ರಾಯ್ಪುರ, ಡಿ.2: ವಿರಾಟ್ ಕೊಹ್ಲಿ(Virat Kohli), ರೋಹಿತ್ ಶರ್ಮ(Rohit Sharma) ಮತ್ತು ನಾಯಕ ರಾಹುಲ್ ಅವರ ಬೊಂಬಾಟ್ ಬ್ಯಾಟಿಂಗ್ ಬಲದಿಂದ ಸರಣಿಯ ಮೊದಲ ಪಂದ್ಯ ಗೆದ್ದು ಉತ್ಸಾಹದಲ್ಲಿರುವ ಭಾರತ(IND vs SA 2nd ODI) ತಂಡ, ಬುಧವಾರ ಎರಡನೇ ಚಾಲೆಂಜ್‌ಗೆ ಸಿದ್ಧವಾಗಿದೆ. ರಾಯ್ಪುರದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧದ ಎರಡನೇ ಏಕದಿನ ಪಂದ್ಯದಲ್ಲಿ ಕಣಕ್ಕಿಳಿಯಲಿದೆ. ಈ ಪಂದ್ಯವನ್ನೂ ಗೆದ್ದು ಇನ್ನೊಂದು ಪಂದ್ಯ ಬಾಕಿ ಇರುವಂತೆಯೇ ಸರಣಿ ವಶಪಡಿಸಿಕೊಳ್ಳುವತ್ತ ಭಾರತ ಚಿತ್ತ ನೆಟ್ಟಿದೆ. ಅತ್ತ ಹರಿಣ ಪಡೆ ಸರಣಿ ಸಮಬಲಗೊಳಿಸುವ ವಿಶ್ವಾಸದೊಂದಿಗೆ ಕಣಕ್ಕಿಳಿಯಲಿದೆ. ಇದು ರಾಯ್ಪುರದಲ್ಲಿ ನಡೆಯುತ್ತಿರುವ ಕೇವಲ ಎರಡನೇ ಏಕದಿನ ಪಂದ್ಯವಾಗಿದೆ.
ಕಳೆದ ರಾಂಚಿಯಲ್ಲಿ ನಡೆದ ಪಂದ್ಯದಲ್ಲಿ ಬೃಹತ್ ಮೊತ್ತ ದಾಖಲಾಗಿತ್ತು. ಆದರೆ ಇಲ್ಲಿನ ಶಹೀದ್ ವೀರನಾರಾಯಣ ಸಿಂಗ್ ಕ್ರಿಕೆಟ್ ಮೈದಾನದಲ್ಲಿ ದೊಡ್ಡ ಮೊತ್ತದ ಮೇಲಾಟ ಅಸಾಧ್ಯ. ಕಾರಣ ಇಲ್ಲಿನ ಪಿಚ್ ಬೌಲಿಂಗ್ ಸ್ನೇಹಿಯಾಗಿದೆ. ವಿಶೇಷವಾಗಿ ವೇಗದ ಬೌಲರ್‌ಗಳು ಹೆಚ್ಚಿನ ಸ್ವಿಂಗ್ ಪಡೆಯಬಹುದು. ಹಾಗಾದರೆ ಹರಿಣ ಪಡೆ ಮೇಲುಗೈ ಸಾಧಿಸುವ ಅವಕಾಶ ಹೆಚ್ಚಿದೆ. ಭಾರತಕ್ಕೆ ಹೋಲಿಸಿದರೆ ದಕ್ಷಿಣ ಆಫ್ರಿಕಾ ಬೌಲರ್‌ಗಳು ಹೆಚ್ಚು ಅನುಭವಿಗಳಾಗಿದ್ದಾರೆ. ನೀಳಕಾಯದ ಮಾರ್ಕೊ ಜಾನ್ಸೆನ್ ಮಾರಕ ಎಸೆತಗಳನ್ನು ಎಸೆಯಬಹುದು.
ಸದ್ದು ಮಾಡಬೇಕಿದೆ ಗಾಯಕ್ವಾಡ್, ಸುಂದರ್ ಬ್ಯಾಟ್
ಆದರೂ, ವಿರಾಟ್ ಕೊಹ್ಲಿ, ರೋಹಿತ್ ಶರ್ಮ ಪ್ರಚಂಡ ಬ್ಯಾಟಿಂಗ್‌ನಲ್ಲಿರುವುದು ಭಾರತಕ್ಕೊಂದು ವಿಶ್ವಾಸ. ಹಾಗಂತ ಇವರನ್ನೇ ನಂಬಿ ಕುಳಿತರೆ ಆಗದು. ವಾಷಿಂಗ್ಟನ್ ಸುಂದರ್, ಋತುರಾಜ್ ಗಾಯಕ್ವಾಡ್ ಮತ್ತು ಯಶಸ್ವಿ ಜೈಸ್ವಾಲ್ ಜವಾಬ್ದಾರಿಯುವ ಬ್ಯಾಟಿಂಗ್ ನೆಡೆಸುವ ಮೂಲಕ ತಮ್ಮ ಆಯ್ಕೆಯನ್ನು ಸಮರ್ಥಿಸಿಕೊಳ್ಳಬೇಕಿದೆ. ಭಾರತ ಗೆಲುವಿನ ಹನ್ನೊಂದರ ಬಳಗದಲ್ಲಿ ಬದಲಾವಣೆ ಸಾಧ್ಯತೆ ಕಡಿಮೆ. ಬೌಲಿಂಗ್ ವಿಭಾಗದಲ್ಲಿ ಕನ್ನಡಿಗ ಪ್ರಸಿದ್ಧ್ ಕೃಷ್ಣ ಹೆಚ್ಚಿನ ವಿಕೆಟ್ ಬೇಟೆಯಾಡಬೇಕಿದೆ. ಜಡೇಜಾ ಸ್ಪಿನ್ ಜಾದು ಮಾಡಬೇಕಿದೆ. ಕಳೆದ ಪಂದ್ಯದಲ್ಲಿ ಅವರು ವಿಕೆಟ್ ಲೆಸ್ ಎನಿಸುವ ಜತೆಗೆ ದುಬಾರಿಯಾಗಿದ್ದರು.
ಇದನ್ನೂ ಓದಿ IND vs SA: ರಾಯ್ಪುರ ಪಿಚ್ ಯಾರಿಗೆ ಸಹಕಾರಿ?; ನಾಳೆ ದ್ವಿತೀಯ ಏಕದಿನ
ಬವುಮಾ ತಂಡ ಸೇರುವ ಸಾಧ್ಯತೆ
ಕಳೆದ ಪಂದ್ಯದಿಂದ ಹೊರಗುಳಿಸಿದ್ದ ಟೆಂಬಾ ಬವುಮಾ ಈ ಪಂದ್ಯದಲ್ಲಿ ಆಡುವ ಜತೆಗೆ ನಾಯತ್ವ ವಹಿಸಿಕೊಳ್ಳುವ ಸಾಧ್ಯತೆ ಅಧಿಕವಾಗಿದೆ. ಅವರ ಆಗಮನದಿಂದ ತಂಡದ ಬ್ಯಾಟಿಂಗ್ ಬಲಿಷ್ಠಗೊಳ್ಳಲಿದೆ. ಜತೆಗೆ ಪ್ರೆನೆಲನ್ ಸುಬ್ರಾಯೆನ್ ಬದಲು ಕೇಶವ್ ಮಹಾರಾಜ್ ಅವಕಾಶ ಪಡೆಯುವ ಸಾಧ್ಯತೆ ಇದೆ. ಸುಬ್ರಾಯೆನ್ ಕಳೆದ ಪಂದ್ಯದಲ್ಲಿ 73 ರನ್ ಬಿಟ್ಟುಕೊಟ್ಟಿದ್ದರು. ಕಳೆದ ಪಂದ್ಯದಲ್ಲಿ ಶೂನ್ಯ ಸುತ್ತಿದ್ದ ಎಡಗೈ ಬ್ಯಾಟರ್ ಕ್ವಿಂಟನ್ ಡಿ ಕಾಕ್ ಮತ್ತು ರಿಯಾನ್ ರಿಕೆಲ್ಟನ್ ಈ ಪಂದ್ಯದಲ್ಲಿ ನಿರೀಕ್ಷಿತ ಬ್ಯಾಟಿಂಗ್ ನಡೆಸುವ ವಿಶ್ವಾಸದಲ್ಲಿದ್ದಾರೆ. ಕೆಳ ಕ್ರಮಾಂಕದಲ್ಲಿ ಕಾರ್ಬಿನ್ ಬಾಷ್, ಮಾರ್ಕೊ ಜಾನ್ಸೆನ್ ಅಸಾಮಾನ್ಯ ಬ್ಯಾಟಿಂಗ್ ಮೂಲಕ ಈಗಾಗಲೇ ತಮ್ಮ ಸಾಮರ್ಥ್ಯವನ್ನು ತೋರಿಸಿದ್ದಾರೆ. ಒಟ್ಟಾರೆ ತಂಡ ಕಳೆದ ಪಂದ್ಯದ ತಪ್ಪುಗಳನ್ನು ತಿದ್ದಿಕೊಂಡು ಕಣಕ್ಕಿಳಿಯುವ ಆತ್ಮವಿಶ್ವಾಸದಲ್ಲಿದೆ.
ಮುಖಾಮುಖಿ
ಉಭಯ ತಂಡಗಳು ಇದುವರೆಗೆ ಏಕದಿನ ಕ್ರಿಕೆಟ್‌ನಲ್ಲಿ ಒಟ್ಟು 95 ಬಾರಿ ಮುಖಾಮುಖಿಯಾಗಿವೆ. ಈ ಪೈಕಿ ಭಾರತ 41 ಪಂದ್ಯಗಳಲ್ಲಿ ಗೆದ್ದಿದ್ದರೆ, ದಕ್ಷಿಣ ಆಫ್ರಿಕಾ 51 ಬಾರಿ ಜಯಗಳಿಸಿದೆ. 3 ಪಂದ್ಯಗಳು ಫಲಿತಾಂಶವಿಲ್ಲದೆ ಕೊನೆಗೊಂಡಿವೆ.
ನೇರ ಪ್ರಸಾರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್/ಜಿಯೋ-ಹಾಟ್‌ಸ್ಟಾರ್
ಪಂದ್ಯ ಆರಂಭ: ಮಧ್ಯಾಹ್ನ 1.30ಕ್ಕೆ.