ದುಬೈ, ಜ.21: ಭಾರತದಲ್ಲಿ ನಡೆಯುವ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಆಡಲ್ಲ, ತಮ್ಮ ಪಾಲಿನ ಪಂದ್ಯಗಳನ್ನು ತಟಸ್ಥ ತಾಣದಲ್ಲಿ ನಡೆಸುವಂತೆ ಪಟ್ಟುಹಿಡಿದಿದ್ದ ಬಾಂಗ್ಲಾದೇಶಕ್ಕೆ ಭಾರೀ ಹಿನ್ನಡೆಯಾಗಿದೆ. ಬಾಂಗ್ಲಾದ ಮನವಿಯನ್ನು ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ತಿರಸ್ಕರಿಸಿದ್ದು, ವಿಶ್ವಕಪ್ ನಿಗದಿಯಂತೆ ನಡೆಯಲಿದೆ ಎಂದು ಬುಧವಾರ ದೃಢಪಡಿಸಿದೆ. ವೀಡಿಯೊ ಕಾನ್ಫರೆನ್ಸ್ ಮೂಲಕ ನಡೆದ ಐಸಿಸಿ ಮಂಡಳಿ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಫೆಬ್ರುವರಿ 7ರಂದು ಟಿ20 ವಿಶ್ವಕಪ್ ಆರಂಭವಾಗಲಿದೆ.
ಐಸಿಸಿ ಮತ್ತು ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ ನಡುವೆ ಶನಿವಾರ ಮಾತುಕತೆ ನಡೆದರೂ, ಕಗ್ಗಂಟಿಗೆ ಪರಿಹಾರ ದೊರೆತಿರಲಿಲ್ಲ. ಹೀಗಾಗಿ ಐಸಿಸಿ, ಟೂರ್ನಿಯಲ್ಲಿ ಭಾಗವಹಿಸುವುದಕ್ಕೆ ಸಂಬಂಧಿಸಿ 21ರ ಒಳಗೆ ನಿರ್ಧಾರಕ್ಕೆ ಬರಬೇಕು. ಇಲ್ಲದೇ ಹೋದರೆ ಬದಲಿಯಾಗಿ ಬೇರೆ ತಂಡದ ಆಯ್ಕೆಗೆ ಸಿದ್ಧವಾಗಿರಿ’ ಎಂದು ಬಾಂಗ್ಲಾದೇಶ ಕ್ರಿಕೆಟ್ ಮಂಡಳಿಗೆ ಸೂಚಿಸಿತ್ತು. ಅದರಂತೆ ಬುಧವಾರ ಐಸಿಸಿ ತನ್ನ ಅಂತಿಮ ನಿರ್ಧಾರವನ್ನು ಪ್ರಕಟಿಸಿದೆ.
ದೇಶದ ಯಾವುದೇ ಪಂದ್ಯಾವಳಿ ಸ್ಥಳಗಳಲ್ಲಿ ಬಾಂಗ್ಲಾದೇಶ ಆಟಗಾರರು, ಮಾಧ್ಯಮ ಸಿಬ್ಬಂದಿ, ಅಧಿಕಾರಿಗಳು ಮತ್ತು ಅಭಿಮಾನಿಗಳಿಗೆ ಯಾವುದೇ ಬೆದರಿಕೆ ಇಲ್ಲ ಎಂದು ಸೂಚಿಸಿದ ಸ್ವತಂತ್ರ ವಿಮರ್ಶೆಗಳು ಸೇರಿದಂತೆ ಎಲ್ಲಾ ಭದ್ರತಾ ಮೌಲ್ಯಮಾಪನಗಳನ್ನು ಪರಿಶೀಲಿಸಿದ ನಂತರ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.
ಭಾರತ ವಿರುದ್ಧ ಟಾಸ್ ಗೆದ್ದು ಬೌಲಿಂಗ್ ಆಯ್ದುಕೊಂಡ ನ್ಯೂಜಿಲೆಂಡ್
ತನ್ನ ಯಾವುದೇ ಬೇಡಿಕೆಯನ್ನೂ ಐಸಿಸಿ ಒಪ್ಪದಿರುವ ಹಿನ್ನೆಲೆಯಲ್ಲಿ ಬಾಂಗ್ಲಾಗೆ ಸದ್ಯ ಈಗ ಉಳಿದಿರುವ ಏಕೈಕ ಆಯ್ಕೆ ಏನೆಂದರೆ ಭಾರತದಲ್ಲೇ ತನ್ನ ಪಂದ್ಯಗಳನ್ನು ಆಡುವುದು. ತಪ್ಪಿದರೆ ತಂಡ ಟೂರ್ನಿಯಿಂದ ಹೊರಬೀಳುವುದು ಬಹುತೇಕ ಖಚಿತ.
ಆತಿಥ್ಯ ದೇಶ, ರ್‍ಯಾಂಕಿಂಗ್, ವಿವಿಧ ಖಂಡಗಳ ಅರ್ಹತಾ ಟೂರ್ನಿಗಳ ಮೂಲಕ ಒಟ್ಟು 20 ತಂಡಗಳು ಈಗಾಗಲೇ ವಿಶ್ವಕಪ್ ಪ್ರವೇಶಿಸಿವೆ. ಒಂದು ವೇಳೆ ಬಾಂಗ್ಲಾ ಹೊರಬಿದ್ದರೆ ರ್‍ಯಾಂಕಿಂಗ್ ಆಧಾರದಲ್ಲಿ ಸ್ಕಾಟ್ಲೆಂಡ್‌ಗೆ ಅವಕಾಶ ಸಾಧ್ಯತೆ ಇದೆ. ಸದ್ಯ ವಿಶ್ವ ರ್‍ಯಾಂಕಿಂಗ್‌ನಲ್ಲಿ ಸ್ಕಾಟ್ಲೆಂಡ್ 14ನೇ ಸ್ಥಾನದಲ್ಲಿದೆ. ಸ್ಕಾಟ್ಲೆಂಡ್ ಆಯ್ಕೆಗೆ ಐಸಿಸಿ ವೋಟ್ ಮೂಲಕ ಅಂತಿಮ ನಿರ್ಧಾರ ಕೈಗೊಳ್ಳಲಿದೆ.