರು ಹಂಚಿಕೊಂಡಿದ್ದಾರೆ. ಈ ಪೋಸ್ಟ್‌ನಲ್ಲಿ ವಿಮಾನದಲ್ಲಿನ ಸಮಸ್ಯೆಗಳ ಬಗ್ಗೆ ಪೈಲಟ್‌ಗಳು, ಎಂಜಿನಿಯರ್‌ಗಳು ಮತ್ತು ಸಿಬ್ಬಂದಿ ಕಳವಳ ವ್ಯಕ್ತಪಡಿಸಿದ್ದರು. ಆದರೂ ನಿರ್ಲಕ್ಷ್ಯಿಸಲಾಗಿದೆ’ ಎಂದು ಬರೆದಿದೆ.



ಏರ್‌ ಇಂಡಿಯಾ ವಿರುದ್ಧ ವಾರ್ನರ್‌ ಆಕ್ರೋಶ ವ್ಯಕ್ತಪಡಿಸುತ್ತಿರುವುದು ಇದೇ ಮೊದಲೇನಲ್ಲ. ಈ ಹಿಂದೆಯೂ ಅವರು ಗಂಟೆಗಟ್ಟಲೇ ವಿಮಾನದಲ್ಲಿ ಕಾಯಿಸಿದ್ದಕ್ಕಾಗಿ ಏರ್‌ ಇಂಡಿಯಾದ ವಿರುದ್ಧ ಕಿಡಿ ಕಾರಿದ್ದರು. ‘ಪೈಲಟ್‌ಗಳಿಲ್ಲದ ವಿಮಾನವನ್ನು ನಾವು ಹತ್ತಿದ್ದೇವೆ. ಪೈಲಟ್‌ಗಳು ಇಲ್ಲದಿದ್ದರೆ ವಿಮಾನಕ್ಕೆ ಪ್ರಯಾಣಿಕರನ್ನು ಏಕೆ ಹತ್ತಿಸುತ್ತೀರಿ’ ಎಂದು ಪ್ರಶ್ನಿಸಿದ್ದರು.

ಘಟನೆಯಲ್ಲಿ ಬ್ರಿಟನ್‌ನ 53 ಪ್ರಜೆಗಳು ಸಾವನ್ನಪ್ಪಿದ ಹಿನ್ನೆಲೆಯಲ್ಲಿ ಮತ್ತು ವಿಮಾನ ತಯಾರಿಸಿ ಕಂಪನಿ ಬೋಯಿಂಗ್‌ ಅಮೆರಿಕದ್ದಾದ ಹಿನ್ನೆಲೆಯಲ್ಲಿ ಈ ಎರಡೂ ದೇಶಗಳ ತನಿಖಾ ತಂಡಗಳು ಕೂಡಾ ಶುಕ್ರವಾರ ಅಹಮದಾಬಾದ್‌ಗೆ ಆಗಮಿಸಿ ತಮ್ಮ ತನಿಖೆ ಆರಂಭಿಸಿವೆ.

ಇನ್ನೊಂದೆಡೆ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಹಾಗೂ ಕೇಂದ್ರದ ಇತರ ಸಂಸ್ಥೆಗಳ ಅಧಿಕಾರಿಗಳ ತಂಡ ಗುಜರಾತ್‌ ವಿಮಾನ ದುರಂತ ಸಂಭವಿಸಿದ ಸ್ಥಳಕ್ಕೆ ಶುಕ್ರವಾರ ಭೇಟಿ ನೀಡಿ ಪರಿಶೀಲನೆ ನಡೆಸಿದೆ. ವಿಮಾನ ಪತನವಾದ ಸ್ಥಳಕ್ಕೆ ಭೇಟಿ ನೀಡಿದ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ. ಘಟನೆಯಲ್ಲಿ ಯಾವುದಾದರೂ ಭಯೋತ್ಪಾದಕರ ಅಥವಾ ದುಷ್ಕರ್ಮಿಗಳ ದುಷ್ಕೃತ್ಯ ಇದೆಯಾ ಎಂಬುದರ ಬಗ್ಗೆ ಎನ್‌ಎಐ ಮಾಹಿತಿ ಕಲೆಹಾಕಲಿದೆ.