ದುಬೈ: ಭಾನುವಾರದ ಹೈವೋಲ್ಟೇಜ್ ಏಷ್ಯಾಕಪ್(Asia Cup 2025) ಟಿ20 ಪಂದ್ಯದಲ್ಲಿ ಭಾರತ(IND vs PAK) ವಿರುದ್ಧ ಟಾಸ್ ಗೆದ್ದ ಪಾಕಿಸ್ತಾನ ಬ್ಯಾಟಿಂಗ್ ಆಯ್ದುಕೊಂಡಿತು. ಆದರೆ ಟಾಸ್‌ಗೂ ಮುನ್ನ ನಾಯಕರಾದ ಸೂರ್ಯಕುಮಾರ್ ಯಾದವ್(Suryakumar Yadav) ಮತ್ತು ಸಲ್ಮಾನ್ ಅಲಿ ಆಘಾ(Salman Agha) ಹಸ್ತಲಾಘವ ನಿರಾಕರಣೆ ಮಾಡಿದರು. ಟೂರ್ನಿ ಆರಂಭಕ್ಕೂ ಮುನ್ನ ನಡೆದಿದ್ದ ನಾಯಕರ ಸುದ್ದಿಗೋಷ್ಠಿಯಲ್ಲಿಯೂ ಇವರಿಬ್ಬರು ಹಸ್ತಲಾಘವ ಮಾಡಿರಲಿಲ್ಲ. ಇದೀಗ ಆನ್ ಫೀಲ್ಡ್‌ನಲ್ಲಿಯೂ ಉಭಯ ನಾಯಕರ ಈ ಸಮರ ಮುಂದುವರಿಯಿತು.
ಪಹಲ್ಗಾಮ್ ಉಗ್ರರ ದಾಳಿ ಮತ್ತು ಆಪರೇಷನ್ ಸಿಂಧೂರ್ ಬಳಿಕ ಇತ್ತಂಡಗಳ ನಡುವೆ ನಡೆಯುತ್ತಿರುವ ಮೊದಲ ಪಂದ್ಯವಾಗಿರುವುದರಿಂದ ಕ್ರಿಕೆಟ್ ಪ್ರೇಮಿಗಳ ಕುತೂಹಲ ಮತ್ತಷ್ಟು ಹೆಚ್ಚಿದೆ. ಹೀಗಾಗಿ ಇತ್ತಂಡಗಳಿಗೂ ಇದು ಪ್ರತಿಷ್ಠೆಯ ಪಂದ್ಯ. ಯಾರೇ ಗೆದ್ದರೂ ಯುದ್ಧ ಗೆದ್ದಂತೆ ಸಂಭ್ರಮಿಸಲಿದಾರೆ.
ಪಾಕ್ ಅಚ್ಚರಿಯ ಆಯ್ಕೆ
ದುಬೈ ಕ್ರೀಡಾಂಗಣದ ಪಿಚ್ ಸ್ಪರ್ಧಾತ್ಮಕವಾಗಿದ್ದು, ಬ್ಯಾಟರ್‌ಗಳ ಜೊತೆ ಬೌಲರ್ಸ್‌ಗೂ ನೆರವು ನೀಡಬಲ್ಲದು. ಆದರೆ ರಾತ್ರಿ ವೇಳೆ ಮಂಜು ಬೀಳುವ ಕಾರಣ ಚೇಸಿಂಗ್ ತಂಡಕ್ಕೆ ಉಪಯೋಗವಾಗಲಿದೆ. ಪಂದ್ಯಕ್ಕೂ ಮುನ್ನವೇ ಕ್ರಿಕೆಟ್ ಪಂಡಿತರು ಕೂಡ ಟಾಸ್ ಗೆದ್ದ ಬೌಲಿಂಗ್ ಆಯ್ದುಕೊಂಡ ತಂಡ ಅರ್ಧ ಪಂದ್ಯ ಗೆದ್ದಂತೆ ಎಂದು ಸಲಹೆಯನ್ನು ನೀಡಿದ್ದರು. ಆದರೆ ಪಾಕಿಸ್ತಾನ ನಾಯಕ ಅಚ್ಚರಿ ಎಂಬಂತೆ ಬ್ಯಾಟಿಂಗ್ ಆಯ್ದುಕೊಂಡರು.
ಈ ಪಂದ್ಯಕ್ಕೆ ಭಾರತ ತನ್ನ ಆಡುವ ಬಳಗದಲ್ಲಿ ಯಾವುದೇ ಬಲಾವಣೆ ಮಾಡಲಿಲ್ಲ. ಯುಎಇ ವಿರುದ್ಧದ ತನ್ನ ಮೊದಲ ಪಂದ್ಯದಲ್ಲಿ ಆಡಿದ ತಂಡವನ್ನೇ ಭಾರತ ಈ ಪಂದ್ಯಕ್ಕೂ ಕಣಕ್ಕಿಳಿಸಿತು. ಸ್ಪಿನ್-ಭರಿತ ಲೈನ್‌ಅಪ್‌ನೊಂದಿಗೆ ಆಡಲಿದೆ. ಪಾಕಿಸ್ತಾನ ಕೂಡ ಯಾವುದೇ ಬದಲಾವಣೆ ಮಾಡಲಿಲ್ಲ.
ಭಾರತ: ಅಭಿಷೇಕ್ ಶರ್ಮಾ, ಶುಭಮನ್ ಗಿಲ್, ಸಂಜು ಸ್ಯಾಮ್ಸನ್ (ವಿ.ಕೀ.), ಸೂರ್ಯಕುಮಾರ್ ಯಾದವ್, ತಿಲಕ್ ವರ್ಮಾ, ಶಿವಂ ದುಬೆ, ಹಾರ್ದಿಕ್ ಪಾಂಡ್ಯ, ಅಕ್ಷರ್ ಪಟೇಲ್, ಕುಲದೀಪ್ ಯಾದವ್, ಜಸ್ಪ್ರೀತ್ ಬುಮ್ರಾ, ವರುಣ್ ಚಕ್ರವರ್ತಿ.
ಪಾಕಿಸ್ತಾನ: ಸೈಮ್, ಫರ್ಹಾನ್, ಹಾರಿಸ್, ಫಖರ್, ಸಲ್ಮಾನ್ ಆಘಾ(ನಾಯಕ), ಹಸನ್ ನವಾಜ್, ಮೊಹಮ್ಮದ್ ನವಾಜ್, ಫಹೀಮ್, ಶಾಹೀನ್, ಸುಫಿಯಾನ್, ಅಬ್ರಾರ್