ರಾಯ್ಪುರ, ಡಿ.3: ದಕ್ಷಿಣ ಆಫ್ರಿಕಾ ವಿರುದ್ಧದ ಎರಡನೇ ಏಕದಿನ ಪಂದ್ಯದಲ್ಲಿಯೂ ಟಾಸ್ ಸೋತ ಭಾರತ, ಸತತ 20 ಪಂದ್ಯಗಳಲ್ಲಿ ಟಾಸ್ ಸೋಲು ಕಂಡಿತು. 2023ರ ವಿಶ್ವಕಪ್ ಫೈನಲ್ ಪಂದ್ಯದಿಂದ ಆರಂಭವಾದ ಭಾರತದ ಟಾಸ್ ಸೋಲಿನ ಸರದಿ ಇದುವರೆಗೂ ನಿಂತಿಲ್ಲ. ರಾಯ್ಪುರ ಪಂದ್ಯದಲ್ಲಿ ಟಾಸ್ ಗೆದ್ದ ದಕ್ಷಿಣ ಆಫ್ರಿಕಾ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡಿದೆ. ಜತೆಗೆ ಆಡುವ ಬಳಗದಲ್ಲಿ ಮೂರು ಬದಲಾವಣೆ ಕೂಡ ಮಾಡಿದೆ.
ಟೆಂಬ ಬವುಮಾ ಈ ಪಂದ್ಯದಲ್ಲಿ ಕಣಕ್ಕಿಳಿಯುವ ಮೂಲಕ ಮತ್ತೆ ನಾಯಕತ್ವ ವಹಿಸಿಕೊಂಡರು. ಕೇಶವ್ ಮಹಾರಾಜ್ ಮತ್ತು ಲುಂಗಿ ಎನ್‌ಗಿಡಿ ಕೂಡ ತಂಡಕ್ಕೆ ಮರಳಿದರು. ಭಾರತ ಪರ ಯಾವುದೇ ಬದಲಾವಣೆ ಮಾಡಿಲ್ಲ.
ಶಹೀದ್ ವೀರನಾರಾಯಣ ಸಿಂಗ್ ಕ್ರಿಕೆಟ್ ಮೈದಾನದಲ್ಲಿ ನಡೆಯುತ್ತಿರುವ ಕೇವಲ ಎರಡನೇ ಏಕದಿನ ಪಂದ್ಯ ಇದಾಗಿದೆ. ಮೊದಲ ಪಂದ್ಯವನ್ನು 2023ರಲ್ಲಿ ಆಡಲಾಗಿತ್ತು. ಎದುರಾಳಿ ನ್ಯೂಜಿಲ್ಯಾಂಡ್. ಪಂದ್ಯವನ್ನು ಭಾರತ 8 ವಿಕೆಟ್ ಅಂತರದಿಂದ ಗೆದ್ದಿತ್ತು. ಎರಡು ವರ್ಷಗಳ ಬಳಿಕ ಇಲ್ಲಿ ಪಂದ್ಯ ನಡೆಯುತ್ತಿರುವ ಕಾರಣ ಪಿಚ್ ವರ್ತನೆ ಹೇಗಿರಲಿದೆ ಎಂದು ಸ್ಪಷ್ಟವಾಗಿ ಹೇಳುವುದು ಕಷ್ಟಕರ.
ಇದನ್ನೂ ಓದಿ ಇಂದಿನ ಪಂದ್ಯದಲ್ಲೂ ಕೊಹ್ಲಿಯಿಂದ ಸಿಕ್ಸರ್‌ಗಳ ಸುರಿಮಳೆ ಖಚಿತ; ಅಭ್ಯಾಸದ ವಿಡಿಯೊ ಇಲ್ಲಿದೆ
ಮುಖಾಮುಖಿ
ದಕ್ಷಿಣ ಆಫ್ರಿಕಾ ಮತ್ತು ಭಾರತ ತಂಡಗಳು ಇದುವರೆಗೆ ಏಕದಿನ ಕ್ರಿಕೆಟ್‌ನಲ್ಲಿ ಒಟ್ಟು 95 ಬಾರಿ ಮುಖಾಮುಖಿಯಾಗಿವೆ. ಈ ಪೈಕಿ ದಕ್ಷಿಣ ಆಫ್ರಿಕಾ 51 ಬಾರಿ ಜಯಗಳಿಸಿದೆ. ಭಾರತ 41 ಪಂದ್ಯಗಳಲ್ಲಿ ಗೆದ್ದಿದೆ. ಇದರಲ್ಲೊಂದು ಗೆಲುವು ಈ ಸರಣಿಯಲ್ಲಿ ಒಲಿದಿತ್ತು. 3 ಪಂದ್ಯಗಳು ಫಲಿತಾಂಶವಿಲ್ಲದೆ ಕೊನೆಗೊಂಡಿವೆ.
ಉಭಯ ಆಡುವ ಬಳಗ
ಭಾರತ: ಯಶಸ್ವಿ ಜೈಸ್ವಾಲ್, ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ರುತುರಾಜ್ ಗಾಯಕ್ವಾಡ್, ವಾಷಿಂಗ್ಟನ್ ಸುಂದರ್, ಕೆಎಲ್ ರಾಹುಲ್(ನಾಯಕ ಮತ್ತು ವಿ.ಕೀ.), ರವೀಂದ್ರ ಜಡೇಜಾ, ಹರ್ಷಿತ್ ರಾಣಾ, ಕುಲದೀಪ್ ಯಾದವ್, ಅರ್ಶದೀಪ್ ಸಿಂಗ್, ಪ್ರಸಿದ್ಧ್ ಕೃಷ್ಣ.
ದಕ್ಷಿಣ ಆಫ್ರಿಕಾ: ಕ್ವಿಂಟನ್ ಡಿ ಕಾಕ್(ವಿ.ಕೀ.), ಐಡೆನ್ ಮಾರ್ಕ್ರಾಮ್, ಟೆಂಬಾ ಬವುಮಾ(ನಾಯಕ), ಮ್ಯಾಥ್ಯೂ ಬ್ರೀಟ್ಜ್ಕೆ, ಟೋನಿ ಡಿ ಜೋರ್ಜಿ, ಡೆವಾಲ್ಡ್ ಬ್ರೆವಿಸ್, ಮಾರ್ಕೊ ಜಾನ್ಸೆನ್, ಕಾರ್ಬಿನ್ ಬಾಷ್, ಕೇಶವ್ ಮಹಾರಾಜ್, ನಾಂದ್ರೆ ಬರ್ಗರ್, ಲುಂಗಿ ಎನ್‌ಗಿಡಿ.
ನೇರ ಪ್ರಸಾರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್/ಜಿಯೋ-ಹಾಟ್‌ಸ್ಟಾರ್
ಪಂದ್ಯ ಆರಂಭ: ಮಧ್ಯಾಹ್ನ 1.30ಕ್ಕೆ.